Homeಅಂಕಣಗಳುನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

ನಾಯಕತ್ವದ ಪ್ರಶ್ನೆ; ಡಾ. ಬಾಬಾಸಾಹೇಬರು ತೋರಿದ ದಾರಿ..

- Advertisement -
- Advertisement -

ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕೆಲವು ದಿನಗಳ ಹಿಂದೆ ನಡೆದ ಲಂಕೇಶ್ ಸಪ್ತಾಹದ ಒಂದು ಸಂಜೆಯ ಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಬಹಳ ಆಪ್ತ ಚರ್ಚೆಯಾಗಿದ್ದ ಈ ಸಂವಾದದಲ್ಲಿ, ಡಾ. ವಾಸು ಅವರು ಲಂಕೇಶ್ ಬಗೆಗಿನ ತಮ್ಮ ಮೆಚ್ಚುಗೆಯ ಸಂಗತಿಗಳನ್ನು ಹೇಳಿ, ಅದರೆ ಜೊತೆಗೆ ’ಇಂದಿನ ಸಂದರ್ಭದಲ್ಲಿ ಲಂಕೇಶ್ ಇದ್ದಿದ್ದರೆ’ ಎಂಬ ಹಳಹಳಿಕೆಗಳ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿ, ಇಂದಿನ ದಿನಗಳಲ್ಲಿ ಅಗತ್ಯವಾಗಿರುವ ಐಕ್ಯ ಪ್ರತಿರೋಧವನ್ನು ಲಂಕೇಶ್ ಒಗ್ಗಟ್ಟಾಗಿ ಕೊಂಡೊಯ್ಯಬಲ್ಲವರಾಗಿದ್ದರು ಎಂಬುದರ ಬಗ್ಗೆ ಸಂಶಯವಿದೆ ಎಂದರು. ಈ ಚರ್ಚೆ ಸ್ವಾಭಾವಿಕವಾಗಿ ಲೀಡರ್‌ಶಿಪ್ ಸಂಗತಿಯ ಕಡೆಗೆ ತಿರುಗಿಕೊಂಡಿತು.

ಅದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ದಲಿತ ಸಂಘರ್ಷ ಸಮಿತಿಯ ಹಿಂದಿನ ಇಬ್ಬರು ರಾಜ್ಯ ಸಂಚಾಲಕರಾದ ಸಿ.ಎಂ.ಮುನಿಯಪ್ಪ ಮತ್ತು ಮುನಿಸ್ವಾಮಿಯವರು ಸಾಮಾನ್ಯವಾದ ಈ ನಾಯಕತ್ವದ ಪ್ರಶ್ನೆಯ ಬಗ್ಗೆ ಮತ್ತು ನಿರ್ಧಿಷ್ಟವಾಗಿ ದಸಂಸದ ನಾಯಕತ್ವದ ಬಗ್ಗೆ ಚರ್ಚಿಸಿದರು. ದಸಂಸಕ್ಕೆ ಮೊದಲ ಎರಡು ದಶಕಗಳ ಕಾಲ ನಾಯಕತ್ವ, ಮುಂದಾಳು ಅಥವಾ ಮುಖಂಡ ಎಂಬುವವರು ಪ್ರಮುಖರಾಗಲೇ ಇಲ್ಲ. ಸಾಮಾನ್ಯವಾಗಿ ಮುಖಂಡರನ್ನಾಗಿ (ರಾಜ್ಯ ಸಂಚಾಲಕರನ್ನಾಗಿ) ಮಾಡಲು ಯಾರನ್ನಾದರೂ ಬಲವಂತ ಮಾಡಬೇಕಿತ್ತು ಮತ್ತು ಸಂದರ್ಭ ಹಾಗೂ ಸಮಸ್ಯೆಗಳ ಅನುಸಾರವಾಗಿ ಎಲ್ಲರೂ ಸಾಮೂಹಿಕವಾಗಿ ಹೋರಾಡಿದ್ದೇ ಹೆಚ್ಚು ಎಂದಿದ್ದು ಕೇಳಿ ಆಶ್ಚರ್ಯವಾಯಿತು. ಅದರ ಜೊತೆ ಜೊತೆಗೇ, ಇವತ್ತು ಯುವಕರಿಗೆ ದಸಂಸದ ನಾಯಕತ್ವವನ್ನು ಹಸ್ತಾಂತರಿಸಬೇಕಲ್ಲವೇ ಎಂಬ ಪ್ರಶ್ನೆಯೂ ಸುಳಿದು ಹೋಯಿತು. ವಿವಿಧ ಜಾತಿ ಸಮುದಾಯಗಳನ್ನು ಸ್ವಾಭಿಮಾನಿ ಹೋರಾಟದಲ್ಲಿ ಒಳಗೊಳ್ಳುವ ಇನ್ನಿತರ ದಾರಿಗಳೂ ಇತ್ತೇ? ಎಡವಿದ್ದೆಲ್ಲಿ ಇತ್ಯಾದಿ ಹಲವು ಸಂಗತಿಗಳು ಅಲ್ಲಿ ಮುಂದುವರೆದು ಚರ್ಚೆಯಾದವು. ಕರ್ನಾಟಕದಲ್ಲಿ ದಮನಿತರ ಘನತೆಗಾಗಿ, ಅವರ ಹಕ್ಕುಗಳಿಗಾಗಿ ಹಲವು ಹೋರಾಟಗಳನ್ನು ನಡೆಸಿದ ಒಂದು ಮಹೋನ್ನತ ಸಂಸ್ಥೆಯ ಹಿರಿಯ ಸದಸ್ಯರು ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ರೀತಿ ಅಲ್ಲಿ ನೆರೆದವರಿಗೆಲ್ಲಾ ಹಲವು ಪಾಠಗಳನ್ನು ಹೇಳಿಕೊಡುತ್ತಿತ್ತು.

