Homeಕರ್ನಾಟಕಇನ್ನೂ ನಿಲ್ಲದ ವಲಸೆ ಕಾರ್ಮಿಕರ ನಡಿಗೆ; ಸೊಲ್ಲೆತ್ತದ ಸರ್ಕಾರ

ಇನ್ನೂ ನಿಲ್ಲದ ವಲಸೆ ಕಾರ್ಮಿಕರ ನಡಿಗೆ; ಸೊಲ್ಲೆತ್ತದ ಸರ್ಕಾರ

ಗೂಡು ಸೇರುವ ತವಕ; ಬಿಸಲನ್ನೂ ಲೆಕ್ಕಿಸದೆ ಹೆಜ್ಜೆ ಹಾಕುತ್ತಿರುವ ವಲಸೆ ಕಾರ್ಮಿಕರು

- Advertisement -
- Advertisement -

ವಲಸೆ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರಗಳು ಸೂಕ್ತ ವಾಹನದ ವ್ಯವಸ್ಥೆ ಮಾಡದೇ ಇರುವ ಕಾರಣದಿಂದ ಕಾರ್ಮಿಕ ಭಾರತ ಚಲಿಸುತ್ತಲೇ ಇದೆ.

ಬದುಕನ್ನು ಕಟ್ಟಿಕೊಳ್ಳಲು ಗೊತ್ತು ಗುರಿಯಿಲ್ಲದ ಪ್ರದೇಶಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಹೆಜ್ಜೆಹೆಜ್ಜೆಗೂ ಕಡುಕಷ್ಟ ಅನುಭವಿಸುವಂತಾಗಿದೆ. ಊರಿಗೆ ಸೇರುವ ತವಕ ಎಲ್ಲಾ ಕಾರ್ಮಿಕರಲ್ಲಿ ಮನೆ ಮಾಡಿದೆ. ಕಾಲಲ್ಲಿ ರಕ್ತ ಸುರಿದರೂ ಸರಿಯೇ? ದೇಹದಲ್ಲಿ ಬೆವರು ಹರಿದರೂ ಸರಿಯೇ ಊಟ ನೀರು, ನಿದ್ರೆ ಯಾವುದೂ ಇಲ್ಲದಿದ್ದರೇನು ಊರು ತಲುಪಬೇಕೆಂಬ ಧಾವಂತ ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

ಉತ್ತರದ ಜನ ಕೊರೊನ ಲಾಕ್‌ಡೌನ್‌ಗೆ ತತ್ತರಿಸಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಗಮನಹರಿಸಿ ದಂತೆ ಕಾಣುತ್ತಿಲ್ಲ. ಹಿಂದಿಯಲ್ಲೇ ಭಾಷಣ ಕುಟ್ಟುವ ಗೃಹ ಸಚಿವ ಅಮಿತ್ ಶಾ ಮತ್ತು ನರೇಂದ್ರ ಮೋದಿ ಅದೇ ಭಾಷಿಕರ ನೋವಿಗೆ ಮಿಡಿಯುತ್ತಿಲ್ಲ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮಬಂಗಾಳ  ಜಾರ್ಖಂಡ್ ಭಾಗದ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ಬಸ್, ಟ್ರೈನ್, ಲಾರಿ, ಹೀಗೇ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದೆ ನಡೆದೂ ನಡೆದೂ ಬಳಲಿ ಹೋಗಿದ್ದಾರೆ. ಅವರ ಗೋಳನ್ನು ಕೇಳುವವರೇ ಇಲ್ಲವಾಗಿದೆ. ರಸ್ತೆ ಎಲ್ಲಿಗೆ ಮುಟ್ಟಿಸುತ್ತದೆ ಎಂಬುದು ಗೊತ್ತಿಲ್ಲದೆ ಬೆನ್ನಿಗೆ ಬ್ಯಾಗುಗಳನ್ನು ತಗಲು ಹಾಕಿಕೊಂಡು ಹೋಗುತ್ತಿರುವ ದೃಶ್ಯಗಳು ಎಂಥವರ ಮನವನ್ನೂ ಕಲಕುವಂತಿವೆ.

