Homeಅಂಕಣಗಳುಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

ಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

- Advertisement -
- Advertisement -

ಭಾರತ ಪ್ರಜಾಪ್ರಭುತ್ವದ ದೇವಾಲಯ ಅನ್ನಲಾಗುವ ಸಂಸತ್ತಿನೊಳಗೆ ಮಾನ್ಯ ಪ್ರಧಾನಮಂತ್ರಿಗಳು ಮಾತನಾಡುತ್ತಾ ರೈತ ವಿರೋಧಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಸಹಮತ-ಐಕ್ಯಮತ ಅಥವಾ ಸಾಲಿಡಾರಿಟಿ ವ್ಯಕ್ತಪಡಿಸಿರುವ ಮತ್ತು ಹೋರಾಟದಲ್ಲಿ ಭಾಗಿಯಾಗಿರುವ ಸಾಮಾಜಿಕ ಕಾರ್ಯಕರ್ತರನ್ನು ’ಆಂದೋಲನ ಜೀವಿ’ಗಳೆಂದು ಕರೆದದ್ದಲ್ಲದೆ ಅವರಿಗೆಲ್ಲ ’ಪರಾವಲಂಬಿ ಜೀವಿ’ಗಳ ಪಟ್ಟ ಕಟ್ಟಿ, ಮೂದಲಿಸಿ, ತಮ್ಮ ಪಕ್ಷದ ಐಟಿ ಸೆಲ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಟ್ಟಹಾಸ ಮೆರೆಯಲು ಆಹಾರ ದೊರಕಿಸಿಕೊಟ್ಟರು.

ಇದಕ್ಕೂ ಕೆಲವೇ ದಿನಗಳ ಹಿಂದೆ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಅಮೆರಿಕದ ಪಾಪ್ ಸ್ಟಾರ್ ರಿಹಾನ್ನಾ, ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಅಸಮತೋಲನದ ಬಗ್ಗೆ ತಿಳಿವು ಮೂಡಿಸಲು ಶ್ರಮಿಸುತ್ತಿರುವ ಸ್ವೀಡನ್‌ನ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಮತ್ತಿತರರು ಟ್ವೀಟ್ ಮಾಡಿ ರೈತ ಹೋರಾಟಕ್ಕೆ ತಮ್ಮ ’ಸಾಲಿಡಾರಿಟಿ’ ವ್ಯಕ್ತಪಡಿಸಿದ ಬೆನ್ನಲ್ಲೆ, ಎಲ್ಲಿಂದಲೋ ಬಂದ ಆದೇಶವೆಂಬಂತೆ, ಬಿಸಿಸಿಐ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಲೆ ಮುಂತಾದವರು ನಿದ್ದೆಯಿಂದೆದ್ದಂತೆ ಒಂದೇ ತರಹದ ಟ್ವೀಟ್ ಮಾಡಲು ಪ್ರಾರಂಭಿಸಿದರು. ’ರೈತ ಹೋರಾಟ ಆಂತರಿಕ ಸಮಸ್ಯೆ, ಆದುದರಿಂದ ಇಲ್ಲಿಯೇ ಅದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ಹೊರಗಿನ ಶಕ್ತಿಗಳು ಇದರ ಬಗ್ಗೆ ಮಾತನಾಡಿದರೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ’ ಎಂಬುದು ಆ ಹಲವರ ಟ್ವೀಟ್‌ಗಳ ಸಾರಾಂಶ.

