ದೇಶದಾದ್ಯಂತ ಭಾರೀ ಸುದ್ದಿಯಾಗಿರುವ, ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ ನಂತರ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನನ್ನ ವಕೀಲರ ಮೂಲಕ ಎಸ್‌ಐಟಿ ಮುಖ್ಯಸ್ಥರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಹೇಳಿರುವ ಅವರು, ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿ ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ.
ಪ್ರಜ್ವಲ್ ಪರವಾಗಿ ವಕೀಲರು ಬರೆದ ಪತ್ರದಲ್ಲಿ ಏನಿದೆ?
“ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಕಕ್ಷಿದಾರರಾದ ಪ್ರಜ್ವಲ್ ರವರ ಮನೆಯ ಮೇಲೆ ತಮ್ಮ ಕಛೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ನನ್ನ ಕಕ್ಷಿದಾರರಾದ ಪ್ರಜ್ವಲ್ ರವರ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಕಲ೦ 41 (ಎ) ಸಿ.ಆರ್.ಪಿ.ಸಿ ದಿನಾಂಕ:30-04-2024ರ ತಮ್ಮ ನೋಟಿಸ್ ನಲ್ಲಿ ತಾವು ದಿನಾಂಕ:01-05-2024 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ, ನನ್ನ ಕಕ್ಷಿದಾರರಾದ ಪ್ರಜ್ವಲ್ ರೇವಣ್ಣ ರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು, ಅವರಿಗೆ ನೋಟಿಸ್‌ನ ಬಗ್ಗೆ ವಿಷಯ ತಿಳಿಸಿದ್ದು, ನನ್ನ ಕಕ್ಷಿದಾರರು ಬೆ೦ಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ” ಎಂದು ವಕೀಲರಾದ ಅರುಣ್ ಜಿ ಎಂಬಿವವರು ಪತ್ರ ಬರೆದಿದ್ದಾರೆ.
ಎಸ್‌ಐಟಿ ಮುಂದೆ ಹಾಜರಾದ 10 ಜನ ಸಂತ್ರಸ್ತೆಯರು:
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ವಿಡಿಯೊಗಳು ಎಲ್ಲೆಡೆ ವೈರಲ್ ಆದ ನಂತರ ರಾಜ್ಯ ಸರ್ಕಾರ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿದ್ದು, ತನಿಖಾ ತಂಡ ರಚಿಸುವ ಆದೇಶ ಹೊರಬಿದ್ದ ದಿನದಿಂದ ಸಂಸದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ ಎಂದು ಸುದ್ದಿಯಾಗಿದೆ.
ಈ ನಡುವೆ ಎಸ್‌ಐಟಿ ಅಧಿಕಾರಿಗಳ ಮುಂದೆ ಈವರೆಗೆ 10ಕ್ಕೂ ಹೆಚ್ಚು ಸಂತ್ರಸ್ತೆಯರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಏ.30ರಂದು ಪ್ರಕರಣದ ಪ್ರಮುಖ ಆರೋಪಿಗಳಾದ ಎಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ಅವರಿಗೆ ಅಧಿಕಾರಿಗಳು ನೋಟಿಸ್ ಕೊಟ್ಟು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಹಿರಿಯ ಪೊಲೀಸ್ ಆಧಿಕಾರಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದ್ದು, ಮೈಸೂರು ಎಸ್‌ಪಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್‌ಪಿ ಸುಮನ್ ಪನ್ನೇಕರ್ ಅವರನ್ನ ನಿಯೋಜಿಸಲಾಗಿದೆ. ಇದೀಗ ರಾಜ್ಯ ಸರ್ಕಾರ 18 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನ ನಿಯೋಜಿಸಿದೆ. ಇದರಿಂದ ಎಸ್ಐಟಿ ತನಿಖೆ ಇನ್ನಷ್ಟು ಬಲಗೊಂಡಿದೆ.
ಬೆಂಗಳೂರು ನಗರದ ಮಾರತ್ ಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಬೆಂಗಳೂರು ನಗರ ಸಿಸಿಬಿ ಎಸಿಪಿ ಸತ್ಯನಾರಾಯಣ ಸಿಂಗ್ ಎಸ್.ಬಿ., ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್, ಮಂಗಳೂರು ಉರ್ವಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಭಾರತಿ ಜಿ., ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುಮರಾಣಿ ಬಿ.ಎಸ್., ಆಲನಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸ್ವರ್ಣಾ ಜಿ.ಎಸ್., ವೈಟ್ ಫೀಲ್ಡ್ ನ ಸೆನ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಹೇಮಂತ್ ಕುಮಾರ್ ಎಂ., ಬೆಂಗಳೂರು ನಗರ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ರಾಜಾ ಜಿ.ಸಿ., ಉಡುಪಿ ಮಲ್ಪೆ ಸಿಎಸ್‌ಪಿ ಪಿಎಸ್‌ಐ ವೈಲೆಟ್ ಫ್ಲೆಮೀನಾ ಸೇರಿದಂತೆ 18 ಮಂದಿಯನ್ನು ಓಓಡಿ ಆಧಾರದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಸ್‌ಐಟಿಗೆ ಸರ್ಕಾರ ನಿಯೋಜಿಸಿದೆ.
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ


