ರಾಜ್ಯದಲ್ಲಿ ಪಕ್ಷವು ಮತ್ತೆ ತನ್ನ ಹಿಂದಿನ ವೈಭವಕ್ಕೆ ಮರಳಲಿದೆ ಎಂದು ಪಶ್ಚಿಮ ಬಂಗಾಳದ ಸಿಪಿಐಎಂ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಕಷ್ಟದ ಹಂತವನ್ನು ಎದುರಿಸುತ್ತಿದ್ದು, ಪಕ್ಷಕ್ಕೆ ಕಾಯಕಲ್ಪ ನೀಡುವುದು ಮತ್ತು ಅದನ್ನು ಮತ್ತೆ ಕ್ರಿಯಾಶೀಲಗೊಳಿಸುವುದು ಪಕ್ಷವು ಪ್ರಸ್ತುತ ಎದುರಿಸುತ್ತಿರುವ ತಕ್ಷಣದ ಸವಾಲುಗಳಾಗಿವೆ ಎಂದು ಅವರು ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿರುವ ಸಿಪಿಐಎಂನ 23 ನೇ ಮಹಾಅಧಿವೇಶನದಲ್ಲಿ ಮಾತನಾಡಿದ ಅವರು, “ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಈಗ ಹೆಚ್ಚು ಯುವಕರು ನಮ್ಮೊಂದಿಗೆ ಹೊಂದಿಕೊಂಡಿದ್ದಾರೆ. ನಾವು ಅವರಿಗೆ ಆಳವಾದ ಪಕ್ಷದ ತರಗತಿಗಳನ್ನು ನೀಡಬೇಕು. ಕಮ್ಯುನಿಸ್ಟ್ ಚೌಕಟ್ಟು ಮತ್ತು ಸಿದ್ಧಾಂತದ ಪ್ರಕಾರ ಅವರನ್ನು ಸಿದ್ಧಪಡಿಸಬೇಕು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಸಿಪಿಐಎಂ ಮತ್ತೊಮ್ಮೆ ರಾಜ್ಯದಲ್ಲಿ ತನ್ನ ಹಿಂದಿನ ವೈಭವ ಮತ್ತು ಶಕ್ತಿಗೆ ಮರಳಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು ಮತ್ತು 23ನೇ ಪಕ್ಷದ ಅಧಿವೇಶನದಲ್ಲಿ ಅಂಗೀಕರಿಸಬೇಕಾದ ನಿರ್ಣಯಗಳನ್ನು ಅನುಸರಿಸಿ ನಾವು ಪಕ್ಷವನ್ನು ಮರುಸಂಘಟಿಸಿ ಬಲಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 2024 ರ ಲೋಕಸಭೆ ಚುನಾವಣೆಯ ನಂತರ ರಾಷ್ಟ್ರೀಯ ಮಟ್ಟದ ರಾಜಕೀಯ ರಂಗ ರಚನೆ: ಸಿಪಿಐಎಂ
ರಾಜ್ಯದಲ್ಲಿ 11 ವರ್ಷಗಳ ತೃಣಮೂಲ ಮತ್ತು ಒಕ್ಕೂಟ ಸರ್ಕಾರದಲ್ಲಿ ಎಂಟು ವರ್ಷಗಳ ಮೋದಿ ಆಡಳಿತದಿಂದ ಬೇಸತ್ತಿರುವ ಜನರು ಈಗ ಬದಲಾವಣೆ ಬಯಸುತ್ತಿದ್ದಾರೆ. ಎಡಪಕ್ಷಗಳ ಪ್ರಸ್ತುತತೆ ಮತ್ತು ಪ್ರಾಮುಖ್ಯತೆಯನ್ನು ನಾವು ಅವರಿಗೆ ನೆನಪಿಸಬೇಕು ಎಂದು ಸಲೀಂ ಹೇಳಿದ್ದಾರೆ.
“ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರ ಜಾರಿಗೊಳಿಸಿದ ವಿವಿಧ ಪ್ರಗತಿಪರ ಯೋಜನೆಗಳು ಮತ್ತು ಕಲ್ಯಾಣ ಯೋಜನೆಗಳು ಬಂಗಾಳದ ಜನರಿಗೆ ಮಾದರಿಯಾಗಬೇಕು. ಹಿಂದಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಎಡ ಸರ್ಕಾರಗಳ ಜನಕೇಂದ್ರಿತ ಆಡಳಿತವನ್ನು ನಾವು ಅವರಿಗೆ ನೆನಪಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ರಾಜ್ಯದಲ್ಲಿ ಸಿಪಿಐಎಂ ನೆಲೆಯನ್ನು ನಾಶಪಡಿಸಲು ತೃಣಮೂಲ ತೀವ್ರ ಪ್ರಯತ್ನ ನಡೆಸುತ್ತಿದೆ. ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳು ಅದಕ್ಕೆ ಸಾಕ್ಷಿ. ಪಕ್ಷದ ಕಾರ್ಯಕರ್ತರು ಪ್ರಬಲ ಪ್ರತಿರೋಧವನ್ನು ತೋರಿಸುತ್ತಾರೆ, ಆದರೆ ಅಸುರಕ್ಷಿತ ಸ್ಥಿತಿಯಲ್ಲಿದ್ದಾರೆ. ನಾವು ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಬೇಕು ಮತ್ತು ಇಂತಹ ಕ್ರಮಗಳ ವಿರುದ್ಧ ಅವರನ್ನು ಒಗ್ಗೂಡಿಸಬೇಕು” ಎಂದು ಸಲೀಂ ತಿಳಿಸಿದ್ದಾರೆ.