PC: The Independent

ಗ್ರೇಟಾ ಥನ್‌ಬರ್ಗ್ ಮೊದಲು ಟ್ವಿಟರ್‌ನಲ್ಲಿ ಹಂಚಿಕೊಂಡು ನಂತರ ತೆಗೆದುಹಾಕಿದ್ದ ’ಟೂಲ್‌ಕಿಟ್‌’ನಲ್ಲಿ (ಯಾವುದಾದರು ವಿಷಯದ ಚರ್ಚೆಯ ಪೂರ್ವಾಪರಗಳನ್ನು ವಿಶದಪಡಿಸಿ ಕಾರ್ಯರೂಪಕ್ಕೆ ತರಲು ಬರೆಯುವ ಮಾರ್ಗದರ್ಶಿ ದಾಖಲೆ) ಕೆಲವು ಸಾಲುಗಳನ್ನು ಎಡಿಟ್ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು, ಕರ್ನಾಟಕದ ಸರ್ಕಾರಕ್ಕಾಗಲೀ ಅಥವಾ ಪೊಲೀಸರಿಗಾಗಲೀ ಮಾಹಿತಿಯನ್ನೇ ನೀಡದೆ, ಕೊನೆಯ ಪಕ್ಷ ಟ್ರಾನ್ಸಿಟ್ ರಿಮ್ಯಾಂಡ್ ಕೂಡ ಪಡೆದುಕೊಳ್ಳದೆ, ಜಾಗತಿಕ ತಾಪಮಾನ ಏರಿಕೆ ಸಮಸ್ಯೆ ವಿರುದ್ಧ ಹೋರಾಡುತ್ತಿರುವ 21 ವರ್ಷದ ಬೆಂಗಳೂರಿನ ವಿದ್ಯಾರ್ಥಿ ದಿಶಾ ರವಿಯವರನ್ನು ಬಂಧಿಸಿ ಕರೆದುಕೊಂಡು ಹೋಗಿರುವುದಲ್ಲದೆ ಅವರ ಮೇಲೆ ದೇಶದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಲವು ಉಲ್ಲಂಘನೆಗಳನ್ನು ಮಾಡಿರುವ ದೆಹಲಿ ಪೊಲೀಸರ ನಡೆಗಳ ಬಗ್ಗೆ ಈ ಕ್ರಿಕೆಟರ್‌ಗಳಿಗೆ ಮತ್ತು ನಟರಿಗೆ ಯಾವುದೇ ಸಮಸ್ಯೆ ಇಲ್ಲ! ಇಲ್ಲಿ ದೇಶದ ನಾಗರಿಕರ ವಿರುದ್ಧವೇ ಆಡಳಿತ ವ್ಯವಸ್ಥೆ ನಡೆಸುವ ದೌರ್ಜನ್ಯ, ದೇಶದ ಸಾರ್ವಭೌಮತೆಯ ಮೇಲಿನ ಪ್ರಹಾರವಲ್ಲವೇ?

ಭಾರತ ದೇಶಕ್ಕೆ ಈ ಸಾವರೀನಿಟಿ ಅಥವಾ ಸಾರ್ವಭೌಮತೆ ಎಲ್ಲಿಂದ ಲಭಿಸುತ್ತದೆಂದು, ಬಿಸಿಸಿಐ ಎಂಬ ಖಾಸಗಿ ಕ್ರಿಕೆಟ್ ಸಂಸ್ಥೆಗೆ ಆಡುವ ಈ ದುಬಾರಿ ಆಟಗಾರರಿಗಾಗಲೀ ಅಥವಾ ಸಿನಿತಾರೆಗಳಾಗಲೀ ಕೇಳಿಕೊಂಡಿಲ್ಲ. ಇಂತಹ ’ತಾರೆ’ಯರನ್ನು ಇದರ ಬಗ್ಗೆ ಎಜುಕೇಟ್ ಮಾಡದೆ ಹೋಗಿರುವುದು, ಒಂದು ಕಡೆ ನಮ್ಮ ಶಿಕ್ಷಣ ಪದ್ಧತಿಯ ದೌರ್ಬಲ್ಯವನ್ನು ಎತ್ತಿ ತೋರಿಸಿದರೆ, ಪ್ರಶ್ನೆಯೇ ಕೇಳದಂತೆ ಮಾಡಿ ತಾರೆಯರ ಜುಟ್ಟು ಹಿಡಿದು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವ ನಿರಂಕುಶಪ್ರಭುತ್ವದ ಸಮಸ್ಯೆಯನ್ನೂ ಇದು ಮತ್ತೆ ಮುನ್ನಲೆಗೆ ತಂದಿದೆ.

ಭಾರತ ಸಂವಿಧಾನದ ಪೀಠಿಕೆಯ ಮೊದಲ ಸಾಲುಗಳನ್ನು ಗಮನಿಸಿದರೆ “ಭಾರತದ ಜನತೆಯಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಸೆಕ್ಯುಲರ್ ಜನತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ..” ಎಂದು ಪ್ರಾರಂಭವಾಗುತ್ತದೆ. ಇದರ ಅರ್ಥ ಭಾರತಕ್ಕೆ ಸಾರ್ವಭೌಮತೆ ಲಭಿಸುವುದು ಯಾವನೋ ಒಬ್ಬ ಮುಖಂಡನಿಂದ ಅಲ್ಲ, ರಾಜರಾಣಿಯರಿಂದ ಅಲ್ಲವೇ ಅಲ್ಲ ಅಥವಾ ಯಾವುದೋ ಒಂದು ಪಕ್ಷ ಅಥವಾ ಸರ್ಕಾರದಿಂದ ಅಲ್ಲ. ಬದಲಾಗಿ ಅದು ಲಭಿಸುವುದು ಭಾರತದ ಜನತೆಯಿಂದಲೇ. ಅಂದರೆ ದೇಶದ ಸಾರ್ವಭೌಮತೆಯನ್ನು, ಜಡ ಅಥವಾ ನಿರ್ಜೀವವಾದ ಗಡಿರೇಖೆಯಿಂದ ಗುರುತಿಸುವುದಲ್ಲ, ಅದು ಸಿಕ್ಕುವುದು ಆಳುವವನಿಂದಲ್ಲ ಬದಲಾಗಿ ಜೀವಿಸುತ್ತಿರುವ ಜನತೆಯಿಂದ. ಆದುದರಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಕೇವಲ ’ಹೊರಗಿನ ಶಕ್ತಿ’ಗಳಿಂದ ಮಾತ್ರ ಒದಗಿಬರುವುದಿಲ್ಲ. ಇದೇ ದೇಶದ ಆಡಳಿತ ವ್ಯವಸ್ಥೆಯಿಂದ, ಇದೇ ದೇಶದ ರಾಜಕಾರಣಿಗಳಿಂದ, ಇದೇ ದೇಶದ ರಾಜಕೀಯ ಪಕ್ಷಗಳಿಂದ ಭಾರತದ ಸಾರ್ವಭೌಮತೆಗೆ ಧಕ್ಕೆ ಬರಬಹುದು. 1975ರಲ್ಲಿ ಭಾರತದ ಸಾರ್ವಭೌಮತೆಗೆ ಧಕ್ಕೆ ಆದದ್ದು ಇಲ್ಲಿನ ಒಕ್ಕೂಟ ಸರ್ಕಾರದಿಂದಲೇ ಎಂಬುದನ್ನು ಈಗ ಆಳುತ್ತಿರುವ ಸರ್ಕಾರ ಕೂಡ ಮರೆತಿಲ್ಲ.

ತಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕೃಷಿ ಕಾಯ್ದೆಗಳು ಬೇಡವೆಂದು ಎರಡು ತಿಂಗಳುಗಳಿಂದ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ರೈತರ ಮೇಲೆ ಗದಾಪ್ರಹಾರ ಮಾಡಿದ, ನೀರು, ಇಂಟರ್‌ನೆಟ್‌ನಂತಹ ಮೂಲ ಸೌಕರ್ಯಗಳನ್ನು ಬಂದ್ ಮಾಡಿದ ಕೆಲಸಗಳು ಈ ದೇಶದ ಜನರು ಕಟ್ಟಿಕೊಂಡಿರುವ ಸಾರ್ವಭೌಮತೆಗೆ ಮಾಡಿದ ದ್ರೋಹ ಎಂದು ಕ್ರಿಕೆಟ್ ಮುಕುಟಮಣಿಗಳಿಗೆ ಏಕೆ ಅನ್ನಿಸಲಿಲ್ಲ? ಕೆಲವೇ ಕಾರ್ಪೊರೆಟ್ ಕಂಪನಿಗಳ ಹಿಡಿತಕ್ಕೆ ಕೃಷಿ ಹೊರಟುಹೋದರೆ ಆಹಾರ ಸಾರ್ವಭೌಮತ್ವಕ್ಕೆ ಭಾರಿ ಧಕ್ಕೆಯಾಗುತ್ತದೆಂದು ಈ ಭಾರಿ ತಾರಾಮಣಿಯರಿಗೆ ಅರ್ಥವಾಗುವುದೆಂದು?

