| ಡಾ.ಸ್ವಾತಿ ಶುಕ್ಲಾ |
ಬ್ರೆಕ್ಸಿಟ್ ಒಪ್ಪಂದವೊಂದನ್ನು ಸಾಧಿಸಲು ವಿಫಲರಾದ ಬಳಿಕ ಯುಕೆ ಪ್ರಧಾನಿ ತೆರೆಸಾ ಮೇ ಅವರು, ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮತ್ತು ಬ್ರಿಟನ್‌ನ ಪ್ರಧಾನಿಯಾಗಿ ತನ್ನ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಾನು ಜೂನ್ 7ರಂದು ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ತ್ಯಜಿಸುವುದಾಗಿ ಅವರು ತನ್ನ ಘೋಷಣೆಯಲ್ಲಿ ತಿಳಿಸಿದ್ದಾರೆ. 
ಬ್ರೆಕ್ಸಿಟ್ (Brexit)
ಬ್ರೆಕ್ಸಿಟ್- (ಬ್ರಿಟನ್ ಮತ್ತು ಎಕ್ಸಿಟ್ ಎಂಬ ಎರಡು ಪದಗಳ ಸಂಕ್ಷೇಪ) ಎಂಬುದು ಯುಕೆಯ ಯುರೋಪಿಯನ್ ಯೂನಿಯನ್ (ಐರೋಪ್ಯ ಒಕ್ಕೂಟ)ನಲ್ಲಿ ಮುಂದುವರಿಯಬೇಕೆ, ಹೊರಬರಬೇಕೆ ಎಂಬುದನ್ನು ನಿರ್ಧರಿಸಲು 23 ಜೂನ್ 2016ರಲ್ಲಿ ನಡೆದ ಜನಮತಗಣನೆ.
ಈ ಜನಮತಗಣನೆಯಲ್ಲಿ 71.8 ಶೇಕಡಾ ಮತದಾರರು, ಎಂದರೆ ಸುಮಾರು ಮೂರು ಕೋಟಿ ಮತದಾರರು ಮತ ಚಲಾಯಿಸಿದ್ದು, ಹೊರಬರುವ ತೀರ್ಮಾನ 51.9 ಶೇಕಡಾ- 48.1 ಶೇಕಡಾ ನಿಕಟ ಅಂತರದಿಂದ ಜಯಿಸಿತ್ತು. ಆದರೆ, ಈ ಜನಮತಗಣನೆ ನಡೆದು ಹೆಚ್ಚುಕಡಿಮೆ ಮೂರು ವರ್ಷಗಳ ನಂತರವೂ ತಾನು 1973ರಲ್ಲಿ ಸೇರಿದ್ದ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಹೇಗೆ ಎಂಬುದು ಬಿಡಿ, ಹೊರಬರಬೇಕೋ ಬೇಡವೋ ಎಂಬ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಬ್ರಿಟನ್ ವಿಫಲವಾಗಿದೆ.
ಇಯು, ಎಂದು ಗುರುತಿಸಲ್ಪಡುವ ಐರೋಪ್ಯ ಒಕ್ಕೂಟವು 28 ಐರೋಪ್ಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಸಹಭಾಗಿತ್ವವಾಗಿದೆ. ಎರಡನೇ ಮಹಾಯುದ್ಧದ ಬಳಿಕ- ಪರಸ್ಪರ ವಾಣಿಜ್ಯ, ವ್ಯಾಪಾರ ಇರುವ ದೇಶಗಳ ನಡುವೆ ಯುದ್ಧದ ಸಂಭವ ಕಡಿಮೆ ಎಂಬ ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಹುಟ್ಟಿಕೊಂಡ ಪರಿಕಲ್ಪನೆಯಿದು. ಅಲ್ಲಿಂದ ಅದೀಗ ‘ಏಕ ಮಾರುಕಟ್ಟೆ’ಯಾಗುವ ತನಕ ಬೆಳೆದಿದೆ. ಎಷ್ಟರ ಮಟ್ಟಿಗೆ ಎಂದರೆ, ಸರಕು ಮತ್ತು ಜನರು ಒಂದೇ ದೇಶ ಎಂಬಷ್ಟರ ಮಟ್ಟಿಗೆ ಈ ದೇಶಗಳಲ್ಲಿ ಸಂಚರಿಸಬಹುದು. ಅದಕ್ಕೆ ಸ್ವಂತ ಕರೆನ್ಸಿಯಾದ ಯುರೋ ಇದ್ದು, ಅದನ್ನು 19 ದೇಶಗಳು ಬಳಸುತ್ತಿವೆ. ಅದಕ್ಕೆ ಸ್ವಂತ ಸಂಸತ್ತು ಕೂಡಾ ಇದ್ದು, ಅದು ಪರಿಸರ, ಸಾರಿಗೆ, ಗ್ರಾಹಕರ ಹಕ್ಕುಗಳು, ಅಷ್ಟೇ ಏಕೆ ಮೊಬೈಲ್ ಫೋನ್ ದರ ನಿಗದಿಯ ವರೆಗೆ ವ್ಯಾಪಕ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಿದೆ.
ಹೊರ ಬರುವ ಪ್ರಕ್ರಿಯೆ ಆರಂಭಿಸಿದ ಬಳಿಕ ಯುಕೆ, 29 ಮಾರ್ಚ್ 2019ರಲ್ಲಿ ಹೊರಬರಬೇಕಾಗಿತ್ತು. ಆದರೆ ಹೊರಬರುವಿಕೆ ಕುರಿತು ಐರೋಪ್ಯ ಒಕ್ಕೂಟ ಮತ್ತು ಯುಕೆ ನಡುವೆ ಮಾಡಲಾಗಿದ್ದ ಒಪ್ಪಂದವನ್ನು ಸಂಸದರು ಮೂರು ಬಾರಿ ತಿರಸ್ಕರಿಸಿದ್ದಾರೆ. ಈ ಒಪ್ಪಂದದ ಮುಖ್ಯ ಅಂಶವೆಂದರೆ, ಉದ್ದಿಮೆಗಳು ಹಾಗೂ ವ್ಯಕ್ತಿಗಳು ಆದಷ್ಟು ಸರಾಗವಾಗಿ ಐರೋಪ್ಯ ಒಕ್ಕೂಟದಿಂದ ಹೊರಬರುವುದನ್ನು ಖಾತರಿಪಡಿಸುವುದು ಮತ್ತು ಶಾಶ್ವತವಾದ ವಾಣಿಜ್ಯ ಸಂಬಂಧವನ್ನು ರೂಪಿಸಿಕೊಳ್ಳಲು ಎರಡೂ ಕಡೆಗಳವರಿಗೆ ಕಾಲಾವಕಾಶ ನೀಡುವುದು. ಇದೀಗ ಐರೋಪ್ಯ ಒಕ್ಕೂಟವು ಆರು ತಿಂಗಳುಗಳ ವಿಸ್ತರಣೆ ನೀಡಿ, 31 ಅಕ್ಟೋಬರ್ 2019ರ ತನಕ ಕಾಲಾವಕಾಶ ಒದಗಿಸಿದೆ.
ಮೇಯ ದಾಖಲೆ
ಐರೋಪ್ಯ ಒಕ್ಕೂಟದ ಜೊತೆ ಯಾವ ರೀತಿಯ ಭವಿಷ್ಯದ ಸಂಬಂಧವನ್ನು ಒಪ್ಪಲು ಸಿದ್ಧರಿದ್ದೀರಿ ಎಂಬ ಕುರಿತು ತಮ್ಮದೇ ಪಕ್ಷದೊಳಗಿನ ಬ್ರೆಕ್ಸಿಟ್ ಬೆಂಬಲಿಗರ ಜೊತೆ ಮೂರು ವರ್ಷಗಳ ಕಠಿಣ ಚೌಕಾಸಿಯ ಬಳಿಕ ಮೇ ಅವರ ನಿರ್ಗಮನವಾಗುತ್ತಿದೆ. 2017ರ ಸಾರ್ವತ್ರಿಕ ಚುನಾವಣೆಯಲ್ಲಿ ‘ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸದೃಢ ಮತ್ತು ಸ್ಥಿರ ನಾಯಕತ್ವ’ದ ಭರವಸೆ ನೀಡುವ ದುರಂತಕಾರಿ ಎಂದು ಬಣ್ಣಿಸಲಾಗುವ ಪ್ರಚಾರದ ನೇತೃತ್ವ ವಹಿಸಿದ್ದ ಮೇ ಅವರು ಬಹುಮತ ಕಳೆದುಕೊಂಡ ಬಳಿಕ ಈ ಕೆಲಸ ಇನ್ನಷ್ಟು ಕಠಿಣವಾಯಿತು.
ನಂತರ ರೂಪಿಸಿದ ಹತ್ತು ಅಂಶಗಳ ‘ಹೊಸ ಬ್ರೆಕ್ಸಿಟ್ ಒಪ್ಪಂದ’ವು ಪ್ರತಿಪಕ್ಷಗಳು ಬಿಡಿ, ಅವರದ್ದೇ ಟೋರಿ (ಕನ್ಸರ್ವೇಟಿವ್) ಪಕ್ಷದ ಸಾಮಾನ್ಯ ಸಂಸದರು ಮಾತ್ರವಲ್ಲ, ಅವರದ್ದೇ ಸಂಪುಟದ ಕೆಲವು ಸದಸ್ಯರನ್ನೂ ಕೆಂಡಾಮಂಡಲಗೊಳಿಸಿದ ಬಳಿಕ ಅವರ ಗತಿ ಖಚಿತವಾಗಿತ್ತು. ಹೌಸ್ ಆಫ್ ಕಾಮನ್ಸ್ (ಕೆಳಮನೆ) ನಾಯಕಿ ಆಂಡ್ರಿಯಾ ಲೀಡ್‌ಸಂ ಅವರು ಈ ಬ್ರೆಕ್ಸಿಟ್ ಮಸೂದೆಯನ್ನು ಮಂಡಿಸುವುದಕ್ಕೆ ಬದಲಾಗಿ ಬುಧವಾರ ರಾಜೀನಾಮೆಯನ್ನೇ ನೀಡಿದ್ದರು.
