2021ರ ಚುನಾವಣೆ ತಮಿಳುನಾಡಿನಲ್ಲಿ ನಡೆದ ಐತಿಹಾಸಿಕ ಚುನಾವಣೆಯಾಗಿದೆ. ಈ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೈದ್ಧಾಂತಿಕ ನಿಲುವಿನ ಮೇಲೆಯೇ ಆದ ಚುನಾವಣೆಗಳು ವಿರಳ ಅನ್ನಬಹುದು. ಕೊನೆಯ ಬಾರಿ ಈ ರೀತಿಯ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಆದ ಚುನಾವಣೆ ಎಂದರೆ 1967ರಲ್ಲಿಯೇ. ಆಗ ಪೆರಿಯಾರ್ ಶುರುಮಾಡಿದ ಸೈದ್ಧಾಂತಿಕ ಅಲೆಯಿಂದ ಡಿಎಂಕೆ ಪಕ್ಷವು ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಂಡಿತ್ತು. ತಮಿಳುನಾಡಿನ ಶೋಷಿತ ಸಮುದಾಯಗಳು ಮೇಲ್ಜಾತಿಯ ಪ್ರಾಬಲ್ಯದ ವಿರುದ್ಧ ಹೋರಾಟ ಆರಂಭಿಸಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಪ್ರಾಮುಖ್ಯತೆ ನೀಡುವ ರಾಜ್ಯವನ್ನು ಸೃಷ್ಟಿಸಿದರು. ಆಗಿನಿಂದ, ತಮಿಳುನಾಡಿನಲ್ಲಿ ಒಂದೇ ತರಹದ ಸೈದ್ಧಾಂತಿಕ ವಿಚಾರ ಪ್ರಕ್ರಿಯೆಯುಳ್ಳ ಎರಡು ಪಕ್ಷಗಳು ಮತಕ್ಕಾಗಿ ಸೆಣೆಸಿ ಅಧಿಕಾರಕ್ಕೆ ಬರುತ್ತಿವೆ. ಮತದಾರರು ತಮ್ಮ ಮತವನ್ನು ’ಯಾರು ಆಡಳಿತ ಮಾಡಬೇಕು’ ಎಂಬುದಕ್ಕಿಂತ ’ಯಾರು ಆಡಳಿತ ಮಾಡಬಾರದು’ ಎಂಬುದರ ಮೇಲೆಯೇ ನೀಡುತ್ತಿದ್ದಾರೆ. 2021ರ ತನಕ ಚುನಾವಣೆಯ ವಿಷಯಗಳು ಯಾವಾಗಲೂ ಭ್ರಷ್ಟಾಚಾರ ಮತ್ತು ದುರಾಡಳಿತವೇ ಆಗಿದ್ದವು.
2019ರ ಲೋಕಸಭೆಯ ಚುನಾವಣೆಯ ನಂತರ ಭಾರತದ ಬಹುತ್ವದ ಪರಿಕಲ್ಪನೆಯನ್ನು ಕೊನೆಗೊಳಿಸಲು ತಮಿಳುನಾಡಿನಲ್ಲಿನ ಗೆಲುವು ಕೊನೆಯ ಹೆಜ್ಜೆ ಎಂದು ಬಿಜೆಪಿಗೆ ಅನಿಸಿತು. ಹಾಗಾಗಿ ಅವರು ಆ ಪ್ರಕ್ರಿಯೆಗೆ ಹೊಸ ತಂಡವನ್ನು ರಚಿಸತೊಡಗಿದರು. ಅವರ ತಂತ್ರಗಾರಿಕೆ ದೇಶದ ಇತರೆಡೆ ಅಳವಡಿಸಿಕೊಂಡದ್ದಂತದ್ದೇ ಆಗಿತ್ತು. ಅದರ ಪ್ರಮುಖ ಲಕ್ಷಣಗಳು ಹೀಗಿವೆ.

1. ಗಮನಾರ್ಹವಾದ ಜಾತಿ/ಧರ್ಮದ ಸಮೀಕರಣವನ್ನು ಹೊಂದಿದ ಹೊಸ ತಂಡವನ್ನು ರಚಿಸುವುದು.
