HomeUncategorizedಪಂಚರಾಜ್ಯ ಫಲಿತಾಂಶ ಬಿಜೆಪಿಗೆ ಹಿನ್ನಡೆ ಏನೋ ಆಗಿದೆ, ಆದರೆ..: ಪ್ರೊ. ಎ ನಾರಾಯಣ

ಪಂಚರಾಜ್ಯ ಫಲಿತಾಂಶ ಬಿಜೆಪಿಗೆ ಹಿನ್ನಡೆ ಏನೋ ಆಗಿದೆ, ಆದರೆ..: ಪ್ರೊ. ಎ ನಾರಾಯಣ

- Advertisement -
- Advertisement -

ಈ ವಾರದ ಆರಂಭದಲ್ಲಿ ಪ್ರಕಟವಾದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಎಂಬ ದೈತ್ಯ ರಾಜಕೀಯ ಶಕ್ತಿಗೆ ದೊಡ್ಡ ಮಟ್ಟದ ಸಮಾಧಾನ ತರುವಂತಹದ್ದು ಏನೂ ಇಲ್ಲ. ಹಾಗಂತ ಈ ಚುನಾವಣೆಯ ಫಲಿತಾಂಶ ಕಂಡು ಪ್ರತಿಪಕ್ಷಗಳು ಎಷ್ಟರ ಮಟ್ಟಿಗೆ ಸಮಾಧಾನ ಹೊಂದಬಹುದು? ಎರಡು ರಾಜ್ಯಗಳಲ್ಲಿ ಜಯಿಸಿ ಇತರ ಮೂರು ಕಡೆ ಹಿನ್ನಡೆ ಅನುಭವಿಸಿದ ಬಿಜೆಪಿಗೆ ಸುರಂಗದ ಕೊನೆಯಲ್ಲೆಲ್ಲೋ ಒಂದು ಬೆಳಕು ಕಂಡಂತೆ ಭಾಸವಾದರೆ ಅದು ಭ್ರಮೆಯಲ್ಲ. ಆ ಮೂರು ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಿದ ಪಕ್ಷಗಳಿಗೆ ಮುಂದಿನ ಐದು ವರ್ಷಗಳ ನಂತರದ ದಾರಿ ಗೋಜಲು ಗೋಜಲಾಗಿ ಕಾಣಿಸಿದರೆ ಅದೂ ಕೂಡಾ ವಸ್ತುಸ್ಥಿತಿ. ಎಲ್ಲಾ ಚುನಾವಣೆಗಳ ಫಲಿತಾಂಶಗಳಂತೆಯೇ ಈ ಸಾಲಿನ ರಾಜ್ಯ ಚುನಾವಣೆಗಳ ಫಲಿತಾಂಶ ಕೂಡಾ ಸದ್ಯಕ್ಕೆ ಹೇಳುವ ಸತ್ಯ ಮತ್ತು ಶಾಶ್ವತವಾಗಿ ಬಿಟ್ಟುಹೋಗುವ ಸತ್ಯ ಬೇರೆ ಬೇರೆಯಾಗಿಯೇ ಇವೆ.

ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಬಿಜೆಪಿ ಎರಡನೆಯ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ. ಅಸ್ಸಾಂನ ವಿಶಿಷ್ಟ ಜನಾಂಗೀಯ ರಾಜಕೀಯದ ಹಿನ್ನೆಲೆಯಲ್ಲಿ ಬಿಜೆಪಿಯ ಮತೀಯ ರಾಜಕೀಯ ತಂತ್ರ ಅಲ್ಲಿ ಫಲಿಸಿದಂತೆ ಕಾಣುತ್ತದೆ. ಹಾಗೆಯೇ ಪಾಂಡಿಚೇರಿಯಲ್ಲಿ ಬಿಜೆಪಿ ಸ್ಥಳೀಯ ಎನ್.ಆರ್. ಕಾಂಗ್ರೆಸ್ ಜತೆ ಸೇರಿ ಸೆಣಸಿ ಚುನಾವಣೆ ಗೆದ್ದಿದೆ ಎನ್ನುವಲ್ಲಿ ಕೇಸರಿ ಪಕ್ಷಕ್ಕೆ ದಕ್ಷಿಣದ ಎರಡನೆಯ ಬಾಗಿಲು ತೆರೆದುಕೊಂಡಿದೆ. ಅದರಾಚೆಗೆ ಕೇರಳದಲ್ಲಿ ಬಿಜೆಪಿಗೆ ಆದದ್ದು ದೊಡ್ಡ ಮಟ್ಟಿನ ನಿರಾಶೆ. ಗೆದ್ದು ಅಧಿಕಾರ ಹಿಡಿಯದೇ ಹೋದರೂ ’ಕಿಂಗ್ ಮೇಕರ್’ ಆಗಬಲ್ಲಷ್ಟು ಸ್ಥಾನಗಳನ್ನು ಕೇರಳದಲ್ಲಿ ಪಡೆದೆ ತೀರುತ್ತೇವೆ ಅಂತ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ರೀತಿಯ ದುರ್ಮಂತ್ರಾಸ್ತಗಳನ್ನು ಪ್ರಯೋಗಿಸಿದ ಮೇಲೂ, ಕೇರಳದಲ್ಲಿ ಬಿಜೆಪಿ ಇದ್ದ ನೆಲೆಯನ್ನೂ ಕಳೆದುಕೊಂಡಿದೆ. ಹೋದ ಬಾರಿ ಒಂದು ಸ್ಥಾನವನ್ನು ಗೆದ್ದುಕೊಂಡ ಬಿಜೆಪಿ ಈ ಬಾರಿ ಒಂದು ಸ್ಥಾನವನ್ನೂ ಗೆದ್ದಿಲ್ಲ. ಸಾಲದು ಎಂಬಂತೆ, ಅಲ್ಲಿ ಬಿಜೆಪಿಯ ಮತಗಳಿಕೆಯ ಪ್ರಮಾಣ ಕೂಡಾ ಕುಸಿದಿದೆ. ಪ್ರತೀ ಚುನಾವಣೆಯಲ್ಲೂ ಸಿಪಿಎಂ ನೇತೃತ್ವದ ಎಡ ಪ್ರಜಾತಾಂತ್ರಿಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗ (ಯುಡಿಎಫ್)ಗಳನ್ನೂ ಪರ್ಯಾಯವಾಗಿ ಆರಿಸುತ್ತಾ ಬಂದಿದ್ದ ಕೇರಳದ ಮತದಾರರು ಈ ಬಾರಿ ಎಲ್‌ಡಿಎಫ್ ಸರಕಾರವನ್ನು ಮರು ಚುನಾಯಿಸಿದ್ದಾರೆ.

ತಮಿಳುನಾಡಿನಲ್ಲಿ ಆದ ಭ್ರಮನಿರಸನವೂ ಕಡಿಮೆಯೇನಲ್ಲ. ಎಐಡಿಎಂಕೆಯನ್ನು ಬಗಲಿಗೆ ಕಟ್ಟಿಕೊಂಡು ದ್ರಾವಿಡ ನಾಡನ್ನು ವಶಪಡಿಸಿಕೊಳ್ಳುತ್ತೇವೆ, ಪೆರಿಯಾರ್ ನೆನಪನ್ನು ತಮಿಳು ಮಣ್ಣಿನಿಂದ ತೊಳೆದು ಚೆಲ್ಲುತ್ತೇವೆ ಅಂತ ಹೊರಟಿದ್ದ ಬಿಜೆಪಿಗೆ ಅಲ್ಲೂ ಆದದ್ದು ನಿರಾಶೆಯೇ. ಎಐಡಿಎಂಕೆ ಸೋತಿದೆ, ಬಿಜೆಪಿಗೆ ನಾಲ್ಕು ಸ್ಥಾನಗಳು ಬಂದಿವೆ. ಹತ್ತು ವರ್ಷಗಳ ನಂತರ, ಅಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದಿದೆ. ಇನ್ನು, ಅತ್ಯಂತ ಕುತೂಹಲಕಾರಿ ಚುನಾವಣಾ ಕಾದಾಟಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಂತೂ 200 ಸೀಟುಗಳನ್ನು ಗೆದ್ದು ಅಧಿಕಾರ ಹಿಡಿದೇಬಿಟ್ಟೆವು ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಾ ತಿರುಗಾಡುತ್ತಿದ್ದ ಬಿಜೆಪಿಯ ನಾಯಕರು ಈಗ ತಮ್ಮ ಪಾಲಿಗೆ ಬಂದ 75ಸೀಟುಗಳಲ್ಲೇ ತೃಪ್ತಿಪಡಬೇಕಿದೆ. ಇದು ಚುನಾವಣಾ ಫಲಿತಾಂಶಗಳ ಸ್ಥೂಲ ಚಿತ್ರಣ.

ಈ ರೀತಿ ನೋಡಿದಾಗ ಈ ಚುನಾವಣಾ ಫಲಿತಾಂಶ ಬಿಜೆಪಿ ವಿರೋಧಿಪಕ್ಷಗಳ ಮೊಗದಲ್ಲಿ ನಗು ತರಿಸಬೇಕು. ಈ ಪಕ್ಷಗಳು ಮಾತ್ರವಲ್ಲ, ಚುನಾವಣೆ ಗೆಲ್ಲಲು ಬಿಜೆಪಿ ಬಳಸುವ ಭೀಕರ ಪ್ರಜಾತಂತ್ರ ವಿರೋಧಿ ವಿಧಾನಗಳ ಬಗ್ಗೆ ಆತಂಕಿತರಾಗಿದ್ದ ದೇಶದ ಪ್ರಜ್ಞಾವಂತ ಜನತೆಗೂ ಒಂದು ರೀತಿಯ ಸಮಾಧಾನ ತರುವಂತಹ ಫಲಿತಾಂಶ ಇದು ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಫಲಿತಾಂಶಗಳನ್ನು ಇನ್ನೊಂದು ರೀತಿಯಲ್ಲಿ ನೋಡೋಣ. ಮೊದಲಿಗೆ ಪಶ್ಚಿಮ ಬಂಗಾಳದ ಫಲಿತಾಂಶವನ್ನು ಪರಿಶೀಲಿಸಿದರೆ ಅಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ಸು ಬಿಜೆಪಿಯನ್ನು ಸೋಲಿಸಿ ಮೂರನೆಯ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಬಿಜೆಪಿ ಆ ರಾಜ್ಯದ ಇತರ ಎಲ್ಲಾ ಪಕ್ಷಗಳನ್ನೂ ಸೋಲಿಸಿ ಅಲ್ಲಿ ಪ್ರಧಾನ ಪ್ರತಿಪಕ್ಷದ ಸ್ಥಾನ ಪಡೆದಿದೆ ಎನ್ನುವುದು.

ಹೋದ ಬಾರಿ (2019) ಲೋಕಸಭಾ ಚುನಾವಣೆ ನಡೆಯುವವರೆಗೆ ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಅತಿ ಹೆಚ್ಚು ಎಂದರೆ ಕೇವಲ ಮೂರು ಸ್ಥಾನಗಳನ್ನು ಹೊಂದಿ ನಗಣ್ಯ ಪಕ್ಷವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ತನ್ನ ಸ್ಥಾನಗಳ ಸಂಖ್ಯೆಯನ್ನು ಎಪ್ಪತ್ತೈದಕ್ಕೆ ಹೆಚ್ಚಿಸಿಕೊಂಡಿದೆ. ಈತನಕ ಯಾವುದೇ ನೆಲೆಯನ್ನೇ ಹೊಂದಿರದ ಒಂದು ರಾಜ್ಯದಲ್ಲಿ ಬಿಜೆಪಿ ಹೊಸದಾಗಿ ತನ್ನನ್ನು ತಾನು ಪ್ರಬಲವಾಗಿ ಪ್ರತಿಷ್ಠಾಪಿಸಿಕೊಂಡಿದೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೆದ್ದು ಅಧಿಕಾರ ಪಡೆಯದೇ ಹೋದರೂ, ಅದು ಆ ರಾಜ್ಯದ ವಿಧಾನ ಸಭೆಯಲ್ಲೀಗ ಪ್ರಮುಖ ಪ್ರತಿಪಕ್ಷ. ತೃಣಮೂಲ ಕಾಂಗ್ರೆಸ್ಸಿನ ಎದುರಿಗೆ ಸೋತ ಬಿಜೆಪಿ ಉಳಿದೆಲ್ಲಾ ಪ್ರತಿಪಕ್ಷಗಳನ್ನು ಮಣಿಸಿದೆ. ಸೊನ್ನೆ ಇದ್ದದ್ದು ಒಂದಾಗುವುದು ನಿಜವಾದ ಗೆಲುವು, ಒಂದಿದ್ದದ್ದು ಎರಡಾಗುವುದು ಅಷ್ಟು ದೊಡ್ಡ ಗೆಲುವಲ್ಲ.