ಈ ನಾಯಕತ್ವದ ಪ್ರಶ್ನೆ ನಿಜಕ್ಕೂ ಸಮಸ್ಯಾತ್ಮಕವಾದದ್ದೇ. ಒಂದು ಕಡೆ ಜನಪರವಾದ ಐಡಿಯಾಗಳನ್ನು, ಮನುಕುಲಕ್ಕೆ ಒಳಿತಾಗುವ ಹಲವು ಸಂಗತಿಗಳನ್ನು ಚರ್ಚೆ ಮಾಡಿ, ಉತ್ತರ ಕಂಡುಕೊಂಡು, ಜನಪ್ರಿಯಗೊಳಿಸಿ ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ, ಎಲ್ಲರ ಅದರಲ್ಲೂ ವಂಚಿತರ ಒಳಿತಿಗಾಗಿ ಹೋರಾಡಲು ಸ್ಫೂರ್ತಿಯಾಗಿ-ಉತ್ತೇಜನಕಾರಿಯಾಗಿ-ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕಾಗಿ ಸಕಾರಾತ್ಮಕ ನಾಯಕತ್ವ ಅವಶ್ಯಕವಾದದ್ದೇ. ಅದು ಸಾಮುದಾಯಿಕವಾಗಿ ಬೆಳೆದಷ್ಟೂ ಉತ್ತಮ. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ದುರ್ಬಲ ಸಮುದಾಯಗಳ, ಶೋಷಿತರ, ಅವಕಾಶ ವಂಚಿತರ ಆಶಾಕಿರಣವಾಗಿ, ನಾಯಕರಾಗಿ ಕಾಣಿಸಿಕೊಂಡಿದ್ದು ಈ ನೆಲೆಗಟ್ಟಿನಲ್ಲಿಯೇ. ಬಿ.ಕೃಷ್ಣಪ್ಪನವರಿಂದ ಹಿಡಿದು ದಸಂಸದ ಹಲವು ಹಿರಿಯ ಮುಖಂಡರೂ, ದಿ.ಎಚ್.ಕೆ.ರಂಗನಾಥ್ ಮತ್ತು ದಿ.ಬಿ.ಬಸವಲಿಂಗಪ್ಪನವರಂಥಹ ಅಂಬೇಡ್ಕರ್‌ವಾದಿ ರಾಜಕಾರಣಿಗಳು ತುಳಿದ ಹಾದಿಯೂ ಇಂತಹದ್ದೇ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಪರ್ಸನಾಲಿಟಿ ಕಲ್ಟ್ ಮೇಲೆ ಮೋಡಿ ಮಾಡಿ (ಪ್ರಪೋಗಾಂಡ ಮೂಲಕ) ಸರ್ವಾಧಿಕಾರದತ್ತ ಹೊರಳುತ್ತಿರುವ ಹಿಂದುತ್ವದ ನಾಯಕರು ಇಂದು ಒಂದು ಕಡೆ ವಿಜೃಂಭಿಸುತ್ತಿದ್ದಾರೆ. ಹಿಂದುತ್ವದ ಯೋಜನೆಯಲ್ಲಿ ಇಲ್ಲದ ಹಲವರು ಕೂಡ ಈ ಏಕಮುಖಂಡ ಕೇಂದ್ರಿತ ನಾಯಕತ್ವದತ್ತ ಹೊರಳುತ್ತಿರುವುದನ್ನು ಹಲವು ಸಂಘಟನೆಗಳಲ್ಲಿ/ರಾಜಕೀಯ ಪಕ್ಷಗಳಲ್ಲೂ ನಾವು ಕಾಣಬಹುದು. ಇದು ಇಂದು ನಿನ್ನೆಯ ಸಮಸ್ಯೆಯೇನಲ್ಲ. ಕಲ್ಪಿತ ಶತ್ರುಗಳನ್ನು ತೋರಿಸಿ, ಜನರನ್ನು ಧ್ರುವೀಕರಣ ಮಾಡಿ, ದೇಶದ ಸರ್ವೋಚ್ಛ ನಾಯಕರಾಗಿ ಬೆಳೆದು, ಅಳಿದು ಹೋದ ಉದಾಹರಣೆಗಳು ಪ್ರಪಂಚದಾದ್ಯಂತ ಸಾಕಷ್ಟಿವೆ. ಇದನ್ನು ಮನೋವಿಜ್ಞಾನಿ ಎರಿಕ್ ಫ್ರಾಮ್ ’ಎಸ್ಕೇಪ್ ಫ್ರಂ ಫ್ರೀಡಂ’ ಎಂದು ಚರ್ಚಿಸುತ್ತಾರೆ.