2. ಒಂದು ಜನಪ್ರಿಯ ಪಕ್ಷದೊಂದಿಗೆ ಮೈತ್ರಿ ಬೆಳೆಸಿಕೊಳ್ಳುವುದು, ಅದರಲ್ಲೂ ಆಡಳಿತ ಪಕ್ಷವಾದರೆ ಒಳ್ಳೆಯದು, ಆಗ ಸರಕಾರಕ್ಕೆ ಬೆದರಿಕೆ ಒಡ್ಡುತ್ತ ಈ ಕೆಲಸ ಮಾಡುವುದು.
3. ಕೋಮು ಅಥವಾ ಜಾತಿ ಆಧಾರದ ಮೇಲೆ ಧ್ರುವೀಕರಣದ ಕಥಾನಕವನ್ನು ಸೃಷ್ಟಿಸುವುದು.
4. ಮಾಧ್ಯಮಗಳನ್ನು ಕಬಳಿಸಿಕೊಂಡು, ದೊಡ್ಡ ಮಟ್ಟದಲ್ಲಿ ಸಾಮೂಹಿಕ ಕೋಮು ವೈರತ್ವದ ಪ್ರಚಾರವನ್ನು ಮಾಡುವುದು.
ಹಿಂಬಾಗಿಲಿನಿಂದ ನುಸುಳುವ ಪ್ರಕ್ರಿಯೆಯನ್ನು ಒಳಗೊಂಡಂತೆ, ಬಿಜೆಪಿಯು ತಮಿಳುನಾಡಿನಲ್ಲಿ ತಳವೂರಲು ಈ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಸೆಲ್ವಿ ಜಯಲಲಿತಾ ಅವರ ನಿಧನದೊಂದಿಗೆ ಬಿಜೆಪಿಯ ಪ್ರಯತ್ನಗಳು ಶುರುವಾದವು. ಸೆಲ್ವಿ ಜಯಲಲಿತಾ ಅವರು ಮೋದಿ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿರಲಿಲ್ಲ ಹಾಗೂ ಮೋದಿ-ಬಿಜೆಪಿ ಛೂಬಿಟ್ಟಿರುವ ಕೋಮುವಾದಿ ಮತ್ತು ನಿರಂಕುಶ ರಾಜಕಾರಣದೊಂದಿಗೆ ರಾಜಿ ಮಾಡಿಕೊಳ್ಳಬಾರದೆಂದು ಗಟ್ಟಿಯಾದ ನಿಲುವು ತೆಳೆದಿದ್ದರು. ’ದಿಸ್ ಲೇಡಿ ಈಸ್ ಬೆಟರ್ ದ್ಯಾನ್ ಮೋದಿ’ (ಈ ಮಹಿಳೆ ಮೋದಿಗಿಂತ ಉತ್ತಮ) ಎಂಬ ಘೋಷಣೆಯೊಂದಿಗೆ 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 39ರಲ್ಲಿ 37 ಸೀಟುಗಳನ್ನು ಜಯಲಲಿತಾ ಅವರ ಎಐಡಿಎಂಕೆ ಪಕ್ಷ ಗೆದ್ದಿತು. 2016ರಲ್ಲಿ ಅವರ ನಿಧನದ ನಂತರ ಎಐಎಡಿಎಂಕೆಯನ್ನು ನಿಯಂತ್ರಿಸುವ ಮತ್ತು ಕಬಳಿಸುವ ಅವಕಾಶ ಬಿಜೆಪಿಗೆ ಕಂಡಿತು. ಅದು ಅತ್ಯಂತ ಜಾಣತನದಿಂದ ಎಪಿಎಸ್ (ಎಡಪ್ಪಡಿ ಕೆ ಪಳನಿಸ್ವಾಮಿ), ಒಪಿಎಸ್ (ಓ ಪನ್ನೀರ್ ಸೆಲ್ವಂ) ಮತ್ತು ಶಶಿಕಲ ಬಣಗಳ ಮಧ್ಯೆ ಡಿವೈಡ್ ಆಂಡ್ ರೂಲ್ ನೀತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿತು. ಪಕ್ಷದ ಹಾಗೂ ಅದರ ಆಡಳಿತದ ಮೇಲೆ ಸಂಪೂರ್ಣ ಹಿಡಿತದ ಬದಲಿಗೆ ಇಪಿಎಸ್ ಮತ್ತು ಒಪಿಎಸ್ ಮಧ್ಯೆ ಹೊಂದಾಣಿಕೆ ಮಾಡಿಸಿತು.
