Homeಮುಖಪುಟಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಅಧ್ಯಾಪಕನೂ ತಂದೆಯೂ ಆಗಿರುವ ಪ್ರಜೆಯೊಬ್ಬನ ಕೆಲವು ತಲ್ಲಣ, ಪ್ರಶ್ನೆ

- Advertisement -
- Advertisement -

ಇಂದು ದೇಶವನ್ನು ಆಳುತ್ತಿರುವ ಪ್ರಭುತ್ವಶಕ್ತಿಯು ದೇಶದ್ರೋಹವೆಸಗಿದ್ದಕ್ಕೆ ಶಿಕ್ಷೆ ವಿಧಿಸುವ ಕಾಯಿದೆ, ಯುಎಪಿಎ  ಕಾಯಿದೆ, ಎನ್‍ಎಸ್‍ಎ ಕಾಯಿದೆ ಮುಂತಾದ ಹಲವು ಭಯಂಕರ ಕಾಯಿದೆಗಳನ್ನು ಯಾವುದೇ ವಿವೇಚನೆಯಿಲ್ಲದೆ, ಕ್ಷುಲ್ಲಕ ಕಾರಣಗಳಿಗಾಗಿ, ಬೇಕಾಬಿಟ್ಟಿಯಾಗಿ ಅನ್ವಯಿಸಿ, ಹಲವರನ್ನು ಬಂಧನದಲ್ಲಿಡುತ್ತಿದೆ, ಹಲವರಮೇಲೆ ಮೊಕದ್ದಮೆ ಹೂಡಿದೆ. ಈಚೆಗೆ, ಬೀದರಿನ ಶಾಹೀನ್ ಶಾಲೆಯ ಪ್ರಕರಣ ಮತ್ತು ಉತ್ತರಪ್ರದೇಶದ ಕರ್ತವ್ಯನಿಷ್ಠೆಯ ವೈದ್ಯ ಕಫೀಲ್ ಖಾನ್ ಅವರ ಪ್ರಕರಣದ ಬಳಿಕ, ಹುಬ್ಬಳ್ಳಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನಲ್ಲಿ ಓದುತ್ತಿರುವ ಅಮೂಲ್ಯಾ ಲಿಯೊನಾ ಎಂಬ ಹುಡುಗಿ ಇಂಥ ಒಂದು ಕ್ರಮಕ್ಕೆ ತುತ್ತಾಗಿದ್ದಾರೆ.

ಹುಬ್ಬಳ್ಳಿಯ ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಮೂವರು ಕಾಶ್ಮೀರೀ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜ಼ಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದರು, ತಾವು ಹಾಗೆ ಕೂಗುತ್ತಿರುವುದರ ವಿಡಿಯೋ ಮುದ್ರಣಮಾಡಿ ವಾಟ್ಸಾಪ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರು ಅನ್ನುವುದು ಅವರ ಮೇಲಿರುವ ಆರೋಪ.

ಮೊದಲಿಗೆ, ಭಾರತದ ಒಬ್ಬ ಪ್ರಜೆಯಾಗಿ, ನಾಗರಿಕನಾಗಿ ಕೆಲವು ಮಾತು, ಪ್ರಶ್ನೆ ಮುಂದಿಡುತ್ತೇನೆ.