PC : Pinterest

ಬಹುತೇಕ ಜನ ತಮ್ಮ ಮೆಸಾಕಿಸಂ ಭಾವನೆಯಿಂದ ಬೇರೆಯೊಬ್ಬನಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು, ಶರಣಾಗತಿಯಾಗಲು ಹವಣಿಸುತ್ತಿರುತ್ತಾರೆ. ಯಾರೋ ಒಬ್ಬ ಅವತಾರಪುರುಷ ತಮ್ಮನ್ನು ಕಾಯ್ದು ರಕ್ಷಿಸುವನೆಂದು ನಂಬಿ ಬದುಕುತ್ತಿರುತ್ತಾರೆ. ಅದೇ ಸಮಯದಲ್ಲಿ ಕೆಲವರು ತಮ್ಮ ಸ್ಯಾಡಿಸಂ ಭಾವನೆಯಿಂದ ಉಳಿದವರ ಮೇಲೆ ಸಂಪೂರ್ಣ ಅಧಿಕಾರ ಚಲಾಯಿಸಲು, ಅವರನ್ನೆಲ್ಲಾ ಗುಲಾಮರನ್ನಾಗಿಸಿಕೊಳ್ಳಲು ಕಾಯುತ್ತಿರುತ್ತಾರೆ. ಇವೆರಡೂ ಒಂದೇ ಭಾವನೆಯ ಎರಡು ಮುಖಗಳು. ಇದು ಒಬ್ಬನ ಸರ್ವಾಧಿಕಾರಕ್ಕೆ ಮತ್ತು ಅವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಜನರ ಗುಲಾಮತನಕ್ಕೆ ಕಾರಣವಾಗುತ್ತದೆ ಎಂದು ಫ್ರಾಮ್ ಚರ್ಚಿಸುತ್ತಾರೆ.