ಪರಿಶಿಷ್ಟ ಜಾತಿಗೆ (ಅರುಂಧತಿಯಾರ್) ಸೇರಿದ ಎಲ್ ಮುರುಗನ್ ಅವರನ್ನು ತಕ್ಷಣವೇ ಪಕ್ಷದ ಅಧ್ಯಕ್ಷರನ್ನಾಗಿಸಲಾಯಿತು. ಇದರಿಂದ ಎರಡು ಉದ್ದೇಶಗಳು ಈಡೇರಿದವು; ಒಂದು ಬಿಜೆಪಿ ನಾಯಕತ್ವ ಮೇಲ್ಜಾತಿಯ ಪರ ಎಂಬ ಸೂಚನೆಯನ್ನು ನಿಯಂತ್ರಿಸಲಾಯಿತು ಹಾಗೂ ಪಕ್ಷದ ಅಧ್ಯಕ್ಷನನ್ನು ಒಂದು ಕೈಗೊಂಬೆಯಾಗಿ ಇರಿಸಲು ಸಾಧ್ಯವಾಯಿತು.
ಒಂದು ವಿಶ್ವಾಸಾರ್ಹ ಮುಖವನ್ನು ಸ್ಥಾಪಿಸಿಕೊಳ್ಳಲು ಮತ್ತು ಯಾವುದೇ ತಪ್ಪಿತಸ್ಥ ಭಾವನೆಯಿಲ್ಲದೇ ಹಿಂಸಾಚಾರ ಎಸಗಲು ನಿವೃತ್ತ ಅಧಿಕಾರಿಗಳು, ಜನಪ್ರಿಯ ನಟರು ಹಾಗೂ ಕುಖ್ಯಾತ ರೌಡಿಗಳು- ಇವರನ್ನೆಲ್ಲ ಪಕ್ಷಕ್ಕೆ ತರಲಾಯಿತು.
ಆಡಳಿತರೂಢ ಎಐಎಡಿಎಂಕೆಯನ್ನು ಸಂಪೂರ್ಣವಾಗಿ ಖರೀದಿಸಲಾಯಿತು. ಸರಕಾರದ ನಿಲುವನ್ನು ಸಮರ್ಥನೆ ಮಾಡದ ಜನಪ್ರಿಯ ಟಿವಿ ಆಂಕರ್‌ಗಳನ್ನು ತೆಗೆದುಹಾಕುವುದರೊಂದಿಗೆ ಕೋಮುವಾದದ ಪ್ರಾಜೆಕ್ಟ್ ಶುರುವಾಯಿತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಯೊಂದು ಸುದ್ದಿಯನ್ನು ಕೋಮುವಾದದ ಪ್ರಶ್ನೆಯನ್ನಾಗಿಸುವ ಸುಳ್ಳುಕೋರರಿಂದ ತುಂಬಿಸಲಾಯಿತು.
ಬಿಜೆಪಿಯ ಕೋಮುವಾದಿ ತಂತ್ರಗಳನ್ನು ಎಂದೂ ಬೆಂಬಲಿಸದ ತಮಿಳುನಾಡಿನ ಜನರು 2016ರಲ್ಲಿ ಜಯಲಲಿತಾಗೆ ನೀಡಿದ ಬೆಂಬಲವನ್ನು ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯ ನಾಯಕರು ಕಬಳಿಸಿದ್ದು ತಮಗೆ ಬಗೆದ ದ್ರೋಹ ಎಂದು ಕಂಡರು. ಪ್ರಧಾನಿ ತಮಿಳುನಾಡಿಗೆ ಭೇಟಿ ಕೊಟ್ಟಾಗಲೆಲ್ಲ ಯಾವ ರೀತಿಯಲ್ಲಿ ಕಪ್ಪುಬಾವುಟಗಳು ಕಾಣಿಸಿಕೊಂಡವು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ #ಗೋಬ್ಯಾಕ್‌ಮೋದಿ ಎಂಬ ಹ್ಯಾಷ್‌ಟ್ಯಾಗ್‌ಗಳು ಎಷ್ಟೊಂದು ಜನಪ್ರಿಯವಾಗಿತ್ತು ಎಂಬುದರಿಂದ ಇದು ಸ್ಪಷ್ಟವಾಗುತ್ತದೆ. ಇದು 2019ರ ಚುನಾವಣೆಯಲ್ಲಿ ಮತ್ತೊಮ್ಮೆ ಗಟ್ಟಿಯಾಗಿ ಸಾಬೀತಾಯಿತು; ಆಗ ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟವೂ ಸಂಪೂರ್ಣವಾಗಿ ನೆಲೆ ಕಳೆದುಕೊಂಡು, ಯುಪಿಎ 39ರಲ್ಲಿ 38 ಸೀಟುಗಳನ್ನು ಗೆದ್ದಿತ್ತು.

