ಬೆಂಗಳೂರಿನ ಬೀದಿ ವ್ಯಾಪಾರಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಹಿನ್ನಲೆ, ವ್ಯಾಪಾರಿಗಳು ತಮ್ಮ ಹಕ್ಕಿಗಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬ್ರಾಂಡ್ ಬೆಂಗಳೂರಿನಲ್ಲಿ ಬಡವರಿಗೆ ಜಾಗವಿಲ್ಲವೆ ಎಂದು ಪ್ರಶ್ನಿಸಿರುವ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಹೇಳಿದ್ದು, ಬೀದಿ ವ್ಯಾಪಾರಿಗಳ ಎತ್ತಂಗಡಿ ನಿಲ್ಲಿಸಿ ಎಂದು ಆಗ್ರಹಿಸಿದೆ. ಬೀದಿ ಬದಿ ವ್ಯಾಪಾರಿಗಳಿಂದ
“ಬೆಂಗಳೂರು ನಗರದ ಬೀದಿ ವ್ಯಾಪಾರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಮ್ಮ ಹಕ್ಕಿಗಾಗಿ ದಿನಾಂಕ ಜೂನ್ 24ರ ಮಂಗಳವಾರ, ಫ್ರೀಡಂ ಪಾರ್ಕ್‌ನಲ್ಲಿ ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ , ಜಯನಗರ ೪ ನೇ ಬಡಾವಣೆ , ವಿಜಯನಗರ , ಶಿವಾಜಿನಗರ, ಯೆಶವಂತಪುರ , ಗಾಂಧೀ ಬಜಾರ್ ಹಾಗು ಇನ್ನು ಹಲವು ಮಾರುಕಟ್ಟೆಗಳಿಂದ ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ” ಎಂದು ಬೀದಿ ವ್ಯಾಪಾರಿಗಳ ಸಂಘ ಹೇಳಿದೆ.
“ಕರ್ನಾಟಕದ ಆರ್ಥಿಕತೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಪ್ರಮುಖ ಕೊಡುಗೆಯನ್ನು ನೀಡುತ್ತಲೆ ಇದ್ದಾರೆ. ರೈತರಿಂದ, ಹೋಲ್‌ಸೇಲ್ ವಸ್ತುಗಳನ್ನು ಪಡೆದು ನಮ್ಮ ನಗರಗಳಲ್ಲಿ ಅಗತ್ಯ ವಸ್ತುಗಳು ಹಾಗೂ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ, ಬೀದಿ ವ್ಯಾಪಾರ ರಾಜ್ಯದ ಆರ್ಥಿಕ ಆರೋಗ್ಯದ ಜೊತೆಗೆ ಹೆಣೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ನಡೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯನ್ನುಂಟು ಮಾಡಲು ಹೊರಟಿದೆ” ಎಂದು ಸಂಘ ಹೇಳಿದೆ.
“ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳು ರಸ್ತೆ ಬದಿ / ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಬಾರದು, ವೆಂಡಿಂಗ್ ಜೋನ್‌ನಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಅಥವಾ ದಿನವಿಡೀ ಗಾಡಿಗಳನ್ನು ತಳ್ಳಿಕೊಂಡು ವ್ಯಾಪಾರ ಮಾಡಬೇಕು ಹಾಗೂ ಗುರುತಿನ ಚೀಟಿ ಇಲ್ಲದವರಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡಿದ್ದಾರೆ” ಎಂದು ಸಂಘ ಹೇಳಿದೆ.
“ಫುಟ್ಪಾತ್ತ್ ಅಥವಾ ಬೀದಿ ಬದಿ ಬಿಟ್ಟು ಬೇರೆ ಯಾವ ಜಾಗದಲ್ಲಿ ವ್ಯಾಪಾರ ಮಾಡಲು ಸಾಧ್ಯ? ಇದು ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ, 2014ರ ಉಲ್ಲಂಘನೆ. ಈ ಹೇಳಿಕೆಯಿಂದ ಅಧಿಕಾರಿಗಳು ಬೀದಿ ವ್ಯಾಪಾರಿಗಳ ಮೇಲೆ ಹೇರುವ ಕಿರುಕುಳ ಹೆಚ್ಚಾಗಿದ್ದು, ಬೀದಿ ವ್ಯಾಪಾರಿಗಳು ಆತಂಕ್ಕೊಳಗಾಗಿದ್ದಾರೆ” ಎಂದು ಸಂಘವು ಹೇಳಿದೆ.
