Homeಕರ್ನಾಟಕಬಿಜೆಪಿ ಸೋಲಿಗೆ ಈ ಐದು ಅಂಶಗಳು ಪ್ರಮುಖ ಕಾರಣ

ಬಿಜೆಪಿ ಸೋಲಿಗೆ ಈ ಐದು ಅಂಶಗಳು ಪ್ರಮುಖ ಕಾರಣ

- Advertisement -
- Advertisement -

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿ ಸರ್ಕಾರ ವಾಶ್‌ಔಟ್ ಆಗಿದ್ದು, ಕಾಂಗ್ರೆಸ್ ಭಾರೀ ಬಹುಮತವನ್ನು ಪಡೆದಿದೆ. 136 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದರೆ, ಬಿಜೆಪಿ 65 ಸ್ಥಾನಗಳಿಗೆ, ಜೆಡಿಎಸ್‌ 19 ಸ್ಥಾನಗಳಿಗೆ ಕುಸಿದಿವೆ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಉಮೇದಿನಲ್ಲಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಬಿಜೆಪಿ ಮಾಡಿಕೊಂಡಿರುವ ಎಡವಟ್ಟು ಮತ್ತು ಚುನಾವಣೆ ಸಂದರ್ಭದಲ್ಲಿ ಪಕ್ಷದೊಳಗೆ ಉಂಟಾದ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳು ಈ ಹೀನಾಯ ಸೋಲಿಗೆ ಕಾರಣವಾಗಿವೆ.

ಬಿಜೆಪಿ ಸೋಲಿಗೆ ಕಾರಣವಾದ ಐದು ಅಂಶಗಳು

  1. ರಾಷ್ಟ್ರೀಯ ನಾಯಕರ ಹಸ್ತಕ್ಷೇಪ & ಸ್ಥಳೀಯ ನಾಯಕರ ಕಡೆಗಣನೆ

ರಾಜ್ಯ ವಿಧಾನಸಭಾ ಚುನಾವಣೆಯು ನಡೆಯುವುದು ರಾಜ್ಯದಲ್ಲಿನ ಸಮಸ್ಯೆಗಳು, ಇಲ್ಲಿನ ನಾಯಕತ್ವದ ಮೇಲೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ರಾಜ್ಯ ನಾಯಕರು ಕಡೆಗಣಿಸಲ್ಪಟ್ಟರು. ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನಂಥವರನ್ನು ಮೂಲೆಗುಂಪು ಮಾಡಲಾಯಿತು. ಜಗದೀಶ್ ಶೆಟ್ಟರ್‌, ಲಕ್ಷ್ಮಣ್‌ ಸವದಿಯಂತಹ ಲಿಂಗಾಯತ ನಾಯಕರಿಗೆ ಟಿಕೆಟ್ ಕೈತಪ್ಪಿತು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಲಿಂಗಾಯತ ನಾಯಕರನ್ನು ಮುಗಿಸುತ್ತಿದ್ದಾರೆಂಬ ಕೂಗು ಎದ್ದಿತು. ಹೀಗಾಗಿ ಲಿಂಗಾಯತ ಮತದಾರರು ಬಿಜೆಪಿಯಿಂದ ದೂರ ಸರಿದಿರುವ ಸಾಧ್ಯತೆ ಹೆಚ್ಚಿದೆ.

