ಬಿಜೆಪಿಯ ಇಬ್ಬರು ನಾಯಕರು ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡಿರುವ ಬಗ್ಗೆ ಈಗಾಗಗಲೇ ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳು ಖಂಡಿಸಿದ್ದು, ತೀವ್ರ ಪ್ರತಿಭಟನೆಯನ್ನು ದಾಖಲಿಸಿತ್ತು. ಇದೀಗ ಅಮೇರಿಕಾ ಕೂಡಾ ಧಾರ್ಮಿಕ ವ್ಯಕ್ತಿಗೆ ಮಾಡಿರುವ ಅವಮಾನವನ್ನು ಗುರುವಾರ ಖಂಡಿಸಿದೆ.
“ಇಬ್ಬರು ಬಿಜೆಪಿ ಪದಾಧಿಕಾರಿಗಳು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಪಕ್ಷವು ಆ ಹೇಳಿಕೆಗಳನ್ನು ಸಾರ್ವಜನಿಕವಾಗಿ ಖಂಡಿಸುವುದನ್ನು ನೋಡಿ ನಮಗೆ ಸಂತೋಷವಾಯಿತು” ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾವು ಧಾರ್ಮಿಕ ಅಥವಾ ನಂಬಿಕೆಯ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕುಗಳ ಕಾಳಜಿಗಳ ಕುರಿತು ಹಿರಿಯ ಹಂತಗಳಲ್ಲಿ ಭಾರತೀಯ ಸರ್ಕಾರದೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇವೆ. ಮಾನವ ಹಕ್ಕುಗಳ ಗೌರವವನ್ನು ಉತ್ತೇಜಿಸಲು ನಾವು ಭಾರತವನ್ನು ಪ್ರೋತ್ಸಾಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾದಿ ಅವಹೇಳನಕ್ಕೆ ವಿರೋಧ: ರಾಜಸ್ಥಾನದ ಬಿಜೆಪಿ ಕೌನ್ಸಿಲರ್ ರಾಜೀನಾಮೆ
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಪಕ್ಷವಾದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಮೇ 26 ರಂದು ಪ್ರವಾದಿ ಮುಹಮ್ಮದ್ ಅವರ ಕುರಿತು ಟಿವಿ ಚರ್ಚೆಯಲ್ಲಿ ಮಾಡಿದ ಅವಹೇಳನ ಇಸ್ಲಾಮಿಕ್ ಪ್ರಪಂಚದಾದ್ಯಂತ ಭಾರಿ ಪ್ರತಿಭಟನೆಯನ್ನು ಹುಟ್ಟು ಹಾಕಿತ್ತು.
ಈ ಹೇಳಿಕೆಗಳು ಸಾಮಾನ್ಯವಾಗಿ ಭಾರತದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಶ್ರೀಮಂತ ಅರಬ್ ದೇಶಗಳಲ್ಲಿ ರಾಜತಾಂತ್ರಿಕ ಪ್ರತಿಭಟನೆಗೆ ಕಾರಣವಾಗಿತ್ತು. ಬಾಂಗ್ಲಾದೇಶದಲ್ಲಿ ಕೂಡಾ ಪ್ರತಿಭಟನಾಕಾರರು ಭಾರತದ ನಿಕಟ ಮಿತ್ರರಾದ ಪ್ರಧಾನಿ ಶೇಖ್ ಹಸೀನಾ ಅವರಿಂದ ಔಪಚಾರಿಕ ಖಂಡನೆಗೆ ಒತ್ತಾಯಿಸಿದ್ದಾರೆ.
ಇದರ ನಂತರ ಮುಜುಗರವನ್ನು ತಪ್ಪಿಸಲು ಬಿಜೆಪಿಯು, ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಿದ್ದು, ನವೀನ್ ಕುಮಾರ್ ಜಿಂದಾಲ್ ಅವರನ್ನು ಬಿಜೆಪಿ ಹೊರಹಾಕಿದೆ.
ಇದನ್ನೂ ಓದಿ: ಪ್ರವಾದಿ ನಿಂದನೆ: ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಕೋಲ್ಕತ್ತಾ ಪೊಲೀಸರ ಸಮನ್ಸ್
1990 ರ ದಶಕದ ಉತ್ತರಾರ್ಧದಿಂದ ಅಮೇರಿಕಾವು ಭಾರತದೊಂದಿಗೆ ಬಾಂಧವ್ಯವನ್ನು ಗಾಢವಾಗಿಸಲು ಪ್ರಯತ್ನಿಸುತ್ತಿದೆ. ಪ್ರಪಂಚದ ಎರಡು ದೊಡ್ಡ ಪ್ರಜಾಪ್ರಭುತ್ವಗಳಾದ ಭಾರತ ಮತ್ತು ಅಮೆರಿಕ ವಿಶೇಷವಾಗಿ ಚೀನಾದ ವಿರುದ್ಧ ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ ಎಂದು ನಂಬಲಾಗಿದೆ. ಆದರೂ, ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸುವ ನೀತಿಗಳ ವಿರುದ್ಧ ಅಮೆರಿಕಾವು ಹಲವಾರು ಬಾರಿ ಮಾತನಾಡಿತ್ತು.


