ಜೆಎನ್‌ಯು ವಿದ್ಯಾರ್ಥಿಗಳ ಪರ ನಿಂತಿದ್ದಕ್ಕಾಗಿ ಟ್ರೋಲ್‌ಗೆ ಒಳಗಾದುದರ ಕುರಿತು ಮಾತನಾಡಿರುವ ಬಾಲಿವುಟ್ ಖ್ಯಾತ ನಟಿ ದೀಪಿಕಾ ಪಡುಕೋಣೆ “ಅವರು ನನ್ನ ಸಿನಿಮಾದ ರೇಟಿಂಗ್ ಬದಲಿಸಬಹುದು, ಆದರೆ ನನ್ನ ಮನಸ್ಸು ಬದಲಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ದಿಪೀಕಾ ಅಭಿಮಾನಿಗಳ ಕ್ಲಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ದೀಪಿಕಾ ತನ್ನ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. “ಅನ್ಹೋನ್ ಮೇರಿ ಐಎಮ್‌ಡಿಬಿ ರೇಟಿಂಗ್ ಬಡ್ಲಿ ಹೈ, ಮೇರಾ ಮನ್ ನಹಿ (ಅವರು ನನ್ನ ಐಎಮ್‌ಡಿಬಿ ರೇಟಿಂಗ್ ಅನ್ನು ಬದಲಾಯಿಸಿದ್ದಾರೆ, ನನ್ನ ಮನಸ್ಸನ್ನಲ್ಲ)” ಎಂದಿದೆ.
ಆಸಿಡ್ ದಾಳಿಯ ಸಂತ್ರಸ್ತರ ಕುರಿತು ಮೂಡಿಬಂದ ಚಪಾಕ್ ಚಿತ್ರದಲ್ಲಿ ದೀಪಿಕಾ ಅವರ ಅಭಿನಯವನ್ನು ವಿಮರ್ಶಕರು ಶ್ಲಾಘಿಸುವುದರೊಂದಿಗೆ ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆದರೆ ಜನಪ್ರಿಯ ವಿಮರ್ಶೆ ಅಗ್ರಿಗೇಟರ್ ವೆಬ್‌ಸೈಟ್‌ನಲ್ಲಿ ಚಿತ್ರದ ಕುರಿತು ಅನೇಕ ಖಾತೆಗಳಿಂದ 1-ಸ್ಟಾರ್ ರೇಟಿಂಗ್‌ಗಳ ಪ್ರವಾಹದ ನಂತರ, ಚಪಾಕ್‌ನ ಐಎಮ್‌ಡಿಬಿ ರೇಟಿಂಗ್ ಅಂತಿಮವಾಗಿ 4.6 ಆಗಿತ್ತು.
ಮೇಘನಾ ಗುಲ್ಜಾರ್ ನಿರ್ದೇಶಿಸಿದ ಚಪಾಕ್ ಚಿತ್ರವು ಪ್ರೇಕ್ಷಕರನ್ನು ಮುಟ್ಟುವುದರಲ್ಲಿ ತನ್ನ ಗುರಿ ಸಾಧಿಸಿದೆ ಎಂದು ವ್ಯವಹಾರ ತಜ್ಞ ಗಿರೀಶ್ ಜೋಹರ್ ತಿಳಿಸಿದ್ದಾರೆ. ಅಲ್ಲದೇ ಈ ಚಿತ್ರವು ಈಗಾಗಲೇ 80 ಕೋಟಿಗೂ ಅಧಿಕಾ ಲಾಭ ಗಳಿಸಿದ್ದು, ನಿರ್ಮಾಣಕ್ಕೆ ಕೇವಲ 35 ಕೋಟಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ.


