ಲಕ್ನೋದ ಸರಕಾರಿ ಕಚೇರಿಯ ಮುಂದೆ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬನ ಶವವನ್ನು ತ್ಯಾಜ್ಯ ಸಾಗಿಸುವ ವಾಹನಕ್ಕೆ ತುಂಬಿದ ಅಮಾನವೀಯ ಘಟನೆ ನಡೆದಿದ್ದು, ವಿಡಿಯೊ ವೈರಲಾಗುತ್ತಿದ್ದಂತೆ ಎಚ್ಚೆತ್ತಿರುವ ಉತ್ತರ ಪ್ರದೇಶ ಸರ್ಕಾರ ಮೂವರು ಪೊಲೀಸರು ಸೇರಿದಂತೆ ಏಳು ಜನರನ್ನು ಅಮಾನತುಗೊಳಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಮೊಹಮ್ಮದ್ ಅನ್ವರ್ (45) ಎಂದು ಗುರುತಿಸಲಾಗಿದ್ದು. ಬಲರಾಂಪುರದ ಉತ್ರೂಲಾ ತಹಸೀಲ್ ಗೇಟ್ ಬಳಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಬಲರಾಂಪುರದ ನಿವಾಸಿಯಾದ ಅನ್ವರ್ ಸರ್ಕಾರಿ ಕಚೇರಿಗೆ ತೆರಳಿದ ವೇಳೆ ಗೇಟ್ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದರು.
ಕಚೇರಿಯ ಗೇಟ್ ಬದಿಯಲ್ಲೇ ಆ್ಯಂಬುಲೆನ್ಸ್ ವಾಹನ ನಿಲ್ಲಿಸಲಾಗಿತ್ತು. ಆದರೆ ಕೊರೋನ ವೈರಸ್ ಸೋಂಕು ಹರಡುವ ಭೀತಿಯಿಂದ ಶವವನ್ನು ಅದರಲ್ಲಿ ಸಾಗಿಸಲು ನಿರಾಕರಿಸಿದರು ಎನ್ನಲಾಗಿದೆ. ನಂತರ ಪೌರಕಾರ್ಮಿಕರು ಮೃತದೇಹವನ್ನು ಕಸದ ವ್ಯಾನ್‌ಗೆ ಹಾಕಿದ್ದರು. ಇದನ್ನು ಸ್ಥಳೀಯರು ವೀಡಿಯೊ ಮಾಡಿದ್ದು ನಂತರ ಜಾಲತಾಣಗಳಿಗೆ ಹರಿಯಬಿಟ್ಟಿದ್ದರು.
ಪೌರಕಾರ್ಮಿಕರು ಶವವನ್ನು ಎತ್ತಿ ತ್ಯಾಜ್ಯ ಸಾಗಿಸುವ ವಾಹನಕ್ಕೆ ತುಂಬಿಸುತ್ತಿರುವ 20 ಸೆಕೆಂಡಿನ ವಿಡಿಯೊ ವೈರಲಾಗುತ್ತಿದ್ದಂತೆ ಹಲವಾರು ಜನರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರಿ ಕಚೇರಿಯ ಮುಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಕಸ ತುಂಬುವ ವಾಹನಕ್ಕೆ ತುಂಬಿ ಕಳುಹಿಸಿದ ಅಮಾನವೀಯ ಘಟನೆ
ಸರ್ಕಾರಿ ಕಚೇರಿಯ ಮುಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಕಸ ತುಂಬುವ ವಾಹನಕ್ಕೆ ತುಂಬಿ ಕಳುಹಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.#NaanuGauri #DalithLivesMatters #MuslimsLivesMatters #InHumanity
Posted by Naanu Gauri on Friday, June 12, 2020
ಘಟನೆ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್, “ಇದು ಅಮಾನವೀಯ ಘಟನೆ, ಕೊರೋನ ಭೀತಿಯಿಂದ ಹಾಗೆ ಮಾಡಿರಬಹುದು. ಆದರೆ ಅದು ಆಗಬಾರದಿತ್ತು. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿಲಾಗಿದ್ದು, ಪಿಎಸ್‌ಐ ರವೀಂದ್ರ ಕುಮಾರ್ ರಮಣ್, ಪೇದೆಗಳಾದ ಶುಭಂ ಪಾಟೀಲ್ ಮತ್ತು ಶೈಲೇಂದ್ರ ಶರ್ಮಾ ಅವರನ್ನು ತಕ್ಷಣ ಅಮಾನತು ಮಾಡಲಾಗಿದೆ” ಎಂದಿದ್ದಾರೆ.
ಓದಿ: ಉತ್ತರ ಪ್ರದೇಶದ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ದಲಿತ ಬಾಲಕನನ್ನು ಗುಂಡಿಕ್ಕೆ ಹತ್ಯೆ