ಈ ಅರ್ಥದಲ್ಲಿ ಬಿಜೆಪಿಯ ಸೋಲಿನಲ್ಲಿ ಅದರ ವಿರೋಧ ಪಕ್ಷಗಳು ದೊಡ್ಡ ಸಮಾಧಾನ ಹೊಂದುವ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವಿದೆ. ಬಿಜೆಪಿ. ಪಶ್ಚಿಮ ಬಂಗಾಳದಲ್ಲಿ ಈ ಹಂತಕ್ಕೆ ಬೆಳೆಯಲು ಬಿಜೆಪಿ ಪ್ರಯೋಗಿಸಿದ ದಾಳಗಳು ಭಯಾನಕವಾಗಿದ್ದವು. ಇನ್ನಷ್ಟು ಎತ್ತರಕ್ಕೆ ಬೆಳೆಯಲು ಆ ಪಕ್ಷ ಅಲ್ಲಿ ಏನೇನು ಮಾಡಬಹುದು ಎನ್ನುವುದೇ ಈಗ ಕುತೂಹಲದ ವಿಷಯ. ಈ ಬಾರಿಯ ಅವಮಾನಕ್ಕೆ ಸೇಡು ಎಂಬಂತೆಯೂ, ಮುಂದಿನ ಬಾರಿ ಅಧಿಕಾರ ಪಡೆದೇ ತೀರಬೇಕು ಎಂಬಂತೆಯೂ ಬಿಜೆಪಿ ಅಲ್ಲಿ ಫೀಲ್ಡಿಗೆ ಇಳಿದುಬಿಟ್ಟರೆ ಅದು ಈ ದೇಶದ ರಾಜಕೀಯವನ್ನು ಯಾವ ಮಟ್ಟಕೆ ಒಯ್ಯಬಹುದು ಎನ್ನುವ ಪ್ರಶ್ನೆಯನ್ನು ಈಗ ಮುಖ್ಯವಾಗಿ ಕೇಳಬೇಕಿದೆ. ಚುನಾವಣಾ ರಾಜಕೀಯದಲ್ಲಿ ಯಥೇಚ್ಛವಾಗಿ ಹಿಂಸೆಯನ್ನು ಬಳಸುವುದರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಕೂಡಾ ಹಿಂದೆ ಬಿದ್ದಿಲ್ಲ ಎನ್ನುವುದು ವಾಸ್ತವ. ಆದರೆ ಪ್ರತಿ ಚುನಾವಣೆಯಲ್ಲೂ ಭಾರತೀಯ ಮತದಾರನ ಎದುರು ಇರುವುದು ಕಡಿಮೆ ವಿನಾಶಕಾರಿ ಶಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮಾತ್ರ.