ಅಕ್ಕಮಹಾದೇವಿ ವಚನದ ’ನೊಂದವರ ನೋವ ನೋಯದವರೆತ್ತಬಲ್ಲರು’ ಎಂಬ ಮಾತಿನಂತೆ ಪ್ರಿವಿಲೆಜ್ಡ್ ಜಾತಿ ಮತ್ತು ವರ್ಗದಿಂದ ಬಂದ ಈ ತಾರೆಯರಿಗೆ ’ಸಾಲಿಡಾರಿಟಿ’ ಅರ್ಥ ಆಗುವುದು ಅಷ್ಟು ಸುಲಭವೇನಲ್ಲ. ’ಮುಹಮ್ಮದ್ ಅಲಿ ಮತ್ತು ಭಾರತ’ ಎಂದು ಅಂತರ್ಜಾಲದಲ್ಲಿ ಹುಡುಕಾಡಿದರೆ, ಭಾರತದಿಂದ ಹಲವರು ಅಮೆರಿಕದ ಖ್ಯಾತ ಬಾಕ್ಸರ್ ಅಲಿಯವರನ್ನು ಭೇಟಿಯಾಗಿರುವ ಹಲವು ಫೋಟೋಗಳು ಕಾಣಸಿಗುತ್ತವೆ. ಅದರಲ್ಲಿ ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡ ಅಮೆರಿಕದಲ್ಲಿ ನಡೆದ ಯಾವುದೋ ಚಲನಚಿತ್ರದ ಶೂಟಿಂಗ್ ಸಮಯದಲ್ಲಿ ಅಲಿಯವರನ್ನು ಕಂಡು ಭೇಟಿಯಾಗಿರುವ ಒಂದು ಚಿತ್ರ ಕೂಡ ಇದೆ. ತಮ್ಮ ದೇಶದ ಪ್ರತಿಷ್ಠಿತರನ್ನು, ಸರ್ಕಾರವನ್ನು, ಬಹುಸಂಖ್ಯಾತರ ಸೆಂಟಿಮೆಂಟ್‌ಅನ್ನು ಎದುರು ಹಾಕಿಕೊಂಡು ನೊಂದವರ ಪರ ಜಾಗತಿಕ ಮಟ್ಟದಲ್ಲಿ ’ಸಾಲಿಡಾರಿಟಿ’ ಐಕಾನ್ ಎನಿಸಿಕೊಂಡಿದ್ದ ಮುಹಮದ್ ಅಲಿ ಅವರ ಜೀವನಗಾಥೆ ಇಲ್ಲಿನ ಈ ಕ್ರೀಡಾ ಮತ್ತು ಸಿನಿಮಾ ತಾರೆಯರಿಗೆ ಸ್ಫೂರ್ತಿ ನೀಡದೆ ಹೋಯಿತಲ್ಲಾ!

1967ರಲ್ಲಿ ಅಮೆರಿಕ ವಿಯೆಟ್ನಾಂ ವಿರುದ್ಧ ಯುದ್ಧ ಹೂಡಿತ್ತು. ಆಗ ಸೆಲೆಕ್ಟಿವ್ ಸರ್ವಿಸ್ ಸಿಸ್ಟಮ್ ಮುಖಾಂತರ ಒಂದು ವಯಸ್ಸಿನ ಅಂತರದ ಯಾವ ನಾಗರಿಕನನ್ನಾದರೂ ಯುದ್ಧಸೇವೆಗೆ ಸೇರಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಸಮಯದಲ್ಲಿ ಮುಹಮ್ಮದ್ ಅಲಿಯವರಿಗೂ ಯುದ್ಧ ಸೇವೆಗೆ ಸೇರಲು ಕರೆ ಬರುತ್ತದೆ. ಆಗ ’ಐ ಹ್ಯಾವ್ ನೊ ವಾರ್ ವಿಥ್ ವಿಯೆಟ್ನಾಂಗ್ (ವಿಯೆಟ್ನಾಂ ಕಮ್ಯುನಿಸ್ಟ್ ಪಕ್ಷ)’ ಎಂದು ಘೋಷಿಸುವ ಅಲಿ ಅವರು, ಯುದ್ಧದಲ್ಲಿ ಭಾಗಿಯಾಗಲು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಯುದ್ಧದಲ್ಲಿ ಭಾಗಿಯಾಗಲು ತಮ್ಮ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂದು ತಿಳಿಸಿ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ಆ ಅರ್ಜಿ ತಿರಸ್ಕೃತವಾಗಿ ಅವರು ಮಿಲಿಟರಿ ಸೇವೆಗೇ ಕಡ್ಡಾಯವಾಗಿ ಸೇರಲೇಬೇಕೆಂಬ ತೀರ್ಪು ಬಂದರೂ ಅದನ್ನು ಧಿಕ್ಕರಿಸುತ್ತಾರೆ.

ಯುದ್ಧ ಸೇವೆಗೆ ದಾಖಲಾಗಲು ನಿರಾಕರಿಸುವ ಅಲಿ ಅವರು ನೀಡುವ ಕಾರಣಗಳು ಚಿಂತನಾರ್ಹ. ನನ್ನ ಜನರು ಇಲ್ಲಿ – ಲೂಯಿಸ್ವಿಲ್ಲಿಯಲ್ಲಿ (ಆವರ ಹುಟ್ಟೂರು) ತಮ್ಮ ಮೂಲಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇಲ್ಲಿ ಬಿಳಿಯರು ಅವರನ್ನು ಶೋಷಿಸುತ್ತಿದ್ದಾರೆ. ಇನ್ನೊಂದು ದೇಶದಲ್ಲಿ ಬಿಳಿಯರಲ್ಲದ ನಮ್ಮಂತಹ ಶೋಷಿತರನ್ನೇ ಮತ್ತೆ ಗುಲಾಮರನ್ನಾಗಿಸಿಕೊಳ್ಳಲು ಮಾಡುತ್ತಿರುವ ಈ ಯುದ್ಧಕ್ಕೆ ತಮ್ಮ ಒಪ್ಪಿಗೆಯಿಲ್ಲ ಎಂಬುದನ್ನು ಸ್ಪಷ್ಟವಾಗಿ ಮತ್ತು ಸಾರ್ವಜನಿಕವಾಗಿ ಹೇಳುತ್ತಾರೆ.