“ಅಕ್ಟೋಬರ್ 2024ರಿಂದ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದು ಫೆಬ್ರವರಿ 2025 ಮುಕ್ತಾಯಗೊಂಡಿದ್ದು, ಸುಮಾರು 34,000 ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ ಮತ್ತು ಇತರೆ ಸಾವಿರಾರು ವ್ಯಾಪಾರಿಗಳನ್ನು ಸಮೀಕ್ಷೆಯಿಂದ ಸ್ವೀಕರಿಸಲಾಗದ ವಿವಿಧ ಕಾರಣಗಳಿಂದಾಗಿ ಹೊರಗಿಡಲಾಗಿದೆ. ಪಿ.ಎಂ-ಸ್ವಾನಿಧಿ ಸಾಲವನ್ನು 70,000ಕೂ ಹೆಚ್ಚು ಜನರಿಗೆ ನೀಡಿಲಾಗಿದ್ದು, ಕನಿಷ್ಠ 70,000 ಬೀದಿ ವ್ಯಾಪಾರಿಗಳು ಸಮೀಕ್ಷೆಯಲ್ಲಿ ಒಳಗೊಂಡಿರಬೇಕಲ್ಲವೇ?” ಎಂದು ಸಂಘವು ಪ್ರಶ್ನಿಸಿದೆ.
“ಬೆಂಗಳೂರಿನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನ ಬೀದಿ ವ್ಯಾಪಾರದ ಮೇಲೆ ಅವಲಂಬಿತರಾಗಿದ್ದು, ಸಮೀಕ್ಷೆಯಲ್ಲಿ ಒಳಗೊಳ್ಳದ ಬೀದಿ ವ್ಯಾಪಾರಿಗಳು ಯಾವುದೇ ರೀತಿಯ ಕಾನೂನಿನ ರಕ್ಷಣೆ ಇಲ್ಲದಂತೆ ಬೇಕು ಅಂತಲೇ ಹೊರದಬ್ಬಲಾಗಿದೆ. ಜೊತೆಗೆ ಸಮೀಕ್ಷೆಯಲ್ಲಿ ಒಳಗೊಂಡ ವ್ಯಾಪಾರಿಗಳಿಗೆ ಇದುವರೆಗೂ ಗುರುತಿನ ಚೀಟಿ ಅಥವಾ ವ್ಯಾಪಾರದ ಪ್ರಮಾಣ ಪತ್ರವನ್ನು ವಿತರಿಸಿರುವುದಿಲ್ಲ” ಎಂದು ಸಂಘವು ಹೇಳಿದೆ.
ಅಷ್ಟೆ ಅಲ್ಲದೆ, ಚರ್ಚ್ ಸ್ಟ್ರೀಟ್‌ನಲ್ಲಿ ಕಳೆದ ವಾರ ಬಿಬಿಎಂಪಿ ಅಧಿಕಾರಿಗಳು ಕಾನೂನು ಬಾಹಿರವಾಗಿ ಬೀದಿ ವ್ಯಾಪಾರಿಗಳ ಸರಕನ್ನು ವಶಪಡಿಸಿಕೊಂಡು ಇನ್ನು ಸಹ ಹಿಂತಿರಿಗಿಸಿಲ್ಲ ಎಂದು ಸಂಘವು ಹೇಳಿದ್ದು, ಜಯನಗರ ೯ ನೇ ಬಡಾವಣೆ ಹಾಗು ಸಾರಕ್ಕಿ ಮಾರುಕಟ್ಟೆಯಲ್ಲಿ ರಾತ್ರಿ ವೇಳೆ ಕಳ್ಳರು ಬೀದಿ ವ್ಯಾಪಾರಿಗಳ ಸಾವಿರಾರು ರೂಪಾಯಿ ಮೊತ್ತದ ಹಣ್ಣನ್ನು ಕದ್ದಿದ್ದಾರೆ ಎಂದು ಹೇಳಿದೆ.
ಹಲವಾರು ಮಾರುಕಟ್ಟೆಗಳಲ್ಲಿ ಶೌಚಾಲಯ, ನೀರು, ಬೆಳಕು ಮುಂತಾದ ಮೂಲಸೌಕರ್ಯವಿಲ್ಲ. ಬೀದಿ ವ್ಯಾಪಾರಿಗಳಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲ ಎಂದು ಸಂಘವು ಬೇಸರ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ವ್ಯಾಪಾರಿಗಳ ಘನತೆಗಾಗಿ, ಬೀದಿ ವ್ಯಾಪಾರದ ಹಕ್ಕಿಗಾಗಿ, ಮಾರುಕಟ್ಟೆಗಳಲ್ಲಿ ಮೂಲಭೂತ ಸೌಕರ್ಯಕ್ಕಾಗಿ, ಸಾಮಾಜಿಕ ಭಾದ್ರತೆಗಾಗಿ ಈ ಹೋರಾಟವನ್ನು ನಡೆಸುತ್ತಿರುವುದಾಗಿ ಬೀದಿಬದಿ ವ್ಯಾಪಾರಿಗಳ ಸಂಘವು ಹೇಳಿದೆ. ಬೀದಿ ಬದಿ ವ್ಯಾಪಾರಿಗಳಿಂದ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕಳ್ಳತನದ ಆರೋಪ; 10 ವರ್ಷದ ಬುಡಕಟ್ಟು ಬಾಲಕಿಗೆ ಬಿಸಿ ಕಬ್ಬಿಣದಿಂದ ಬರೆ

