Homeಕರ್ನಾಟಕಶಿಗ್ಗಾಂವಿಯ ಗೆಲುವಿನಲ್ಲಿ ಸಂಘಟನೆಗಳ ಪಾತ್ರ: ಒಂದು ವಿಶೇಷ ವಿಶ್ಲೇಷಣಾ ಕಥನ

ಶಿಗ್ಗಾಂವಿಯ ಗೆಲುವಿನಲ್ಲಿ ಸಂಘಟನೆಗಳ ಪಾತ್ರ: ಒಂದು ವಿಶೇಷ ವಿಶ್ಲೇಷಣಾ ಕಥನ

- Advertisement -
- Advertisement -

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮೂರು ವಿಧಾನಸಭೆಯ ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸಿ ರಾಜ್ಯದ ಜನತೆ 2023ರಲ್ಲಿ ನೀಡಿದ್ದ ತೀರ್ಪನ್ನು ಮತ್ತಷ್ಟು ಗಟ್ಟಿಯಾಗಿ ಪುನರುಚ್ಛರಿಸಿದ್ದಾರೆ. ಖಂಡಿತವಾಗಿಯೂ ಇದು ಸಂತಸದ ಗಳಿಗೆ. ಇದಕ್ಕಾಗಿ ರಾಜ್ಯದ ಎಲ್ಲಾ ಜೀವಪರ ಮನಸ್ಸುಗಳಿಗೂ ಶುಭಾಷಯಗಳು. ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಜನತೆಗೆ ವಿಶೇಷ ಅಭಿನಂದನೆ. ಕೆಲ ನಾಯಕರು ನೀ ಮುಂದು, ನಾ ಮುಂದು ಎಂಬಂತೆ ಈ ಗೆಲುವಿನ ಶ್ರೇಯಸ್ಸನ್ನು ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳ ಮೂಲಕ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಗದ್ದಲದ ನಡುವೆ ಮತ ಚಲಾಯಿಸಿದ ಜನರನ್ನು, ಶ್ರಮವಹಿಸಿ ದುಡಿದ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರನ್ನು, ಬಿಜೆಪಿಯನ್ನು ಮಣಿಸಲು  ನಿಸ್ವಾರ್ಥವಾಗಿ ತೊಡಗಿಸಿಕೊಂಡು ಕೆಲಸ ಮಾಡಿದ ಸಂಘಟನೆಗಳನ್ನು ಮರೆತೇಬಿಟ್ಟಿದ್ದಾರೆ. ಅವರಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಈ ಗೆಲುವಿನಲ್ಲಿ ಜನ, ಕಾರ್ಯಕರ್ತರು ಹಾಗೂ ಸಂಘಟನೆಗಳು ವಹಿಸಿದ ನಿರ್ಣಾಯಕ ಪಾತ್ರದತ್ತ ಗಮನ ಸೆಳೆಯುವುದು ಈ ಬರಹದ ಉದ್ದೇಶ. ಶಿಗ್ಗಾಂವಿಯನ್ನು ಇದಕ್ಕಾಗಿ ಪ್ರಮುಖ ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆಯ ಗೆಲುವು ಸಾಮಾನ್ಯ ಗೆಲುವಲ್ಲ. ಶಿಗ್ಗಾಂವಿಯನ್ನು ಭದ್ರಕೋಟೆಯನ್ನಾಗಿ ಮಾಡಿಟ್ಟುಕೊಂಡಿದ್ದ, ಕೋಟಿಗಟ್ಟಲೆ ಹಣ ಸುರಿದ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ವರಿಷ್ಟ ನಾಯಕನ ವಿರುದ್ಧ, ಯಾರೂ  ಹೆಸರು ಕೇಳದ, ಮುಸ್ಲಿಂ ಸಮುದಾಯದ ಅಭ್ಯರ್ಥಿ ಜಯಗಳಿಸುವುದೆಂದರೆ ಸುಲಭವಲ್ಲ. ಆದರೆ ಇದು ಕೇವಲ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ಸಿನಿಂದ ಗೆಲುವು ಸಾಧಿಸಿದ ಪಠಾಣ್  ಅವರ ಸಾಧನೆಯೋ, ಕಾಂಗ್ರೆಸ್‌ ತಾನಾಗೇ ಪಡೆದ ವಿಜಯವೋ ಅಲ್ಲ. ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದ ಶಿಗ್ಗಾಂವಿ ಗೆಲುವಿನತ್ತ ಹೇಗೆ ತಿರುಗಿಕೊಂಡಿತು ಎಂಬುದನ್ನು ನನ್ನ ಮುಂದೆ ಅದು ಬಿಚ್ಚಿಕೊಂಡಂತೆ ತಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.

ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರನ್ನು ಸೋಲಿಸಬಹುದು (ಅವರ ಮಗ ಸ್ಪರ್ಧಿಸಿದ್ದರೂ ವಾಸ್ತವದಲ್ಲಿ ಸ್ಪರ್ಧೆಯಲ್ಲಿದ್ದವರು ಬೊಮ್ಮಾಯಿಯೇ) ಎಂಬ ನಿರೀಕ್ಷೆ ಕಾಂಗ್ರೆಸ್‌ ಮುಖಂಡರುಗಳಿಗೂ ಇರಲಿಲ್ಲ. ಪಠಾಣ್‌ ಅವರಿಗೆ ಟಿಕೆಟ್‌ ಘೋಷಣೆಯಾದ ನಂತರವಂತೂ “ಓಹ್‌ ಮತ್ತೊಮ್ಮೆ ಮ್ಯಾಚ್‌ ಫೀಕ್ಸಿಂಗ್”, “ಗೆಲ್ಲುವ ಅವಕಾಶವೇ ಇಲ್ಲ” ಇದು ಶಿಗ್ಗಾಂವಿಯ ರಾಜಕೀಯ ಅನುಭವ ಬಲ್ಲ ಬಹುತೇಕ ಮಿತ್ರರ ಅಭಿಪ್ರಾಯವಾಗಿತ್ತು.

ಶಿಗ್ಗಾಂವಿಯಲ್ಲಿ ಕೆಲಸ ಪ್ರಾರಂಭ ಮಾಡಲು ಎದ್ದೇಳು ಕರ್ನಾಟಕ ಎಂಬ ನಮ್ಮ ಸಂಘಟನೆ ನಡೆಸಿದ ಮೊದಲ ಪ್ರಯತ್ನ ಅಷ್ಟು ಯಶಸ್ಸು ಕಾಣಲಿಲ್ಲ. ಏಕೆಂದರೆ ಬಹುಪಾಲು ಮಿತ್ರರಿಗೆ ಗೆಲ್ಲಬಹುದು ಎಂಬ  ವಿಶ್ವಾಸವಿರಲಿಲ್ಲ, ಅಲ್ಲದೆ ಎಲ್ಲರನ್ನೂ ಹೆಣೆದು ಕರೆದುಕೊಂಡು ಹೋಗುವವರು ಯಾರು ಎಂಬ ಸ್ಪಷ್ಟತೆ ಇರಲಿಲ್ಲ. ಕೆಲ ದಿನಗಳ ನಂತರ ಆ ಭಾಗದ ನಾಗರೀಕ ಸಮಾಜದ ಎಲ್ಲಾ ಮಿತ್ರ ಮುಂದಾಳುಗಳನ್ನು ಸೇರಿಸಿ ಒಂದು ಜೂಮ್‌ ಸಭೆ ಮಾಡಲಾಯಿತು. ಅಲ್ಲೂ ಕೂಡ ಅದೇ ನಿರಾಶೆಯ ಮಾತುಗಳು. ನಾವೆಷ್ಟೇ ಕೆಲಸ ಮಾಡಿದರೂ ಉಪಯೋಗವಿಲ್ಲ. ಮ್ಯಾಚ್‌ ಫಿಕ್ಸ್‌ ಆಗಿದೆ. ಗೆಲ್ಲುವ ಅವಕಾಶವೇ ಇಲ್ಲ. ಎಲ್ಲಾ ಸಮುದಾಯಗಳಲ್ಲೂ ಹೆಚ್ಚಿನ ಪಾಲು ಜನರು ಕಳೆದ ಬಾರಿ ಬೊಮ್ಮಾಯಿಗೇ ಮತ ಹಾಕಿದ್ದಾರೆ. ಮುಸ್ಲಿಮರಲ್ಲೂ ದೊಡ್ಡ ಸಂಖ್ಯೆಯ ಜನ ಬೊಮ್ಮಾಯಿಗೆ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ಬೊಮ್ಮಾಯಿ ಹಿಡಿತ ಅಷ್ಟಿದೆ. ಸೋಲಿಸಲು ಸಾಧ್ಯವಿಲ್ಲ. ಇಲ್ಲಿ ಗೆಲ್ಲಬಹುದು ಎಂದು ಹೇಳಲು, ನಮ್ಮ ಬಳಿಯೂ ಹೆಚ್ಚಿನ ಆಧಾರಗಳು ಇರಲಿಲ್ಲ. “ಅದೇನೇ ಇರಲಿ, ಗೆಲುವು – ಸೋಲನ್ನು ಪಕ್ಕಕ್ಕಿಡೋಣ. ಕನಿಷ್ಟ ಸಾಧ್ಯವಾದಷ್ಟು ತಳಸಮುದಾಯಗಳನ್ನು ಅವರ ಹಿಡಿತದಿಂದ ನಾವು ಹೊರತರಬೇಕು. ಅದಕ್ಕಾಗಿ ನಮ್ಮಿಂದ ಸಾಧ್ಯವಿರುವ ಪ್ರಯತ್ನ ನಾವು ಮಾಡೋಣ” ಎಂಬ ಮಾತಿಗೆ ಎಲ್ಲರೂ ಸಹಮತ ವ್ಯಕ್ತಪಡಿಸಿಕೊಂಡು ಕೆಲಸ ಪ್ರಾರಂಭಿಸಲು ತೀರ್ಮಾನಿಸಲಾಯಿತು.