ಮತ್ತೊಂದು ದೇಶದ ನಾಗರಿಕರ ನೋವಿಗೆ ಸ್ಪಂದಿಸಿ ಮುಹಮದ್ ಅಲಿ ಸಾಲಿಡಾರಿಟಿ ಸೂಚಿಸಿದ್ದರು. ಅದರಿಂದ ತಮ್ಮ ದೇಶದ ಪ್ರಭುತ್ವ ಮತ್ತು ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯಾಯಾಲಯದ ಶಿಕ್ಷೆಗೆ ಒಳಪಟ್ಟಿದ್ದರು. ಶೇಷ್ಠ ಬಾಕ್ಸರ್ ಎನಿಸಿಕೊಂಡು ಚಾಂಪಿಯನ್‌ಶಿಪ್ ಗಳಿಸಿದ್ದ ಅಲಿ, ಮಾನವೀಯ ಮೌಲ್ಯಗಳಿಗಾಗಿ ಆ ಪ್ರಶಸ್ತಿಗಳನ್ನು ಮತ್ತು ಗಳಿಸಿದ್ದ ಹೆಸರನ್ನು ಕಳೆದುಕೊಳ್ಳಲು ಹಿಂಜರಿಯದೆ ಪಣಕ್ಕೆ ಇಟ್ಟಿದ್ದರು.

ಆಗ ವಿಶ್ವದ ಹಲವು ಕಡೆಗಳಿಂದ ಅಲಿ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದವರಿದ್ದರು. ಚಿಂತಕ ತತ್ವಶಾಸ್ತ್ರಜ್ಞ ಬರ್ಟ್ರಾಂಡ್ ರಸೆಲ್, ಅಲಿ ಅವರ ನಿಲುವು ಮತ್ತು ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿ “ಬದಲಾವಣೆಯ ಗಾಳಿ ಬೀಸುತ್ತಿದೆ. ಅದು ನನಗೆ ಭಾಸವಾಗುತ್ತಿದೆ” ಎಂದಿದ್ದರು. ಗಯಾನಾದಲ್ಲಿ ಚೆಡ್ಡಿ ಜಗನ್ (ಭಾರತ ಮೂಲದ ಜಗನ್ ಗಯಾನಾದ ಪಿತಾಮಹ ಎಂದೇ ಪ್ರಖ್ಯಾತ ಮತ್ತು ಗಯಾನಾದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು) ಅಲಿ ಅವರ ಬೆಂಬಲಕ್ಕೆ ನಿಂತಿದ್ದರು. ಅಲ್ಲಿನ ಅಮೆರಿಕ ರಾಯಭಾರ ಕಚೇರಿ ಮುಂದೆ ಅವರು ಪ್ರತಿಭಟನೆ ನಡೆಸಿದ್ದರು. ಹೀಗೆ ನ್ಯಾಯಯುತವಾದ ಮತ್ತು ಮಾನವೀಯವಾದ ಅಲಿ ಹೋರಾಟಕ್ಕೆ ವಿಶ್ವಾದ್ಯಂತ ಪ್ರಾಜ್ಞರು ತಮ್ಮ ಬೆಂಬಲವನ್ನು ಸೂಚಿಸಿದ್ದರು. ಇಂದು ರಿಹಾನ್ನಾ ಆಗಲಿ ಅಥವಾ ಗ್ರೇಟಾ ಥನ್‌ಬರ್ಗ್ ಆಗಲಿ ಮಾಡಿರುವುದು ಅದನ್ನೇ. ಇಲ್ಲಿ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವ ಪ್ರಶ್ನೆಯೇ ಹುಟ್ಟುವುದಿಲ್ಲ. ಈ ನಿಟ್ಟಿನಲ್ಲಿ ಇಂದು ಆರೋಪಿತ ಟೂಲ್‌ಕಿಟ್‌ನಲ್ಲಿ ನಮೂದಿಸಲಾಗಿದ್ದ, ಅನ್ಯ ದೇಶಗಳಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಬೇಕು ಎಂಬುದು ದೇಶದ್ರೋಹವಾಗುವುದಾದರೂ ಹೇಗೆ?