ಇಂತಹುದೇ ಎಚ್ಚರಿಕೆಯನ್ನು ಭಾರತದ ಹಿನ್ನೆಲೆಯಲ್ಲಿ ಡಾ.ಅಂಬೇಡ್ಕರ್ ಅವರು ನೀಡಿದ್ದರು. ಅವರು ಒಂದು ಕಡೆ ಬರೆಯುತ್ತಾ ಹೀಗೆಂದಿದ್ದರು – “ಹಿಂದೂ ಸಮಾಜದ ಕುಸಿತಕ್ಕೆ ಮತ್ತು ಅದರ ಶಾಶ್ವತ ಅವನತಿಗೆ ಅತಿ ದೊಡ್ಡ ಕಾರಣ, ಕೃಷ್ಣನ ಈ ಆಣತಿಯಾಗಿತ್ತು, ಅದೇನೆಂದರೆ ಕಷ್ಟಕರದ ಸಮಯದಲ್ಲಿ ನಿಮ್ಮ ನಿರಾಶಾದಾಯಕತೆಯ ತುತ್ತತುದಿಯಿಂದ ಬಿಡಿಸಿಕೊಳ್ಳಲು ಅವತಾರವನ್ನು ಅರಸಬೇಕು ಎನ್ನುವುದು. ವಿಕೋಪಗಳ ಸಮಯದಲ್ಲಿ ಹಿಂದೂ ಸಮಾಜವನ್ನು ಕೈಲಾಗದಂತೆ ಮಾಡಿರುವುದು ಅದೇ.

ಅಂತಹ ವಿನಾಶಕಾರಿ ಬೋಧನೆಯನ್ನು ನೀವು ಅನುಸರಿಸರಿಸುವುದು ನನಗೆ ಇಷ್ಟವಿಲ್ಲ. ನಿಮ್ಮ ವಿಮೋಚನೆಗಾಗಿ ಯಾರೋ ಏಕ ವ್ಯಕ್ತಿಯ ಮೇಲೆ ನೀವು ಅವಲಂಬಿತರಾಗುವದು ನನಗೆ ಇಷ್ಟವಿಲ್ಲ. ನಿಮ್ಮ ವಿಮೋಚನೆ ನಿಮ್ಮ ಕೈಗಳಲ್ಲಿರಬೇಕು ಮತ್ತು ಅದು ನಿಮ್ಮ ಸ್ವಂತ ಶ್ರಮದಿಂದಾಗಬೇಕು”.

ಇದು ಇಂದು ಏಕ ವ್ಯಕ್ತಿ ನಾಯಕತ್ವದ ಬಗ್ಗೆ ಏಳುವ ಹಲವಾರು ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವುದಿಲ್ಲವೇ?

2019ರಲ್ಲಿ ಮೋದಿ ಮರು ಆಯ್ಕೆ ಬಯಸಿದ ಸಮಯದಲ್ಲಿ, ಮೊದಲು ಅವರ ಬೆಂಬಲಿಗರಾಗಿದ್ದರೂ ನಂತರ ಆ ಸರ್ಕಾರದ ಆಡಳಿತದ ಬಗ್ಗೆ ಬೇಸರಗೊಂಡಿದ್ದ ಹಲವರು, ವಾದದ ಸಲುವಾಗಿಯಾದರೂ ಎತ್ತುತ್ತಿದ್ದ ಪ್ರಶ್ನೆ ವಿರೋಧ ಪಕ್ಷದಲ್ಲಿ ಮೋದಿಯವರಂತಹ ಅಮೋಘ ನಾಯಕ ಯಾರಿದ್ದಾರೆ ಎಂಬುದು! ಸರ್ಕಾರ ನಡೆಸಲು ಅಮೋಘ ನಾಯಕನ ಅವಶ್ಯಕತೆ ಇಲ್ಲ ಎನ್ನುವುದರ ಬಗ್ಗೆ ಅವರಿಗೆ ಕನ್ವಿನ್ಸ್ ಮಾಡುವುದು ಸುಲಭವಾಗಿರಲಿಲ್ಲ.