ಕೇರಳದಲ್ಲೂ ಅಷ್ಟೇ. ಅಲ್ಲಿ ಬಿಜೆಪಿ ಈ ಬಾರಿ ಕಳೆದ ಬಾರಿಗಿಂತಲೂ ಕಳಪೆ ಸಾಧನೆಗೈದಿರಬಹುದು. ಇದಕ್ಕೆ ಕಾರಣಗಳೇನಿರಬಹುದು ಎನ್ನುವುದರ ಬಗ್ಗೆ ವಿಶದವಾದ ಅಧ್ಯಯನದ ಅಗತ್ಯವಿದೆ. ಆದರೆ ಆ ರಾಜ್ಯದ ರಾಜಕೀಯದ ಗತಿ ನೋಡಿದರೆ ಅಲ್ಲಿ ಮುಂದೊಂದು ದಿನ ಬಿಜೆಪಿ ಪ್ರಬಲವಾಗಿ ನೆಲೆಯೂರುವ ಅವಕಾಶವಂತೂ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಯಿಂದ ಚುನಾವಣೆಗೆ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದು. ಇನ್ನು ಕಾಂಗ್ರೆಸ್ಸಿನಲ್ಲಿ ಇದ್ದು ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ ಅಂತ ಒಂದಷ್ಟು ಮಂದಿ ನಾಯಕರು ಹೊಸ ನೆಲೆಯ ಹುಡುಕಾಟಕ್ಕೆ ಹೊರಟರೆ ಅವರಿಗೆ ಸುಲಭವಾಗಿ ಲಭಿಸುವ ವೇದಿಕೆ ಬಿಜೆಪಿಯೇ ಆಗಿರುತ್ತದೆ.

ಹೀಗೆ ನಿರ್ನಾಮವಾಗುತ್ತಿರುವ ಪಕ್ಷಗಳಿಂದ ಹೊರಬಿದ್ದವರನ್ನೇ ನೆಚ್ಚಿಕೊಂಡು ಬಿಜೆಪಿ ಬಹಳಷ್ಟು ರಾಜ್ಯಗಳಲ್ಲಿ ಬೆಳೆದಿದೆ. ಆದುದರಿಂದ ಈ ಬಾರಿ ಕೇರಳದಲ್ಲಿ ಎಡರಂಗದ ಗೆಲುವು ಪರೋಕ್ಷವಾಗಿ ಬಿಜೆಪಿಯ ಗೆಲುವೂ ಆಗಿದೆ. ಒಂದು ವೇಳೆ ಈ ಬಾರಿ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ರಾಜಕೀಯವಾಗಿ ನೆಲೆಯೂರಲು ಅಲ್ಲಿ ಬಿಜೆಪಿ ಇನ್ನೂ ಕಾಯಬೇಕಿತ್ತು. ಈಗ ಕೇರಳದಲ್ಲೂ ಬಿಜೆಪಿಗೆ ಒಂದು ಚಾರಿತ್ರಿಕ ವೇದಿಕೆ ನಿರ್ಮಾಣವಾದ ಹಾಗೆ ಕಾಣಿಸುತ್ತದೆ. ಇದನ್ನು ತಪ್ಪಿಸಬೇಕಾದರೆ, ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಅಂತಹದ್ದೊಂದು ಸಾಧ್ಯತೆ ಕೇರಳದ ಕಾಂಗ್ರೆಸ್ಸಿನೊಳಗೆ ಈಗಂತೂ ಕಾಣಿಸುತ್ತಿಲ್ಲ.

