ಮಲಯಾಳಂ ಸಿನಿಮಾ ರಂಗದಲ್ಲಿ 2017ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕೇರಳ ಸರ್ಕಾರ, ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಕುರಿತಂತೆ ವರದಿ ನೀಡಲು ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯು 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಅದರ ಬಹಿರಂಗಕ್ಕೆ ವಿರೋಧ ವ್ಯಕ್ತವಾಗಿತ್ತು. ನಂತರ ಸುದೀರ್ಘ ಸಮಯದ ಕಾನೂನು ಸಮರದ ಬಳಿಕ ಇಂದು (ಆಗಸ್ಟ್ 19, 2024) ಸರ್ಕಾರ ವರದಿ ಬಹಿರಂಗಗೊಳಿಸಿದೆ. ವರದಿಯಲ್ಲಿನ ಅಂಶಗಳು ಮಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ವರದಿಯಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೊಸ ಶಾಸನ ಜಾರಿಗೊಳಿಸುವ ಮೂಲಕ ಮತ್ತು ಕುಂದುಕೊರತೆಗಳನ್ನು ಆಲಿಸಲು ಸ್ವತಂತ್ರ ನ್ಯಾಯಮಂಡಳಿ ರಚಿಸುವ ಮೂಲಕ ಮಾತ್ರ ಪರಿಹರಿಸಬಹುದು ಎಂದು ನ್ಯಾಯಮೂರ್ತಿ ಹೇಮಾ ಸಮಿತಿ ಸಲಹೆ ನೀಡಿದೆ.
ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಲೈಂಗಿಕ ಬೇಡಿಕೆಗಳು, ಲೈಂಗಿಕ ಕಿರುಕುಳ, ದುರುಪಯೋಗ ಮತ್ತು ಕೆಲಸದ ಸ್ಥಳದಲ್ಲಿ ಆಕ್ರಮಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮಿತಿಯ ಅಧ್ಯಯನವು ಬಹಿರಂಗಪಡಿಸಿದೆ.
ಮಹಿಳೆಯರು ಸಾರಿಗೆ ಮತ್ತು ವಸತಿ ಸಮಸ್ಯೆಗಳನ್ನು ಕೂಡ ಎದುರಿಸುತ್ತಾರೆ. ಅವರಿಗೆ ಶೌಚಾಲಯಗಳು ಮತ್ತು ಚಲನಚಿತ್ರ ಸೆಟ್‌ಗಳಲ್ಲಿ ಬಟ್ಟೆ ಬದಲಾಯಿಸುವ ಕೊಠಡಿಗಳಂತಹ ಮೂಲಭೂತ ಸೌಲಭ್ಯಗಳ ಕೊರತೆಯು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ. ಹೆಚ್ಚುವರಿಯಾಗಿ, ವರದಿಯು ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯ ಕೊರತೆ, ಲಿಂಗ ತಾರತಮ್ಯ, ಪುರುಷ ಪ್ರಾಬಲ್ಯದ ಸಮಸ್ಯೆಗಳನ್ನು ಎತ್ತಿ ತೋರಿಸಿದೆ.
ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ, ಅಸಭ್ಯ ಕಾಮೆಂಟ್‌ಗಳು, ಸೈಬರ್ ಕಿರುಕುಳ, ಪಾವತಿ ಅಸಮಾನತೆ ಇತ್ಯಾದಿಗಳಿಂದ ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ. ಅವರ ಕುಂದುಕೊರತೆಗಳನ್ನು ನಿವಾರಿಸಲು ಕಾನೂನುಬದ್ಧವಾಗಿ ರಚಿಸಲಾದ ಪ್ರಾಧಿಕಾರ ಅಗತ್ಯವಿದೆ ಎಂದಿದೆ.