ಮುಂದುವರೆದು ಅಮೋಘ ನಾಯಕ ನಿರಂಕುಶವಾಗಿ ಬೆಳೆದು ಅಪಾಯಕಾರಿಯಾಗಬಲ್ಲನು ಎಂಬ ಐತಿಹಾಸಿಕ ಸತ್ಯವನ್ನು ಮನಗಾಣಿಸಲು ಕೂಡ ಸಾಧ್ಯವಾಗಿರಲಿಲ್ಲ. ಯಾರೋ ಬಂದು ನಮ್ಮನ್ನೆಲ್ಲಾ ರಕ್ಷಿಸಬೇಕು ಎನ್ನುವ ಮನೋಭಾವ ಮನುಷ್ಯನಲ್ಲಿ ಮೂಲತಃ ಇರುವಂತಾದ್ದೋ ಅಥವಾ ಪಾರಂಪರಿಕ-ಸಾಮಾಜಿಕ-ವೈಯಕ್ತಿಕ ಸಂದರ್ಭಗಳನುಸಾರ ಮನುಷ್ಯರಲ್ಲಿ ಅದು ಬೆಳೆದು ಹೆಮ್ಮರವಾಗಿ, ಅದು ಕೊನೆಗೆ ಜನರೆಲ್ಲರ ಕಲೆಕ್ಟಿವ್ ಬೇಡಿಕೆಯೇನೋ ಎಂಬಂತಾಗಿ, ಯಾರೋ ಒಬ್ಬ ನಾಯಕ ಅದನ್ನು ದುರುಪಯೋಗಪಡಿಸಿಕೊಳ್ಳುವುದು – ಇವೆಲ್ಲಾ ಇಂದಿಗೂ ನಡೆಯುತ್ತಲೇ ಇವೆ. ಒಟ್ಟಿನಲ್ಲಿ ಒಬ್ಬ ನಾಯಕ ಅಥವಾ ಬೆರಳೆಣಿಕೆಯ ಸಂಖ್ಯೆಯ ಜನರ ನಾಯಕತ್ವ ಎನ್ನುವುದು ಅಪಾಯಕಾರಿಯಾಗಬಲ್ಲುದು ಎಂಬುದು ಹಲವು ಬಾರಿ ಸಾಬೀತಾಗುತ್ತಾ ಬಂದಿದೆ. ಇಂತಹುದರ ಬಗ್ಗೆ ಎಂದಿಗೂ ವ್ಯಕ್ತಿ ಪೂಜೆಯನ್ನು ಒಪ್ಪದ ಅಂಬೇಡ್ಕರ್ ಅವರು ತಮ್ಮ ಬರಹಗಳಲ್ಲಿ, ತಮ್ಮ ಕೆಲಸಗಳಲ್ಲಿ ಎಚ್ಚರಿಸುತ್ತಲೇ ಬಂದಿದ್ದರು.