ಆಡಳಿತರೂಢ ಎಐಎಡಿಎಂಕೆಯನ್ನು ಹತೋಟಿಗೆ ತಂದ ನಂತರ ಬಿಜೆಪಿಯು ತಮಿಳುನಾಡಿನಲ್ಲಿ ಎಂದೂ ಕಾಣದ ರಾಜಕೀಯ ಶೈಲಿಯನ್ನು ತರಲು ಪ್ರಯತ್ನಿಸಿತು. ಅದರ ಮೊದಲ ತಂತ್ರಗಾರಿಕೆಯ ಅಂಗವಾಗಿ, ರಾಜ್ಯದಲ್ಲಿ ಸಾಮಾಜಿಕ ನ್ಯಾಯವನ್ನು ಮುನ್ನೆಲೆಗೆ ತಂದ ಪೆರಿಯಾರ್ ಮತ್ತು ದ್ರಾವಿಡ ರಾಜಕೀಯವನ್ನು ಬಹಿರಂಗವಾಗಿ ಟೀಕಿಸಿ, ಅದನ್ನು ಅವಮಾನಿಸುವ ತಂತ್ರವನ್ನು ಬಳಸಿತು. ಅವರ ಮನುಸ್ಮೃತಿ ಮತ್ತು ವೇದ ಬರಹಗಳ ಬ್ರಾಹ್ಮಣ್ಯದ ತಂತ್ರಗಳನ್ನು ಪ್ರಶ್ನಿಸಿ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿದ್ದ ’ಕರ್ರುಪರ್ ಕೂಟಮ್’ ಎಂಬ ಗುಂಪಿನ ಬಗ್ಗೆ ಕೃತಕವಾಗಿ ವಿವಾದವನ್ನು ಸೃಷ್ಟಿಸಲಾಯಿತು. ಭಾರತದ ಇತರ ಭಾಗಗಳಲ್ಲಿ ನಡೆದಂತೆ, ತಮಿಳುನಾಡಿನಲ್ಲಿ ರಾಮ ಅಥವಾ ರಾಮಮಂದಿರದ ಮಾತುಗಳು ಸಂಚಲನ ಮೂಡಿಸುವುದಿಲ್ಲ. ಹಾಗಾಗಿ ಬಿಜೆಪಿಯು ಲಾರ್ಡ್ ಮುರುಗನ್ ಅವರನ್ನು ಪೆರಿಯಾರ್ ಮತ್ತು ದ್ರಾವಿಡ ಚಿಂತಕರು ಅವಮಾನ ಮಾಡಿದ್ದರು ಎಂಬ ಪ್ರಚಾರ ಶುರು ಮಾಡಿತು. ರಥಯಾತ್ರೆ ಮಾಡಿದಂತೆ, ಇಲ್ಲಿಯೂ ಕೋಮುವಾದಿ ಭಾವನೆಗಳನ್ನು ಕೆರಳಿಸಲು ವೇಲ್ ಯಾತ್ರೆಗಳನ್ನು ಪ್ರಾರಂಭಿಸಿದರು. ಅದೃಷ್ಟವಷಾತ್, ಇಡೀ ಯೋಜನೆ ಫ್ಲಾಪ್ ಆಯಿತು ಹಾಗೂ ಮೊದಲ ಯತ್ನದಲ್ಲೇ ಮಣ್ಣುಮುಕ್ಕುವಂತಾಯಿತು.
