ತಮ್ಮ ಧರ್ಮದ ಪವಿತ್ರ ಗ್ರಂಥವನ್ನು ಮುಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಯಾಗುತ್ತದೆ. ಒಂದು ಧರ್ಮ ಅಥವಾ ಪಂಗಡಕ್ಕೆ ಸೇರಿದವರಿಗೆ ಮನೆ ಕೊಡುವುದಿಲ್ಲ ಎಂಬ ಬೋರ್ಡುಗಳು ಅಲಂಕಾರಿಕವಾಗಿ ಮನೆಬಾಗಿಲುಗಳಲ್ಲಿ ರಾರಾಜಿಸುತ್ತವೆ. ಯುವತಿಯೊಬ್ಬಳು ಅನ್ಯಧರ್ಮದ ಯುವಕರ ಜೊತೆ ಪ್ರಯಾಣಿಸುತ್ತಿರುವುದನ್ನು ಕಂಡು ತಡೆಹಿಡಿಯಲಾಗುತ್ತದೆ. NCERT ಪ್ರಮಾಣೀಕೃತ ಎರಡನೇ ತರಗತಿ ಶಾಲಾ ಪಠ್ಯದಲ್ಲಿ ಎರಡು ಭಿನ್ನ ಧರ್ಮಗಳ ಆಚಾರಗಳನ್ನು ವಿವರಿಸುವಾಗ “ನಾವು”, “ಅವರು” ಎಂದು ಬರೆಯಲಾಗುತ್ತದೆ. ಮನೆಮನೆಗಳಲ್ಲಿ ಕತ್ತಿ, ತಲ್ವಾರ್ ಇರಬೇಕೆಂದು ಬೋಧನೆಗಳಾಗುತ್ತವೆ. ಫ್ರಿಜ್ಜಿನಲ್ಲಿ ಒಂದು ಬಗೆಯ ಮಾಂಸವಿಟ್ಟಿದೆ ಎಂಬ ಕಾರಣಕ್ಕೆ ರಕ್ತಪಾತಗಳಾಗುತ್ತವೆ. ಒಂದು ಜಾತಿಯ ಜನರೇ ಅರ್ಚಕರಾಗುವಂತೆ ಕಾನೂನಾಗಬೇಕೆಂಬ ಪ್ರತಿಷ್ಠಿತ ಪೀಠಗಳಿಂದ ಬೇಡಿಕೆಗಳು ಬರುತ್ತವೆ, ಮೈಲಿಗಟ್ಟಲೆ ಮಾಂಸಾಹಾರ ನಿಷೇಧ ಕಾನೂನುಗಳು ಜಾರಿಯಾಗುತ್ತವೆ, ಹುಟ್ಟಿ, ಬೆಳೆದು, ಬದುಕು ಸಾಗಿಸಿದ ನೆಲದಲ್ಲೇ ಅಸ್ತಿತ್ವಕ್ಕಾಗಿ ಕಾಗದ ಪತ್ರಗಳನ್ನು ಕೊಡಬೇಕಾದ ಕಾನೂನುಗಳು ಜೀವತಳೆಯುತ್ತವೆ. ಎಲ್ಲಕ್ಕಿಂತ ಆತಂಕಕಾರಿಯಾದ ಅಂಶಗಳೆಂದರೆ ವೈವಿಧ್ಯತೆಯ ಅನ್ವರ್ಥವಾದ ಪ್ರಜಾಪ್ರಭುತ್ವದ ಈ ನೆಲೆಯಲ್ಲಿ ಪ್ರಶ್ನೆಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತವೆ, ಸುಳ್ಳು ಮಾಹಿತಿಗಳಿಂದ ಮನುಷ್ಯರ ಮನಸ್ಸುಗಳನ್ನು ಕಲುಷಿತಗೊಳಿಸುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತವೆ, ದನಿಗಳನ್ನು ದಮನಿಸುವ ಘಟನೆಗಳು ಜರುಗುತ್ತವೆ. ಕಣ್ಣಿಗೆ ರಾಚುವಂತಹ ಉದಾಹರಣೆಗಳು ತೇಲಿ ಬಂದರೆ ಪ್ರಭುತ್ವದಿಂದ “ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಅಂಡ್ ರಿಯಾಕ್ಷನ್” ಎಂಬ ಹಾರಿಕೆಯ ಉತ್ತರಗಳು ಬರುತ್ತವೆ.
ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ನಾಡು ಈ ರೀತಿಯಾದ ಅಸೂಕ್ಷ್ಮ, ಅಮಾನವೀಯ ಘಟನೆಗಳಿಗೆ ಮೂಕ ಸಾಕ್ಷಿಯಾಗುತ್ತಿದೆ ಎಂಬುದು ನೋವಿನ ಸಂಗತಿ. ಮೇಲೆ ಪಟ್ಟಿಮಾಡಿರುವ ಬೆರಳೆಣಿಕೆಯ ಉದಾಹರಣೆಗಳು ಬೊಗಸೆ ನೀರಷ್ಟೇ. ಸಾಮಾಜಿಕ, ಆರ್ಥಿಕ ಅಸಮಾನತೆ, ಅನೀತಿಗಳು ಉಂಟು ಮಾಡುತ್ತಿರುವ ದ್ವೇಷ, ಕ್ಲೀಷಗಳು ಕೌಟುಂಬಿಕ, ವೈಯಕ್ತಿಕ ಮಟ್ಟಗಳಲ್ಲಿ ಸೋಂಕಾಗಿ ಪಸರಿಸುತ್ತಿರುವುದು, ನಮ್ಮ ಬದುಕಿನ ದಿಕ್ಕುಗಳನ್ನೇ ಬದಲಾಯಿಸಿದ ಕೋವಿಡ್‌ಗಿಂತಲೂ ಭಯಾನಕವಾದ ವೈರಸ್ ಆಗಿ ಮಾರ್ಪಡುತ್ತಿದೆ. ಪಕ್ಕದಲ್ಲಿ ಕೂತಿರುವ ವ್ಯಕ್ತಿಯ ಪ್ರತಿ ಮಾತಿಗೂ ನಾವು ಇಸಮ್ಮುಗಳ ಬಣ್ಣಗಟ್ಟಿ ಅವರ ಯೋಗ್ಯಾಯೋಗ್ಯತೆಗಳ ತೂಕ ಹಾಕುವಂತಹ ಮನಸ್ಥಿತಿಗೆ ಒಳಗಾಗಿದ್ದೇವೆ. ಪಟ್ಟಭದ್ರಹಿತಾಸಕ್ತಿಗಳು, ಕುರುಡು ಮೌಢ್ಯಗಳು, ಆಫ್ಲೈನ್-ಆನ್ಲೈನ್ ಸಂವಹನಗಳು, ವಾಟ್ಸಾಪ್ ಯೂನಿವರ್ಸಿಟಿಗಳು ಎಲ್ಲವೂ ನಮಗೆ ಪದವಿಗಳು, ಡಾಕ್ಟರೇಟುಗಳನ್ನು ದಯಪಾಲಿಸುತ್ತಿವೆ.
ಇಂತಹ ಆತಂಕಕಾರಿ ಸಂದರ್ಭದಲ್ಲಿ ನಾವು ಸ್ವಲ್ಪ ನಿಧಾನಿಸಬೇಕು, ಬೆಂಕಿಯಂತೆ ಹೊತ್ತಿ ಉರಿಯುವ ಹುಸಿನುಡಿಗಳನ್ನು, ವಿಷಕಾರಿ ಬೀಜಗಳನ್ನು ಹರಡಿ ಹಬ್ಬಿಸುವ ನಮ್ಮ ಬಾಯ್ತುದಿಯ, ಬೆರಳಂಚಿನ ತೃಷೆಗೆ ಸ್ವಲ್ಪ ಕಡಿವಾಣ ಹಾಕಬೇಕು. ವೈಜ್ಞಾನಿಕ, ವೈಚಾರಿಕ, ಪ್ರಶ್ನಾಮನೋಭಾವಗಳನ್ನು ಪ್ರೋತ್ಸಾಹಿಸಬೇಕು. ಪ್ರಜಾಪ್ರಭುತ್ವವೆಂಬ ಸುಂದರ ಪರಿಕಲ್ಪನೆಯನ್ನು ಮುದುಡಿ ನಲುಗಿಸುವ ಬದಲು ಅರಳಿಸಬೇಕು. ಮತ್ತೆ ಎದೆಎದೆಯ ಕದಗಳನ್ನು ತಟ್ಟುವ ಹದ ನಮ್ಮಲ್ಲಿ ಮೈಗೂಡಬೇಕು. ಇದು ಸಾಧ್ಯವಾಗಬೇಕಾದರೆ ನಮ್ಮ ಸಾಕ್ಷಿಪ್ರಜ್ಞೆ ಜಾಗೃತಗೊಳ್ಳಬೇಕು. ಬುದ್ಧಿವಂತರಾದ ನಾವು ಪ್ರಜ್ಞಾವಂತರಾಗಬೇಕು. ವೈಚಾರಿಕವಾಗಿ, ವೈಜ್ಞಾನಿಕವಾಗಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಬೇಕು.
ಕನ್ನಡ ನಾಡು-ನುಡಿಯು ನಮ್ಮ ಮನೆಮನೆಯ ಉತ್ಸವವಾಗಿ ಬೆಳೆದು ನಿಂತು ಆರು ದಶಕಗಳನ್ನೂ ಮೀರಿ ಮುಂದುವರೆದಿರುವ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದ ಹೆಮ್ಮೆಯ ಅಂಶವೆಂದರೆ ಕನ್ನಡ ಸಾಹಿತ್ಯವು ನಮ್ಮ ಪ್ರಜ್ಞಾವಂತಿಕೆಯ, ವೈಚಾರಿಕತೆಯ ಪೋಷಣೆಗೆ, ವೈಜ್ಞಾನಿಕ ಚಿಂತನೆಗೆ ಆದರದಿಂದ ನೀರೆರೆಯುತ್ತದೆ ಎಂಬುದು. ಜಾರ್ಗನ್ನುಗಳನ್ನು ಪಕ್ಕಕ್ಕಿಟ್ಟು ಸರಳ ಮಾತುಗಳಲ್ಲಿ ಹೇಳಬೇಕೆಂದರೆ; ಮನುಷ್ಯರಾದ ನಾವು ಮಾನವೀಯತೆಯನ್ನು, ಜೀವಂತಿಕೆಯನ್ನು, ಪರಾವಲಂಬನೆಯನ್ನು ಮೆರೆಯುವುದು. ದೈನಂದಿನ ಆಗುಹೋಗುಗಳನ್ನು ಮನುಷ್ಯಮಟ್ಟದಲ್ಲಿ ನಿಂತು ನೋಡುವುದು ಮತ್ತು ಮನುಷ್ಯರಿಂದಲೇ ಮನುಷ್ಯರಿಗಾಗಿಯೇ ನಡೆಸುವುದು. ನಮ್ಮ ಕನ್ನಡ ಸಾಹಿತ್ಯದಲ್ಲಿ ಇಂತಹ ಬದುಕಿನ ಪಾಠಗಳ, ಮಾನವೀಯ ಮೌಲ್ಯಗಳ ಅಣಿಮುತ್ತುಗಳಿವೆ. “ಎದೆ ಎದೆಗಳ ನಡುವೆ ಇರುವ ಮುರಿದ ಸೇತುವೆಗಳನ್ನು” ಎತ್ತಿ ತೋರಿ ಅದಕ್ಕೆ ಅಗತ್ಯ ಮರುಕಟ್ಟುವಿಕೆಯ ಆಕರಗಳನ್ನು ಕಲ್ಪಿಸಿಕೊಡುತ್ತದೆ. “ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂದು ಮುದ್ದಾದ, ಸರಳ ಮಾತುಗಳಲ್ಲಿ ಬದುಕಿನ ಅತಿದೊಡ್ಡ ಪಾಠವನ್ನು ಹೇಳಲು ಸಾಹಿತ್ಯದಲ್ಲಿ ಸಾಧ್ಯವಾಗಿದೆ. “ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಮಾತ್ರ ಒಂದೇ ಒಲವು”, “ಇವನಾರವ ಇವನಾರವ ಎಂದು ಎನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದು ಎನಿಸಯ್ಯ”, “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎನ್ನುವಂತ ಇಂಪೆನಿಸುವ, ತಂಪೆನಿಸುವ ವಿಚಾರಗಳ ದರ್ಶನವನ್ನು ನಮಗೆ ಒಡ್ಡಿ ಆಂತರಿಕ ಮಟ್ಟದಲ್ಲಿ ನಮ್ಮ ಆಲೋಚನಾ ಕ್ರಮವನ್ನು ಬದಲಾಯಿಸುವ ಶಕ್ತಿ ಸಾಹಿತ್ಯದ ಓದಿಗಿದೆ.