ಇಂದು ನಾವು ಬಹಳ ಲಿಬರಲ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಂತುಕೊಳ್ಳುತ್ತವೆ ಎಂದುಕೊಳ್ಳುವ ’ನ್ಯೂಯಾರ್ಕ್ ಟೈಮ್ಸ್’, ’ವಾಷಿಂಗ್ಟನ್ ಪೋಸ್ಟ್’ನಂತಹ ಪತ್ರಿಕೆಗಳೇ ಅಂದು ಮುಹಮ್ಮದ್ ಅಲಿ ಅವರ ನಿಲುವಿಗೆ ವಿರೋಧಿಸಿದ್ದವು ಎಂಬುದನ್ನು ಹಲವರು ದಾಖಲಿಸಿದ್ದಾರೆ. 21ನೇ ಶತಮಾನದ ಮೂರನೇ ದಶಕದಲ್ಲಿ ನಡೆಯುತ್ತಿರುವ ರೈತ ಹೋರಾಟದ ಸಮಯದಲ್ಲಿ ಕೂಡ ಇದು ಪುನರಾವರ್ತಿತವಾಗುತ್ತಿರುವುದು ನಮ್ಮ ಕಣ್ಣ ಮುಂದಿದೆ. 26 ಜನವರಿಯಂದು ನಡೆದ ಕೆಲವು ಗಲಭೆಗಳಿಗೆ ರೈತರೇ ಕಾರಣ ಎಂಬಂತೆ ಷರಾ ಬರೆದ ಈ ಮಾಧ್ಯಮಗಳು 99% ಶಾಂತಿಯುತವಾಗಿ ನಡೆದ ರೈತ ಹೋರಾಟವನ್ನೂ ಹಿಂಸೆಯ ಹೋರಾಟ ಎಂಬಂತೆ ಚಿತ್ರಿಸಲು ಪ್ರಯತ್ನಿಸಿದವು. ಪ್ರಭುತ್ವದ ಪಿತೂರಿಯ ತುತ್ತೂರಿಯನ್ನು ಮೊಳಗಿಸಲು ತಮ್ಮ ವೇದಿಕೆಯನ್ನು ’ಅಪವಿತ್ರಗೊಳಿಸಿ, ತಾರಾಮಣಿಯರ ಟ್ವೀಟ್‌ಗಳನ್ನು ಸಂಭ್ರಮಿಸಿದವು.

PC : The Economic Times

ಈ ಸಂದರ್ಭದಲ್ಲಿ, 1967ರಲ್ಲಿ, ರಿವರ್ ಸೈಡ್ ಸ್ಪೀಚ್ ಎಂದೇ ಪ್ರಖ್ಯಾತವಾದ, ಮಾರ್ಟಿನ್ ಲೂಥರ್ ಕಿಂಗ್ ಅವರ ಭಾಷಣದಲ್ಲಿ ನುಡಿದ ಈ ಮಾತುಗಳನ್ನು ಉಲ್ಲೇಖಿಸುವುದು ಮುಖ್ಯ: “ಇಂದು ವಿಶ್ವದಲ್ಲಿ ಹಿಂಸೆಯನ್ನು ಹಂಚುತ್ತಿರುವ ದೈತ್ಯ, ಅಮೆರಿಕನ್ ಸರ್ಕಾರದ ಬಗ್ಗೆ ಸ್ಪಷ್ಟವಾಗಿ ಮಾತನಾಡದೆ ದೌರ್ಜನ್ಯಕ್ಕೆ ಒಳಪಟ್ಟ ಶೋಷಿತರ ಹಿಂಸೆಯ ವಿರುದ್ಧ ನಾನು ಎಂದಿಗೂ ಧ್ವನಿ ಎತ್ತಲಾರೆ… ಮಾನವೀಯತೆಯ ಬಗ್ಗೆ ಬದ್ಧತೆಯಿರುವ ಪ್ರತಿ ಮನುಷ್ಯನೂ ತನ್ನ ಬದ್ಧತೆಗೆ ಅನುಸಾರವಾಗಿ ಪ್ರತಿಭಟಿಸಬೇಕು.. ನಾವು ಪ್ರತಿಭಟಿಸಬೇಕು” ಎಂದಿದ್ದ ಅವರು “ನ್ಯಾಷನಲಿಸಂಗೂ ಮೀರಿದ ಆಳದ ಮತ್ತು ವಿಶಾಲವಾದ ನಿಷ್ಠೆ ಮತ್ತು ನಂಬಿಕೆಗಳನ್ನು” ಒಳಗೊಂಡಿರುವವನು ತಾವು ಎಂದು ತಮ್ಮನ್ನು ಬಣ್ಣಿಸಿಕೊಂಡಿದ್ದರು.

ಮಾನವೀಯತೆಯ ಸೆಲೆಗಳು ನ್ಯಾಷನಲಿಸಂ ಮತ್ತು ಪ್ರಭುತ್ವ ಬಣ್ಣಿಸುವ ಸಾರ್ವಭೌಮತೆಗಿಂತಲೂ ಸೂಕ್ಷ್ಮವಾದವು ಮತ್ತು ಮುಖ್ಯವಾದವು. ಗಡಿಗಳನ್ನು ಮೀರಿದಂತವು. ರವೀಂದ್ರನಾಥ್ ಟ್ಯಾಗೋರ್ ಅವರು ಜಪಾನ್‌ನಲ್ಲಿ ಭಾಷಣ ಮಾಡುತ್ತಾ ಅಲ್ಲಿ ಬೆಳೆಯುತ್ತಿದ್ದ ನ್ಯಾಷನಲಿಸಂ ಬಗ್ಗೆ ಎಚ್ಚರ ನೀಡಿದ್ದು, ಎಂಡಿ ನಂಜುಂಡಸ್ವಾಮಿಯವರು ವಿಶ್ವದ ಎಲ್ಲ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದು- ರಕ್ತ ಹೀರುವ ಬಹುರಾಷ್ಟ್ರೀಯ ಸಂಸ್ಥೆಗಳ ವಿರುದ್ಧ ವಿದೇಶಗಳಲ್ಲಿಯೂ ಪ್ರತಿಭಟಿಸಿದ್ದು, ಪ್ಯಾಲೆಸ್ಟೇನಿಯನ್ನರ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಜಗತ್ತಿನ ಹಲವೆಡೆಗಳಿಂದ ಹರಿದುಬರುವ ಬೆಂಬಲ, ಅಮೆರಿಕದ ಯುದ್ಧನೀತಿಯನ್ನು ಖಂಡಿಸಿ ಅಂತರ್ಜಾಲದಲ್ಲಿ ಗುಪ್ತ ಮಾಹಿತಿಗಳನ್ನು ಬಯಲು ಮಾಡಿ ಸ್ನೋಡೆನ್ ಮತ್ತು ಅಸ್ಸಾಂಜ್ ಅಂತಹ ಪತ್ರಕರ್ತರ ಸೃಷ್ಟಿಸಿದ ಎಚ್ಚರ ಇವೆಲ್ಲವೂ ಸಾಲಿಡಾರಿಟಿಯ ಭಾಗವೇ.

ಇದೆಲ್ಲಾ ಏಕೆ; 1975ರ ತುರ್ತು ಪರಿಸ್ಥಿತಿ ಸಮಯದಲ್ಲಿ ವಿದೇಶಿ ಪತ್ರಿಕೆಗಳು, ಎಮರ್ಜೆನ್ಸಿಯಿಂದ ಆಗಿದ್ದ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ನಿಂತಿರಲಿಲ್ಲವೇ? ಇಲ್ಲಿನ ಸಂತ್ರಸ್ತರ ಪರವಾಗಿ ಸಾಲಿಡಾರಿಟಿ ವ್ಯಕ್ತಪಡಿಸಿರಲಿಲ್ಲವೇ? ಇಲ್ಲಿ ಮಾಧ್ಯಮಗಳ ಮೇಲೆ ಸೆನ್ಸಾರ್ ಹೇರಿದ್ದಾಗ, ವಿದೇಶಿ ಪತ್ರ್ರಿಕೆಗಳ ಸಹಯೋಗದಿಂದ ಹೋರಾಟ ನಡೆಸಲು ಪ್ರಯತ್ನಿಸಿರಲಿಲ್ಲವೇ? ಹಲವರು ವಿದೇಶಕ್ಕೆ ಹಾರಿ ಅಲ್ಲಿಂದಲೇ ಸಂಘಟಿಸಿ ತುರ್ತುಪರಿಸ್ಥಿತಿಯನ್ನು ಕೊನೆಗಾಣಿಸಲು ಪ್ರಯತ್ನಿಸಿರಲಿಲ್ಲವೇ? ಅಮೆರಿಕದಲ್ಲಿನ ಭಾರತೀಯ ರಾಯಭಾರ ಕಚೇರಿ ಮುಂದೆ ಪ್ರತಿಭಟಿಸಿರಲಿಲ್ಲವೇ?

ಇಂದು ಸಾಮಾಜಿಕ ಪ್ರತಿಭಟನೆಯ ಟೂಲ್‌ಕಿಟ್ ಒಂದರಲ್ಲಿ ಅನ್ಯದೇಶದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟಿಸುವಂತೆ ಬರೆದದ್ದೆ ಅತಿ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿರುವುದು, ಅದಕ್ಕಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿಚ್ ಹಂಟ್ ಮಾಡುತ್ತಿರುವುದು ಈ ದೇಶದ ದುರಂತ ಇತಿಹಾಸಗಳ ಪಾಲಿಗೆ ಹೊಸ ಸೇರ್ಪಡೆ.