ಅಂಬೇಡ್ಕರ್ ಅವರು ತಮ್ಮ ಬಗ್ಗೆಯೇ ವಿಮರ್ಶೆ ಮಾಡಿಕೊಳ್ಳುತ್ತಿದ್ದ ಹಲವು ಸಂದರ್ಭಗಳಲ್ಲಿಯೂ ಈ ಭಾವನೆ ನಮಗೆ ಕಂಡುಬರುತ್ತದೆ. ವಿಚಾರಗಳನ್ನು ಜನರಿಗೆ ಸಶಕ್ತವಾಗಿ ಮುಟ್ಟಿಸಲು ಮತ್ತು ಶೋಷಿತ ಜನರ ಘನತೆಯನ್ನು ಮರುಕಳಿಸಲು ಅವರನ್ನೇ ಸಶಕ್ತರನ್ನಾಗಿಸಲು ಮಾತ್ರವೇ ಅಂಬೇಡ್ಕರ್ ನಾಯಕತ್ವವನ್ನು ವಹಿಸಿದ್ದು. ತಾವೇ ಅಧಿಕಾರಕೇಂದ್ರವಾಗಿ ಬೆಳೆದು ಮತ್ತೊಬ್ಬನ್ನು ನಿಯಂತ್ರಿಸುವ ಇರಾದೆ ಅವರಲ್ಲಿರಲಿಲ್ಲ. ತಾವು ಹಾಕಿಕೊಂಡಿದ್ದ ಹಲವು ಗುರಿಗಳನ್ನು ಮುಟ್ಟಲಾಗಲಿಲ್ಲ ಎಂದು ತಮ್ಮನ್ನೇ ವಿಮರ್ಶೆ ಮಾಡಿಕೊಂಡಿರುವ ನಿದರ್ಶನಗಳಿವೆ. (ಅವರ ನಿರ್ವಾಣಕ್ಕೂ 10 ತಿಂಗಳ ಮುಂಚೆ, ಮಾರ್ಚ್ 24, 1956ರಂದು ’ಹಳ್ಳಿಗಳಲ್ಲಿ ವಾಸಿಸುವ ಅಸಂಖ್ಯಾತ ಅಸ್ಪೃಶ್ಯರ ಸ್ಥಿತಿಯನ್ನು ಉತ್ತಮಪಡಿಸುವ ನನ್ನ ಗುರಿಯಲ್ಲಿ ನಾನು ನಿರೀಕ್ಷಿದಷ್ಟು ಯಶಸ್ಸು ಸಿಕ್ಕಿಲ್ಲ. ಆದುದರಿಂದ, ನನ್ನ ಉಳಿದ ಜೀವನದ ಎಲ್ಲ ಶಕ್ತಿಯನ್ನು ಹಳ್ಳಿಗಳಲ್ಲಿ ವಾಸಿಸುವ ಅಸ್ಪೃಶ್ಯರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಮುಡುಪಾಗಿಡುತ್ತೇನೆ’ ಎಂದು ಹೇಳಿಕೊಂಡಿದ್ದರು). ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದನ್ನು ಬಿಡಿ ಎಂದು ಕೂಡ ಅವರು ತಮ್ಮ ಅನುಯಾಯಿಗಳಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದು ದಾಖಲಾಗಿದೆ. ಹೀಗೆ ಸಂಪೂರ್ಣ ಶರಣಾಗತಿ ಅಥವಾ ಯಜಮಾನಿಕೆಯನ್ನು ಸದಾ ವಿರೋಧಿಸುತ್ತಿದ್ದ ಅಂಬೇಡ್ಕರ್ ಅವರ ಬಗೆಗೆ ಲೇಖಕ ಮುಲ್ಕ್ ರಾಜ್ ಆನಂದ್ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಮುಲ್ಕ್ ರಾಜ್ ಆನಂದ್: ನಮಸ್ಕಾರ್, ಡಾ.ಅಂಬೇಡ್ಕರ್!

ಬಿ.ಆರ್.ಅಂಬೇಡ್ಕರ್: ನನಗೆ ಬುದ್ಧಿಸ್ಟ್ ಗ್ರೀಟಿಂಗ್ ಆದ ’ಓಂ ಮಣಿ ಪದ್ಮಯೇ’ ಹೆಚ್ಚು ಸೂಕ್ತ! ತಾವರೆ ಹೂಗಳು ಅರಳಲಿ.

ಮುಲ್ಕ್ ರಾಜ್ ಆನಂದ್: ನಾನು ಒಪ್ಪಿಕೊಳ್ತೀನಿ. ನಾವೆಷ್ಟು ಬುದ್ಧಿಹೀನರು! ಅರ್ಥಗಳನ್ನು ಪ್ರಶ್ನಿಸದೆ ಪದಗಳನ್ನು ಹಿಂದಿನ ಪೀಳಿಗೆಯಿಂದ ಒಪ್ಪಿಕೊಂಡುಬಿಡುತ್ತೇವೆ. ನಿಜ, ನಮಸ್ಕಾರ ಅಂದರೆ ನಾನು ನಿಮ್ಮ ಮುಂದೆ ಬಾಗುತ್ತೇನೆ ಎಂದರ್ಥ..