ರಾಜ್ಯದಲ್ಲಿ ಇನ್ನೂ ವಲಸೆ ಕಾರ್ಮಿಕರಿದ್ದು, ಅವರೆಲ್ಲರೂ ಸೇವಾಸಿಂಧುವಿನಲ್ಲಿ ನೋಂದಣಿಯಾಗದ ಕಾರ್ಮಿಕರಾಗಿದ್ದಾರೆ. ಆಧಾರ್ ಕಾರ್ಡ್ ಸೇರಿ ಅಗತ್ಯ ದಾಖಲೆಗಳು ಇಲ್ಲದೆ, ತಾಂತ್ರಿಕ ಕಾರಣಗಳಿಗಾಗಿ ನೋಂದಣಿ ಸಾಧ್ಯವಾಗದೆ, ಮೊಬೈಲ್ ಗೆ ಮಾಹಿತಿ ಬಾರದೆ ಇರುವ ವಲಸೆ ಕಾರ್ಮಿಕರು ಅನಿವಾರ್ಯವಾಗಿ ನಡೆದೇ ಹೋಗುವಂತಹ ಸನ್ನಿವೇಶ ಬಂದೊದಗಿದೆ. ಹಾಗಾಗಿ ವಲಸೆ ಕಾರ್ಮಿಕರು ತಂಡ ತಂಡವಾಗಿ ಲಾಕ್‌ಡೌನ್‌ ಲೆಕ್ಕಿಸದೇ ತೆರಳುತ್ತಿದ್ದಾರೆ. ಬೇಸಿಗೆಯ ಬಿಸಿನ ಧಗೆಗೆ ಅವರ ಬದುಕು ಮತ್ತಷ್ಟು ಕಮರಿ ಹೋಗಿದೆ. ಆದರೆ ಅದೇ ಕಾರ್ಮಿಕರು ಮತ್ತು ಜನರಿಂದ ಆಯ್ಕೆಯಾದವರು ನೆರಳಿನಲ್ಲಿ ಕೂತು ನಗುತ್ತಿದ್ದಾರೆ.