ಜ಼ಿಂದಾಬಾದ್ ಎಂದರೆ ‘ಚಿರಕಾಲ, ಅಥವಾ ನೂರ್ಕಾಲ ಬಾಳಲಿ’ ಎಂದರ್ಥ. ಸದಾಶಯವುಳ್ಳ ಮಾತು ಅದು; ಯಾರಿಗೂ ಕೇಡನ್ನು ಬಯಸುವಂಥದಲ್ಲ. ಪಾಕಿಸ್ತಾನವಾಗಲಿ, ಈಥಿಯೋಪಿಯಾ ಆಗಲಿ, ಹಂಗೆರಿ ಆಗಲಿ, ಬೊಲಿವಿಯಾ ಆಗಲಿ, ಕ್ಯಾಮರೂನ್ ಆಗಲಿ, ಚಿಕ್ಕನಾಯಕನಹಳ್ಳಿಯಾಗಲಿ, ತಿರುನೆಲ್ವೇಲಿಯಾಗಲಿ, ಮಂಗಳಗ್ರಹವೋ, ಶುಕ್ರಗ್ರಹವೋ, ಮತ್ತೊಂದು ಗ್ರಹವೋ ಆಗಲಿ, ಅದು ಚೆನ್ನಾಗಿರಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ?! ಪಾಕಿಸ್ತಾನವೂ ಸೇರಿದಂತೆ, ಯಾರಿಗೇ ಯಾವುದಕ್ಕೇ ಆಗಲಿ, ಒಳಿತಾಗಲಿ ಎಂದು ಬಯಸಕೂಡದೆಂದು ಭಾರತದ ಸಂವಿಧಾನದಲ್ಲಿಲ್ಲವಲ್ಲ! ಒಟ್ಟು ಭಾರತೀಯ ಪರಂಪರೆಯೇ ‘ಲೋಕಾಸ್ಸಮಸ್ತಾಃ ಸುಖಿನೋ ಭವಂತು/ ಸರ್ವೇ ಸಂತು ನಿರಾಮಯಾಃ/ ಸರ್ವೇ ಭದ್ರಾಣಿ ಪಶ್ಯಂತು/ ಮಾಕಶ್ಚಿತ್ ದುಃಖ ಭಾಗ್ಭವೇತ್’  ಅನ್ನುತ್ತದೆಯಲ್ಲ! ಮೇಲಾಗಿ, ಈ ಹುಡುಗರು ಭಾರತವು ಹಾಳಾಗಲಿ ಎಂದು ಘೋಷಿಸಲಿಲ್ಲವಲ್ಲ! ಭಾರತವನ್ನು ಹಾಳುಮಾಡುವವರಂತೆ ಆ ವಿಡಿಯೋದಲ್ಲಿ ಆ ಹುಡುಗರು ಕಾಣುತ್ತಾರೆಯೇ? ಅವರು ಹಾಗೆ ಮಾಡಬಹುದು ಅನ್ನುವುದಕ್ಕೆ ಪುರಾವೆ ಇದೆಯೇ? ಅಂಥ ಯಾವ ಪುರಾವೆಯಿಲ್ಲವೆಂದು ತಾನೆ, ಅವರನ್ನು ಮೊತ್ತಮೊದಲ ಬಾರಿ ದಸ್ತಗಿರಿಮಾಡಿದ ದಿನ, ಫೆಬ್ರವರಿ 16ರಂದು, ಸಂಜೆಯ ಹೊತ್ತಿಗೇ ಪೊಲೀಸರು ಅವರ ಬಿಡುಗಡೆಮಾಡಿದ್ದು? ಆದರೆ, ಅದೇ ದಿನವೇ ಅವರನ್ನು ಮತ್ತೆ ಬಂಧಿಸಿ, ಅವರ ಮೇಲೆ ದೇಶದ್ರೋಹದಂಥ ಗಂಭೀರ ಆರೋಪ ಹೊರಿಸಿದ್ದಕ್ಕೆ ಕಾರಣ, ಪೊಲೀಸ್ ಸ್ಟೇಷನ್ನಿನ ಹೊರಗೆ ಸಂಘಪರಿವಾರದ ಸಂಘಟನೆಗಳು ದೊಂಬಿ ಸೇರಿ ಗಲಾಟೆಮಾಡಿ, ಒತ್ತಡ ಬೀರಿದ್ದೇ ಹೌದಲ್ಲವೇ? ಈ ನಮ್ಮ ದೇಶದ ಕಾನೂನು ಪಾಲನೆಯ ವ್ಯವಸ್ಥೆಯು ದೊಂಬಿ ಸೇರಿದ ಜನ ಹೇಳಿದಂತೆ ನಡೆದುಕೊಳ್ಳುವಂತಾಯಿತೇ?