ಬಿ.ಆರ್.ಅಂಬೇಡ್ಕರ್: ಅದು ಶರಣಾಗತಿಯನ್ನು ಶಾಶ್ವತಗೊಳಿಸುತ್ತದೆ. ತಾವರೆ ಹೂಗಳು ಅರಳಲಿ ಎಂಬುದು ಜ್ಞಾನೋದಯದ ಪ್ರಾರ್ಥನೆ.

PC : The Punch Magazine

ಹೀಗೆ ಎದುರಿನ ವ್ಯಕ್ತಿಗೆ ಕಂಡಾಗ ಆಡುವ ಸರಳ ಪ್ರಾಥಮಿಕ ಮಾತುಗಳಲ್ಲೂ ಅಂಬೇಡ್ಕರ್ ಶರಣಾಗತಿಯನ್ನು ವಿರೋಧಿಸುತ್ತಿದ್ದವರು. ಇಂದು ಅಧಿಕಾರ ಕೇಂದ್ರಗಳು ಎಗ್ಗಿಲ್ಲದೆ ಬೆಳೆಯುತ್ತಿರುವ ಮತ್ತು ಸರ್ವಾಧಿಕಾರಿತನ ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆ ನಮಗೆ ಖಂಡಿತಾ ದಾರಿದೀಪವಾಗಬಲ್ಲದು.

ಕೊನೆಯ ಮಾತು: ಅಂಬೇಡ್ಕರ್ ಆದಿಯಾಗಿ ಹಲವು ಚಿಂತಕರು ನೀಡಿದ ವಿವೇಕದ ಹೊರತಾಗಿಯೂ, ನಾಯಕತ್ವವನ್ನು ಆರಾಧಿಸುವ, ಮುಖಂಡರ ನಡೆ ನುಡಿಗಳನ್ನು ಅನುಕರಿಸುವ, ಅವರಿಂದ ಸ್ಫೂರ್ತಿಗೊಳ್ಳುವ ಭಾವನೆಯನ್ನು-ಪ್ರಕ್ರಿಯೆಯನ್ನು-ಸ್ವಭಾವವನ್ನು ಭಾರತದಂತಹ ದೇಶದಲ್ಲಿ, ಅದರಲ್ಲೂ ರಾಜಕೀಯ ಮತ್ತು ಸಿನಿಮಾದಂತಹ ಕ್ಷೇತ್ರಗಳಲ್ಲಿ ನಿವಾರಿಸಿಕೊಳ್ಳುವುದು ಸುಲಭದ ಕೆಲಸವಲ್ಲ.

ತನಗೆ ಬೇಕೋ ಬೇಡವೋ ಇಂತಹ ಅಭಿಮಾನವನ್ನು-ಅನುಸರಣೆಯನ್ನು ಗಳಿಸುವ ರಾಜಕಾರಣಿಯೋ, ಸಿನಿಮಾ ನಟನೋ ಜವಾಬ್ದಾರಿಯಿಂದ ನಡೆದುಕೊಂಡರೆ, ತನಗೆ ಸಿಕ್ಕ ಅಧಿಕಾರವನ್ನು ಎಲ್ಲರ ಸಾಮಾನ್ಯ ಒಳಿತು ಎಂಬ ಸಾಧನಕ್ಕಾಗಿ ಬಳಸಿಕೊಂಡರೆ, ಯಾರೋ ಒಬ್ಬನನ್ನು ಆರಾಧಿಸುವ ಭಾವನೆ ತರವಲ್ಲ ಎಂಬ ವಿವೇಕಕ್ಕೆ ತಾವೂ ನೀಡಬಹುದಾದ ಕೊಡುಗೆ ಅದಾಗಿದೆ.