ಮತದಾನ ಇನ್ನು ಒಂದು ವಾರ ಇರುವಾಗ ಎಲ್ಲಾ ಜನಪರ ಸಂಘಟನೆಗಳ ಸಭೆ ಶಿಗ್ಗಾಂವಿಯಲ್ಲಿ ಬಹಳ ಉತ್ತಮವಾಗಿ ನಡೆಯಿತು. ಸಭೆಗೆ ನಾನೂ ಹೋಗಿದ್ದೆ. ಅಲ್ಲಿ ಕಂಡುಬಂದ ಚಿತ್ರಣವೆಂದರೆ ಸತೀಶ್‌ ಜಾರಕಿಹೊಳಿ ಮತ್ತು ಮಾನವ ಬಂಧುತ್ವ ವೇದಿಕೆಯ ಒಂದು ತಂಡ ಮತದಾನ ನಡೆಯುವ ದಿನಕ್ಕೂ ಮುಂಚಿನ ಮೂರು ವಾರಗಳಿಂದ ಮೊಕ್ಕಾಂ ಹೂಡಿ ಬಹಳ ವ್ಯವಸ್ಥಿತವಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಂಡಗಳನ್ನು ಮಾಡಿ ,ಸತತ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಜಾಗೃತ ಕರ್ನಾಟಕ, ಮುಸ್ಲಿಂ ಬಂಧುತ್ವ ವೇದಿಕೆ ಹಾಗೂ ಎಐಟಿಯುಸಿ ನ ಕಾಮ್ರೇಡ್‌ ಹೊನ್ನಪ್ಪ ಮತ್ತು ತಂಡ ಹಳ್ಳಿಗಳಲ್ಲಿ ಸುತ್ತಾಡಿ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನದಲ್ಲಿದ್ದರು. ಒಳ ಮೀಸಲಾತಿ ಹೋರಾಟ ಸಮಿತಿಯ ಮುಂದಾಳುಗಳು ಸಹ ಸಮುದಾಯದೊಳಗೆ ಸಭೆಗಳನ್ನು ಆರಂಭಿಸಿದ್ದರು. ಜೀವಿಕ ತಂಡ, ಜಮಾತೆ ಇಸ್ಲಾಮಿನ ತಂಡ ತಮ್ಮತಮ್ಮದೇ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದರು. ಕುರುಬರ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪನವರು ಮತ್ತವರ ತಂಡ ಸಮುದಾಯ ಮುಖಂಡರನ್ನು ಮನವೊಲಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ ಎಲ್ಲವೂ ಬಿಡಿಬಿಡಿಯಾಗಿ ನಡೆಯುತ್ತಿತ್ತು. ಈ ಸಭೆ ಎಲ್ಲರನ್ನೂ ಒಟ್ಟಿಗೆ ತಂದಿತ್ತು. ಅಲ್ಪ ಸಮಯದಲ್ಲೇ ಬಹಳ ಒಳ್ಳೆ ಚರ್ಚೆ ನಡೆಯಿತು.