ಇನ್ನು, ಆಜಾ಼ದೀ ಅರ್ಥಾತ್ ಬಿಡುಗಡೆ ಎಂದು ಆ ಮೂವರು ಹುಡುಗರು ಕೂಗಿದ್ದು ಆ ವಿಡಿಯೋದಲ್ಲಿ ಕಾಣುತ್ತದೆ. ಆ ಮಾತನ್ನು ನಾನೂ ಕೂಗಿದ್ದೇನೆ!  ಸಿಎಎ, ಎನ್‍ಆರ್‌ಸಿ ಮತ್ತು ಎನ್‍ಪಿಆರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತ, ಆ ಕಾನೂನುಗಳಿಂದ ನಮಗೆಲ್ಲ ಬಿಡುಗಡೆಯಾಗಲಿ ಎಂದು ಕೂಗುತ್ತಿರುವ ನಾವೆಲ್ಲರೂ ದೇಶದ್ರೋಹಿಗಳೇ? ಸರಕಾರ ಹಾಗೂ ಸಂಘ ಪರಿವಾರದ ರೀತಿನೀತಿಗಳನ್ನು ಒಪ್ಪದೇ, ಶಾಂತಿಯುತವಾಗಿ ಭಿನ್ನಮತ ತಾಳುವುದು ದೇಶದ್ರೋಹವಾಯಿತೇ?

ಈ ಮುಂದಿನ ಮಾತನ್ನು ತಲ್ಲಣಗೊಂಡ ಅಧ್ಯಾಪಕನೊಬ್ಬನಾಗಿ ಆಡುತ್ತಿದ್ದೇನೆ. ತಮ್ಮ ವಿದ್ಯಾರ್ಥಿಗಳು ಪೊಲೀಸರಿಂದ ಯಾವುದೇ ಬಗೆಯ ಬಂಧನಕ್ಕೆ ಒಳಗಾಗುವುದು, ಅದರಲ್ಲಿಯೂ ದೇಶದ್ರೋಹದ ಆರೋಪವನ್ನು ಅನ್ಯಾಯವಾಗಿ ಎದುರಿಸುವುದು, ಅಧ್ಯಾಪಕರಾದವರಿಗೆ ಯಾವತ್ತಿಗೂ ಕರುಳು ಹಿಂಡುವ ಸಂಗತಿ.

ಯಾರೇ ಆಗಲಿ, ಆ ಹುಡುಗರಂತೆ, ತಮ್ಮ ಕೋಣೆಯಲ್ಲಿ ಕೂತು ಯಾವುದೋ ಪಾಪ್‍ ಹಾಡನ್ನು ಕೇಳುತ್ತ ನಮ್ಮ ನೆರೆಯ ದೇಶಕ್ಕೆ ಒಳ್ಳೆಯದನ್ನು ಬಯಸಿ ಎರಡು ಘೋಷಣೆ ಕೂಗುವುದು, ಅದರ ಒಂದು ಚಿಕ್ಕ ವಿಡಿಯೋವನ್ನು ತಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ದೇಶದ್ರೋಹದ ಕೆಲಸ ಹೇಗಾಗುತ್ತದೆ? ಒಂದು ವೇಳೆ, ಕಾಲೇಜಿನ ಆಡಳಿತವರ್ಗಕ್ಕೆ, ಕಾಲೇಜಿನಲ್ಲಿನ ಬೇರೆ ವಿದ್ಯಾರ್ಥಿಗಳು ಆ ಮೂವರ ಜೊತೆ  ಜಗಳವಾಡಬಹುದೆಂಬ ಆತಂಕವಿತ್ತು ಎಂದಿಟ್ಟುಕೊಳ್ಳೋಣ. ಅದನ್ನು ಆ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಹಾಸ್ಟೆಲಿನ ವಾರ್ಡೆನ್ ಅವರು ಸುಲಭವಾಗಿ ನಿವಾರಿಸಿಕೊಳ್ಳಬಹುದಿತ್ತು: ಆ ಹುಡುಗರನ್ನು ತಮ್ಮ ಕಚೇರಿಗೆ ಕರೆಸಿ, ಗಟ್ಟಿಯಾದ ಎಚ್ಚರಿಕೆ ನೀಡಿ, ‘ಸುಮ್ಮನೆ ಓದಿಕೊಂಡು, ಚೆನ್ನಾಗಿರಿ’ ಅನ್ನಬಹುದಿತ್ತು. ಹಾಗೆಯೇ, ಉಳಿದ ವಿದ್ಯಾರ್ಥಿಗಳಿಗೂ ‘ನಿಮ್ಮ ಆ ಸಹಪಾಠಿಗಳಮೇಲೆ ಜುಲುಮೆ ಮಾಡಬೇಡಿ, ಹೊಂದಿಕೊಂಡಿರಿ, ಹೋಗಿ’ ಎಂದು ಗದರಿಸಿ, ಬುದ್ಧಿ ಹೇಳಬಹುದಿತ್ತು. ಹೆಚ್ಚಿನ ವೇಳೆ, ಪರಿಸ್ಥಿತಿಯನ್ನು ಸರಿಮಾಡಲು ಅಂಥ ಮಾತೇ ಸಾಕಾಗುತ್ತದೆ. ಕೆಲವು ವರದಿಗಳು ಹೇಳುವಂತೆ, ಆ ಕಾಲೇಜಿನವರು, ಪಾಪ, ಹಾಗೆ ಮಾಡಿದ್ದರು ಕೂಡ.