“ಬಲಪಂಥೀಯರು ರಾಷ್ಟ್ರೀಯ ಮಾಧ್ಯಮಗಳ ಬಲವಾದ ಬೆಂಬಲದೊಂದಿಗೆ ಕೇಂದ್ರದಲ್ಲಿ ಮೋದಿ ಮತ್ತು ಬಂಗಾಳದಲ್ಲಿ ದೀದಿ ಮಾತ್ರ ಇದ್ದಾರೆ, ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಎಡಪಂಥೀಯರ ಕೊಡುಗೆಗಳನ್ನು ಮತ್ತು ಅಸ್ತಿತ್ವವನ್ನೇ ದೂರವಿಡಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ ಅದು ಸುಲಭವಲ್ಲ, ಎಡಪಕ್ಷವು ಬಂಗಾಳದ ಸಾಮಾಜಿಕ ಮತ್ತು ಸಾಂಸ್ಕೃತಿಕ ರಚನೆಯಲ್ಲೆ ಇದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಪಿಐ(ಎಂ) ನಾಯಕ, ಪ.ಬಂ. ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ ‘ಪದ್ಮಭೂಷಣ’ ನಿರಾಕರಣೆ
“ಎಡಪಂಥೀಯರು ಅತ್ಯಂತ ಪ್ರಯಾಸಕರ ಸಮಯದಲ್ಲೂ ಆ ಸಂಪರ್ಕವನ್ನು ಅಖಂಡವಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಧರ್ಮ ಮತ್ತು ಜಾತಿಯ ಆಧಾರದಲ್ಲಿ ರಾಜ್ಯವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅಂತಹ ಎಲ್ಲಾ ಪ್ರಯತ್ನಗಳನ್ನು ನಾವು ವಿರೋಧಿಸಬೇಕು. ಎಡಪಂಥೀಯರ ಕೊಡುಗೆಯ ನೆನಪುಗಳನ್ನು ಜನರಲ್ಲಿ ಜೀವಂತವಾಗಿ ಕಾಪಾಡುವ ಜವಾಬ್ದಾರಿ ಬಂಗಾಳದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕಾರ್ಮಿಕ ವರ್ಗದ ಮೇಲಿದೆ” ಎಂದು ಅವರು ಹೇಳಿದ್ದಾರೆ.
“ಬಂಗಾಳದಲ್ಲಿ ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆಯನ್ನು ತೃಣಮೂಲ ಪಕ್ಷ ಹಾಳು ಮಾಡಿದೆ. ಎಡಪಕ್ಷಗಳ ಭದ್ರಕೋಟೆಯಾಗಿರುವ ಕ್ಷೇತ್ರಗಳಲ್ಲಿ ಅವರು ವಿಶೇಷವಾಗಿ ಹಿಂಸಾಚಾರ ನಡೆಸಿದ್ದಾರೆ. ನಮ್ಮ ಕೆಲವು ಅಭ್ಯರ್ಥಿಗಳಿಗೆ ಪ್ರಚಾರ ಕೂಡ ಸಾಧ್ಯವಾಗಿರಲಿಲ್ಲ. ಆದರೂ, ನಮ್ಮ ಮತಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದೇವೆ. ಜನರು ಬದಲಾವಣೆ ಬಯಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಅವರು ಹೇಲಿದ್ದಾರೆ.
“ಹೊಸದಾಗಿ ರಚನೆಯಾಗಿರುವ ರಾಜ್ಯ ಸಮಿತಿಯಲ್ಲಿ 30%ದಷ್ಟು ಯುವಕರು ಇದ್ದಾರೆ. ಹೆಚ್ಚಿನ ಯುವಕರು ಸಿಪಿಐ-ಎಂ ಸೇರಲು ಬರುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷವು ಮತ್ತೊಮ್ಮೆ ಹುಟ್ಟಿಕೊಳ್ಳುವುದು ಖಂಡಿತ. ಈ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಈಗಾಗಲೇ ಆರಂಭವಾಗಿದೆ” ಎಂದು ಸಲೀಂ ಹೇಳಿದ್ದಾರೆ.
“ಬಂಗಾಳದಲ್ಲಿ ಸಿಪಿಐಎಂ ಬಿಜೆಪಿಯೊಂದಿಗೆ ಸೌಮ್ಯ ಧೋರಣೆ ಅನುಸರಿಸುತ್ತಿದೆ ಎಂಬ ಪ್ರಚಾರ ಸಂಪೂರ್ಣವಾಗಿ ಸರಿಯಲ್ಲ. ಇಂತಹ ಪ್ರಚಾರಗಳು ‘ನಾಗ್ಪುರದ ಮೆದುಳಿನಿಂದ ಹುಟ್ಟಿದ ಕೂಸು’. ಬಂಗಾಳದಲ್ಲಾಗಲಿ ಅಥವಾ ಬೇರೆಲ್ಲಿಯಾದರೂ, ಎಡಪಂಥೀಯರು ಬಲಪಂಥೀಯ ಶಕ್ತಿಗಳ ಕಡೆಗೆ ಸೌಮ್ಯವಾದ ವಿಧಾನವನ್ನು ಅಳವಡಿಸಿಕೊಳ್ಳುವುದಿಲ್ಲ. ಬಲಪಂಥೀಯರು ಮೊದಲಿಗೆ ಮತ್ತು ಪ್ರಮುಖವಾಗಿ ನಮ್ಮ ಮೇಲೆ ದಾಳಿ ಮಾಡುತ್ತಾರೆ. ಯಾಕೆಂದರೆ ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುವ ಏಕೈಕ ಶಕ್ತಿ ಎಡಪಂಥೀಯರು ಮಾತ್ರ. ಇದು ಬಂಗಾಳದಲ್ಲೂ ಭಿನ್ನವಾಗಿಲ್ಲ” ಎಂದು ಮೊಹಮ್ಮದ್ ಸಲೀಂ ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


