2012ರಲ್ಲಿ ನಿರ್ಭಯಾ ಪ್ರಕರಣ ಘಟಿಸುವ ಒಂದು ತಿಂಗಳ ಮೊದಲು ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಅಪರಾಧಿಗಳನ್ನು ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೆಹಲಿಯ 19 ವರ್ಷದ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಕೊಂದ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆಗೊಳಿಸುತ್ತಿದೆ. “ಬೇಟೆಗಾಗಿ ಬೀದಿಗಿಳಿಯುವ ಪರಭಕ್ಷಕರು” ಎಂದು ಈ ಅಪರಾಧಿಗಳನ್ನು ದೆಹಲಿ ಹೈಕೋರ್ಟ್ ಬಣ್ಣಿಸಿತ್ತು ಎಂದು ವರದಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿರೂಪಗೊಂಡ ಹಾಗೂ ಸುಟ್ಟ ಸ್ಥಿತಿಯಲ್ಲಿ ಯುವತಿಯ ದೇಹವು ಹರಿಯಾಣದ ರೇವಾರಿ ಜಿಲ್ಲೆಯ ಹೊಲವೊಂದರಲ್ಲಿ ಫೆಬ್ರವರಿ 2012ರಲ್ಲಿ ಪತ್ತೆಯಾಗಿತ್ತು. ಅಪಹರಿಸಿದ ದಿನಗಳ ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಸಿಕ್ಕಿತ್ತು. ಕಾರಿನ ಉಪಕರಣಗಳು ಮತ್ತು ಮಣ್ಣಿನ ಮಡಕೆಗಳಿಂದ ಯುವತಿಗೆ ಹೊಡೆಯಲಾಗಿದೆ ಎಂಬುದನ್ನು ತೀವ್ರವಾದ ಗಾಯದ ಗುರುತುಗಳು ಸೂಚಿಸಿದ್ದವು.
ದೆಹಲಿಯ ನಜಾಫ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಯುವತಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಶವವನ್ನು ರೇವಾರಿ ಗದ್ದೆಯಲ್ಲಿ ಎಸೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಅಪಹರಣ, ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ರವಿಕುಮಾರ್, ರಾಹುಲ್ ಮತ್ತು ವಿನೋದ್ ಎಂಬ ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ಫೆಬ್ರವರಿ 2014ರಲ್ಲಿ ಶಿಕ್ಷೆ ವಿಧಿಸಿತು. ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಲಾಗಿತ್ತು.
ಮರಣದಂಡನೆ ಶಿಕ್ಷೆಯನ್ನು ವಿಧಿಸಿದ ಕೋರ್ಟ್, “ಬೇಟೆಯನ್ನು ಹುಡುಕುತ್ತಾ ಬೀದಿಗಳಲ್ಲಿ ಚಲಿಸುವ ಪರಭಕ್ಷಕ ಅಪರಾಧಿಗಳಿವರು” ಎಂದು ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್ ತೀರ್ಪನ್ನು ಮೂವರು ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಮ್ಮ ಶಿಕ್ಷೆಯನ್ನು ಕಡಿಮೆ ಮಾಡಬೇಕೆಂದು ಕೋರಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರ ಪೀಠವು ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು. ಮೂವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಮರಣದಂಡನೆ ಶಿಕ್ಷೆಯನ್ನು ಕಡಿಮೆ ಮಾಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ದೆಹಲಿ ಪೊಲೀಸರು ವಿರೋಧಿಸಿದ್ದರು. ಅಪರಾಧ ನಡೆದಿರುವುದು ಸಂತ್ರಸ್ತರ ವಿರುದ್ಧ ಮಾತ್ರವಲ್ಲ, ಸಮಾಜದ ವಿರುದ್ಧ ಎಂದು ಅವರು ಹೇಳಿದ್ದರು. ಅಪರಾಧದ ಹೇಯ ಸ್ವರೂಪವನ್ನು ಪೊಲೀಸರು ಉಲ್ಲೇಖಿಸಿದ್ದರು. ಅಪರಾಧಿಗಳಿಗೆ ಯಾವುದೇ ರಿಯಾಯಿತಿಯನ್ನು ನೀಡಬಾರದೆಂದು ಮನವಿ ಮಾಡಿದ್ದರು.