ಮೇಲೆ ಹೇಳಿದ ಆ ಅದೇ ವರದಿಗಳಲ್ಲಿರುವಂತೆ, ಆ ಮೂವರು ಹುಡುಗರ ಮೇಲೆ ಇಂಥ ಗುರುತರವಾದ ಆರೋಪ ಹೊರಿಸುವುದು ಪೊಲೀಸರಿಗೂ ಇಷ್ಟವಿರುವಂತೆ ತೋರುವುದಿಲ್ಲ.

ಪರಿಸ್ಥಿತಿ ಈಮಟ್ಟಕ್ಕೆ ಹೋಗಿರುವುದು, ಸಂಘ ಪರಿವಾರದ ಕೆಲವು ಸಂಘಟನೆಗಳವರು ಈ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾಡಿದ ದೊಂಬಿ ಗಲಾಟೆಯಿಂದ. ಅದರ ಒತ್ತಡಕ್ಕೆ ಕಾಲೇಜಿನವರು, ಪೊಲೀಸನವರು, ಇಬ್ಬರೂ ಮಣಿಯಬೇಕಾಯಿತು. ದೊಂಬಿಯನ್ನು ನಿಭಾಯಿಸಿ, ಅದಕ್ಕೆ ಬುದ್ಧಿ ಹೇಳಬೇಕಿದ್ದ ಸರಕಾರದ ಬೇರೆ ಆಡಳಿತಗಾರರು ಕೂಡ ತಮ್ಮ ಕೆಲಸ ಮಾಡಿಲ್ಲ. ಸಂಘ ಪರಿವಾರದ ಮುಖಂಡರಂತೂ ಇಂಥ ಅನ್ಯಾಯಕ್ಕೆ ಕುಮ್ಮಕ್ಕು ಕೊಟ್ಟಂತೆಯೇ ಕಾಣುತ್ತದೆ: ದೊಂಬಿಯು ನ್ಯಾಯಾಲಯದ ಅಂಗಳದಲ್ಲಿಯೇ ಆ ಹುಡುಗರ ಮೇಲೆ ದಾಳಿಮಾಡಿದೆ. ದಾಳಿ ಮಾಡಿದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಂತೆ ಕಾಣುವುದಿಲ್ಲ.

ಆ ಮೂವರು ಹುಡುಗರು ನಿರಂತರ ಹಿಂಸೆಯಿಂದ ಕಂಗಾಲಾಗಿರುವ ತಮ್ಮ ನಾಡನ್ನು ಬಿಟ್ಟು ಪ್ರಧಾನ ಮಂತ್ರಿಗಳ ಒಂದು ವಿಶೇಷ ಕೋಟಾದ ಅಡಿಯಲ್ಲಿ ಸಂಪೂರ್ಣ ಉಚಿತವಾದ ವಿದ್ಯಾಭ್ಯಾಸ ಪಡೆದುಕೊಳ್ಳಲು ದೂರದ ಹುಬ್ಬಳ್ಳಿಗೆ ಬಂದವರು. ಅಂಥ ತಮ್ಮ ಮಕ್ಕಳ ವಿಷಯದಲ್ಲಿ ಅವರ ತಂದೆತಾಯಂದಿರಿಗೆ ಎಷ್ಟು ಸಂತೋಷವಾಗಿರಬೇಡ?! ಈಗ ಆ ತಂದೆತಾಯಂದಿರ ಪಾಡೇನು, ಆ ಮಕ್ಕಳ ಪಾಡೇನು? ಆ ಮಕ್ಕಳು ಅಚಾತುರ್ಯದ ಕೆಲಸ ಮಾಡಿದ್ದಾರೆ, ಹಾದಿ ತಪ್ಪಿದ್ದಾರೆ ಅನ್ನಿಸಿದರೆ, ಅಧ್ಯಾಪಕರು ಮತ್ತು ಸುತ್ತಲಿನ ಸಮಾಜದ ಹಿರಿಯರು ಆ ಹುಡುಗರ ತಂದೆತಾಯಂದಿರೊಡಗೂಡಿ ಅನುನಯದ ಮಾತು, ಗದರಿಕೆಯ ಉಗುರಿನಿಂದ ಪರಿಹರಿಸಬಹುದಾದ್ದಕ್ಕೆ ಕರಾಳ ಕಾನೂನಿನ ಕೊಡಲಿ ಹೊಡೆತವೇಕೆ?

ವಿವೇಕವಿಲ್ಲದ, ದಮನಕಾರಿಯಾದ ಇಂಥ ಬಂಧನಗಳಿಂದಾಗಿ, ಕಾಶ್ಮೀರ ಕಣಿವೆಯ ಜನರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ನಮ್ಮ ಕೇಂದ್ರ ಸರಕಾರವು ಅದನ್ನು ಎಂದಾದರೂ ಮತ್ತೆ ಪಡೆಯುವ ಎಲ್ಲ ದಾರಿಗಳನ್ನು ಮುಚ್ಚಿಹಾಕಿದೆ.

ಮಗುವಿನ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ

ಈ ಕೆಳಗಿರುವ ಮಾತನ್ನು ಒಬ್ಬ ತಂದೆಯಾಗಿ ಬರೆಯುತ್ತಿದ್ದೇನೆ.

ಕಾಶ್ಮೀರದ ಆ ಮೂವರು ಹುಡುಗರಮೇಲೆ ಮೊಕದ್ದಮೆ ಹೊರಿಸಲಾಗಿರುವುದರ ಬೆನ್ನಿಗೇ ಬೆಂಗಳೂರಿನ ಅಮೂಲ್ಯಾ ಲಿಯೊನಾ ಪ್ರಕರಣ ನಡೆದಿದೆ. ಅಮೂಲ್ಯಳು, ಮತ್ತೊಬ್ಬರು ಸಂಘಟಿಸಿದ ಸಭೆಯಲ್ಲಿ, ಸಭೆಯ ಸಂಘಟಕರಿಗೆ ಯಾವ ಸೂಚನೆಯನ್ನೂ ನೀಡದೆ, ವೇದಿಕೆಯೇರಿ ಆ ಬಗೆಯ ಘೋಷಣೆ ಕೂಗಿದ್ದು ತಪ್ಪೆನ್ನಬಹುದೇ ಹೊರತು, ಆ ಹುಡುಗಿ ಹೊಂದಿರುವ ಆಶಯಗಳೇ ತಪ್ಪು ಎಂದು ಸಾರಾಸಗಟು ಹೇಳಲು ಬರುವುದಿಲ್ಲ. ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗುವುದರ ಜೊತೆಗೆ, ಹಿಂದೂಸ್ತಾನ್ ಜ಼ಿಂದಾಬಾದ್ ಎಂದು ಕೂಡ ಕೂಗಿದಳು ಅವಳು. ಅರ್ಥಾತ್, ಎರಡೂ ದೇಶಗಳು ಚೆನ್ನಾಗಿರಲಿ, ಪರಸ್ಪರ ಸ್ನೇಹದಿಂದಿರಲಿ ಅನ್ನುವುದೇ ಅವಳ ಆಶಯವಲ್ಲವೇ?