ಚಿತ್ರರಂಗದಲ್ಲಿ ಆಂತರಿಕ ದೂರು ಸಮಿತಿ (ಐಸಿಸಿ) ರಚಿಸುವುದರಿಂದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಸಮಿತಿ ಸಲಹೆ ನೀಡಿದೆ. ಐಸಿಸಿಯನ್ನು ವಿಶಾಕಾ VS ರಾಜಸ್ಥಾನದ ಸರ್ಕಾರ (1997) ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ರ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಮಾಡಲಾಗಿದೆ. ಸಿನಿಮಾದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಐಸಿಸಿಯ ಅಧ್ಯಕ್ಷರು ಮತ್ತು ಸದಸ್ಯರಾಗಿರುವುದರಿಂದ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಐಸಿಸಿ ಪರಿಹರಿಸಲು ಸಾಧ್ಯವಿಲ್ಲ. ಐಸಿಸಿಯ ಸದಸ್ಯರು ಚಲನಚಿತ್ರೋದ್ಯಮದವರೇ ಆಗಿದ್ದಲ್ಲಿ ಮಹಿಳೆಯರು ಕಿರುಕುಳದ ವಿವರಗಳನ್ನು ಬಹಿರಂಗಪಡಿಸಲು ಹೆದರುತ್ತಾರೆ ಎಂದು ವರದಿ ಹೇಳಿದೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಇತರ ಸಲಹೆಗಳನ್ನು ನೀಡುವ ಮೂಲಕ ವರದಿಯನ್ನು ಮುಕ್ತಾಯಗೊಳಿಸಲಾಗಿದೆ.
ನ್ಯಾಯಮೂರ್ತಿ ಹೇಮಾ ಸಮಿತಿಯು ತನ್ನ ವರದಿಯನ್ನು 2019 ರಲ್ಲಿ ಮುಖ್ಯಮಂತ್ರಿಗೆ ಸಲ್ಲಿಸಿತ್ತು. ವರದಿಯನ್ನು ಸಾರ್ವಜನಿಕಗೊಳಿಸುವ ನಿರ್ಧಾರವನ್ನು ಜುಲೈ 5, 2024ರಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ, ಚಿತ್ರ ನಿರ್ಮಾಪಕ ಸಜಿಮೋನ್ ಪರಾಯಿಲ್ ಸಲ್ಲಿಸಿದ್ದ ರಿಟ್ ಅರ್ಜಿ ಆಧರಿಸಿ ವರದಿ ಸಾರ್ವಜನಿಕಗೊಳಿಸುವುದಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಬಳಿಕ ಹೈಕೋರ್ಟ್‌ನ ಏಕಸದಸ್ಯ ಪೀಠ ರಿಟ್ ಅರ್ಜಿಯನ್ನು ವಜಾಗೊಳಿಸಿ ವರದಿಯನ್ನು ಸಾರ್ವಜನಿಕಗೊಳಿಸಬಹುದು ಎಂದು ಆದೇಶಿಸಿತ್ತು. ಈ ನಡುವೆ ವರದಿಯ ಕುರಿತು ಸಲ್ಲಿಕೆಯಾಗಿದ್ದ ಅನೇಕ ಆರ್‌ಟಿಐ ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿತ್ತು. ವರದಿಯ ಮಾಹಿತಿ ನೀಡಿದರೆ, ಹಲವರ ಗೌಪ್ಯತೆಗೆ ಧಕ್ಕೆಯಾಗಲಿದೆ ಎಂದಿತ್ತು.
ರಿಟ್ ಅರ್ಜಿಯಲ್ಲಿ ಕಕ್ಷಿದಾರರಲ್ಲದಿದ್ದರೂ ಚಲನಚಿತ್ರ ನಟಿ ರೆಂಜಿನಿ ಅವರು ಅರ್ಜಿ ಬಹಿರಂಗಗೊಳಿಸಲು ಇದ್ದ ತಡೆ ತೆಗೆದು ಹಾಕಿರುವ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ ಮತ್ತು ಹೊಸ ರಿಟ್ ಅರ್ಜಿಯನ್ನು ಸಲ್ಲಿಸಲು ಅವರಿಗೆ ಅವಕಾಶ ನೀಡಿದೆ. ಏಕ ಸದಸ್ಯ ಪೀಠ ರಿಟ್ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಸರ್ಕಾರ ವರದಿ ಬಹಿರಂಗಗೊಳಿಸಿದೆ.
ಇದನ್ನೂ ಓದಿ : ತ್ರಿವಳಿ ತಲಾಖ್ ನಿಷೇಧ : ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ಕೇಂದ್ರ