ಮೈಸೂರಿನಿಂದ ರೈಲಿನಲ್ಲಿ ಮೇ 23ರಂದು ಬೆಂಗಳುರಿಗೆ ಬಂದಿಳಿದ ವಲಸೆ ಕಾರ್ಮಿಕರು ಅಲ್ಲಿಂದ ನಡೆದೇ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಬೆಂಗಳೂರಿನಿಂದ ಮಧ್ಯಪ್ರದೇಶದತ್ತ ತಂಡೋಪತಂಡವಾಗಿ ಹೆಜ್ಜೆ ಹಾಕುತ್ತಲೇ ಸಾಗುತ್ತಿದ್ದಾರೆ. ಇವರು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು. ಇಡೀ ದೇಶ ಭಾನುವಾರ ಲಾಕ್‌ಡೌನ್ ಕಾರಣಕ್ಕಾಗಿ ವಾಹನಗಳ ವ್ಯವಸ್ಥೆ ಇಲ್ಲದೆ ನಡೆದೇ ಹೋಗುವಂತಹ ಪರಿಸ್ಥಿತಿಯನ್ನು ಸರ್ಕಾರಗಳು ಹುಟ್ಟು ಹಾಕಿವೆ.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ನಾನುಗೌರಿ.ಕಾಮ್ ನೊಂದಿಗೆ ಮಾತನಾಡಿ, “ವಲಸೆ ಕಾರ್ಮಿಕರ ನಡಿಗೆ ಇನ್ನೂ ನಿಂತಿಲ್ಲ. ಇದು ಸರ್ಕಾರಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಕಾರ್ಮಿಕರ ನಡಿಗೆ ಹೀಗೆ ಮುಂದುವರಿದರೆ ನಡಿಗೆಗೆ ಸರ್ಕಾರ ಟ್ಯಾಕ್ಸ್ ಹಾಕಬಹುದು. ಪಾಪ ಅವರನ್ನು ನೋಡಲು ಆಗುತ್ತಿಲ್ಲ. ಉರಿ ಉರಿ ಬಿಸಿಲಲ್ಲಿ ಊಟ, ನೀರು ಇಲ್ಲದೆ ನಡೆದುಹೋಗುತ್ತಿದ್ದಾರೆ. ಅವರಲ್ಲಿ ಭಯ ಕಾಡುತ್ತಿದೆ. ದುಡಿಮೆ ಇಲ್ಲ. ಬಸ್ ಇಲ್ಲ, ಹಣವೂ ಇಲ್ಲ. ಮುಂದೆ ಅವರಿಗೆ ಬರ್ಬರ ದಿನಗಳು ಎದುರಾಗಲಿ”ವೆ ಎಂದು ನೊಂದು ನುಡಿದರು.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಲಸೆ ಕಾರ್ಮಿಕರ ತಂಡಗಳು ಭಾರದ ಹೆಜ್ಜೆಯನ್ನು ಹಾಕುತ್ತ ಮುನ್ನಡೆಯುತ್ತಿವೆ. ಆ ತಂಡಗಳಲ್ಲಿ ಕೆಲವರನ್ನು ವಿಚಾರಿಸಿದಾಗ ಮಧ್ಯಪ್ರದೇಶದ ಜಬ್ಬಲ್ ಪುರದವರು ಎಂದು ತಿಳಿದು ಬಂದಿದೆ. ನಡೆದೇ ಹೋಗುತ್ತೀರಲ್ಲ ಎಂದು ಪ್ರಶ್ನಿಸಿದರೆ ಏನು ಮಾಡೋದು? ನಮಗೆ ಯಾರೂ ನೆರವಾಗುತ್ತಿಲ್ಲ. ಊರು ಸೇರಬೇಕಲ್ಲ. ಹಾಗಾಗಿ ನಡೆದೇ ಹೋಗುತ್ತೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯಂತ್ರಗಳೊಂದಿಗೆ, ಕಟ್ಟಡ ಕಟ್ಟುವ  ಶ್ರಮ ಹಾಕಿದವರು ಈಗಲೂ ಶ್ರಮ ಹಾಕಬೇಕಾಗಿ ಬಂದಿದೆ. ಆಳುವ ಸರ್ಕಾರಗಳಿಗೆ ಜನರ ಬಗ್ಗೆ ಪ್ರೀತಿ, ಕಾಳಜಿ ಇಲ್ಲ ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಪ್ರಜೆಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಲಿಸುವವನೇ ಅರಸ, ಲಂಚವನ್ನು ಸ್ವೀಕರಿಸದವನು ನಿಜವಾದ ಮಂತ್ರಿ ಕಷ್ಟದಲ್ಲಿ ಇರುವವರನ್ನು ಸಲಹವವನು ಯೋಗಿ ಎನ್ನುತ್ತಾನೆ ಕವಿ ಸೋಮನಾಥ. ಆದರೆ ಈ ಗುಣಗಳನ್ನು ಆಳುವವರ ಪೈಕಿ ಯಾರಲ್ಲಿ ಕಾಣಲು ಸಾಧ್ಯ ಎನ್ನುವಂತಾಗಿದೆ.


ಓದಿ: ಗುರುಗಾಂವ್: 75% ಕಾರ್ಮಿಕರಿಗೆ ಎಪ್ರಿಲ್ ತಿಂಗಳ ಸಂಬಳ ನೀಡದ ಕಾರ್ಖಾನೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...