ಕೊರೊನಾ ಸೊಂಕಿಗೊಳಗಾಗಿ ಜೂನ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಸವೇಶ್ವರನಗರದ 105 ವರ್ಷ ವಯಸ್ಸಿನ ರಾಜ್ಯದ ಅತ್ಯಂತ ಹಿರಿಯ ಸೋಂಕಿತ ರೋಗಿ ನಿಧನರಾಗಿದ್ದಾರೆ.
ರೋಗಿಯು ದಾಖಲಾಗಿದ್ದ ಪ್ರಿಸ್ಟೈನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಸಣ್ಣ ಮಾತನಾಡಿ ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ರೋಗಿಯು ಸಾವನ್ನಪ್ಪಿದರು ಎಂದು ಹೇಳಿದರು.
“ಸೋಮವಾರ ಆಸ್ಪತ್ರೆಗೆ ದಾಖಲಾದಾಗ ಸಾಮಾನ್ಯವಾಗಿಯೆ ಇದ್ದರು. ಗುರುವಾರದಿಂದ ರಕ್ತದೊತ್ತಡ ಕಡಿಮೆಯಾಗಲು ಪ್ರಾರಂಭವಾಯಿತು. ನಂತರ ಅವರನ್ನು ಐಸಿಯುಗೆ ದಾಖಲಿಸಲಾಯಿತು. ಶುಕ್ರವಾರ ಅವರ ಆಮ್ಲಜನಕ ಮಟ್ಟ ಕುಸಿಯಲು ಪ್ರಾರಂಭವಾಯಿತು. ವೆಂಟಿಲೇಟರ್ ಬೆಂಬಲ ನೀಡಿಯು ಅವರ ಸ್ಥಿತಿ ಹದಗೆಡುತ್ತಾ ಹೋಯಿತು.” ಎಂದು ಡಾ. ಪ್ರಸನ್ನ ಹೇಳಿದ್ದಾರೆ.
ರೋಗಿಯು 1973 ರಲ್ಲಿ ನಿವೃತ್ತರಾದ ಮಾಜಿ ಸರ್ಕಾರಿ ಅಕೌಂಟೆಂಟ್ ಆಗಿದ್ದಾರೆ. ಇದುವರೆಗಿನ ರಾಜ್ಯದ ಅತ್ಯಂತ ಹಿರಿಯ ಕೊರೊನಾ ರೋಗಿಯಾಗಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸಂಭವಿಸಿದ ಕೊರೊನಾ ಸಾವುನೋವುಗಳಲ್ಲಿ 34% ಜನರು 60 ರಿಂದ 74 ವರ್ಷದೊಳಗಿನವರಾಗಿದ್ದಾರೆ. 14% ದಷ್ಟು 74 ವರ್ಷಕ್ಕಿಂತ ಮೇಲ್ಪಟ್ಟವರು.
ರೋಗಿಯ ಕುಟುಂಬದ ಅನೇಕ ಸದಸ್ಯರು ಕೂಡಾ ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತದೆ. ಅವರ ಅಂತ್ಯಕ್ರಿಯೆಯನ್ನು ಸೋಂಕುರಹಿತ ಇಬ್ಬರು ಕುಟುಂಬ ಸದಸ್ಯರು ನೋಡಿಕೊಳ್ಳುತ್ತಾರೆ ಎನ್ನಲಾಗಿದೆ.
ಓದಿ: ‘ಭರವಸೆಯ ಕಿರಣ’; ಕೊರೊನಾ ಸೋಂಕಿತ 97 ವರ್ಷದ ಹಿರಿಯ ವ್ಯಕ್ತಿ ಗುಣಮುಖ