ಅವರ ಮಾಜಿ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಅವರು ಮುಂದಿನ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿದ್ದು, ಒಂದು ಡಜನಿಗೂ ಹೆಚ್ಚು ಹಿರಿಯ ಟೋರಿ ನಾಯಕರು ಈ ಪದಕ್ಕಾಗಿ ಹೊಂಚುತ್ತಿದ್ದಾರೆ.
ಬ್ರಿಟನ್‌ಗೆ ಮುಂದೇನು ಕಾದಿದೆ?
ಮೇ ಅವರ ನಿರ್ಗಮನದ ಬಳಿಕ ಹೊಸ ನಾಯಕತ್ವದಲ್ಲಿ ಬ್ರೆಕ್ಸಿಟ್ ಬಿಕ್ಕಟ್ಟು ತೀವ್ರವಾಗಲಿದ್ದು, ಹೊಸ ನಾಯಕತ್ವದಲ್ಲಿ ಐರೋಪ್ಯ ಒಕ್ಕೂಟದ ಜೊತೆ ಸಂಘರ್ಷದ ಸಾಧ್ಯತೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ, ಸಾರ್ವತ್ರಿಕ ಚುನಾವಣೆ ನಡೆದು ಜೆರೆಮಿ ಕೋರ್ಬಿನ್ ನೇತೃತ್ವದ ಲೇಬರ್ ಪಕ್ಷದ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಬ್ರಿಟನ್‌ಗೆ ಕ್ರಮಬದ್ಧವಾದ ಹಿಂತೆಗೆತ ಒಪ್ಪಂದ, ಒಪ್ಪಂದ ರಹಿತ ಹಿಂತೆಗೆತ, ಚುನಾವಣೆ, ಅಥವಾ ಐರೋಪ್ಯ ಒಕ್ಕೂಟದಿಂದ ಹೊರಬರುವ 2016ರ ನಿರ್ಧಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆ ಇರುವ ಎರಡನೇ ಜನಮತಗಣನೆ ಇತ್ಯಾದಿಯಾಗಿ ಹಲವು ಸಾಧ್ಯತೆಗಳು ಎದುರಾಗಲಿವೆ.



ತೆರೆಸಾ ಮೇ ಗೆ Exit ಎಂದ ಬ್ರಿಟನ್ – ಲೇಖನ ಓದಿ ನನಗೆ ಮೆಚ್ಚುಗೆ ಆಯಿತು. ಲೇಖಕರು ಸರಳವಾಗಿ EU ಬಗ್ಗೆ ಮತ್ತು ಬ್ರಿಟನ್ ನ Exit ತೊಳಲಾಟದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿವರಗಳಿಗೆ ಧಕ್ಕೆ ಆಗದಂತೆ ವಿವರಿಸಿದ್ದಾರೆ. ಧನ್ಯವಾದಗಳು.
ಸಂಪಾದಕರಲ್ಲಿ ನಮ್ಮ ನಮಸ್ಕಾರಗಳು,
ತಮ್ಮ ಅಂಕಣದಲ್ಲಿ ಬಂದಂತಹ ಬರಹಗಳು ತುಂಬಾ ಅರ್ಥಪೂರ್ಣವಾಗಿರುತ್ತದೆ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ ಮತ್ತೊಮ್ಮೆ ತಮಗೆ ಹೃದಯ ಪೂರಕವಾಗಿ ಅಭಿನಂದನೆಗಳು.🙏✍
ಸಂಪಾದಕರಲ್ಲಿ ಸವಿನಯ ಪ್ರಾರ್ಥನೆಗಳು, ಕೇಂದ್ರ ಸರ್ಕಾರದವರು ತಮಗೆ ಸ್ಪಂದಿಸದಿದ್ದರೆ, ಇ ಡಿ ಪ್ರಕರಣದಲ್ಲಿ ದಾಖಲಿಸುತ್ತಾರೆ ಯಾಕೆ? ಮತ್ತು ತಮ್ಮಲ್ಲಿರುವ ಸಮಾಜ ಸೇವಕರಲ್ಲಿ ಇಲ್ಲಿಯವರೆಗೂ ಯಾವ ವ್ಯಕ್ತಿಯೂ ಕೂಡಾ ತನಿಖೆಗೆ ವಹಿಸಿಕೊಟ್ಟಿಲ್ಲಾ ಈ ರೀತಿ ಮಾಡುವುದು ಸರಿಯೇ ಇದು ನಮ್ಮ ಪ್ರಶ್ನೆಯಾಗಿದೆ ದಯಮಾಡಿ ಉತ್ತರಿಸಿರಿ.