ತಮಿಳುನಾಡು ಮುಖ್ಯಮಂತ್ರಿಯಾಗಿ ಎಂ.ಕೆ. ಸ್ಟಾಲಿನ್ ಪ್ರಮಾಣ ವಚನ | Naanu gauri

ಆದರೆ, ಬಿಜೆಪಿ ಮಾತ್ರ ಸೋತ ತಕ್ಷಣ ’ಇನ್ನೈದು ವರ್ಷದಲ್ಲಿ ಕೇರಳವನ್ನು ವಶಪಡಿಸಿಕೊಂಡೆ ತೀರುತ್ತೇವೆ’ ಅಂತ ಘೋಷಿಸಿದೆ. ಕೇರಳದಲ್ಲಿ ಬಿಜೆಪಿ ಈ ತನಕ ಬಳಸಿದ ರಾಜಕೀಯ ಪಟ್ಟುಗಳು ಮತ್ತು ನುಡಿಗಟ್ಟುಗಳು ಕೆಲಸಕ್ಕೆ ಬಂದಿಲ್ಲ. ಆದರೆ, ಅಧಿಕಾರ ಹಿಡಿಯಲು ಆ ಪಕ್ಷ ಹೊಸ ಹೊಸ ಪಟ್ಟುಗಳನ್ನು ಆವಿಷ್ಕರಿಸಿಕೊಳ್ಳುತ್ತಲೇ ಇರುತ್ತದೆ. ನಾಳೆ ಅದಕ್ಕೆ ಅಲ್ಲಿ ಕಾಂಗ್ರೆಸ್ಸಿನಿಂದ ವಲಸೆ ಬಂದವರನ್ನು ಬಳಸಿಕೊಂಡು ಬೆಳೆಯುವ ಅನಿವಾರ್ಯತೆ ಎದುರಾದರೆ, ಗೋವಾದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ವರಸೆ ಬದಲಿಸಿಕೊಂಡು ಅಧಿಕಾರ ಪಡೆದಂತೆ, ಕೇರಳದಲ್ಲಿ ಕೂಡಾ ಅದನ್ನೇ ಮಾಡುವ ಸಾಧ್ಯತೆ ಇದೆ. ಕೇರಳದ ಅಲ್ಪಸಂಖ್ಯಾತರ ಪೈಕಿ ಕ್ರಿಶ್ಚಿಯನ್ನರನ್ನು ಬಳಸಿಕೊಂಡು ಹೊಸ ಸಾಮಾಜಿಕ ಸಮೀಕರಣವನ್ನು ಬಿಜೆಪಿ ನಡೆಸಲಿದೆ ಎನ್ನುವ ಚರ್ಚೆಗಳು ಈಗಾಗಲೇ ಕೇಳಿಸುತ್ತಿವೆ.

ತಮಿಳುನಾಡು ಮಾತ್ರ ಸದ್ಯಕ್ಕೆ ಬಿಜೆಪಿಯ ರಾಜಕೀಯಕ್ಕೆ ಪ್ರಬಲವಾದ ಒಂದು ಪ್ರಾದೇಶಿಕ ಪರ್ಯಾಯವನ್ನು ಹೊಂದಿರುವುದು. ಅಲ್ಲಿ ಇನ್ನೂ ದ್ರಾವಿಡ ರಾಜಕೀಯದ ಛಾಯೆ ಉಳಿದಿದೆ. ಬಿಜೆಪಿಯ ’ಒಂದು ರಾಷ್ಟ್ರ ಒಂದು ಒಂದು ಧರ್ಮದ ಪ್ರತಿಪಾದನೆಗೆ ತಮಿಳುನಾಡಿನ ಜನ ಅಷ್ಟಾಗಿ ಸ್ಪಂದಿಸಲಿಲ್ಲ ಎನ್ನುವುದು ಮಾತ್ರವಲ್ಲ, ಅದನ್ನು ಪ್ರಬಲವಾಗಿ ವಿರೋಧಿಸಿದರು ಕೂಡಾ. ಈ ಪ್ರತಿರೋಧ ಎಷ್ಟರ ಮಟ್ಟಿಗಿತ್ತು ಎಂದರೆ, ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡ ನಂತರವೂ ಎಐಡಿಎಂಕೆ ಪಕ್ಷದ ನಾಯಕರು ನರೇಂದ್ರ ಮೋದಿಯವರ ಜತೆ ವೇದಿಕೆಯಲ್ಲಿ ಅಥವಾ ಪೋಸ್ಟರ್‌ಗಳಲ್ಲಿ ಕಾಣಿಸಿಕೊಳ್ಳಲು ಅಂಜುತ್ತಿದ್ದರು. ತಮಿಳು ನಾಡಿನಲ್ಲಿ ಹಿಂದುತ್ವದ ಅಮಲೇರಿಸಿ ರಾಜಕೀಯ ಮಾಡುವ ಉದ್ದೇಶದಿಂದ ಬಿಜೆಪಿ ಅಲ್ಲಿಗೆ ಅತ್ಯಂತ ಭೀಕರವಾಗಿ ಹಿಂದುತ್ವವನ್ನು ಪ್ರತಿಪಾದಿಸುವ ಕೆಲ ’ಎಳೆಯ ಪ್ರತಿಭೆ’ಗಳನ್ನು ಆರಿಸಿ ಕಳುಹಿಸಿತ್ತು. ಅಂತವರೆಲ್ಲಾ ಅಲ್ಲಿ ಹೋಗಿ ದ್ರಾವಿಡ ರಾಜಕೀಯವನ್ನು ಮತ್ತು ಪೆರಿಯಾರ್ ತತ್ವಗಳನ್ನು ಮನಸೋ ಇಚ್ಛೆ ಹೀಯಾಳಿಸಿದ್ದು ಆಗಿತ್ತು.