ರಾಜ್ಯ ನಾಯಕರು ಪ್ರಚಾರ ನಡೆಸಿದ್ದಕ್ಕಿಂತ ರಾಷ್ಟ್ರೀಯ ಮಟ್ಟದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಮೊದಲಾದವರು ಅಖಾಡಕ್ಕೆ ಇಳಿದರು. ‘ಮೋದಿಗೆ ಮತ ಹಾಕಿ’ ಎಂದು ಬಿಜೆಪಿ ಪ್ರಚಾರ ಮಾಡಿತು. ಆದರೆ ಇದು ವಿಧಾನಸಭಾ ಚುನಾವಣೆ. ಮೋದಿ ಇಲ್ಲಿನ ಅಭ್ಯರ್ಥಿಯೂ ಅಲ್ಲ, ಇಲ್ಲಿ ಆಡಳಿತ ನಡೆಸುವುದೂ ಇಲ್ಲ. ಈ ಸತ್ಯವನ್ನು ಬಿಜೆಪಿ ಅರ್ಥಮಾಡಿಕೊಳ್ಳಲಿಲ್ಲ. ಮೋದಿಯವರು ಬರೀ ಭಾಷಣ ಮಾಡುತ್ತಾರೆ, ಕೆಲಸ ಮಾಡಲ್ಲ ಎಂಬ ಸಂದೇಶ ರವಾನೆಯಾಯಿತು. ಹೊಸ ಮುಖಗಳನ್ನು ತರುತ್ತೇವೆ ಎಂದು ಹೊರಟ ಬಿಜೆಪಿ, ಹಿರಿಯ ನಾಯಕರನ್ನು ಕಡೆಗಣಿಸಿತು.

2. ನಲವತ್ತು ಪರ್ಸೆಂಟ್ ಕಮಿಷನ್ ಆರೋಪ ಮತ್ತು ಸಾಲು ಸಾಲು ಹಗರಣ: 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು 10 % ಕಮಿಷನ್ ಸರ್ಕಾರ ಎಂದು ಮೂದಲಿಸಿದ ಬಿಜೆಪಿ, ಆಪರೇಷನ್‌ ಕಮಲದ ಬಳಿಕ ಅಧಿಕಾರಕ್ಕೇರಿತು. ಆದರೆ 40% ಕಮಿಷನ್‌ ಆರೋಪವನ್ನು ಎದುರಿಸಿತು. ರಾಜ್ಯ ಗುತ್ತಿಗೆದಾರರ ಸಂಘವು ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಕಿರುಕುಳ ಆರೋಪವನ್ನು ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಕೆ.ಎಸ್.ಈಶ್ವರಪ್ಪ ಅವರ ಮೇಲೆ ನೇರ ಆರೋಪ ಕೇಳಿಬಂದಿದ್ದರಿಂದ ಅವರು ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದರು.

ಸಿದ್ದರಾಮಯ್ಯನವರ 75ನೇ ಜನ್ಮದಿನದ ಬಳಿಕ ಕಾಂಗ್ರೆಸ್ ವರ್ಚಸ್ಸು ಏರುಗತಿಯಲ್ಲಿ ಕಂಡುಬಂತು. ನಲವತ್ತು ಪರ್ಸೆಂಟ್ ಆರೋಪ ಹೊರಬಿದ್ದಾಗ ಮತ್ತಷ್ಟು ತೀವ್ರವಾಗಿ ಕಾಂಗ್ರೆಸ್ ಅಟ್ಯಾಕ್ ಮಾಡಿತು. ನಿಜವಾದ ವಿರೋಧ ಪಕ್ಷವಾಗಿ ಹೊಮ್ಮಿತು. ಪೇಸಿಎಂ ಪೋಸ್ಟರ್‌ಗಳನ್ನು ಅಂಟಿಸಿ ರಾಜ್ಯದ ಗಮನ ಸೆಳೆಯಿತು. ಇದು 40% ಸರ್ಕಾರ ಎಂಬ ಅಭಿಪ್ರಾಯವನ್ನು ರಾಜ್ಯದ ಮತದಾರರು ತಾಳುವಷ್ಟು ಪರಿಣಾಮಕಾರಿಯಾಗಿ ಕ್ಯಾಂಪೇನ್‌ ಆಯಿತು.