ಪರಿಸ್ಥಿತಿಯ ಕುರಿತು ಅವಲೋಕನ ಮಾಡಿದಾಗ ಕಂಡುಬಂದ ವಿಚಾರವೆಂದರೆ; ತಳ ಸಮುದಾಯಗಳ ಓಟುಗಳು ವಿಭಜನೆಯಾಗುತ್ತಿವೆ. 2023ರಲ್ಲಿ ಮುಸ್ಲಿಮರು ಸಹ “ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ” ಎಂಬ ನಿಲುವಿನ ಆಧಾರದ ಮೇಲೆ ಬೊಮ್ಮಾಯಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ದಲಿತ, ಕುರುಬ, ನಾಯಕ ಮತಗಳೂ ಸಹ ದೊಡ್ಡ ಮಟ್ಟದಲ್ಲಿ ಬೊಮ್ಮಾಯಿ ಕಡೆ ಹೋಗುತ್ತಿವೆ. ಇದು ಅತಿ ದೊಡ್ಡ ಸಮಸ್ಯೆ. ಎರಡನೆಯದಾಗಿ “ಕಾಂಗ್ರೆಸ್‌ ನಾಯಕರೆ ಶಾಮೀಲಾಗಿದ್ದರೆ”, “ಇದು ಮ್ಯಾಚ್‌ ಫಿಕ್ಸಿಂಗ್‌ ಕ್ಷೇತ್ರ”, “ಬೊಮ್ಮಾಯಿ ಅವರು ಎಲ್ಲಾ ಸಮುದಾಯದ ಮುಖಂಡರನ್ನೂ ಕೊಂಡುಕೊಂಡಿದ್ದಾರೆ”, “ಕಾಂಗ್ರೆಸ್‌ ಒಡೆದ ಮನೆ”, “ಖಾದ್ರಿಯವರೂ, ಪಠಾಣ್‌ ಅವರು ಜೊತೆಗೂಡಿ ಕೆಲಸ ಮಾಡಲು ಸಾಧ್ಯವೇ ಇಲ್ಲ” ಮುಂತಾದ ನಿರಾಶದಾಯಕ ಮನಸ್ಥಿತಿ ಜನರಲ್ಲೂ, ಜನಪರ ಸಂಘಟನೆಗಳಲ್ಲೂ, ಕಾಂಗ್ರೆಸ್ಸಿನ ತಳ ಸ್ತರಗಳಲ್ಲೂ ವ್ಯಾಪಕವಾಗಿತ್ತು. 2023ರ ವಿಧಾನಸಭೆಯಲ್ಲಿ ಬೊಮ್ಮಾಯಿ ಅವರಿಗೆ ದೊಡ್ಡ ಮಟ್ಟದ ಮತಗಳನ್ನು ಚಲಾಯಿಸಲಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಜನತೆ ಕಾಂಗ್ರೆಸ್ಸಿಗೆ ಹೆಚ್ಚಿನ ಮತ ಚಲಾಯಿಸಿದ್ದಾರೆ. ಅದರರ್ಥ ಅತ್ತಿತ್ತ ಹೋಯ್ದಾಡುವ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರನ್ನು ಬಲವಾಗಿ ಕಾಂಗ್ರೆಸ್ಸಿನತ್ತ ಸೆಳೆದರೆ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇದೆ. ಆದರೆ ಅದಕ್ಕೆ ಸರಿಯಾದ ಕಾರ್ಯಾಚರಣೆ ಬೇಕು ಎಂಬುದನ್ನು ಮನಗಾಣಲಾಯಿತು.

ಕಾರ್ಯತಂತ್ರ: ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಮೂರು ಅಂಶದ ಕಾರ್ಯತಂತ್ರವನ್ನು ಅಳವಡಿಸಲು ತೀರ್ಮಾನಿಸಲಾಯಿತು.

  1. ನಿರಾಶಾದಾಯಕ ಮಾತುಗಳನ್ನು ಯಾರೂ ಆಡಬಾರದು.“ಗಾಳಿ ಬದಲಾಗಿದೆ”, “ಶಿಗ್ಗಾಂವಿ ಬದಲಾವಣೆ ಬಯಸುತ್ತಿದೆ”, “ಬೊಮ್ಮಾಯಿ ಅವರ ಸ್ವಾರ್ಥ ರಾಜಕಾರಣ ಎಲ್ಲರಿಗೂ ಗೊತ್ತಾಗಿದೆ”, “”ಬೊಮ್ಮಾಯಿ ಆಟ ನಡೆಯುವುದಿಲ್ಲ”, “ಬದಲಾವಣೆ ಗ್ಯಾರಂಟಿ”, “ಬೈ ಬೈ ಬೊಮ್ಮಾಯಿ” ಎಂಬ ಸಕಾರಾತ್ಮಕ ಸಂಕಥನವನ್ನು ಹರಿಬಿಡಬೇಕು. ನಾವೂ ಮಾಡಬೇಕು. ಕಾಂಗ್ರೆಸ್ಸಿಗೂ ಹೇಳಿ ಮಾಡಿಸಬೇಕು.
  2. ತಳ ಸಮುದಾಯದ ಮತಗಳನ್ನು ಇತ್ತ ತಿರುಗಿಸಲು ನಮ್ಮ, ನಮ್ಮ ಸಮುದಾಯಗಳ ನಡುವೆ ಮತ ವಿಭಜನೆ ಮಾಡುತ್ತಿರುವವರನ್ನು ಕೇಂದ್ರೀಕರಿಸಿ ಅವರನ್ನು ಮನವೊಲಿಸಬೇಕು. ಅವರನ್ನು ಮತ್ತೆ ಇತ್ತ ಕರೆತರಬೇಕು. ಮುಸ್ಲಿಂ ಸಮುದಾಯದ ಮೇಲೆ ಸ್ವಲ್ಪ ಹೆಚ್ಚಿನ ಗಮನವನ್ನೇ ಕೇಂದ್ರೀಕರಿಸಬೇಕು. ತಳ ಸಮುದಾಯಗಳ ನಡುವೆ ಏಕೆ ಬಿಜೆಪಿಗೆ ಮತ ಹಾಕಬಾರದು ಎಂಬ ಪ್ರಚಾರಂದೋಲನವನ್ನು ಬಿರುಸುಗೊಳಿಸಬೇಕು.
  3. ಖಾದ್ರಿ ಅವರು ಮತ್ತು ಪಠಾಣ್‌ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಸಂದೇಶ ಹೋಗಬೇಕು. ಎರಡು ಬಣಗಳ ಸ್ಥಳೀಯ ನಾಯಕತ್ವದ ನಡುವೆ ಇರುವ ವೈಮನಸ್ಸನ್ನು ತುರ್ತಾಗಿ ಶಮನ ಮಾಡಬೇಕು.

ಈ ಎಲ್ಲಾ ಯೋಜನೆ ಎಲ್ಲರಲ್ಲೂ ಭರವಸೆಯನ್ನು ಹುಟ್ಟುಹಾಕಿತು. ಐದು ನಿಮಿಷವನ್ನೂ ವ್ಯರ್ಥ ಮಾಡದೆ ಕೂಡಲೇ ವೇಗಗತಿಯಲ್ಲಿ ಕೆಲಸ ಹಂಚಿಕೊಂಡು ಕೆಲಸಕ್ಕೆ ಇಳಿಯಲಾಯಿತು.

ಒಂದು ವಾರದಲ್ಲಿ ಕ್ಷಿಪ್ರಗತಿಯಲ್ಲಿ ನಡೆದ ಕೆಲಸ:

  • ನಾಗರೀಕ ಸಭೆ ಮುಗಿದ ಕೂಡಲೇ ಕಾಂಗ್ರೆಸ್‌ ಮುಖಂಡರ ಜೊತೆ ದೊಡ್ಡ ಸಭೆ ನಡೆಯಿತು. ನಮ್ಮ ಮೌಲ್ಯಮಾಪನ ಮತ್ತು ಕಾರ್ಯತಂತ್ರವನ್ನು ಅವರೊಂದಿಗೆ ಹಂಚಿಕೊಳ್ಳಲಾಯಿತು. ಕಾಂಗ್ರೆಸ್‌ ಮಾಡಬೇಕಾದ ಕೆಲಸ “ಗೆಲುವು ನಮ್ಮದೆ” ಎಂಬ ವಿಶ್ವಾಸ ಮೂಡಿಸಿ, ಪಕ್ಷದ ತಳಮಟ್ಟದಲ್ಲಿ ಇರುವ ಅಸಮಧಾನವನ್ನು ಶಮನಗೊಳಿಸಲು ಕ್ರಮಕೈಗೊಳ್ಳಿ, ನಾವು ಸಮುದಾಯಗಳನ್ನು ಸಾಧ್ಯವಾದಷ್ಟು ಇತ್ತ ಕರೆತರುವ ಕೆಲಸಕ್ಕೆ ಇಳಿಯುತ್ತೇವೆ ಎಂದು ಹೇಳಿ ಹೊರಟೆವು.
  • ರಾತ್ರೋರಾತ್ರಿ “ಸಂವಿಧಾನ ವಿರೋಧಿ, ಜನ ವಿರೋಧಿ, ಪಿತೂರಿಕೋರ ಬಿಜೆಪಿಯನ್ನು ತಿರಸ್ಕರಿಸೋಣ – ಶರತ್ತುಬದ್ಧವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡೋಣ” ಎಂಬ 10 ಸಾವಿರ ಕರಪತ್ರಗಳನ್ನು ಮುದ್ರಿಸಿ, 50 ಬೈಕುಗಳಲ್ಲಿ [100  ಜನ ಸ್ವಯಂ ಕಾರ್ಯಕರ್ತರನ್ನು ನಿಯೋಜಿಸಿ] ಮೂರು ದಿನಗಳ ಕಾಲ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಸ್ತೃತ ಪ್ರಚಾರಂದೋಲನ ನಡೆಸಲಾಯಿತು.
  • ಮುಸ್ಲಿಂ ಸಮುದಾಯದ ಸಮನ್ವಯ ಸಂಸ್ಥೆಯಾದ ಅಂಜುಮನ್‌ ಮುಖಂಡರನ್ನೆಲ್ಲಾ ಕರೆಸಿ ಅವರ ಮೇಲಿರುವ ಜವಾಬ್ದಾರಿಯನ್ನು, ಅವರು ಬೊಮ್ಮಾಯಿ ಅವರನ್ನು ಬೆಂಬಲಿಸಿ ಮಾಡಿರುವ ಮಹಾತಪ್ಪನ್ನು ಮನವರಿಕೆ ಮಾಡಿಸಲಾಯಿತು. ಈ ಬಾರಿ ಒಂದೇ ಒಂದು ಮತ ಸಹ ಅತ್ತ ಹೋಗದಂತೆ ನೋಡಿಕೊಳ್ಳುತ್ತೇವೆ ಮತ್ತು ಮತದಾನದ ಪ್ರಮಾಣ ಹೆಚ್ಚಿಸುತ್ತೇವೆ ಎಂದು ಎಲ್ಲಾ ಮುಖಂಡರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
