ರಾಮನಗರದ ಅರವಿಂದ್ ಕಾರ್ಖಾನೆ ಕಾರ್ಮಿಕರು ಆಡಳಿತ ಮಂಡಳಿಯ ನಡೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಅರವಿಂದ್ ಲೈಫ್‌ಸ್ಟೈಲ್ ಬ್ರಾಂಡ್ ಲಿಮಿಟೆಡ್ ಕಂಪನಿ ಶಾಶ್ವತ ಲಾಕೌಟ್ ಘೋಷಿಸಿದ್ದರ ಪರಿಣಾಮ ಗಾರ್ಮೆಂಟ್ಸ್ ಕಾರ್ಮಿಕರು ಕಾರ್ಖಾನೆಯ ಮುಖ್ಯದ್ವಾರದಲ್ಲಿ ಕೂತು ತಮ್ಮ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 66 ಕಾರ್ಮಿಕರು ಏಕಾಏಕಿ ಕೆಲಸ ಕಳೆದುಕೊಂಡು ಏನು ಮಾಡಬೇಕೆಂದು ದಿಕ್ಕುತೋಚದೆ ಕಾರ್ಖಾನೆಯ ಹೊರಗೆ ಧರಣಿ ಆರಂಭಿಸಿದ್ದಾರೆ. 12-13 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಬೀದಿಗೆ ತಳ್ಳಿದೆ ಎಂದು ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನವೆಂಬರ್ 30 ರಂದು ಶುರುವಾದ ಪ್ರತಿಭಟನೆ ಇಂದಿಗೆ 17ನೇ ದಿನಕ್ಕೆ ಕಾಲಿಟ್ಟಿದೆ. ಘಟಕದ ಲಾಕೌಟ್‌ಗೆ ನಷ್ಟದ ಕಾರಣ ನೀಡಿ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡುತ್ತಿರುವ ಕಾರ್ಖಾನೆ, ಸಂಸ್ಥೆ ಲಾಭದಾಯಕವಾಗಿದ್ದಾಗ ಕಾರ್ಮಿಕರಿಗೆ ಕನಿಷ್ಠ ಪರಿಹಾರವನ್ನು ಕೊಡದೇ ಇರುವುದು ಅಮಾನವೀಯ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
12-13 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕರು, ತಮಗೆ ಬೇರೆ ಘಟಕದಲ್ಲಿ ಕೆಲಸ ನೀಡಬೇಕೆಂದು ಇಲ್ಲವೇ ವಾರ್ಷಿಕ ಆರು ತಿಂಗಳ ವೇತನದ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನಾ ಹೋರಾಟವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ರಾಮನಗರ ಅರವಿಂದ್ ಫ್ಯಾಶನ್ ಲಿಮಿಟೆಡ್ ಕಾರ್ಖಾನೆ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು
ನಷ್ಟದ ನೆಪ ಹೇಳಿ ಕಾನೂನುಬಾಹಿರವಾಗಿ ಕಾರ್ಖಾನೆ ಲಾಕೌಟ್ ಘೋಷಿಸಿದ ಆಡಳಿತ ಮಂಡಳಿ, ಅದೇ ಸಮಯದಲ್ಲಿ ಹೊಸಕೋಟೆ ಬಳಿಯ ಸೂಲಿಬೆಲೆಯಲ್ಲಿ ಕಾರ್ಖಾನೆಯ ಹೊಸ ಘಟಕ ಆರಂಭಿಸಿದೆ. ಅಲ್ಲಿಯಾದರೂ ಕೆಲಸ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆ ಕುರಿತು ಕಾರ್ಮಿಕ ಇಲಾಖೆಯಲ್ಲಿ ರಾಜೀ ಸಂಧಾನ ಸಭೆ ನಡೆಯುತ್ತಿದ್ದು, ಯಥಾಸ್ಥಿತಿ ಕಾಪಾಡುವಂತೆ ಕಾರ್ಮಿಕ ಇಲಾಖೆ ಸೂಚನೆಯನ್ನು ನೀಡಿದೆ. ಆದರೆ, ಆಡಳಿತ ಮಂಡಳಿ ಅದನ್ನು ಪಾಲಿಸದೇ ಈ ಘಟಕದಲ್ಲಿರುವ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸುತ್ತಿದೆ ಎನ್ನಲಾಗಿದೆ.
ಅರವಿಂದ್ ಕಾರ್ಖಾನೆಯ ಕಾರ್ಮಿಕರ ಹೋರಾಟಕ್ಕೆ ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟ್‌ಟೈಲ್ಸ್ ವರ್ಕರ್ಸ್ ಯೂನಿಯನ್ (GATWU) ಕೈಜೋಡಿಸಿದೆ.
ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರ ಬಳಿ ಪ್ರಕರಣ ದಾಖಲಾಗಿದ್ದು, ಡಿಸೆಂಬರ್ 4 ರಂದು ನಡೆದ ಸಂಧಾನ ಸಭೆ ವಿಫಲವಾದ ಕಾರಣ ಕಾರ್ಮಿಕರು ಮುಷ್ಕರವನ್ನು ಮುಂದುವರಿಸಿದ್ದಾರೆ. ಜೊತೆಗೆ ಶೀಘ್ರವೇ ಪ್ರಕರಣವನ್ನು ಕಾರ್ಮಿಕ ಇಲಾಖೆ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಬಿಜೆಪಿ’ ನಿಜವಾದ ತುಕ್ಡೇ-ತುಕ್ಡೇ ಗ್ಯಾಂಗ್: ಸುಖ್‌ಬೀರ್ ಸಿಂಗ್ ಬಾದಲ್ ಆಕ್ರೋಶ