ಬೊಮ್ಮಾಯಿಯವರು ಸಿಎಂ ಆಗುತ್ತಲೇ 40% ಕಮಿಷನ್ ಸರ್ಕಾರ, ಬಿಟ್ ಕಾಯಿನ್ ಹಗರಣ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ – ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ, ಮಠಗಳ ಅನುದಾನದಲ್ಲಿಯೂ 30% ಕಮಿಷನ್, ಪಿಎಸ್‌ಐ ಹಗರಣ, ಮತದಾರರ ಪಟ್ಟಿ ಹಗರಣ, ಸ್ಯಾಂಟ್ರೋ ರವಿ ಕೇಸ್, ಮಾಡಾಳ್ ಹಗರಣ.. ಹೀಗೆ ಪಟ್ಟಿ ಬೆಳೆಯುತ್ತಲೇ ಇರುವುದು ಬಿಜೆಪಿ ಸೋಲಿಗೆ, ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು.

ಬಿಜೆಪಿಯ ರಾಜ್ಯ ನಾಯಕರಲ್ಲಿ ಅಸಮರ್ಥತೆ ಎದ್ದು ಕಾಣುತ್ತಿತ್ತು. ಬಸವರಾಜ ಬೊಮ್ಮಾಯಿ ವಿಫಲ ನಾಯಕರಾಗಿ ಕಂಡರು. ಬ್ರಾಹ್ಮಣ ನಾಯಕತ್ವ ಬಿಜೆಪಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹೋಯಿತು. ಬಿ.ವೈ.ವಿಜಯೇಂದ್ರ ಅವರನ್ನು ವರಣಾದಲ್ಲಿ ಸಿದ್ದರಾಮಯ್ಯನವರ ವಿರುದ್ಧ ನಿಲ್ಲಿಸಿ, ಸೋಲಿಸಲು ಯೋಜನೆ ರೂಪಿಸಲಾಗುತ್ತಿದೆ ಎಂಬ ಸಂದೇಶ ರವಾನೆಯಾಯಿತು. ಆಂತರಿಕ ಬಂಡಾಯ ಹೆಚ್ಚಾಯಿತು.

3.ಮಿತಿಮೀರಿದ ಕೋಮವಾದ ಮತ್ತು ಮತೀಯ ಗೂಂಡಾಗಿರಿಯ ಸಮರ್ಥನೆ

ಬೊಮ್ಮಾಯಿಯವರು ಯಾರೂ ಊಹಿಸಲಾಗಷ್ಟು ಕೋಮು ರಾಜಕಾರಣ ಮಾಡಿದ್ದು ಢಾಳಾಗಿ ಕಂಡಿತು. “ನಮಗಿಂತ ಹೆಚ್ಚು ಬೊಮ್ಮಾಯಿ ಆರ್‌ಎಸ್‌ಎಸ್‌ ಆಗಿ ಬದಲಾಗಿದ್ದಾರೆ” ಎಂದು ಬಿಜೆಪಿಯ ನಾಯಕ, ಸಚಿವ ಆರ್.ಅಶೋಕ್ ಅವರೇ ಸದನದಲ್ಲಿ ಹೇಳಿದ್ದರು. ಮತೀಯ ಗೂಂಡಾಗಿರಿಯನ್ನು ಕಟುವಾಗಿ ಟೀಕಿಸಬೇಕಿದ್ದ ಬೊಮ್ಮಾಯಿ- ‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಹೇಳಿಕೆ ನೀಡುವ ಮೂಲಕ ಬೊಮ್ಮಾಯಿಯವರು ಅದಕ್ಕೆ ಸಮರ್ಥನೆ ನೀಡಿದ್ದರು. ಪಠ್ಯಪುಸ್ತಕ ತಿರುಚೀಕರಣಕ್ಕೆ ಸರ್ಕಾರ ಕೈಹಾಕಿತು. ಮಕ್ಕಳಲ್ಲಿ ವಿಶಾಲ ದೃಷ್ಟಿಕೋನ, ಜಾತ್ಯತೀತ ಮನೋಭಾವ, ಸಾಂವಿಧಾನಿಕ ಮೌಲ್ಯಗಳನ್ನು ಕಲಿಸಬೇಕಾದ ಸರ್ಕಾರ, ಪಠ್ಯಪುಸ್ತಕಗಳನ್ನು ಪಕ್ಷಪುಸ್ತಕವನ್ನಾಗಿ ಮಾಡಿತು. ಸುಮಾರು ಒಂದು ತಿಂಗಳ ಕಾಲ ರಾಜ್ಯದಲ್ಲಿ ಈ ವಿವಾದ ಚರ್ಚೆಯಾಯಿತು.