  • ಬೊಮ್ಮಾಯಿ ಅವರಿಗಾಗಿ ಪ್ರಚಾರ ಮಾಡಿದ್ದ ಮುಸ್ಲಿಂ ಯುವ ಮುಖಂಡರ ಜೊತೆ ಪ್ರತ್ಯೇಕ ಸಭೆ ಮಾಡಿ ಅವರಿಗೂ ತಪ್ಪನ್ನು ಮನವರಿಕೆ ಮಾಡಿಸಲಾಯಿತು. ಮುಸ್ಲಿಂ ಬಾಂಧವ್ಯ ವೇದಿಕೆಯ ಮಿತ್ರರಾದ ಅನೀಸ್‌ ಪಾಷ ಮತ್ತು ಸುಹೇಲ್‌ ಅಹ್ಮದ್‌ ಆ ಯುವಕರಿಂದ ವಿಡಿಯೋಗಳನ್ನು ಮಾಡಿಸಿ, ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿಸಿ, ಪ್ರತಿಜ್ಞೆ ಸ್ವೀಕಾರ ಮಾಡುವಂತೆ ಮಾಡಿದರು. ಈ ವಿಡಿಯೋಗಳು ಮುಸ್ಲಿಂ ಸಮುದಾಯದ ನಡುವೆ ವ್ಯಾಪಕವಾಗಿ ಹಂಚಿಕೆಯಾದವು.
  • ನದಾಫ್‌ ಸಮುದಾಯದ ರಾಜ್ಯ ಮುಖಂಡರನ್ನು ಶಿಗ್ಗಾಂವಿಗೆ ಕರೆಸಿ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿಸಲಾಯಿತು. ಈ ಮುಖಂಡರು ಸಹ ನಮ್ಮ ಸಮುದಾಯವು ಸಂವಿಧಾನ ವಿರೋಧಿ ಪಕ್ಷದ ಅಭ್ಯರ್ಥಿಗೆ ಖಂಡಿತ ಮತ ಹಾಕುವುದಿಲ್ಲ ಎಂಬ ವಿಡಿಯೋ ಮಾಡಿ ಪ್ರಚಾರ ಮಾಡಲಾಯಿತು.
  • ಜನಪರ ಸಂಘಟನೆಗಳನ್ನೆಲ್ಲಾ ಸೇರಿಸಿ ನವೆಂಬರ್‌ 10 ರಂದು ಜಂಟಿ ಪತ್ರಿಕಾಗೋಷ್ಟಿ ನಡೆಸಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಕೆಲಸವನ್ನು ಚುರುಕುಗೊಳಿಸಿ, ಈ ಬಾರಿ ಬೊಮ್ಮಾಯಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಸಂಕಥನವನ್ನು ಹರಿಬಿಡಲಾಯಿತು. “ಬೈ ಬೈ ಬೊಮ್ಮಾಯಿ”, “ಹಣದ ಅಟ ನಡೆಯೊಲ್ಲ – ಶಿಗ್ಗಾಂವಿ ಜನರ ಮತ ಸಿಕ್ಕಲ್ಲ” ಮುಂತಾದ ಸಂಕಥನ ಇರುವ ಅನೇಕ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
  • ಮಹಿಳೆಯರ ಮೂಲಕ “ಗಂಡಸರು ಏನೇ ಮಾಡಲಿ ಮಹಿಳೆಯರಾಗಿ ನಾವು ಓಟು ಹಾಕುವುದು ಗ್ಯಾರಂಟಿಗಳನ್ನು ಜಾರಿ ಮಾಡಿದ ಸರ್ಕಾರಕ್ಕೇನೆ” ಎಂಬ ಸಂಕಥನದ ಸುತ್ತ ಹಲವು ವಿಡಿಯೋಗಳನ್ನು ತಂದು ಪ್ರಚಾರ ಮಾಡಲಾಯಿತು. ಅಲ್ಲದೆ ಎಐಟಿಯುಸಿ ಸಂಘಟನೆಗೆ ದೊಡ್ಡ ಮಹಿಳಾ ಸಮುದಾಯ ಸಂಪರ್ಕ ಇದ್ದು ಅವರು ಮಹಿಳೆಯರ ನಡುವೆ “ನಮಗೆ ಗ್ಯಾರಂಟಿಗಳನ್ನು ನೀಡಿರುವ ಸರ್ಕಾರಕ್ಕೇನೆ ನಾವು ಮತ ಹಾಕಬೇಕು” ಎಂಬ ಪ್ರಚಾರವನ್ನು ಬಹಳ ಪರಿಣಾಮಕಾರಿಯಾಗಿ ಮಾಡಿದರು.
  • ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಬಿಜೆಪಿಗೆ ಮತ ಹಾಕುತ್ತಿದ್ದ ಸುಮಾರು 20 ಪ್ರದೇಶಗಳಲ್ಲಿ ವಿವರವಾದ ಸಭೆಗಳನ್ನು ಮಾಡಿ “ಒಳ ಮೀಸಲಾತಿಯನ್ನು ಜಾರಿ ಮಾಡುವ ತೀರ್ಮಾನ ತೆಗೆದುಕೊಂಡಿರುವ ಸರ್ಕಾರಕ್ಕೇನೆ ನಾವು ಮತ ಹಾಕಬೇಕು” ಎಂಬುದನ್ನು ಮನವರಿಕೆ ಮಾಡಿಸಿಕೊಟ್ಟರು. ಕುರುಬ ಸಂಘದ ಮುಖಂಡರು ಬಿಜೆಪಿ ಜೊತೆ ಹೋಗಿದ್ದ ಕುರುಬ ನಾಯಕರನ್ನು ಸಂಪರ್ಕಿಸಿ ತಳ ಸಮುದಾಯದ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಡವಿಹಾಕಲು ಕೀಳುಮಟ್ಟದ ಷಡ್ಯಂತರ ಮಾಡುತ್ತಿರುವ ಶಕ್ತಿಗಳ ಜೊತೆ ನೀವು ಯಾವುದೇ ಕಾರಣಕ್ಕೂ ಹೋಗಬಾರದು, ಹೊರಬನ್ನಿ ಎಂದು ಮನವರಿಕೆ ಮಾಡಿಸಿ, ಹಲವರನ್ನು ಕಾಂಗ್ರೆಸ್ಸಿಗೆ ಮತ್ತೆ ಕರೆತಂದರು.
  • ಕೊನೆಯದಾಗಿ ಮತ್ತು ಮುಖ್ಯವಾಗಿ ಕಾಂಗ್ರೆಸ್‌ ನ ಅಸಂತೃಪ್ತ ಮುಖಂಡರುಗಳನ್ನು ಕಂಡು ಮಾತನಾಡಿ ಅವರನ್ನು ಮನವೊಲಿಸುವ ಗುರುತರ ಕೆಲಸ ನಡೆಯಿತು. ಶಿಗ್ಗಾಂವಿ ಮತ್ತು ಸವಣೂರಿನ  ಅಸಂತೃಪ್ತರಾಗಿರುವ ಸುಮಾರು 250 ಖಾದ್ರಿ ಬೆಂಬಲಿಗರ ಪಟ್ಟಿ ಮಾಡಿ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣದ ವಾರ್‌ ರೂಂಗೆ ತಲುಪಿಸಲಾಯಿತು. ಅವರನ್ನು ಸಂಪರ್ಕಿಸಿ, ಅವರ ಸಮಸ್ಯೆಗಳನ್ನು ಅಲಿಸಿ, ಬಗೆಹರಿಸಲು ಕೋರಲಾಯಿತು. ಶಿಗ್ಗಾಂವಿ ವಾರ್‌ ರೂಮಿನಿಂದಲೂ ಮತ್ತು ಮುಖ್ಯಮಂತ್ರಿ ಕಛೇರಿಯಿಂದಲೂ ಅವರಿಗೆ ಕರೆ ಮಾಡಿ ಸಮಾಧಾನಪಡಿಸಲಾಯಿತು ಮತ್ತು ಬೂತ್‌ ಮಟ್ಟದಲ್ಲಿ ಸಕ್ರಿಯವಾಗುವಂತೆ ಹುರಿದುಂಬಿಸಲಾಯಿತು.