ಅಪರಾಧಿಗಳ ಪರವಾಗಿ ವಾದಿಸಿದ ವಕೀಲರು, “ಅಪರಾಧಿಗಳ ವಯಸ್ಸು, ಕುಟುಂಬದ ಹಿನ್ನೆಲೆ ಮತ್ತು ಹಿಂದಿನ ಕ್ರಿಮಿನಲ್ ದಾಖಲೆಯನ್ನು ಉಲ್ಲೇಖಿಸಿ ಶಿಕ್ಷೆಯನ್ನು ಕಡಿತಗೊಳಿಸಬೇಕು” ಎಂದು ಒತ್ತಾಯಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯುವತಿಯ ಪೋಷಕರು ಪ್ರತಿಕ್ರಿಯೆ ನೀಡಿದ್ದು, “ತೀರ್ಪಿನಿಂದಾಗಿ ಘಾಸಿಯಾಗಿದ್ದೇವೆ. ಆದರೆ ನಮ್ಮ ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ” ಎಂದು ತಿಳಿಸಿದ್ದಾರೆ. “ನಾವು ನ್ಯಾಯಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ಇದು ಕುರುಡು ನ್ಯಾಯ ವ್ಯವಸ್ಥೆ” ಎಂದು ನೊಂದು ನುಡಿದಿದ್ದಾರೆ.
ನ್ಯಾಯಕ್ಕಾಗಿ ತಮ್ಮ 12 ವರ್ಷಗಳ ಹೋರಾಟವನ್ನು ಪ್ರಸ್ತಾಪಿಸಿದ ಅವರು, ಅಪರಾಧಿಗಳು ನ್ಯಾಯಾಲಯದ ಒಳಗೆಯೂ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣ ನಡೆದ ನಂತರ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಚಲಿಸುವ ಬಸ್‌ನಲ್ಲಿ 23 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ದೇಶದ್ಯಾಂತ ಬೃಹತ್ ಪ್ರತಿಭಟನೆಗಳು ನಡೆದವು. ಲೈಂಗಿಕ ದೌರ್ಜನ್ಯದ ಮೇಲೆ ಕಠಿಣ ಕಾನೂನು ರೂಪಿಸಲು ಈ ಹೋರಾಟ ಕಾರಣವಾಗಿತ್ತು.
ಇದನ್ನೂ ಓದಿರಿ: 10% ಮೀಸಲಾತಿಗೆ ಒಪ್ಪಿದ ಸುಪ್ರಿಂಕೋರ್ಟ್: ಟ್ವಿಟರ್‌ನಲ್ಲಿ ‘ಬ್ಯಾನ್ ಇಡಬ್ಲ್ಯೂಎಸ್’ ಟ್ರೆಂಡ್
ಅತ್ಯಾಚಾರಿಗಳಿಗೆ ಬಿಡುಗಡೆ ನೀಡುತ್ತಿರುವ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ತಲೆದೋರಿದ್ದು, ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದು ಟೀಕೆಗೆ ಗುರಿಯಾಗಿದೆ.
ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ ದಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಮಾರ್ಚ್ 3, 2002 ರಂದು ಜನಸಮೂಹದಿಂದ ಹತ್ಯೆಗೀಡಾದ 14 ಮಂದಿಯಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಳೂ ಸೇರಿದ್ದರು. ಆ ಸಮಯದಲ್ಲಿ ಬಿಲ್ಕಿಸ್ ಗರ್ಭಿಣಿಯಾಗಿದ್ದರು. ಬಿಲ್ಕಿಸ್ ಅವರ ಮೇಲೆ ಅತ್ಯಾಚಾರ ಎಸಗಲಾಗಿತ್ತು.
“ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳು 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡುಬಂದಿದೆ ಮತ್ತು ಕೇಂದ್ರ ಸರ್ಕಾರವು ಅಪರಾಧಿಗಳ ಬಿಡುಗಡೆಗೆ ಅನುಮೋದನೆ ನೀಡಿದೆ” ಎಂದು ಗುಜರಾತ್ ಸರ್ಕಾರ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.