ಈ ನಿಟ್ಟಿನಲ್ಲಿ ಒಂದು ಸಂಗತಿ ಪ್ರಮುಖವಾಗಿ ಇಲ್ಲಿ ನೆನಪಿಸಿಕೊಳ್ಳಬೇಕಿದೆ: ಕೆಲವು ದಿನಗಳ ಹಿಂದೆ ತಮಿಳು ನಾಡಿನ ಚುನಾವಣೆಯಲ್ಲಿ ಮತ ಚಲಾಯಿಸಲು ಹೊರಟ ಅಲ್ಲಿನ ಖ್ಯಾತ ನಟ ವಿಜಯ್ ಸೈಕಲ್ ಸವಾರಿ ಮಾಡಿ ಮತಗಟ್ಟೆಗೆ ಹೋದ ಸಂಗತಿ ಬಹಳ ವೈರಲ್ ಆಗಿತ್ತು. ಪೆಟ್ರೋಲ್, ಡೀಸೆಲ್ ಮತ್ತು ದಿನನಿತ್ಯದ ಬಳಕೆಯ ವಸ್ತುಗಳ ವಿಪರೀತ ಬೆಲೆ ಹೆಚ್ಚಳದ ವಿರುದ್ಧ ಹಾಗೂ ಆಳುವ ಸರ್ಕಾರದ ನಿಂರಕುಶ ನಡೆಗೆ ಪ್ರತಿರೋಧ ಎಂದೇ ಇದು ಚರ್ಚೆಯಾಯ್ತು. ಅದಕ್ಕೂ ಕೆಲವು ದಿನಗಳ ಮೊದಲು ಪಶ್ಚಿಮ ಬಂಗಾಳದ ಕೆಲವು ಸೆಲೆಬ್ರಿಟಿಗಳು ಸೇರಿ, ಹಿಂದುತ್ವ ಅಜೆಂಡಾ ಸೃಷ್ಟಿಸುವ ದ್ವೇಷದ ವಿರುದ್ಧ ನಿರ್ಮಿಸಿದ್ದ ಒಂದು ಹಾಡಿನ ವಿಡಿಯೋ ವೈರಲ್ ಆಗಿತ್ತು. ಇನ್ನು ತಮಿಳು ನಾಡಿನವರೇ ಆದ ಮಾರಿ ಸೆಲ್ವರಾಜ್ ಅವರು ನಿರ್ದೇಶಿಸಿರುವ ’ಕರ್ಣನ್’ ಎಂಬ ಸಿನೆಮಾ ದಲಿತರ ಮೇಲಿನ ಹಿಂಸೆ ಮತ್ತು ಅದಕ್ಕೆ ಪ್ರತಿರೋಧ ತೋರುವ ಥೀಮ್ ಹೊತ್ತು ಜನರ ಮುಂದೆ ಬಂದಿದೆ. ಇವಕ್ಕೆಲ್ಲಾ ಹೋಲಿಸಿಕೊಂಡು, ತಮ್ಮ ಲಾಭಕ್ಕಾಗಿ ಮಾತ್ರ ಚಿತ್ರಮಂದಿರ ಪೂರ್ತಿ ತುಂಬಲು ಕೋವಿಡ್ ನಿಯಮಗಳನ್ನು ಸಡಿಲಗೊಳಿ ಎಂದು ಮುಖ್ಯಮಂತ್ರಿ ಎದುರು ಕೈಜೋಡಿಸಿ ದೈನ್ಯತೆಯಿಂದ ಕೂತಿದ್ದ ಇಲ್ಲಿನ ಸ್ಟಾರ್ ನಟರನ್ನು ಒಮ್ಮೆ ನೆನಪಿಸಿಕೊಂಡು ಯೋಚಿಸಿ.

ನಾಯಕತ್ವ ಮತ್ತು ಅಧಿಕಾರದ ವೈರುಧ್ಯಗಳು ಕಣ್ಣಮುಂದೆ ಸುಲಭವಾಗಿ ಸುಳಿಯುತ್ತವೆ.


ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...