ರಾಷ್ಟ್ರಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು ತಿರುಚಿದ ಆರೋಪವನ್ನು ಎದುರಿಸುತ್ತಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳಿಗೆ ಹೆಸರಾದ ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಚಿಸಿತು. ಆದರೆ ಯಾವುದೇ ಆದೇಶವಿಲ್ಲದೆ ಈ ಸಮಿತಿಯು ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿತ್ತು. ಬಹುತೇಕ ಒಂದೇ ಸಮುದಾಯದ ಜನರಿದ್ದ ಈ ಸಮಿತಿಯು ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಮಾಡಿದ್ದ ಪರಿಷ್ಕರಣೆಗಳು ಆತಂಕಕಾರಿಯಾಗಿದ್ದವು.

ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುವುದು ಮುಂದುವರಿಯಿತು. ಕ್ರಿಶ್ಚಿಯನ್ನರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳಾಗುತ್ತಿರುವುದು ಕಂಡು ಬಂದರೂ ಸರ್ಕಾರ ನಿಷ್ಕ್ರಿಯವಾಗಿತ್ತು.‌‌ ಬಲವಂತವಾಗಿ, ಆಮಿಷವೊಡ್ಡಿ ದಲಿತರನ್ನು ಮತಾಂತರ ಮಾಡಲಾಗುತ್ತಿದೆ ಎಂಬ ವಾದವನ್ನು ತೇಲಿಬಿಡಲಾಯಿತು.‌ ದಲಿತರು ಅನುಭವಿಸುತ್ತಿರುವ ಅಸ್ಪೃಶ್ಯತೆಯ ನೋವು, ಸರ್ವರ್ಣೀಯರಿಂದ ಆಗುತ್ತಿರುವ ದೌರ್ಜನ್ಯಗಳ ಕುರಿತ ಪ್ರಶ್ನೆಗಳಿಗೆ ಈಗಲೂ ಬಿಜೆಪಿ ಹಾಗೂ ಸಂಘಪರಿವಾರದಿಂದ ಉತ್ತರವಿಲ್ಲ.‌‌ ಇದರ ನಡುವೆ ಮತಾಂತರ ನಿಷೇಧ ಮಸೂದೆಯನ್ನು ಜಾರಿಗೊಳಿಸಿ, ಶ್ರೇಣೀಕೃತ ಸಮಾಜದ‌ ಯಥಾಸ್ಥಿತಿಗೆ‌ ಸರ್ಕಾರ ಪ್ರಯತ್ನಿಸಿತು.‌

ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳನ್ನು‌ ಧರಿಸಬಾರದು, ಏಕರೂಪತೆ ಪಾಲಿಸಬೇಕೆಂದು‌ ಆರಂಭವಾದ ಹಿಜಾಬ್‌ ಪ್ರಕರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು, ಹೈಕೋರ್ಟ್ ಮೆಟ್ಟಿಲೇರಿ ಈಗ ಸುಪ್ರೀಂಕೋರ್ಟ್‌ವರೆಗೆ ಹೋಯಿತು.‌