ಸರಿಸುಮಾರು ಒಂಭತ್ತನೆಯ ಶತಮಾನದಷ್ಟರ ಹೊತ್ತಿಗೇ ಕವಿರಾಜಮಾರ್ಗದಲ್ಲಿ “ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ” ಎಂಬ ಮಾತಿದೆ. ಅಂದರೆ, ನಿಜವಾದ ಸಂಪತ್ತೆಂಬುದು ಅನ್ಯರ ವಿಚಾರಗಳನ್ನು, ಅನ್ಯಧರ್ಮವನ್ನು ತಾಳಿಕೊಳ್ಳುವುದು, ಗೌರವಿಸುವುದು ಎಂಬುದಾಗಿದೆ. ಕನ್ನಡದ ಮೊಟ್ಟಮೊದಲ ಕೃತಿಯಲ್ಲಿ ಇಂತಹ ವಿಚಾರವನ್ನು ಉಲ್ಲೇಖಿಸಲಾಗಿದೆ. ಇದು ಇಂದಿಗೂ ಅತ್ಯಂತ ಪ್ರಸ್ತುತವಾದ ಮಾತು ಎಂಬುದನ್ನು ನಾವೆಲ್ಲರೂ ಗಮನಿಸಬೇಕು. ಆದಿಕವಿ ಪಂಪ, ಒಬ್ಬ ಆಸ್ಥಾನಕವಿಯಾಗಿದ್ದರೂ ತನ್ನೆಲ್ಲ ಮಿತಿಗಳ ನಡುವೆಯೇ ತನ್ನ ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತಾ “ಕುಲಂ ಕುಲಮಲ್ತು ಚಲಂ ಕುಲಂಗುಣಂ ಕುಲಮಭಿಮಾನಮೊಂದೆ ಕುಲಮಣ್ಮುಕುಲಂ” ಎಂದು ಜಾತಿ-ಕುಲಗಳ ಅಸ್ತಿತ್ವವನ್ನೇ ನಿವಾಳಿಸಿಬಿಡುತ್ತಾನೆ. ಗದಾಯುದ್ಧದಲ್ಲಿ ರನ್ನಕವಿಯು, ಯುದ್ಧವನ್ನು ವೈಭವೀಕರಿಸಿ ಅದರ ಭೀಭತ್ಸತೆ, ಭಯಾನಕತೆಯನ್ನು ತೋರುತ್ತಲೇ ಆ ರುದ್ರ ಹಿಂಸೆಯ ಬಗೆಗೆ ನೋವನ್ನು ವ್ಯಕ್ತಪಡಿಸುತ್ತಾನೆ. ಕುಮಾರವ್ಯಾಸನೂ ತನ್ನ ಕೃಷ್ಣಕಥೆಯಲ್ಲಿ, ದ್ವೇಷಕ್ಕೆ ಯುದ್ಧವೊಂದೇ ಪರಿಹಾರವಲ್ಲ ಎಂಬ ಅಂಶವನ್ನೂ ಎತ್ತಿತೋರುತ್ತಾನೆ.