ಅವರು ದಲಿತ ಪ್ಯಾಂಥರ್ ನಾಯಕ ತಿರುಮವಲವನ್ ಅವರ ಹೇಳಿಕೆಗಳನ್ನು ತಿರುಚಿ ಪ್ರಚಾರ ಮಾಡಲಾರಂಭಿಸಿದರು. ಆ ನಾಯಕ ಮಹಿಳೆಯ ವಿರುದ್ಧ ಅವಹೇಳನಕಾರಿಯಾದ ಹೇಳಿಕೆಗಳನ್ನು ನೀಡಿದ್ದರು ಎಂದು ಪ್ರಚಾರ ಮಾಡಿದರು, ವಾಸ್ತವದಲ್ಲಿ ಆ ನಾಯಕರು ಮನುಸ್ಮೃತಿಯಲ್ಲಿ ಇರುವ ಉದ್ದೇಶಗಳನ್ನು ಪ್ರಶ್ನಿಸಿದ್ದರು. ಹಾಗಾಗಿ ಈ ತಂತ್ರವೂ ಫಲಕಾರಿಯಾಗಲಿಲ್ಲ. ಅಲ್ಲದೆ ತಮಿಳನಾಡಿನ ಎಲ್ಲಾ ಚಿಂತಕರು ಆ ಜನಪ್ರಿಯ ದಲಿತ ನಾಯಕನ ಹಿಂದೆ ಗಟ್ಟಿಯಾಗಿ ನಿಂತರು. ಚುನಾವಣೆಗೆ ಮುನ್ನ, ಬಿಜೆಪಿಯು ಜಾತಿ ರಾಜಕೀಯ ಮಾಡುತ್ತ, ಪಲ್ಲಾರ ಸಮುದಾಯದ ಹೆಸರನ್ನು ದೇವೆಂದ್ರ ಕುಲ ವೆಲ್ಲಾಲರ ಎಂದು ಬದಲಿಸಿತು ಹಾಗೂ ವಣ್ಣಿಯಾರ್ ಸಮುದಾಯಕ್ಕೆ ಆಂತರಿಕ ಮೀಸಲಾತಿ ನೀಡಿತು. ಈ ಎರಡೂ ಯತ್ನಗಳು ಜನರ ಭಾವನೆಗಳ ಮೇಲೆ ಅಂತಹ ಪರಿಣಾಮ ಬೀರಲಿಲ್ಲ. ಪಲಾರ್ ಸಮುದಾಯದ ಹಕ್ಕುಗಳಿಗಾಗಿ ದುಡಿಯುತ್ತಿದ್ದ ಪುತಿಯ ತಮಿಲಗಂ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತು.
ನಿರೀಕ್ಷೆಯಂತೆ, ಬಿಜೆಪಿಯು ಎಐಎಡಿಎಂಕೆ ಮತ್ತು ಪಟ್ಟಾಲಿ ಮಕ್ಕಳ ಕಚ್ಚಿ (ಪಿಎಂಕೆ)ಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿತು. ಕಾಂಗ್ರೆಸ್ ಪಕ್ಷವು ಡಿಎಂಕೆ ಮತ್ತು ಇತರ ಪ್ರಗತಿಪರರೊಂದಿಗೆ ತನ್ನ ಮೈತ್ರಿಯನ್ನು ಮುಂದುವರೆಸಿ 2019 ರಂತೆ ಈ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿತು. ಇದು ಅವರ ಭಾವನೆಗಳು ಬದಲಾಗಿಲ್ಲ ಮತ್ತು ತನ್ನ ಸೈದ್ಧಾಂತಿಕ ನಿಲುವಿಗೆ ಬದ್ಧರಾಗಿದ್ದಾರೆ ಎಂದು ತೋರಿಸಿತು. ಬಿಜೆಪಿ ಒಂದು ಹಂತದಲ್ಲಿ ಎಷ್ಟು ಆತ್ಮವಿಶ್ವಾಸದಿಂದ ಬೀಗುತ್ತಿತ್ತು ಎಂದರೆ, ರಾಜ್ಯವನ್ನು ಆಳುವ ಪಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಯಾರು ಆಗಿರುತ್ತಾರೆ ಎಂಬುದನ್ನು ತಾನೇ ನಿರ್ಧರಿಸುವುದು ಎಂದು ಹೇಳಿತ್ತು. ಬಿಜೆಪಿಯ ಇಂತಹ ಹೇಳಿಕೆಗಳು ತಮಿಳು ಜನತೆಗೆ ಸತತವಾಗಿ ಸಿಟ್ಟುಬರಿಸಿವೆ.