ಈ ಚುನಾವಣೆಯಲ್ಲಿ ಇವೆಲ್ಲಾ ಬಿಜೆಪಿಗೆ ಮುಳ್ಳಾದಂತೆ ಕಾಣಿಸುತ್ತದೆ. ಆದರೆ ಪಾಂಡಿಚೇರಿಗೆ ಎಂಟ್ರಿ ಕೊಟ್ಟಿರುವ ಬಿಜೆಪಿ ತಮಿಳು ನಾಡನ್ನು ಪ್ರವೇಶಿಸುವ ತನ್ನ ಯೋಜನೆಯನ್ನು ಅಷ್ಟು ಸುಲಭವಾಗಿ ಬಿಟ್ಟುಬಿಡಲಾರದು. ಒಂದು ರಾಜಕೀಯ ಪಕ್ಷವಾಗಿ, ಪ್ರಜಾತಂತ್ರದ ಪರಿಕರಗಳನ್ನು ಬಳಸಿಕೊಂಡು ಯಾವುದೇ ರಾಜ್ಯದಲ್ಲಿ ತನ್ನ ನೆಲೆ ಸ್ಥಾಪಿಸಲು ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವೂ ಇದೆ. ಆದರೆ, ಅಧಿಕಾರದ ವಿಚಾರದಲ್ಲಿ ಹತಾಶ ಸ್ಥಿತಿ ತಲುಪಿದಾಗ ಬಿಜೆಪಿಯವರು ಬಳಸುವ ತಂತ್ರ, ಭಾಷೆ, ವರಸೆ, ವ್ಯವಹಾರ ಇತ್ಯಾದಿಗಳೆಲ್ಲಾ ಪ್ರಜಾತಂತ್ರ ವಿರೋಧಿಯಾಗಿರುತ್ತವೆ ಮಾತ್ರವಲ್ಲ ಸಮಾಜದ ಸಾಸ್ಥ್ಯಕ್ಕೇನೆ ಅಪಾಯ ತಂದೊಡ್ಡುವಂತಿರುತ್ತವೆ.

ಇಂತಹ ಯಾವ ರೀತಿಯ ವ್ಯೂಹವನ್ನು ಅದು ತಮಿಳುನಾಡಿನಲ್ಲಿ ಮುಂದಕ್ಕೆ ಬಳಸಿಕೊಳ್ಳಲಿದೆ ಎನ್ನುವುದನ್ನು ವಿರೋಧ ಪಕ್ಷಗಳು ತುಂಬಾ ಎಚ್ಚರಿಕೆಯಿಂದ ಗಮನಿಸುವ ಅಗತ್ಯವಿದೆ. ಆದರೆ, ಎಲ್ಲಾ ವಿರೋಧ ಪಕ್ಷಗಳೂ ಬಿಜೆಪಿಯ ಈ ಪ್ರಜಾತಂತ್ರ ವಿರೋಧಿ ಮಾರ್ಗಗಳ ಬಗ್ಗೆ ಆತಂಕಿತರಾಗಿದ್ದಾರೆ ಅಂತ ಏನೂ ಇಲ್ಲ. ಆದುದರಿಂದ ತಮಿಳುನಾಡಿನ ವಿಷಯದಲ್ಲೂ ಸದ್ಯಕ್ಕೆ ಅಲ್ಲಿ ಬಿಜೆಪಿಯ ಅಪಾಯಕಾರಿ ರಾಜಕೀಯಕ್ಕೆ ಹಿನ್ನಡೆಯಾಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಅಲ್ಲಿ ಬಿಜೆಪಿಯ ಮುಂದಿನ ನಡೆಯನ್ನು ನಿರೀಕ್ಷಿಸಬೇಕಿದೆ.

ಚಿನ್ನ ಕಳ್ಳಸಾಗಾಣೆ ಪ್ರಕರಣ: ಪಿಣರಾಯಿ ವಿಜಯನ್ ಹೆಸರನ್ನು ಉಲ್ಲೇಖಿಸುವಂತೆ ಆರೋಪಿಗೆ ಒತ್ತಡ!

ಚುನಾವಣಾ ಫಲಿತಾಂಶಗಳ ಸತ್ಯ ಸದ್ಯದ ಮಾತ್ರಕ್ಕೆ ಸ್ಪಷ್ಟವಾಗಿಯೂ, ಸೀಮಿತವಾಗಿಯೂ ಇದೆ. ಅದೇನೆಂದರೆ, ಈ ಐದು ರಾಜ್ಯಗಳ ಚುನಾವಣೆಗಳನ್ನು ಬಳಸಿಕೊಂಡು ಬಿಜೆಪಿ ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಭಾರತದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಯೇ ತೀರಬೇಕೆಂದು ಹಠತೊಟ್ಟು ಬಳಸಬಾರದಾಗಿದ್ದ ತಂತ್ರಗಳನ್ನೆಲ್ಲಾ ಬಳಸಿ ಒಂದು ಪ್ರಯತ್ನ ಮಾಡಿತ್ತು. ಪೂರ್ವ ಭಾರತದಲ್ಲಿ ಅಂದರೆ ಪಶ್ಚಿಮ ಬಂಗಾಳದಲ್ಲಿ ಅದು ಒಂದು ಮಟ್ಟಿಗೆ ಯಶಸ್ವಿಯಾಗಿದೆ. ದಕ್ಷಿಣದಲ್ಲಿ ಪಾಂಡಿಚೇರಿ ಎಂಬ ಸಣ್ಣ ಕಿಂಡಿ ಮಾತ್ರ ಅದರ ಪಾಲಿಗೆ ತೆರೆದುಕೊಂಡದ್ದು. ಎರಡು ಪ್ರಮುಖ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಯ ಪ್ರಯತ್ನ ನೆಲಕಚ್ಚಿದೆ. ಆದರೆ ಇದು ಬಿಜೆಪಿಯ ದಕ್ಷಿಣ ದಿಗ್ವಿಜಯದ ಕೊನೆ ಎಂದೇನೂ ಅಲ್ಲ. ಇದು ಈ ದಂಡಯಾತ್ರೆಯ ಎರಡನೆಯ ಹಂತದ ಪ್ರಾರಂಭವೂ ಆದೀತು. ಹಾಗಿದೆ ಈ ಎರಡು ರಾಜ್ಯಗಳ ರಾಜಕೀಯ. ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸಾಲದು ಎನ್ನುವ ಸತ್ಯ ಮತ್ತೊಮ್ಮೆ ಢಾಳಾಗಿ ಗೋಚರಿಸಿದೆ. ಬಿಜೆಪಿಯ ಜತೆ ಸೆಣಸಲು ಪ್ರಾದೇಶಿಕ ಪಕ್ಷಗಳೇ ಸರಿ. ಆದರೆ ಈ ಪ್ರಾದೇಶಿಕ ಪಕ್ಷಗಳು ಕೂಡಾ ಈ ಚುನಾವಣೆಯಲ್ಲಿ ಗೆದ್ದಿದ್ದೇವೆ ಎನ್ನುವ ಕಾರಣಕ್ಕೆ ವಿರಮಿಸುವ ಸ್ಥಿತಿಯಲ್ಲಿ ಇಲ್ಲ.


ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ | Naanu Gauri

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಸುಪ್ರೀಂ ಮೊರೆ ಹೋಗಲಿರುವ ವಕ್ಪ್‌‌ ಮಂಡಳಿ

0
ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ತಮ್ಮ ಮಾಲೀಕತ್ವದಲ್ಲಿ ಇಲ್ಲ ಎಂದು ಬಿಬಿಎಂಪಿ ಹೇಳಿದ ನಂತರವೂ ಬಿಜೆಪಿ ಸರ್ಕಾರ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿವೆ. ಇದೀಗ ಈದ್ಗಾ ಮೈದಾನವನ್ನು ಕಂದಾಯ ಭೂಮಿ ಎಂದು ಸರ್ಕಾರ ಹೇಳಿದೆ....