ಕೊನೆ ಮಾತು: ಜಗತ್ತಿನಲ್ಲಿ ಸಾಮಾನ್ಯ ನಾಗರಿಕ ಹಕ್ಕುಗಳು ಬಹುತೇಕ ಹೋರಾಟಗಳಿಂದಲೇ ದೊರಕಿದ್ದು. ಆ ಹಕ್ಕುಗಳ ಬಗ್ಗೆ ಅರಿವು ಮೂಡಿದ್ದು ಕೂಡ ಎಷ್ಟೋ ಬಾರಿ ಆಂದೋಲನಗಳಿಂದಲೇ. ಕುಡಿಯುವ ನೀರಿನ ಹಕ್ಕಿಗಾಗಿ ನಡೆದ ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹವಾಗಲಿ, ಬ್ರಿಟಿಷರ ವಿರುದ್ಧ ನಡೆದ ಭಾರತದ ಸ್ವಾತಂತ್ರ್ಯ ಆಂದೋಲನಗಳಾಗಲೀ, ಅಮೆರಿಕದಲ್ಲಿ ಜಿಮ್ ಕ್ರೋ ಜನಾಂಗೀಯ ಪ್ರತ್ಯೇಕತೆಯ ನಿಯಮಗಳ ವಿರುದ್ಧದ ’ಬಸ್ ನಿಷೇಧ’ ಆಂದೋಲನವಾಗಲೀ, ದಕ್ಷಿಣ ಆಫ್ರಿಕಾದಲ್ಲಿ ಅಪಾರ್ಥಿಡ್ ವಿರುದ್ಧದ ಆಂದೋಲನಗಳಾಗಲೀ – ನಾಗರಿಕ ಹಕ್ಕುಗಳನ್ನು ದೊರಕಿಸಿಕೊಡುವುದಕ್ಕೆ, ಹಕ್ಕುಗಳ ಬಗ್ಗೆ ತಿಳಿವು ಮೂಡಿಸುವುದಕ್ಕೆ, ದೇಶಗಳನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರು ಆಂದೋಲನಕಾರಿ ಗಾಂಧಿಯವರನ್ನು ಪರಾವಲಂಬಿ ಜೀವಿ ಎಂದು ಕರೆದಿದ್ದರು. ಆಂದೋಲನ ಪದಕ್ಕೆ ಆಗಿರುವಷ್ಟೇ ವಯಸ್ಸು ಹೆಚ್ಚುಕಮ್ಮಿ ’ಆಂದೋಲನ ಜೀವಿ – ಪರಾವಲಂಬಿ’ ಬೈಗುಳಕ್ಕೂ ಆಗಿದೆ.

ನಾಗರಿಕರ ನೋವುಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಿ, ಅವರ ಬೇಡಿಕೆಗಳನ್ನು ಪೂರೈಸಿ, ಈ ಕ್ರಿಕೆಟರ್‌ಗಳು ಟ್ವೀಟಿಸಿದಂತೆಯೇ ’ಅಮಿಕೆಬಲ್ (ಸೌಹಾರ್ದಯುತ) ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಹೆಜ್ಜೆಯಿಡಬೇಕೇ ಹೊರತು, ತಾನು ರಕ್ಷಣೆ ಒದಗಿಸಿ ಸಂರಕ್ಷಿಸಬೇಕಾದ ನಾಗರಿಕರೊಂದಿಗೆ ಕುಸ್ತಿಗೆ ಬೀಳುವುದು, ಬೆದರಿಸುವುದು, ಬಾಯಿ ಮುಚ್ಚಿಸುವುದು ಎಂಬ ಇತ್ಯಾದಿ ಅನಧಿಕೃತ ಮಾರ್ಗಗಳನ್ನು ಅನುಸರಿಸುವುದರಿಂದಲ್ಲ! ಪ್ರಭುತ್ವಕ್ಕೆ ಪ್ರೀತಿ ಬೆಳೆಸಿಕೊಳ್ಳಲು ಇಷ್ಟು ಕಷ್ಟವೇಕೆ?


ಇದನ್ನೂ ಓದಿ: ತಪ್ಪು ಮಾಡದೆ ಜೈಲಿನಲ್ಲಿದ್ದಾರೆ: ದಿಶಾ ರವಿಯನ್ನು ಬೆಂಬಲಿಸಿದ ಪತ್ರಕರ್ತೆ ಪ್ರಿಯಾ ರಮಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...