ವಚನಕಾಲವು ಒಂದು ಸಾಮಾಜಿಕ ಚಳವಳಿಯಾಗಿಯೇ ಸಂಚಲನ ಮೂಡಿಸಿತ್ತು. ಆಸ್ಥಾನದ ಓದಿಗೆ ಮಿತಿಯಾಗಿದ್ದ ಸಾಹಿತ್ಯವು ರಸ್ತೆಗಿಳಿದು ಮನೆಮನೆ ತಲುಪಿತ್ತು. “ದೇವಲೋಕ ಮರ್ತ್ಯಲೋಕ ಎಂಬುದು ಬೇರಿಲ್ಲ ಕಾಣಿರೋ, ಸತ್ಯವ ನುಡಿಯುವುದೇ ದೇವಲೋಕ, ಮಿಥ್ಯವ ನುಡಿಯುವುದೇ ಮರ್ತ್ಯಲೋಕ, ಆಚಾರವೆ
ಸ್ವರ್ಗ, ಅನಾಚಾರವೆ ನರಕ”, “ದೇಹವೇ ದೇಗುಲ” ಎನ್ನುತ್ತಾರೆ ಬಸವಣ್ಣ ಕವಿ. “ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ” ಎನ್ನುತ್ತಾಳೆ ಅಕ್ಕಮಹಾದೇವಿ. ನಮ್ಮೆಲ್ಲಾ ಆತಂಕಗಳಿಗೆ, ತಲ್ಲಣಗಳಿಗೆ, ನೋವು-ದುಃಖಗಳಿಗೆ ನಮ್ಮ ನಾಲಿಗೆ ಮತ್ತು ವಿಚಾರ ಕ್ರಮವೇ ಕಾರಣ ಎನ್ನುತ್ತಾನೆ ಸರ್ವಜ್ಞ ಕವಿ. ದಾಸಸಾಹಿತ್ಯದಲ್ಲಿ ಭಕ್ತಿಯೊಂದಿಗೆ ಉಕ್ಕಿದ ಮತ್ತೊಂದು ರಸವೆಂದರೆ ಚಿಂತನೆ. “ಮೋಸಮಾಡುವವನ ಹೆಸರು ಮಗನಿಗಿಡಬೇಕು” ಎಂದು ಹಾಡುವಷ್ಟು ಸಜ್ಜನಿಕೆ, ವಿನಯ ಪುರಂದರದಾಸರಿಗಿದೆ. “ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನು ಬಲ್ಲಿರಾ?” ಎನ್ನುವ ಕನಕದಾಸರು ವಿಚಾರವಾದವನ್ನು ತಮ್ಮ ಪದಗಳಲ್ಲೇ ಹಾಡಿ ಮೆರೆಸುತ್ತಾರೆ.
ನವೋದಯ ಕಾಲವು ವೈಚಾರಿಕ ಪ್ರಜ್ಞೆಯನ್ನು ಹೊತ್ತ ಬಹುದೊಡ್ಡ ಬುತ್ತಿಯನ್ನೇ ನಮಗೆ ಕೊಡುತ್ತದೆ ಎಂದರೆ ತಪ್ಪಿಲ್ಲ. ವಿಜ್ಞಾನಸಂಪನ್ನರಾದ ಬ್ರಿಟಿಷರು ಸುಮಾರು 200 ವರ್ಷಗಳು ನಮ್ಮನ್ನು ಆಳಿದರೂ ವೈಜ್ಞಾನಿಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಲಿಲ್ಲ ಎನ್ನುವ ಕವಿ ಕುವೆಂಪು ನಮಗೆ ವೈಚಾರಿಕ ಸಾಹಿತ್ಯದ ರಸದೌತಣವನ್ನೇ ಉಣಬಡಿಸುತ್ತಾರೆ. “ಸಿಲುಕದಿರಿ ಮತವೆಂಬ ಮೋಹದ ಜಾಲಕ್ಕೆ, ಮತಿಯಿಂದ ದುಡಿಯಿರೈ ಲೋಕದ ಹಿತಕ್ಕೆ” ಎನ್ನುವ ಕುವೆಂಪು ವೈಜ್ಞಾನಿಕ ದೃಷ್ಟಿಗೆ ವೈಚಾರಿಕತೆ ತಾಯಿ ಬೇರು ಎನ್ನುತ್ತಾರೆ. ಪ್ರಜಾಪ್ರಭುತ್ವದ ಸಾರಾಂಶವನ್ನು ಒಂದೇ ಸರಳ ಸಾಲಿನಲ್ಲಿ “ಹಿಂದಾಯಿತು ಗರ್ವರ ಕಾಲ, ಈಗ ಸರ್ವರ ಕಾಲ” ಎನ್ನುತ್ತಾರೆ. ಈ ಒಂದು ಸಣ್ಣ ಸಾಲು ಎಷ್ಟು ಸಶಕ್ತವಾಗಿ, ಸಮರ್ಥವಾಗಿದೆ ಎಂಬುದನ್ನು ಮನಗಾಣಬಹುದು. ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಓದದೆ ಹೋದರೆ ಬದುಕಿನಲ್ಲಿ ನಾವು ಕಳೆದುಕೊಳ್ಳುವುದು ಖಂಡಿತ. ಒಂದು ಮಗು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತದೆ, ನಾವು ಮತ, ಧರ್ಮ, ಜಾತಿ ಮುಂತಾದ ಶೃಂಖಲೆಗಳಲ್ಲಿ ಬಿಗಿದು ಆ ಮಗುವನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ ಎನ್ನುತ್ತಾರೆ ಕವಿ. ಇದು ಬಹಳ ಮುಖ್ಯವಾದ, ಮನವರಿಕೆ ಮಾಡಿಕೊಳ್ಳಲೇಬೇಕಾದ ಅರಿವು. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತು ಈ ಕವಿನುಡಿಗೆ ಪೂರಕವಾಗಿದೆ.