ಉರಿಗೌಡ, ನಂಜೇಗೌಡ ಎಂಬ ಪಾತ್ರಗಳನ್ನು ಚುನಾವಣೆ ಕಣಕ್ಕೆ ತರಲಾಯಿತು. ಇವರೇ ಟಿಪ್ಪುವನ್ನು ಕೊಂದಿದ್ದು ಎಂದು ಬಿಂಬಿಸಲು ಯತ್ನಿಸಿ ಸೋತರು. ನಕಲಿ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ ಎಂಬುದು ಮತದಾರರಿಗೆ ಅರ್ಥವಾಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಮಧ್ಯಪ್ರವೇಶಿಸಿದ ಬಳಿಕ ಬಿಜೆಪಿ ನಾಯಕರು ‘ಉರಿಗೌಡ, ನಂಜೇಗೌಡ ವಿವಾದ’ದಿಂದ ಹಿಂದೆ ಸರಿದರು. ಕೋಮುದ್ವೇಷ ಪ್ರಕರಣಗಳಲ್ಲಿ ಪರಿಹಾರ ನೀಡುವಾಗ ತಾರತಮ್ಯವನ್ನು ತೋರಿತು. ಇಷ್ಟೆಲ್ಲ‌ ದ್ವೇಷಕಾರುವ ಪ್ರವೃತ್ತಿ ಹೆಚ್ಚಾಗುತ್ತಿರುವಾಗ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯೂ ಹೆಚ್ಚಿತ್ತು.

4.ಮೀಸಲಾತಿ ಗಿಮಿಕ್ ಮತ್ತು ಒಳಮೀಸಲಾತಿಯ ಗೊಂದಲ

ಶತಾಯಗತಾಯ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ಮೀಸಲಾತಿ ವಿಚಾರದಲ್ಲಿ ಗಿಮಿಕ್‌ಗಳನ್ನು ಮಾಡಿತು. ಲಿಂಗಾಯತರು ಮತ್ತು ಒಕ್ಕಲಿಗರಿಗೆ ತಲಾ ಎರಡು ಪರ್ಸೆಂಟ್ ಮೀಸಲಾತಿಯನ್ನು ನೀಡುತ್ತೇವೆಂದು ಮುಸ್ಲಿಮರ ಮೀಸಲಾತಿಯನ್ನು ಕಿತ್ತುಹಾಕಲಾಯಿತು. ಒಬಿಸಿ ವರ್ಗದಲ್ಲಿ ವೈಜ್ಞಾನಿಕವಾಗಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಬಿಜೆಪಿ ಕೈಗೊಂಡ ನಿರ್ಧಾರ ಒಕ್ಕಲಿಗರು ಮತ್ತು ಲಿಂಗಾಯತರಲ್ಲಿಯೇ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಇನ್ನೊಬ್ಬರ ಅನ್ನವನ್ನು ಕಿತ್ತು, ಮತ್ತೊಬ್ಬರಿಗೆ ಹಂಚುವ ಕಿತಾಪತಿ ಇದೆಂದು ಸಮುದಾಯಗಳು ಭಾವಿಸಿದವು. ಒಕ್ಕಲಿಗ ಸಮುದಾಯದ ಪ್ರಭಾವಿ ನಂಜಾವಧೂತ ಸ್ವಾಮೀಜಿಯವರು, “ಒಕ್ಕಲಿಗರು ಇನ್ನೊಬ್ಬರ ಅನ್ನ ಕಿತ್ತು ತಿನ್ನುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.

ಬಿಜೆಪಿ ಮೀಸಲಾತಿ ವಿರೋಧಿ ಎಂಬ ಟ್ಯಾಗ್ ಮೊದಲಿನಿಂದಲೂ ಹೊಂದಿದೆ. ಆದರೆ ಚುನಾವಣೆಯ ಕೊನೆ ಕ್ಷಣದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸಿದ್ದೇವೆ ಎಂದು ಬಿಂಬಿಸಿಕೊಳ್ಳಲು ಹೊರಟಿತು. ಆದರೆ ಕೇಂದ್ರ ಸರ್ಕಾರದ ಮುಂದಕ್ಕೆ ಮೀಸಲಾತಿ ಹೆಚ್ಚಳದ ಪ್ರಸ್ತಾವನೆ ಹೋಗಿಯೇ ಇರಲಿಲ್ಲ. ಹೀಗಿರುವ ಒಳಮೀಸಲಾತಿ ಜಾರಿ ಮಾಡಿದ್ದೇವೆಂದು ಹೇಳಿತು. ಜಾರಿಯೇ ಆಗದಿರುವ ಮೀಸಲಾತಿ ಹೆಚ್ಚಳದಲ್ಲಿ ಒಳಮೀಸಲಾತಿ ಮಾಡಿದ್ದೇವೆಂಬ ಬಿಜೆಪಿಯ ನಡೆ ಗೊಂದಲ ಮೂಡಿಸಿತು. ಒಳಮೀಸಲಾತಿ ವಿಚಾರ ಬಂಜಾರ ಸಮುದಾಯದಲ್ಲಿ ಕಿಚ್ಚು ಹಚ್ಚಿತು. ಇತ್ತ ಮಾದಿಗ ಸಮುದಾಯವೂ ಇದು ಗೊಂದಲಕಾರಿಯಾಗಿದೆ ಎಂಬುದನ್ನು ಒಪ್ಪಿಕೊಂಡಿತು.

