ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಿಇಒ ವಿಕಾಸ್ ಖಂಚಂದಾನಿಗೆ ಜಾಮೀನು

ನಕಲಿ ಟಿಆರ್‌ಪಿ ರೇಟಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿಗೆ ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಇಂದು ಜಾಮೀನು ನೀಡಿದ್ದಾರೆ.

ಈ ಪ್ರಕರಣದಲ್ಲಿ ನಿನ್ನೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ಕಾಲ ವಿಕಾಸ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಜಾಮೀನು ಕೋರಿ ಖಂಚಂದಾನಿ ಅವರ ವಕೀಲ ನಿತೀನ್ ಪ್ರಧಾನ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಇಂದು ಜಾಮೀನು ನೀಡಿದ್ದಾರೆ.

ಇದನ್ನೂ ಓದಿ: ರೈತ ವಿರೋಧಿ ಶಾಸನಗಳು ಮತ್ತು ಬಿಜೆಪಿಯ ಹತ್ತು ಸುಳ್ಳುಗಳು: ಶಿವಸುಂದರ್

“ಅವರ ಬಂಧನವು ಸಂಪೂರ್ಣ ಅಧಿಕಾರದ ದುರುಪಯೋಗ ಮತ್ತು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ. ಏಕೆಂದರೆ, ಖಂಚಂದಾನಿ ಹೆಸರನ್ನು ಎಫ್‌ಐಆರ್ ಅಥವಾ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿಲ್ಲ” ಎಂದು ನಿತೀನ್ ಪ್ರಧಾನ್ ಹೇಳಿದ್ದರು.

ನಕಲಿ ಟಿಆರ್‌ಪಿ ರೇಟಿಂಗ್ ಹಗರಣದಲ್ಲಿ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿಯನ್ನು ಮುಂಬೈ ಪೊಲೀಸರು ಭಾನುವಾರ (ಡಿ.13) ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ‌ ಮತ್ತು ಅದರ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ರಕ್ಷಣೆ ಕೋರಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ARG ಔಟ್‌ಲಿಯರ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಇದನ್ನೂ ಓದಿ: ಉತ್ತರಖಂಡ: ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವವರಿಗೆ 1 ಲಕ್ಷದ ವರೆಗೂ ಬಹುಮಾನ!

ಹನ್ಸಾ ಸಂಶೋಧನೆಯ ಅಧಿಕಾರಿ ನಿತಿನ್ ಡಿಯೋಕರ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ಅಕ್ಟೋಬರ್ 6 ರಂದು ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿಯ ಬಂಧನ 13ನೇಯದಾಗಿದೆ.

ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 15 ಲಕ್ಷ ರೂ. ಪಾವತಿಸಲಾಗುತ್ತಿತ್ತು ಎಂದು ಥಾಣೆ ಮೂಲದ ಕೇಬಲ್ ವಿತರಕ ಸಂಸ್ಥೆಯಾದ ಕ್ರಿಸ್ಟಲ್ ಬ್ರಾಡ್‌ಕಾಸ್ಟ್ ಮಾಲೀಕ ಆಶಿಶ್ ಚೌಧರಿ ಒಪ್ಪಿಕೊಂಡಿದ್ದಾಗಿ ಟಿಆರ್‌ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.


ಇದನ್ನೂ ಓದಿ: ‘ನನ್ನನ್ನು ಹಣದಿಂದ ಖರೀದಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ’ – ಮಮತಾಗೆ ತಿರುಗೇಟು ನೀಡಿದ ಓವೈಸಿ

LEAVE A REPLY

Please enter your comment!
Please enter your name here