“ಈಗ ನಡೆಯುತ್ತಿರುವ ರೈತ ಹೋರಾಟ ಸರ್ಕಾರದ ವಿರುದ್ಧವೋ ಅಥವಾ ಕಾಂಗ್ರೆಸ್‌ನ ಪರವೋ ಅಲ್ಲ. ಇದು ರೈತ ಕುಲದ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ನಡೆಯುತ್ತಿರುವ ಹೋರಾಟ” ಎಂದು ರಾಜ್ಯದ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಬೆಳಗಾವಿಯಲ್ಲಿ ಹೇಳಿದ್ದಾರೆ.
ಇಂದು (ಮಾ.13) ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಾ.31ರಂದು ನಡೆಸಲು ಉದ್ದೇಶಿಸಿರುವ ರೈತರ ಮಹಾಪಂಚಾಯತ್‍ಗೆ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಯಾವುದೇ ಮೈದಾನವನ್ನೂ ನೀಡುತ್ತಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
“ಶಿವಮೊಗ್ಗದಲ್ಲಿ ಮಾ.20ರಂದು ಹಾಗೂ ಹಾವೇರಿಯಲ್ಲಿ ಮಾ.21ರಂದು ಮಹಾಪಂಚಾಯತ್ ಹಮ್ಮಿಕೊಂಡಿದ್ದು, ಅಲ್ಲಿ ಮೈದಾನಗಳು ದೊರೆತಿವೆ. ಆದರೆ, ಬೆಳಗಾವಿಯಲ್ಲಿ ಮುಂಬರುವ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರವು ಅಧಿಕಾರಿಗಳ ಮೇಲೆ ಒತ್ತಡ ತಂದು ಮೈದಾನ ಸಿಗದಂತೆ ಮಾಡಿದೆ” ಎಂದು ಆರೋಪಿಸಿದರು.
ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಅಸಹಕಾರದ ನಡುವೆಯೂ ನಾವು ಚಳವಳಿ ನಡೆಸಿಯೇ ತೀರುತ್ತೇವೆ ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ: ನೀವು ಬದುಕುಳಿಯಲು ಹೆಣಗುತ್ತಿರುವಾಗ ಅದಾನಿ 12 ಲಕ್ಷ ಕೋಟಿ ಗಳಿಸಿದ್ದು ಹೇಗೆ? – ರಾಹುಲ್ ಗಾಂಧಿ ಪ್ರಶ್ನೆ

“ಕೇಂದ್ರದ ರೈತ ವಿರೋಧಿ ಧೋರಣೆಯನ್ನು ಜನರ ಮುಂದೆ ತೆರೆದಿಡಬೇಕಾಗಿದೆ. ಹೀಗಾಗಿ, ರಾಣಿ ಚನ್ನಮ್ಮ ವೃತ್ತದಲ್ಲೇ ವಿಭಾಗ ಮಟ್ಟದ ಮಹಾಪಂಚಾಯತ್ ನಡೆಸುವುದು ಅನಿವಾರ್ಯವಾಗಿದೆ. ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಮುಖ್ಯವಾಗಿ ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಾದ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್, ಡಾ.ದರ್ಶನ್ ಪಾಲ್ಗೊಳ್ಳಲಿದ್ದು, ರೈತ ಮುಖಂಡ ಯೋಗೇಂದ್ರ ಯಾದವ್‍ಗೆ ಆಹ್ವಾನ ನೀಡಿದ್ದೇವೆ” ಎಂದು ಮಾಹಿತಿ ನೀಡಿದರು.
ಇದು ಕೇವಲ ರೈತ ಸಂಘದ ಹೋರಾಟವಲ್ಲ. ಇಡೀ ಸಮಾಜದ ಚಳವಳಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆಯಾಗಿಲ್ಲವೇ ಎಂದು ಪ್ರಶ್ನಿಸಿ ಅವರು, ಉತ್ತರ ಭಾರತದಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎಂಬುದು ಜನರಿಗೆ ಗೊತ್ತಾಗಿದೆ. ಕೊರೆಯುವ ಚಳಿಯಲ್ಲೂ ದೆಹಲಿಯ ಗಡಿಗಳಲ್ಲಿ ಅವರು ಚಳವಳಿ ಮಾಡುತ್ತಿದ್ದಾರೆ. 230 ಮಂದಿ ಅಲ್ಲಿನ ವಾತಾವರಣ ತಾಳಲಾರದೆ ಪ್ರಾಣ ತ್ಯಾಗ ಮಾಡಿದ್ದಾರೆ. ಬೇರೆ ಬೇರೆ ಸ್ವರೂಪದಲ್ಲಿ ಹೋರಾಟ ಮುಂದುವರಿದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಉತ್ತರ ಕರ್ನಾಟಕದ ಗೌರವ ಅಧ್ಯಕ್ಷ ಶಶಿಕಾಂತ ಪಡಿಸಲಗಿ ಮಾತನಾಡಿ, “ಬೆಳಗಾವಿ ಜಿಲ್ಲಾಡಳಿತ ಯಾವುದೇ ಸ್ಥಳ ನೀಡುತ್ತಿಲ್ಲ. ಚನ್ನಮ್ಮ ವೃತ್ತದಲ್ಲೂ ಅವಕಾಶ ಕೊಡದಿದ್ದರೆ ಜೈಲ್ ಭರೋ ಚಳವಳಿ ಆಗಬಹುದು. ರೈತ ಸಂಘದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ” ಎಂದರು.
ಸಮನ್ವಯ ಸಮಿತಿ ಸದಸ್ಯ ಶಿವರಾಯಪ್ಪ ಜೋಗಿನ, ಮುಖಂಡರಾದ ಸಿದಗೌಡ ಮೋದಗಿ, ಮಂಜು ಕಿರಣ್, ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ, ಶಿವಪ್ಪ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ..! “ಸಾಹುಕಾರ್” ಹೊರತುಪಡಿಸಿ..! – ಅನನ್ಯ ಬೆಂಗಳೂರು