ಅಮೂಲ್ಯಳ  ದುಡುಕಿನ ವರ್ತನೆಯಿಂದ ಗಾಬರಿಗೊಂಡ ಆ ಸಭೆಯ ಸಂಘಟಕರು ಮತ್ತು ಸಭಿಕರು ಪಾಕಿಸ್ತಾನ್ ಮುರ್ದಾಬಾದ್ (ಪಾಕಿಸ್ತಾನ ಸಾಯಲಿ, ನಾಶವಾಗಲಿ) ಎಂದು ಕೂಗಿ, ತಮ್ಮ ಸ್ವದೇಶಪ್ರೇಮ ಸಾರಬೇಕಾಯಿತು. ನಾವು ನಮ್ಮ ನೆರೆಯ, ಸೋದರ ದೇಶವೊಂದು ಹಾಳಾಗಲಿ ಎಂದು ಕೂಗಿ ನಮ್ಮ ಸ್ವದೇಶಪ್ರೇಮವನ್ನು ಸಾಬೀತುಮಾಡಬೇಕಾದ್ದು ಎಂಥ ದುಃಖದ ವಿಷಯವಲ್ಲವೇ?

ಆದರೆ, ಪ್ರಭುತ್ವವು ಹತ್ತೊಂಭತ್ತರ ವಯಸ್ಸಿನ ಚಿಕ್ಕವಳು ಅಮೂಲ್ಯಳ ದುಡುಕಿನ ಆ ವರ್ತನೆ ಮತ್ತು ಸಣ್ಣ ಮೂರ್ಖತನಕ್ಕೆ ಪ್ರತಿಯಾಗಿ ಅವಳಮೇಲೆ ಎಂಥೆಂಥ ಭಯಂಕರ ಕಾಯ್ದೆಗಳ ಅನ್ವಯ ಮೊಕದ್ದಮೆ ಹೂಡಿದೆ! ಮಗು ಅದು. ನಾಲ್ಕು ಮಾತು ಬೈದು, ಒಂದಷ್ಟು ಬುದ್ಧಿಮಾತು ಹೇಳಿ, ಕೌನ್ಸೆಲಿಂಗ್ ಮಾಡಿ ಬಿಟ್ಟುಬಿಡಬೇಕಿತ್ತು ಅದನ್ನು. ಬದಲಾಗಿ, ಮಗುವಿನಮೇಲೆ ಬ್ರಹ್ಮಾಸ್ತ್ರದ ಪ್ರಯೋಗಮಾಡುತ್ತಿದ್ದಾರೆ.  ಅದಂತೂ ಅನೃತ, ಅಧರ್ಮ; ಮಹಾಪಾಪದ ಕೆಲಸ.