ಇಂತಹ ಹಲವಾರು ನಮ್ಮಿಂದ ಸಣ್ಣಪುಟ್ಟ ಅನೇಕ ಕೆಲಸಗಳು ನಡೆದಿವೆಯಾದರೂ ಮೇಲ್ಕಂಡ ಈ ಕೆಲಸಗಳು ನಮ್ಮ ಕಡೆಯಿಂದ ಆಗಿರುವ ಕೊಡುಗೆಯಾಗಿದೆ.‌  ಇಷ್ಟೆಲ್ಲಾ ಕೆಲಸವನ್ನು ಕಾಂಗ್ರೆಸ್ಸಿನಿಂದ ನಯಾಪೈಸೆ ನೆರವನ್ನು ಪಡೆಯದೆ ಮಾಡಲಾಯಿತು. ಕಾಂಗ್ರೆಸ್‌ ಪರವಾಗಿ ಶೈಲಜಾ ಹಿರೇಮಠರು ಸತತ ಸಮನ್ವಯದಲ್ಲಿ ಇದ್ದದ್ದು ಪರಿಣಾಮಕಾರಿ ಕೆಲಸ ಮಾಡಲು ಬಹಳ ಸಹಕಾರಿಯಾಯಿತು.

ಸಣ್ಣ ಅವಧಿಯಲ್ಲಿ ನಡೆದ ಕ್ಷಿಪ್ರಗತಿಯ ಆದರೆ ಕಾರ್ಯತಾಂತ್ರಿಕ ಯೋಜನೆಗಳನ್ನು ಮಾಡಿದ, ಪರಿಣಾಮ ತರಬಲ್ಲ ರೀತಿಯಲ್ಲಿ, ಮತವನ್ನು ಪರಿವರ್ತಿಸುವ ರೀತಿಯಲ್ಲಿ ನಮ್ಮಿಂದ ನಡೆದ ಕೆಲಸದ ಕೊಡುಗೆ ಖಂಡಿತ ಸಣ್ಣಮಟ್ಟದಲ್ಲ. ಈ ಕೆಲಸ ಸಾಮಾಜಿಕ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದರಲ್ಲಿ, ಗೆಲ್ಲಬಹುದು ಎಂಬ ವಿಶ್ವಾಸ ಬೆಳೆಸಿದ್ದರಲ್ಲಿ, ತಳ ಸಮುದಾಯದ ಅನೇಕ ಮುಖಂಡರನ್ನು ಮನವೊಲಿಸಿ ವಾಪಾಸ್‌ ಕರೆ ತಂದಿದ್ದರಲ್ಲಿ, ಮುಸ್ಲಿಂ ಮತಗಳ ನಷ್ಟವನ್ನು ತಡೆದಿದ್ದರಲ್ಲಿ, ತಳಮಟ್ಟದ ಕಾಂಗ್ರೆಸ್‌ ನಾಯಕರ ಅಸಮಾಧಾನವನ್ನು ಬಗೆಹರಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಗರೀಕ ಸಂಘಟನೆಗಳು ಈ ಗೆಲುವಿಗೆ ಈ ಮೂಲಕ ಗಮನಾರ್ಹ ಕೊಡುಗೆ ಕೊಟ್ಟಿವೆ ಎಂದು ಖಂಡಿತ ಹೇಳಬಹುದಾಗಿದೆ. ನಾಗರೀಕ ಸಮುದಾಯ ಮನಸ್ಸು ಮಾಡಿದರೆ ಸಂದಿಗ್ಧ ಸಂದರ್ಭಗಳಲ್ಲಿ ಎಂತಹ ಕೊಡುಗೆ ನೀಡಲು ಸಾಧ್ಯವಿದೆ ಎಂಬುದಕ್ಕೆ ಶಿಗ್ಗಾಂವಿಯು ಒಂದು ಒಳ್ಳೆಯ ಉದಾಹರಣೆಯಾಗಿದೆ. ಸಂಡೂರು ಕ್ಷೇತ್ರಕ್ಕೂ ಇದು ಬಹುಮಟ್ಟಿಗೆ ಅನ್ವಯವಾಗುತ್ತದೆ. ನಮ್ಮ ಪ್ರಕಾರ ಶಿಗ್ಗಾಂವಿ ಗೆಲುವಿನ ಮೊದಲ ಯಶಸ್ಸು ಸತೀಶ್‌ ಜಾರಕಿಹೊಳಿ ಮತ್ತು ಮಾನವ ಬಂಧುತ್ವ ವೇದಿಕೆಯ ದೊಡ್ಡ ತಂಡಕ್ಕೆ ಹೋಗುತ್ತದೆ. ಎರಡನೆಯದಾಗಿ ಕಾಂಗ್ರೆಸ್‌ ಪಕ್ಷದ ಇತರೆ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೋಗುತ್ತದೆ. ಮೂರನೆಯದಾಗಿ ಈ ‍ಶ್ರೇಯಸ್ಸು ಶಿಗ್ಗಾಂವಿ ಮತ್ತು ರಾಜ್ಯದ ಇತರೆಡೆಯಿಂದ ಬಂದು ಕೆಲಸ ಮಾಡಿದ ನಾಗರೀಕ ಸಂಘಟನೆಗಳಿಗೆ ಹೋಗುತ್ತದೆ. ಇದು ಮೂರನೆ ಕ್ರಮದಲ್ಲಿ ಬರುವ ಕೊಡುಗೆಯೇ ಆದರೂ ಇದು ಇಲ್ಲದೆ ಈ ಗೆಲುವು ಸಾಧ್ಯವಿರಲಿಲ್ಲ ಎಂಬುದನ್ನು ಕಾಂಗ್ರೆಸ್‌ ಮುಖಂಡರೂ ಅರಿಯಬೇಕಿದೆ.

ಇದನ್ನೂ ಓದಿ…ಮರಕುಂಬಿ ತೀರ್ಪು; ಜಾತಿಕೂಪದ ಕತ್ತಲಿನಲ್ಲೊಂದು ’ನ್ಯಾಯದ ಬೆಳಕು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...