ಹೀಗೆ ಕುವೆಂಪು, ಕಾರಂತರು, ಬಿ.ಎಂ.ಶ್ರೀ, ಗೌರೀಶ ಕಾಯ್ಕಿಣಿ, ಎಚ್.ನರಸಿಂಹಯ್ಯ, ಜಿ.ರಾಮಕೃಷ್ಣ, ಡಿ.ವಿ.ಜಿ, ಶಂ.ಬಾ.ಜೋಶಿ, ಪಾ.ಪು, ಲಂಕೇಶರು, ತೇಜಸ್ವಿ, ಜವರೇಗೌಡರು, ರಹಮತ್ ತರೀಕೆರೆ ಮುಂತಾದ ಅನೇಕ ಪ್ರಮುಖರು ತಮ್ಮ ಮೌಲ್ಯಯುತ ಕೃತಿಗಳ ಮೂಲಕ ಸಾಮಾಜಿಕ ಪ್ರಜ್ಞೆಯನ್ನು, ಕಳಕಳಿಯನ್ನು ಎತ್ತಿಹಿಡಿಯಲು ಪ್ರಯತ್ನಿಸಿದ್ದಾರೆ. ಎಚ್.ನರಸಿಂಹಯ್ಯನವರು “ದೇವರು, ಧರ್ಮ, ಜ್ಯೋತಿಷ್ಯ, ಪವಾಡ ಮುಂತಾದವು ವಾಣಿಜ್ಯ ಕೇಂದ್ರಗಳಾಗಿವೆ” ಎನ್ನುತ್ತಾರೆ. ಗೌರೀಶ ಕಾಯ್ಕಿಣಿಯವರು “ಯಾವ ಕ್ರಾಂತಿಗೂ ಮೊದಲು ವಿಚಾರ ಕ್ರಾಂತಿ” ಎಂದಿದ್ದಾರೆ. ಕಾರಂತರು “ಇಂದಿನ ಅಗತ್ಯತೆ ದೇವರಲ್ಲ, ಮಾನವೀಯತೆ” ಎನ್ನುತ್ತಾರೆ. ತಮ್ಮ ಸಣ್ಣ ಕಥೆಗಳ ಜೀವಂತ ಪಾತ್ರಗಳ ಮೂಲಕ ಮನುಷ್ಯತ್ವವನ್ನು ತುಂಬಿಬಿಡುವ ಮಾಸ್ತಿ, “ಕಸವನೆಸೆ, ರಸವಬೆಳೆ, ನಿಜವ ತಿಳಿ, ಅದನು ಸಾರು” ಎಂದು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ. ಯು.ಆರ್.ಅನಂತಮೂರ್ತಿ ಅವರ ಕಾದಂಬರಿ, ಕಥೆಗಳು ಗಂಭೀರ ಚಿಂತನೆಗಳನ್ನು ನಮ್ಮಲ್ಲಿ ಹುಟ್ಟಿಸುತ್ತವೆ. “ಏನಾದರೂ ಆಗು, ನಿನ್ನೊಲವಿನಂತಾಗು, ಏನಾದರೂ ಸರಿಯೆ, ಮೊದಲು ಮಾನವನಾಗು” ಎನ್ನುತ್ತಾ ಬದುಕಿನ ಬಹುದೊಡ್ಡ ಪಾಠವನ್ನು ಅತಿ ಸರಳ ಬೋಧನೆಯಾಗಿಸುತ್ತಾರೆ ಕವಿ ಸಿದ್ಧಯ್ಯ ಪುರಾಣಿಕರು. ತಮ್ಮ ವಿಜ್ಞಾನ ಬರಹಗಳ ಮೂಲಕ ಮಾನವೀಯ ಮೌಲ್ಯಗಳನ್ನು, ಮನುಷ್ಯತ್ವವನ್ನು ಸಾರುವ ನಾಗೇಶ್ ಹೆಗಡೆ ಅವರು ಸಹ
ವೈಚಾರಿಕತೆಯ ಅರಿವು ಮೂಡಿಸುವ ಅತಿ ಮುಖ್ಯರಲ್ಲಿ ಒಬ್ಬರು.
