ಕರ್ನಾಟಕ ಸರ್ಕಾರ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಲು ಖಾಸಗಿ ಪ್ರಯೋಗಾಲಯಕ್ಕೆ ಅನುಮೋದನೆ ನೀಡಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಖಾಸಗಿ ಪರೀಕ್ಷೆಗೆ 4500 ರೂ ನಿಗದಿಪಡಿಸಬಹುದು ಎಂದು ಹೇಳಿದೆ.
20/03/2020 ರಲ್ಲಿ ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಯನ್ನು ಈ ಕೆಳಗಿನ ಕೊರೊನ ವೈರಸ್ ಶಂಕಿತರಿಗೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೇಳಿದೆ:
- ಕಳೆದ 14 ದಿನಗಳಲ್ಲಿ ಅಂತರರಾಷ್ಟ್ರೀಯ ಪ್ರಯಾಣವನ್ನು ಕೈಗೊಂಡ ರೋಗ ಲಕ್ಷಣ ಇರುವ ಎಲ್ಲಾ ವ್ಯಕ್ತಿಗಳು.
- ಪ್ರಯೋಗಾಲಯ ಖಚಿತ ಪಡಿಸಿದ ರೋಗಿಗಳ ಸಂಪರ್ಕದಲ್ಲಿದ್ದ ರೋಗ ಲಕ್ಷಣಗಳಿರುವ ಎಲ್ಲಾ ವ್ಯಕ್ತಿಗಳಿಗೆ.
- ರೋಗ ಲಕ್ಷಣವಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ.
- ತೀವ್ರವಾದ ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ.
- ಕೊರೊನಾ ಸೋಂಕು ದೃಢವಾದವರ ಸಂಪರ್ಕಕ್ಕೆ ಬಂದವರು ಕಡ್ಡಾಯವಾಗಿ ಅವನ / ಅವಳ ಸಂಪರ್ಕಕ್ಕೆ ಬಂದ ನಂತರದ 5 ನೇ ದಿನ ಮತ್ತು 14 ನೇ ದಿನದ ನಡುವೆ ಒಮ್ಮೆ ಪರೀಕ್ಷಿಸಬೇಕು.
ಇದನ್ನೂ ಓದಿ: ಖಾಸಗಿಯಾಗಿ ಕೊರೊನ ಪರೀಕ್ಷೆಗೆ ಒಪ್ಪಿದ ಕೇಂದ್ರ ಸರ್ಕಾರ; ಶುಲ್ಕ 4,500 ರೂ…!!
ಸುತ್ತೋಲೆಯಲ್ಲಿ ಪರೀಕ್ಷೆ ನಡೆಸುವ ಬೆಂಗಳೂರಿನ ಎರಡು ಪ್ರಯೋಗಾಲಯಗಳನ್ನು ಹೆಸರಿದೆ ಹಾಗೂ ಮೊದಲ ಹಂತದ ಪರೀಕ್ಷೆಗಾಗಿ 3000/ರೂ. ಹಾಗೂ ಹೆಚ್ಚುವರಿ ದೃಢೀಕರಣಕ್ಕಾಗಿ 1500/ರೂ. ಗಳನ್ನು ನಿಗಧಿಪಡಿಸಿದೆ. ಒಟ್ಟು ಪರೀಕ್ಷೆಯ ವೆಚ್ಚ 4500/ರೂ. ಗಳನ್ನು ಮೀರಬಾರದು ಎಂದು ಸುತ್ತೋಲೆಯಲ್ಲಿ ಹೇಳಿದೆ.
ಸರ್ಕಾರದ ಈ ನಡೆಯ ಬಗ್ಗೆ ಹಲವಾರು ಜನ ಟೀಕಿಸಿದ್ದಾರೆ. ಚಿಂತಕ ಕೆ.ಪಿ. ಸುರೇಶ್ ಅವರು “ಸರಕಾರ ಜನದ್ರೋಹ ಮಾಡುತ್ತಿದೆ. ವಿಮಾನದಿಂದಿಳಿದವರನ್ನು ಸರಿಯಾಗಿ ಪರೀಕ್ಷಿಸದೇ ಬಿಟ್ಟವರು ಈ ಮಾರಿಯನ್ನು ಉಳಿದವರಿಗೆ ಅಂಟಿಸಿದ್ದಕ್ಕೆ ಸಾಮಾನ್ಯರು ಬೆಲೆ ತೆರಬೇಕಾಗಿದೆ. ಅಗ್ಗದ ಟೆಸ್ಟಿಂಗ್ ಕಿಟ್ ಅಭಿವೃದ್ಧಿಪಡಿಸಿದ ವರದಿ ಈಗಾಗಲೆ ಇದೆ. ಅದನ್ನು ಉತ್ಪಾದಿಸಿ ಹಂಚುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ಆದರೆ ಇಂಥಾ ವಿಷಯಗಳು ಬಂದಾಗ ಅದರಿಂದ ತಪ್ಪಿಸುವ ಕಲೆ ಕೇಂದ್ರ ಸರಕಾರಕ್ಕೆ ಸಿದ್ಧಿಸಿದೆ.” ಎಂದಿದ್ದಾರಲ್ಲದೆ, “ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಎಲ್ಲಾ ನಾಗರಿಕರಿಗೂ ಕೊರೊನಾ ಪರೀಕ್ಷೆ ಉಚಿತ ಎಂದು ಮಾರ್ಚ್ 15 ರಂದು ಹೇಳಿದ್ದರು. ಆದರೆ ಈಗ ಮೆತ್ತಗೆ ಜವಾಬ್ದಾರಿಯಿಂದ ಜಾರಿಕೊಂಡ ಕೇಂದ್ರದ ಮೋದಿ ಸರಕಾರ ಸುತ್ತೋಲೆ ಕಳುಹಿಸಿದೆ. ಕಳ್ಳಾಟಕ್ಕೂ ಒಂದು ಮಿತಿ ಬೇಕು.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sanjeeva Kumar, Special Secretary, Ministry of Health: Both first and second confirmatory tests for COVID-19 are free for all citizens. The country has enough capacity as only 10 percent of the capacity has been utilized per day so far. #Coronavirus pic.twitter.com/JXbK2CXw0I
— ANI (@ANI) March 15, 2020