ಚುನಾವಣೆಗೆ ಮುನ್ನ ಸ್ಪಷ್ಟವಾಗಿದ್ದೇನೆಂದರೆ, ಇದು ಬಿಜೆಪಿ ಮತ್ತು ತಮಿಳುನಾಡಿನ ನಡುವಿನ ಸ್ಪರ್ಧೆ ಎಂದು. ಈ ಸಲ, ಎಲ್ಲಾ ರಾಜಕೀಯ ಪಕ್ಷಗಳು, ಪೆರಿಯಾರ್ ಚಿಂತಕರು ಹಾಗೂ ಕಮ್ಯುನಿಸ್ಟರು ಬಿಜೆಪಿಯನ್ನು ವಿರೋಧಿಸುತ್ತ ಒಂದೇ ವೇದಿಕೆಗೆ ಬಂದರು. ಇದು ತಮಿಳನಾಡಿನ ಅಂತಃಸ್ಸಾಕ್ಷಿ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಸಾಮಾಜಿಕ ನ್ಯಾಯದ ಅವರ ಪರಿಕಲ್ಪನೆಗಾಗಿ ನಡೆದ ಹೋರಾಟವಾಗಿತ್ತು.
ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿತ್ತು. ಎಲ್ಲರ ನಿರೀಕ್ಷೆಯಂತೆ, ಡಿಎಂಕೆಯು 235 ಸ್ಥಾನಗಳಲ್ಲಿ 159ರಲ್ಲಿ ಗೆದ್ದು ಭಾರಿ ಬಹುಮತ ಪಡೆದುಕೊಂಡಿದೆ. ಹಾಗೂ ಎಐಎಡಿಎಂಕೆ ಪಕ್ಷವು 75 ಸ್ಥಾನದಲ್ಲಿ ಗೆದ್ದಿದೆ. ಈ ಫಲಿತಾಂಶ ಅನೇಕ ವಿಷಯಗಳನ್ನು ಸಾಬೀತುಪಡಿಸಿದೆ. ಮೊದಲನೆಯದಾಗಿ, ತಮಿಳನಾಡಿನ ಜನರು ಇನ್ನೂ ದ್ರಾವಿಡ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದಾರೆ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಕಾರಣಕ್ಕಾಗಿ ಎಐಎಡಿಎಂಕೆಯನ್ನು ಶಿಕ್ಷಿದ್ದಾರೆಯೇ ಹೊರತು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಇದು ಎಐಎಡಿಎಂಕೆ ಸಂಪೂರ್ಣವಾಗಿ ನಾಶವಾದಾಗ ರಾಜ್ಯದಲ್ಲಿ ಎರಡನೇ ಪ್ರಮುಖ ಪಕ್ಷ ಆಗಬೇಕು ಎಂಬ ಯೋಜನೆಯನ್ನು ತಲೆಕೆಳಗಾಗಿಸಿದೆ. ಎರಡನೆಯದಾಗಿ, ಒಳ್ಳೆಯ ಆಡಳಿತ ನೀಡುವುದಾಗಿ ಆಶ್ವಾಸನೆ ನೀಡಿ, ಜನಪ್ರಿಯ ನಟರು ಮುನ್ನೆಡೆಸುತ್ತಿರುವ ಹೊಸ ಪಕ್ಷಗಳು ದ್ರಾವಿಡ ಐಡೆಂಟಿಟಿಗೆ ಮತ್ತು ಸಿದ್ಧಾಂತಕ್ಕೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಆದರೆ ಕೆಲವು ಆತಂಕಕಾರಿ ವಿಷಯಗಳೂ ಇವೆ. ಬಿಜೆಪಿಯು ನಾಲ್ಕು ಸೀಟುಗಳನ್ನು ಗೆದ್ದಿರುವುದೂ ಗಮನಾರ್ಹ ಯಶಸ್ಸಾಗಿದೆ ಏಕೆಂದರೆ ಅವರಿಗೆ ಒಂದು ಸಣ್ಣ ಕಿಂಡಿ ಬೇಕಾಗಿತ್ತು. ವನತಿ ಸ್ರೀನಿವಾಸನ್ ಅವರನ್ನು ಹೊರತುಪಡಿಸಿ ಪಕ್ಷದ ಪಧಾಧಿಕಾರಿಗಳೆಲ್ಲರೂ ಸೋತಿದ್ದರೂ, ತಮಿಳುನಾಡಿನಲ್ಲಿ ಒಳಕ್ಕೆ ನುಗ್ಗಿದ್ದಾರೆ ಎಂಬ ಮಹತ್ವದ ಅಂಶವಾಗಿದೆ. ಇದರ ಬಗ್ಗೆ ತಮಿಳು ದ್ರಾವಿಡ ಚಿಂತಕರು ಒಟ್ಟಾರೆಯಾಗಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಎರಡನೆಯ ಆತಂಕಕಾರಿ ಬೆಳವಣಿಗೆಯೆಂದರೆ, ತಮಿಳು ರಾಷ್ಟ್ರೀಯವಾದಿ ಪಕ್ಷವಾದ ನಾಮ್ ತಮಿಳರ್ ಕಚ್ಚಿಯ ಬೆಳವಣಿಗೆ, ಇದನ್ನು ಮಾಜಿ ಸಿನೆಮಾ ನಿರ್ದೇಶಕ ಸೀಮಾನ್ ಮುನ್ನೆಡೆಸುತ್ತಿದ್ದಾರೆ. ಇದು ಪ್ರತ್ಯೇಕತೆಯ ಸಿದ್ಧಾಂತವನ್ನು ಹೊಂದಿರುವ ಅತ್ಯಂತ ನಿರುಂಕುಶವಾದ ಪಕ್ಷವಾಗಿದೆ. ಮುಂದಿನ ದಿನಗಳಲ್ಲಿ ಈ ಪಕ್ಷ ಮತ್ತು ಬಿಜೆಪಿಯ ವಿರುದ್ಧ ಹೋರಾಡುವುದು ತಮಿಳನಾಡಿನ ಸಮಸ್ತರ ಜವಾಬ್ದಾರಿ ಆಗಿದೆ.
ಚುನಾವಣೆಯ ಫಲಿತಾಂಶ ಏನೇ ಆಗಿರಲಿ, ಇದು ಪೆರಿಯಾರ್ ಮತ್ತು ಅಂಬೇಡ್ಕರ್ ಅವರ ಪರಿಕಲ್ಪನೆಗಳು ಮತ್ತು ಬೋಧನೆಗಳನ್ನು ಮರುಜೀವ ನೀಡಿದಂತಾಗಿದೆ. ಹಾಗೂ ತಮಿಳನಾಡಿನ ಯುವಜನರನ್ನು ರಾಜಕೀಯದಲ್ಲಿ ಒಳಗೊಳ್ಳುವಂತೆ ಮಾಡಿದೆ. ಹಾಗಾಗಿ, ತಮಿಳನಾಡಿದ ಸ್ಪಿರಿಟ್‌ಅನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಹೇಳಬೇಕಿದೆ. ಗೋಡೆಯ ಬರಹ ಸ್ಪಷ್ಟವಾಗಿದೆ: ತಮಿಳನಾಡಿನಲ್ಲಿ ಕೋಮುವಾದಿ ರಾಜಕೀಯಕ್ಕೆ ಯಾವುದೇ ಸ್ಥಾನವಿಲ್ಲ.

ಸಸಿಕಾಂತ್ ಸೆಂಥಿಲ್
ತಮಿಳು ನಾಡಿನ ಮೂಲದವರಾದ ಸಸಿಕಾಂತ್ ಸೆಂಥಿಲ್ ಕರ್ನಾಟಕದ ರಾಯಚೂರು ಮತ್ತು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ದೇಶದಲ್ಲಿ ಬೆಳೆಯುತ್ತಿದ್ದ ಮತೀಯ ಶಕ್ತಿಗಳ ವಿರುದ್ಧ ಸೆಟೆದು ನಿಂತು ತಮ್ಮ ನೌಕರಿಗೆ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.
(ಕನ್ನಡಕ್ಕೆ): ರಾಜಶೇಖರ್ ಅಕ್ಕಿ