ಸಾಮಾಜಿಕ ನ್ಯಾಯಪಾಲನೆಯನ್ನು ಎತ್ತಿ ಹಿಡಿಯುವ, ಮನುಷ್ಯನ ಪ್ರಗತಿಗೆ ವಿಚಾರ ಊರುಗೋಲು ಎಂದು ಸಾರುವ, ಆರೋಗ್ಯಕರ ಬದುಕಿಗೆ ವಿಚಾರ ಸಾಹಿತ್ಯ ಅನಿವಾರ್ಯ ಎಂದು ಅನುಭವದಿಂದ ಸಾರುವ ಬರಗೂರು ರಾಮಚಂದ್ರಪ್ಪ, ದೇವನೂರ ಮಹಾದೇವ, ಚೆನ್ನಣ್ಣ ವಾಲೀಕಾರ, ಚಂಪಾ, ಸಿದ್ಧಲಿಂಗಯ್ಯ ಮುಂತಾದ ಪ್ರಮುಖರು ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ನಮ್ಮನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ.
ಅಕ್ಕ ಮಹಾದೇವಿಯಿಂದ ಹಿಡಿದು ಸಂಚಿ ಹೊನ್ನಮ್ಮ, ರುಕ್ಮಿಣೀಬಾಯಿ, ಶಾಂತಾಬಾಯಿ, ತಿರುಮಲಾಂಬಾ, ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮ, ತ್ರಿವೇಣಿ, ಎಂ.ಕೆ.ಇಂದಿರಾ, ಸರ್ವಮಂಗಳಾ, ಗೀತಾ ನಾಗಭೂಷಣ, ಬಿ.ಟಿ.ಲಲಿತಾನಾಯಕ್, ವೈದೇಹಿ, ವೀಣಾ ಶಾಂತೇಶ್ವರ, ಎಚ್.ಎಲ್.ಪುಷ್ಪ, ಹೇಮಾ ಪಟ್ಟಣ ಶೆಟ್ಟಿ, ಪ್ರತಿಭಾ ನಂದಕುಮಾರ್, ಸಾರಾ ಅಬೂಬಕರ್, ವಿಜಯಾ ದಬ್ಬೆ, ಹೆಚ್.ಎಸ್.ಪಾರ್ವತಿ, ಗಾಯತ್ರಿ ನಾವಡ, ಕಮಲಾ ಹಂಪನಾ, ಎಚ್.ಎಸ್.ಶ್ರೀಮತಿ, ಎಂ.ಎಸ್.ಆಶಾದೇವಿ ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬಹಳ ದೊಡ್ಡದು. ಈ ಪಟ್ಟಿಯಲ್ಲಿರುವ ಎಲ್ಲರೂ ಮತ್ತು ಉಳಿದ ಇನ್ನೂ ಹಲವರು ವೈಚಾರಿಕತೆಯ, ಮಾನವೀಯತೆಯ ಬದುಕಿನ ಪಾಠಗಳನ್ನು ಹೇಳಿರುವಲ್ಲಿ ಮುಖ್ಯರಾಗುತ್ತಾರೆ. ಪ್ರತಿ ದಿನ ಬದುಕಿನ ಹೋರಾಟಗಳನ್ನು ವಿವಿಧ ಮಜಲುಗಳಲ್ಲಿ, ರೂಪಗಳಲ್ಲಿ ಅನುಭವಿಸುತ್ತಾ, ಎದುರಿಸಿ ಗೆಲ್ಲುವ ಎಲ್ಲ ಮಹಿಳೆಯರ ಅನುಭವಗಳು ಈ ಮಹಿಳಾ ಸಾಹಿತಿಗಳ ಬರಹಗಳಲ್ಲಿ ಅಕ್ಷರಗಳಾಗಿ ಹರಳುಗಟ್ಟಿ ಮೂಡಿಬಂದಿವೆ.