ಅಮೂಲ್ಯಳ ಬಂಧನವಾದ ದಿನದಂದೇ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಳ ತಂದೆಯ ಮನೆಯಮೇಲೆ ಪುಂಡರ ದಾಳಿ ನಡೆದಿದೆ. ಅವರ ಮನೆಯ ಕಿಟಕಿ ಗಾಜುಗಳು, ಮನೆಯ ಪೌಳಿಯಲ್ಲಿನ ವಸ್ತುಗಳು ಚೂರುಚೂರಾಗಿವೆ. ಬಳಿಕ, ಸಂಘ ಪರಿವಾರದ ಯುವಕರು ಹಲವರು ಅಮೂಲ್ಯಳ ತಂದೆಯನ್ನು ಬೆದರಿಸಿ ಆತ ತನ್ನ ಮಗಳ ವಿರುದ್ಧ ಕಟುವಾದ ಮಾತಾಡುವಂತೆ ಮಾಡಿದ್ದಾರೆ. ಅದೆಲ್ಲವನ್ನೂಒಳಗೊಂಡಿರುವ ವಿಡಿಯೋವನ್ನು ಅವರು ರಾಜಾರೋಷವಾಗಿ ಹಂಚಿಕೊಂಡಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ. ಅದರಲ್ಲಿ ತನ್ನ ಸುತ್ತ ಯಮದೂತರಂತೆ ನಿಂತು ಒತ್ತಾಯಮಾಡುತ್ತಿರುವ ಆ ಜನರಿಂದ ಆ ತಂದೆ ಭಯಭೀತನಾಗಿ ತನ್ನ ಮಗಳ ವಿರುದ್ಧ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಷ್ಟಾಗಿಯೂ ಆ ದೌರ್ಜನ್ಯವೆಸಗಿದವರ ಮೇಲೆ ಪ್ರಭುತ್ವ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಆ ಚಿಕ್ಕಹುಡುಗಿಯಮೇಲೆ ಮಾತ್ರ ರಾಕ್ಷಸೀಯ ಕಾಯಿದೆಯೊಂದರ ಗದಾಪ್ರಹಾರವಾಗಿದೆ.

ವಿವೇಕ, ಹೃದಯವಂತಿಕೆ ಬೇಕಿದೆ

ಕರ್ನಾಟಕ ಸರಕಾರವು ಆ ಮೂವರು ಹುಡುಗರಮೇಲೆ, ಅಮೂಲ್ಯಳಮೇಲೆ, ಮೈಸೂರಿನಲ್ಲಿ ಪ್ರತಿಭಟಿಸಿದ ನಳಿನಿ ಬಾಲಕುಮಾರ್ ಮೇಲೆ ಹಾಗೂ ಬೀದರಿನ ಶಾಹೀನ್ ಶಾಲೆಯ ಪ್ರಕರಣದ ಆ ಮಗುವಿನ ತಾಯಿ ಹಾಗೂ ಅಲ್ಲಿನ ಉಳಿದ ಆರೋಪಿಗಳ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸು ತೆಗೆದುಕೊಳ್ಳುವ ವಿವೇಕ ಮತ್ತು ಹೃದಯವಂತಿಕೆ ತೋರಲಿ.

ಜೊತೆಗೆ, ‘ದೇಶದ್ರೋಹಿಗಳು, ಭಯೋತ್ಪಾದಕರು, ಶಾಂತಿಭಂಗ ಉಂಟುಮಾಡುವವರು, ದೇಶದ ಸುರಕ್ಷೆತೆಗೆ ಧಕ್ಕೆ ತರುವವರು, ಅರ್ಬನ್ ನಕ್ಸಲ್‍ಗಳು, ಟುಕ್‍ಡೇ ಟುಕ್‍ಡೇ ಗ್ಯಾಂಗಿನವರು’ ಮುಂತಾಗಿ, ಘನಘೋರವಾದ ಆಪಾದನೆಗಳನ್ನು ಬೇಕಾಬಿಟ್ಟಿಯಾಗಿ ಹೊರಿಸಿ, ಕಾನೂನನ್ನು ಪ್ರಜಾಪೀಡನೆಗೆ ಬಳಸುತ್ತಿರುವ ಕೇಂದ್ರ ಸರಕಾರವನ್ನು ಹಾಗೂ ಅದರ ಹಾದಿಯನ್ನೇ ತುಳಿಯುತ್ತಿರುವ ರಾಜ್ಯ ಸರಕಾರಗಳನ್ನು, ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವು, ಕಟುವಾಗಿ ಪ್ರಶ್ನಿಸಿ, ಕಾನೂನಿನ ದುರುಪಯೋಗವನ್ನು ತಡೆಯಲಿ; ಜನರನ್ನು, ದೇಶವನ್ನು, ಸದ್ಧರ್ಮವನ್ನು ಕಾಯಲಿ.

********

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...