2018ರಲ್ಲಿ ಬಿಜೆಪಿಯಿಂದ ಕೈತಪ್ಪಿ ಹೋಗಿದ್ದ ದಲಿತರ ಮತಗಳು ಮತ್ತೆ ಮರಳಿ ಕಾಂಗ್ರೆಸ್ ಸೇರಿದವು. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದು ಪರಿಣಾಮ ಬೀರಿದೆ. ದಲಿತರ ಮತಗಳು ಸಾಲಿಡ್ ಆಗಿ ಕಾಂಗ್ರೆಸ್‌ಗೆ ಬಂದವು.

5.ಕಾಂಗ್ರೆಸ್‌ ನಾಯಕತ್ವದಲ್ಲಿನ ಒಗ್ಗಟ್ಟು ಮತ್ತು ಕಾಂಗ್ರೆಸ್ಸಿನ ಭರವಸೆಗಳು: ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯನವರ ನಡುವೆ ಹೊಂದಾಣಿಕೆ ಇಲ್ಲ ಎಂದು ಬಿಜೆಪಿ ಪ್ರಚಾರ ಮಾಡುತ್ತಿದ್ದಾಗಲೆಲ್ಲ ಈ ಇಬ್ಬರು ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಒಂದಾಗಿ ಚುನಾವಣಾ ಪ್ರಚಾರ ಮಾಡಿದರು.

ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿತು. ಆದರೆ ಗ್ಯಾರಂಟಿಗಳನ್ನು ಮೋದಿ ಮತ್ತು ಬಿಜೆಪಿ ನಾಯಕರು ಗೇಲಿ ಮಾಡಿದರು. ಅದಕ್ಕೆ ಉತ್ತರವಾಗಿ ಬಿಜೆಪಿಯಿಂದ ಯಾವುದೇ ಭರವಸೆಗಳು ಕಂಡುಬರಲಿಲ್ಲ. ಏನು ಕೆಲಸ ಮಾಡುತ್ತೇವೆ ಎಂಬ ಸ್ಪಷ್ಟ ಉತ್ತವನ್ನು ನೀಡಲಿಲ್ಲ. ಬೆಲೆ ಏರಿಕೆಗಳಿಂದ ತತ್ತರಿಸಿದ್ದ ಜನಕ್ಕೆ ಕಾಂಗ್ರೆಸ್‌ನ ಗ್ಯಾರಂಟಿಗಳು ಹೊಸ ಭರವಸೆಗಳನ್ನು ಹುಟ್ಟಿಹಾಕಿದವು. ರಾಹುಲ್ ಗಾಂಧಿಯವರ ಸಜ್ಜನ ಮಾತುಗಾರಿಕೆ, ಭಾರತ್‌ ಜೋಡೋದಂತಹ ಯಾತ್ರೆ ಕರ್ನಾಟಕದಲ್ಲಿ ಸಾಗಿದ್ದು- ರಾಜ್ಯ ಕಾಂಗ್ರೆಸ್‌ನೊಳಗೆ ಒಗ್ಗಟ್ಟು ಪ್ರದರ್ಶನಕ್ಕೆ ಕಾರಣವಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...