ಮೇಲೆ ಹೇಳಿರುವ ಪಟ್ಟಿಯಲ್ಲಿ ಹಲವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ತಮ್ಮ ಬರಹಗಳ ಮೂಲಕ, ವಿಚಾರಗಳ ಮೂಲಕ ನಮ್ಮೊಂದಿಗೆ ಸದಾ ಒಂದು ಪ್ರಜ್ಞೆಯಾಗಿ ಇರುತ್ತಾರೆ. ಆದ್ದರಿಂದಲೇ ಸಾಹಿತ್ಯಕ್ಕೆ ಸಾವಿಲ್ಲ ಎಂಬ ಮಾತು ಹುಟ್ಟಿಬಂದಿದೆ. ಇನ್ನುಳಿದವರು ಇಂದಿಗೂ ನಮ್ಮೊಂದಿಗೆ ಕೈಜೋಡಿಸುತ್ತಾ, ಕಾಲಕಾಲಕ್ಕೂ ಎಚ್ಚರಿಸುತ್ತಾ ತಮ್ಮ ಬರಹಗಳನ್ನು ಮುಂದುವರೆಸುತ್ತಿರುವುದು ನಮ್ಮ ಅದೃಷ್ಟವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಯುವ (ಅಥವಾ ಹೊಸ) ಬರಹಗಾರರು ವೈಚಾರಿಕ ಪ್ರಜ್ಞೆಯ ದಾರಿದೀವಿಗೆಗಳಾಗಿ ಚಿಗುರಿ, ಅರಳುತ್ತಿರುವುದು ಕನ್ನಡ ನಾಡು-ನುಡಿಯ ಬಹುದೊಡ್ಡ ಭರವಸೆಯಾಗಿದೆ. “ಉತ್ತಮ ಸಾಹಿತ್ಯ ಕೃತಿಯೊಂದು ನಮ್ಮನ್ನು ಅಲುಗಾಡಿಸಿ, ನಮ್ಮೊಳಗಿನ ಅರಿವನ್ನು ಎಚ್ಚರಿಸುವಂತಿರಬೇಕು” ಎಂಬ ಮಾತಿದೆ. ಈ ಮಾತನ್ನು ಸಮರ್ಥಿಸಲು ನಮ್ಮ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಭಂಡಾರವೇ ಇದೆ. ಅದನ್ನು ಹೆಕ್ಕಿ ತೆಗೆದು ಜೋಳಿಗೆಗೆ ತುಂಬಿಸಿಕೊಳ್ಳುವುದಷ್ಟೇ ನಮ್ಮ ಕೆಲಸವಾಗಿದೆ.

ಸಂಯುಕ್ತಾ ಪುಲಿಗಲ್
ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಯುಕ್ತಾ ಬರಹಗಾರ್ತಿ-ಅನುವಾದಕಿ. ’ಪರ್ವತದಲ್ಲಿ ಪವಾಡ’ ಮತ್ತು ’ರೆಬೆಲ್ ಸುಲ್ತಾನರು’ ಅವರ ಅನುವಾದಿತ ಕೃತಿಗಳು. ’ಲ್ಯಾಪ್‌ಟಾಪ್ ಪರದೆಯಾಚೆಗೆ’ ಅಂಕಣ ಸಂಗ್ರಹ. ’ಆಪರೇಷನ್ ಬೆಳಕಿನ ಕಿಂಡಿಗಳು’ ಅವರ ಇತ್ತೀಚಿನ ಕಾದಂಬರಿ.
ಇದನ್ನೂ ಓದಿ: 66ನೇ ಕನ್ನಡ ರಾಜ್ಯೋತ್ಸವ; ಹಿಂದೆಂದೂ ಕಾಣದ ದೆಹಲಿ ದಾಸ್ಯದ ಸುಳಿಯಲ್ಲಿ ಕರ್ನಾಟಕ!
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಒಂದು ವಾರ ’ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