ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣದಲ್ಲಿ ವಿದ್ಯಾರ್ಥಿ ಸಂಘಟನೆ SFI ಯ ರಾಜ್ಯ ಸಮಿತಿ ಸದಸ್ಯ ಹಾಗೂ ಕೋಲಾರ ತಾಲೂಕು ಅಧ್ಯಕ್ಷರೂ ಆಗಿರುವ ಶ್ರೀಕಾಂತ್ ಅವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
3-4 ತಿಂಗಳ ಬಾಕಿ ಸಂಬಳ ನೀಡಬೇಕೆಂದು ಹಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ಡಿಸೆಂಬರ್ 12 ರ ಬೆಳಿಗ್ಗೆ ತಾಳ್ಮೆ ಕಳೆದುಕೊಂಡಿದ್ದು, ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದುವರೆಗೂ ಸುಮಾರು 160 ಜನರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಂಘಟನೆಯ ರಾಜ್ಯ ಸಮಿತಿ ಸದಸ್ಯನ ಬಂಧನವನ್ನು ವಿರೋಧಿಸಿರುವ SFI ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಂಬಳ ಕೊಡದ ಆರೋಪ: ಐಫೋನ್ ತಯಾರಿಕ ನರಸಾಪುರದ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ಕಾರ್ಮಿಕರು
ನಾನುಗೌರಿ.ಕಾಮ್ ಜೊತೆ ಮಾತನಾಡಿದ ಅವರು, “ಕಂಪೆನಿಯ ಏಜೆನ್ಸಿಯು ಕಾರ್ಮಿಕ ಕಾನೂನನ್ನು ಉಲ್ಲಂಘಿಸಿ ಕಾರ್ಮಿಕರನ್ನು ನಡೆಸಿಕೊಂಡಿರುವ ರೀತಿಯಿಂದ ಬೇಸತ್ತ ಕಾರಣಕ್ಕೆ ಈ ಘಟನೆ ನಡೆದಿದೆ. ಕಾರ್ಮಿಕ ಕಾನೂನುಗಳು ಉಲ್ಲಂಘನೆಯಾಗುತ್ತಿದೆ ಎಂದು ಅಲ್ಲಿನ ಕಾರ್ಮಿಕರು ಪದೆ ಪದೆ ಕಾರ್ಮಿಕ ಇಲಾಖೆಗೆ ದೂರಿಕೊಂಡಿದ್ದರು. ಆದರೆ ಇದನ್ನು ಸರಿಪಡಿಸಲು ಜಿಲ್ಲಾಡಳಿತವಾಗಲಿ, ಕಾರ್ಮಿಕ ಇಲಾಖೆಯಾಗಲಿ ಕೆಲಸ ಮಾಡದೆ ನಿರ್ಲಕ್ಷ್ಯ ಮಾಡಿ ಕಾರ್ಮಿಕರ ಕೋಪ ಸ್ಪೋಟಗೊಳ್ಳುವಂತೆ ಮಾಡಿದೆ”
“ಅಷ್ಟೇ ಅಲ್ಲದೆ ತಮ್ಮ ಕೆಲಸಗಳೇ ಹೆಚ್ಚು ನಡೆಯಬೇಕು ಎಂಬ ಗುತ್ತಿಗೆ ಏಜನ್ಸಿಗಳ ಆಂತರಿಕ ಪೈಪೋಟಿ ಕೂಡಾ ಈ ಸಮಸ್ಯೆಗೆ ಕಾರಣವಾಗಿದೆ. ಆದರೆ ಈಗ ಪ್ರಕರಣವನ್ನು ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಇದು ಖಂಡನಾರ್ಹ” ಎಂದು ವಾಸುದೇವ ರೆಡ್ಡಿ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಸಂಸದ ಮುನಿಸ್ವಾಮಿ, SFI ಸಂಘಟನೆ ಹೊರರಾಜ್ಯದ ಜನರನ್ನು ಕರೆಸಿಕೊಂಡು ದಾಂಧಲೆ ಸಂಘಟಿಸಿದ್ದು, SFI ಕಾರ್ಯಕರ್ತರು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿ ದಾಂಧಲೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಸಂಸದರ ಆರೋಪವನ್ನು ನಿರಾಕರಿಸಿದ್ದ SFI ರಾಜ್ಯ ಘಟಕ, ವಿಸ್ಟ್ರಾನ್ ಘಟನೆಗೂ SFI ಗೂ ಯಾವುದೇ ಸಂಬಂಧವಿಲ್ಲ. ಸಂಸದರು ರಾಜಕೀಯ ಪ್ರೇರಿತ ಆರೋಪ ಮಾಡಿ ನಿಷ್ಪಕ್ಷಪಾತ ತನಿಖೆಯನ್ನು ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿತ್ತು.
ಇದನ್ನೂ ಓದಿ: ವಿಸ್ಟ್ರಾನ್ ದಾಂಧಲೆಗೆ ಎಸ್‌ಎಫ್‌ಐ ಕಾರಣ: ಸಂಸದ ಮುನಿಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ


