ಸುಮಾರು 1998-99ರ ಕಾಲ. ಎಲ್‌ಎಲ್‌ಬಿ ಓದುತ್ತಿರುವ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಸಾಗುತ್ತಿದ್ದಾಗ ಕೆಲ ಮಕ್ಕಳು ಪ್ಯಾಕೆಟ್ ಕ್ಯಾಲೆಂಡರ್ ತೆಗೆದುಕೊಳ್ಳಿ ಎಂದು ದುಂಬಾಲು ಬೀಳುತ್ತಾರೆ. ಆತ ಭಗತ್ ಸಿಂಗ್ ಫೋಟೊ ಇರುವ ಕ್ಯಾಲೆಂಡರ್ ಇದ್ದರೆ ಮಾತ್ರ ತೆಗೆದುಕೊಳ್ಳುತ್ತೇನೆ ಎನ್ನುತ್ತಾರೆ. ಅಲೆಮಾರಿ ಸಮುದಾಯಕ್ಕೆ ಸೇರಿದ, ಭಿಕ್ಷೆ ಬೇಡಿ, ಚಿಂದಿ ಆಯ್ದು, ಸಣ್ಣಪುಟ್ಟ ವಸ್ತುಗಳನ್ನು ಮಾರಿ ಬದುಕು ಕಟ್ಟಿಕೊಂಡಿದ್ದ ಆ ಮಕ್ಕಳಿಗೆ ಭಗತ್ ಸಿಂಗ್ ಎಂದರೆ ಯಾರೆಂದು ತಿಳಿಯಬೇಕು?
ಆಗ ಆ ಯುವಕನಿಗೆ, ಈ ಮಕ್ಕಳು ಯಾರು? ಇಲ್ಲಿ ಏನು ಮಾಡುತ್ತಿದ್ದಾರೆ? ಅವರ ಕುಟುಂಬ ಪರಿಸ್ಥಿತಿಯೇನು ಮುಂತಾದ ವಿಷಯಗಳನ್ನು ತಿಳಿಯಬೇಕೆನ್ನಿಸಿ ಅದರ ಬೆನ್ನು ಬಿದ್ದು ಜೊತೆಗೆ ಆ ಸಮುದಾಯಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರ ಪರಿಣಾಮ ಸುಮಾರು 21 ವರ್ಷಗಳ ನಂತರ ಆ ಅಲೆಮಾರಿ ಸಮುದಾಯವೀಗ ಶಾಶ್ವತ ನೆಲೆ ಪಡೆದುಕೊಳ್ಳುವ ಹಾದಿಯಲ್ಲಿದೆ. ಅಲ್ಲಿನ ಮಕ್ಕಳು ಶಾಲೆಗಳ ಮೆಟ್ಟಿಲು ಹತ್ತಿ ಎಸ್‌ಎಸ್‌ಎಲ್‌ಸಿ ಪಾಸು ಮಾಡುವ ಹಂತಕ್ಕೆ ಬಂದಿದ್ದಾರೆ. ಶಾಲಾ ಕ್ರೀಡಾಕೂಟಗಳಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಇರುವ ಬೈಪಾಸ್‌ನಲ್ಲಿ ಹಲವು ಜೋಪಡಿಗಳನ್ನು ಹಾಕಿಕೊಂಡು ವಾಸಿಸುತ್ತಿರುವ ದುರುಗಮುರುಗಿ, ಶಿಳ್ಳೇಕ್ಯಾತ, ಹಂದಿಜೋಗಿ, ಬೋವಿ ಸಮುದಾಯಕ್ಕೆ ಸೇರಿದ ಅಲೆಮಾರಿಗಳು ನಿಮ್ಮ ಗಮನಕ್ಕೆ ಬರಬಹುದು. ಈಗ ಅದನ್ನು ಸ್ಲಂ ಎಂದು ಘೋಷಿಸಿ ಎಲ್ಲರಿಗೂ ಶಾಶ್ವತ ಸೂರು ಒದಗಿಸಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿಯಿದೆ. ಜಿಲ್ಲಾಧಿಕಾರಿಗಳು, ಸ್ಲಂ ಬೋರ್ಡ್ ಅನುಮತಿ ನೀಡಿದ್ದು, ನಗರ ಪಾಲಿಕೆ ನಿರ್ಣಯ ಪಾಸು ಮಾಡಿದರೆ ಇಲ್ಲಿನ 45 ಕುಟುಂಬಗಳು ನೆಮ್ಮದಿಯ ನಿಟ್ಟುಸಿರುಬಿಡಬಹುದು. ಇದಕ್ಕಾಗಿ ಈ ಅಲೆಮಾರಿ ಸಮುದಾಯದ ಸದಸ್ಯರನ್ನು ಒಳಗೊಂಡು ‘ನಿರಂತರ ಶಿವಮೊಗ್ಗ’ ಸಂಘಟನೆ ನೂರಾರು ಹೋರಾಟಗಳನ್ನು ನಡೆಸಿದೆ. ಮೇಲೆ ತಿಳಿಸಿದಂತೆ ಅಂದು ಎಲ್‌ಎಲ್‌ಬಿ ಓದುತ್ತಿದ್ದ ಯುವಕನೇ ಇಂದಿನ ‘ನಿರಂತರ ಶಿವಮೊಗ್ಗ’ ತಂಡದ ಸದಸ್ಯರಾದ ಮತ್ತು ಖ್ಯಾತ ವಕೀಲರಾದ ಅನಿಲ್ ಕುಮಾರ್‌ರವರು. ಆ ಸಂಘಟನೆಯ ಎಡೆಬಿಡದ ಹೋರಾಟ ಮತ್ತು ಅಲೆಮಾರಿಗಳ ಛಲದಿಂದಾಗಿ ಆ ಸಮುದಾಯಗಳು ಕೆಲವು ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಂಡು ಗೌರವದ ಬದುಕಿನತ್ತ ಮುಖ ಮಾಡಿದೆ.

ಈ ಮೊದಲು ಈ ಅಲೆಮಾರಿ ಸಮುದಾಯದ ಸದಸ್ಯರು ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ರೈಲ್ವೆ ಹಳಿ ಪಕ್ಕ ಟೆಂಟ್ ಹಾಕಿ ವಾಸಿಸುತ್ತಿದ್ದರು. ರೈಲ್ವೇ ಇಲಾಖೆ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿತು. ಆಗ ‘ನಿರಂತರ ಶಿವಮೊಗ್ಗ’ ತಂಡ ಅವರಿಗೊಂದು ಶಾಶ್ವತ ನೆಲೆ ನಿರ್ಮಿಸಲು ಹೋರಾಟ ಆರಂಭಿಸಿತು. ಪ್ರತಿಭಟನೆಗಳ ಜೊತೆಗೆ ಶಿವಮೊಗ್ಗದ ಅಂದಿನ ಜಿಲ್ಲಾಧಿಕಾರಿಗಳಾದ ಪೊನ್ನುರಾಜ್‌ರವರ ಬಳಿ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಲಾಯಿತು. ಈ ಅಲೆಮಾರಿ ಸಮುದಾಯದ ಸದಸ್ಯರಿಗೆ, ಅವರ ವೃತ್ತಿಗಳ ಹೆಸರಿನಲ್ಲಿ ಎಸ್‌ಟಿ ಜಾತಿ ಪ್ರಮಾಣಪತ್ರ ಕೊಡುವಂತೆ ಅವರು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗಳಿಗೆ ಆದೇಶಿಸಿದರು. ಆನಂತರ ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಲಭಿಸಿತು. ಅದರ ಆಧಾರದಲ್ಲಿ ವೃದ್ದಾಪ್ಯ ವೇತನ, ವಿಧವಾವೇತನ, ವಿಶೇಷ ಚೇತನ ಸೌಲಭ್ಯಗಳು ಸಾಧ್ಯವಾದವು.

ಹಂದಿ ಸಾಕುವ, ಚಿಂದಿ ಆಯುವ, ಗಿಳಿ ಶಾಸ್ತ್ರ ಹೇಳುವ, ಚಾವಟಿಯಿಂದ ಮೈಮೇಲೆ ಹೊಡೆದುಕೊಂಡು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದ ಈ ಜನರು ಆಧುನಿಕ ಜಗತ್ತಿನೊಂದಿಗೆ ಅಷ್ಟಾಗಿ ತೆರೆದುಕೊಂಡಿಲ್ಲ. ನಿಮಗೆ ಮನೆ ಬೇಕೆಂದರೆ ಮಕ್ಕಳನ್ನು ಓದಿಸಿ ಎಂಬ ಸಂಘಟನೆಗಳ ಒತ್ತಾಯಕ್ಕೆ ಮಣಿದು ಮಕ್ಕಳನ್ನು ಭಿಕ್ಷೆಗೆ ಕಳಿಸುವುದನ್ನು, ದುಡಿಮೆಗೆ ಕಳಿಸುವುದನ್ನು ನಿಲ್ಲಿಸಿ ಶಾಲೆಗಳಿಗೆ ಸೇರಿಸಿದರೂ, ಶಾಲಾ ವಾತಾವರಣಕ್ಕೆ ಮಕ್ಕಳು ಹೊಂದಿಕೊಳ್ಳಲು ಹಲವು ವರ್ಷಗಳೇ ಹಿಡಿದಿದೆ. ಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಮಕ್ಕಳು ಪ್ರತಿಭಾವಂತರಾದರೂ ಸಹ, ಕ್ರೀಡೆ ಆಟೋಟಗಳಲ್ಲಿ ಮುಂದಿದ್ದರೆ ಹೊರತು ಪರೀಕ್ಷೆ ಪಾಸು ಮಾಡುವುದು ತೀರಾ ಕಷ್ಟದ ಕೆಲಸವಾಗಿತ್ತು.
ಎಷ್ಟೋ ಮಕ್ಕಳು ಶಾಲೆಗೆ ಸೇರಿದರೂ ಸಹ ಅರ್ಧದಲ್ಲಿಯೇ ಶಾಲೆ ಬಿಟ್ಟು ಭಿಕ್ಷಾಟನೆಗೆ, ಚಿಂದಿ ಆಯಲು ಹೋಗಿಬಿಡುತ್ತಿದ್ದರು. ಇಂತಹ ಮಕ್ಕಳು ಇಂದು ಶಾಲೆ ಮೆಟ್ಟಿಲು ಹತ್ತಿ ಒಂದಷ್ಟು ಕಲಿಯುತ್ತಿದ್ದಾರೆ ಎಂದರೆ ಅದರ ಪೂರ್ಣ ಶ್ರೇಯ ನಿರಂತರ ತಂಡದ ಸದಸ್ಯ ಹಾಗೂ ನಮ್ಮ ನಾಡು ಪತ್ರಿಕೆಯ ವರದಿಗಾರರಾದ ಜಾರ್ಜ್ ಸಲ್ಡಾನಾರವರಿಗೆ ಸಲ್ಲಬೇಕು. ಕಳೆದ ಹತ್ತಾರು ವರ್ಷಗಳಿಂದ ಅವರು ಸಂಜೆ ವೇಳೆ ಪ್ರತಿನಿತ್ಯ ಈ ಅಲೆಮಾರಿ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುವುದನ್ನು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ. ಪ್ರತಿದಿನ ನಮ್ಮನಾಡು ಪತ್ರಿಕೆ ಕೆಲಸ ಮುಗಿಸಿ ಸೈಕಲ್‌ನಲ್ಲಿ ಈ ಅಲೆಮಾರಿಗಳು ವಾಸವಿರುವ ಸ್ಲಂನತ್ತ ಬರುವ ಅವರು ಅಲ್ಲೆ ಇರುವ ದೇವರಾಜು ಅರಸು ಕಟ್ಟಡದ ಜಗುಲಿ ಮೇಲೆ ಮಕ್ಕಳಿಗೆ ಪಾಠ ಕಲಿಸುತ್ತಾರೆ. ಶಾಲೆ-ಪಾಠ ವಾತವಾರಣದ ಪರಿಚಯವೇ ಇಲ್ಲದ ನೂರಾರು ಮಕ್ಕಳನ್ನು ಶಾಲೆಗೆ ಸೇರಿಸುವುದು, ಅವರಿಗೆ ಸಂಜೆ ವೇಳೆಯೂ ಪಾಠ ಹೇಳಿಕೊಡುವುದು ಸುಲಭದ ಮಾತಲ್ಲ. ಆದರೆ ಜಾರ್ಜ್ ಸಲ್ಡಾನರವರ ತಾಳ್ಮೆ, ಬದ್ಧತೆ ಮತ್ತು ಸತತ ಪರಿಶ್ರಮದ ಪ್ರತಿಫಲವಾಗಿ ಇದು ಸಾಧ್ಯವಾಗಿದೆ. ಅದಕ್ಕಾಗಿ ಎಲ್ಲ ಮಕ್ಕಳಿಗೆ ಜಾರ್ಜ್ ಸಲ್ಡಾನರವರೆಂದರೆ ಅಚ್ಚುಮೆಚ್ಚು. ಅದೇ ರೀತಿಯಾಗಿ ಕೊಟ್ರಪ್ಪನವರು ಮಕ್ಕಳಿಗೆ ರಂಗಭೂಮಿ ಚಟುವಟಿಕೆಗಳ ಜೊತೆಗೆ ನಾಟಕ ಕಲಿಸುತ್ತಾರೆ. ಪ್ರತಿವರ್ಷ ಬೇಸಿಗೆ ಶಿಬಿರ ನಡೆಸುತ್ತಾರೆ. ಈ ರೀತಿಯ ಹತ್ತು ಹಲವು ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಅವರ ಪೋಷಕರಿಗೆ ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿದ ಪರಿಣಾಮ ಇಲ್ಲಿನ ಸುಮಾರು 100 ಮಕ್ಕಳು ಈಗ ಶಾಲೆಗಳಿಗೆ ಹೋಗುತ್ತಿದ್ದಾರೆ. ಮಹತ್ವದ ವಿಷಯವೆಂದರೆ ಈ ಸಮುದಾಯ 30 ವರ್ಷದಿಂದ ಇಲ್ಲಿ ನೆಲೆನಿಂತಿದ್ದರೂ ಮೊದಲ ಬಾರಿಗೆ ಅನುಷಾ ಎಂಬ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸು ಮಾಡುವ ಮೂಲಕ ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾಳೆ.

“ನಾವು ಮಕ್ಕಳನ್ನು ಓದಿಸಬೇಕೆಂದಿರಲಿಲ್ಲ. ಆದರೆ ಯಾವಾಗ ಜಾರ್ಜ್ ಸರ್ ಸಿಕ್ಕರೋ ಅಲ್ಲಿಂದ ನಮ್ಮ ಅದೃಷ್ಟವೇ ಬದಲಾಯಿತು. ನಮ್ಮ ಮಕ್ಕಳು ನಮ್ಮಂತೆಯೇ ತುತ್ತು ಅನ್ನಕ್ಕಾಗಿ ಊರೂರು ಅಲೆಯಬೇಕಾದ ಬದಲಿಗೆ ನಾಲ್ಕು ಅಕ್ಷರ ಕಲಿಯುತ್ತಿದ್ದಾರೆ. ನಮಗೆಲ್ಲಾ ಏನೇನು ಸೌಲಭ್ಯಗಳು ಸಿಕ್ಕಿವೆಯೋ ಅದಕ್ಕೆ ಜಾರ್ಜ್ ಸರ್ ಕಾರಣ. ಅವರಿಲ್ಲದಿದ್ದರೆ ನಮ್ಮ ಮಕ್ಕಳ್ಯಾರೂ ಶಾಲೆಗೆ ಹೋಗುತ್ತಿರಲಿಲ್ಲ ಅನ್ನುತ್ತಾರೆ” ಅಲ್ಲಿನ ನಿವಾಸಿ ಗಂಗಣ್ಣಿ.

ಚಿಕ್ಕವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡ, ಅನಾರೋಗ್ಯಪೀಡಿತ ತಾಯಿಯ ಶುಶ್ರೂಷೆ ಮಾಡುವ ಜವಾಬ್ದಾರಿ ಹೊಂದಿರುವ ಅನುಷಾ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಮನೆಗೆಲಸ ಮಾಡಲು ಹೋಗುತ್ತಾಳೆ. ತನ್ನ ಮನೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲದಿದ್ದರೂ ಸಹ ಕಷ್ಟಪಟ್ಟು ಓದಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೩೧೫ ಅಂಕ ಗಳಿಸಿದ್ದಾಳೆ. ಅಕ್ಷರ ಕಾಣದ ಈ ಸಮುದಾಯದಲ್ಲಿ ಆಕೆಯ ಸಾಧನೆ ಮಹತ್ವದ್ದೆ. ಇದು ಇತರರಿಗೆ ಸ್ಪೂರ್ತಿಯಾಗಬೇಕೆಂದು ಬಯಸಿ ನಿರಂತರ ತಂಡವು ಆಕೆಯನ್ನು ಪ್ರಥಮ ಪಿಯುಸಿಗೆ ಕಾಲೇಜಿಗೆ ಸೇರಿಸಿದ್ದಲ್ಲದೇ ಆಕೆಯ ವಿದ್ಯಾಭ್ಯಾಸದ ಖರ್ಚಿಗೆ 40 ಸಾವಿರ ರೂ ಸಹಾಯಧನ ಒದಗಿಸಿದೆ.
ನಾನು ಹುಟ್ಟಿದಾಗಿನಿಂದ ಈ ಟೆಂಟ್‌ನಲ್ಲೇ ವಾಸಿಸುತ್ತಿದ್ದೇವೆ. ಸರಿಯಾದ ಕರೆಂಟ್ ಇಲ್ಲ. ಹಾಕಿಕೊಟ್ಟಿದ್ದ ಸೋಲಾರ್ ಲೈಟ್ ಕೂಡ ಕೆಟ್ಟುಹೋಗಿದೆ. ಅಮ್ಮನಿಗೆ ಹುಷಾರಿಲ್ಲ. ಅಣ್ಣ ಮಾತು ಕೇಳುವುದಿಲ್ಲ, ಹಾಗಾಗಿ ನಾನು ಪ್ರತಿನಿತ್ಯ ಕೆಲಸ ಮಾಡಿ ಓದುತ್ತಿದ್ದೇನೆ. ಟೆಂಟ್‌ನಲ್ಲಿದ್ದು ಚೆನ್ನಾಗಿ ಮಾರ್ಕ್ಸ್ ತೆಗೆದಿದ್ದೀಯ ಅಂತ ಹಲವರು ಹೇಳುತ್ತಿದ್ದಾರೆ. ಇನ್ನೂ ಚೆನ್ನಾಗಿ ಓದುತ್ತೇನೆ ಎನ್ನುತ್ತಾಳೆ ದಿಟ್ಟ ಸಾಧಕಿ ಅನುಷಾ.
ಸುನಿಲ್ ಕುಮಾರ್ ಶಿರನೆಳ್ಳಿ, ಶೃಂಗೇಶ್ ವೈ.ವಿ, ಜಾರ್ಜ್ ಸಲ್ಡಾನಾ, ಕೊಟ್ರಪ್ಪ, ಡಾ. ಮಂಜುನಾಥ್ ಮತ್ತು ಅನಿಲ್ ಕುಮಾರ್‌ರವರು ನಿರಂತರ ತಂಡದ ಬೆನ್ನೆಲುಬಾಗಿದ್ದಾರೆ. ಈ ಸಮುದಾಯ ಮುಖ್ಯವಾಹಿನಿಗೆ ಬರಲು ಕಾರಣಕರ್ತರಾಗಿದ್ದಾರೆ. ದಯಾನಂದ್‌ರವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಈ ಅಲೆಮಾರಿ ಸಮುದಾಯ ವಾಸಿಸುತ್ತಿರುವ ಜಾಗವನ್ನು ಸ್ಲಂ ಎಂದು ಘೋಷಿಸಿ ಮೂಲಭೂತ ಸೌಲಭ್ಯಗಳನ್ನು ನೀಡಲು ಪ್ರಸ್ತಾಪ ಕಳಿಸಿಕೊಟ್ಟಿದ್ದಾರೆ. ಈಗ ಆ ಸಮುದಾಯವು ತನ್ನ ಹಕ್ಕುಗಳಿಗಾಗಿ ಹೋರಾಡುವ ಶಕ್ತಿ ಪಡೆದುಕೊಂಡಿದೆ. ಈಗ ಇಲ್ಲಿನ ಜನ ಮಿಕ್ಸಿ ರಿಪೇರಿ, ಪಾತ್ರೆಗಳ ಮಾರಾಟ ಇತ್ಯಾದಿ ಕಾಯಕಗಳಲ್ಲಿ ನಿರತರಾಗಿದ್ದಾರೆ.

ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ನಿರಂತರ ಸಂಘಟನೆ ಈ ಸಮುದಾಯದ ಏಳಿಗೆಗೆ ಕೆಲಸ ಮಾಡುತ್ತಿದೆ. ಆದರೆ ಅಲ್ಲಿನ ಬದಲಾವಣೆಗಳಿಗೆ ಆ ಜನರೇ ನಡೆಸಿದ ನೂರಾರು ಹೋರಾಟಗಳು ಕಾರಣವಾಗಿವೆ. ಅಲ್ಲಿನ ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ವಹಿಸುತ್ತಿರುವುದು ನಮಗೆ ಸಂತಸ ತಂದಿದೆ. ಅವರಿಗೆ ಮನೆ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ನಾವು ಪ್ರಯತ್ನ ಮುಂದುವರೆಸುತ್ತೇವೆ ಎನ್ನುತ್ತಾರೆ ವಕೀಲರಾದ ಅನಿಲ್ ಕುಮಾರ್‌ರವರು.
ರಾಜ್ಯದಲ್ಲಿ ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮತ್ತು ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳೆಂದರೆ ಅದಿವಾಸಿಗಳು, ಅಲೆಮಾರಿಗಳು. ಅದರಲ್ಲಿಯೂ ಸಮಾಜದ ಕಣ್ಣಿಗೆ ಬೀಳದ ಈ ಹತ್ತಾರು ಉಪಜಾತಿಗಳನ್ನು ಮುಖ್ಯವಾಹಿನಿಗೆ ತರುವ, ಅವರ ಸಬಲೀಕರಣಕ್ಕೆ ಒತ್ತು ಕೊಡುವ ಬಹಳ ಒಳ್ಳೆಯ ಅನುಕರಣೀಯ ಕೆಲಸವನ್ನು ‘ನಿರಂತರ ಶಿವಮೊಗ್ಗ’ ಮಾಡುತ್ತಿದೆ. ದಲಿತರು, ಅಸ್ಪೃಶ್ಯರು, ಅಲೆಮಾರಿಗಳು, ಆದಿವಾಸಿಗಳ ಪ್ರಗತಿಗೆ ಶ್ರಮಿಸುತ್ತಿರುವ ಅದರ ಸದಸ್ಯರು ತಮ್ಮ ದುಡಿಮೆಯ ಹಣವನ್ನು ವ್ಯಯಿಸಿ ನಾಡು ಕಟ್ಟುವ ಮಾದರಿ ಕೆಲಸ ಮಾಡುತ್ತಿದ್ದಾರೆ. ಈ ರಚನಾತ್ಮಕ ಚಳವಳಿ ಕರ್ನಾಟಕದೆಲ್ಲೆಡೆ ಪಸರಿಸಲಿ ಎಂದು ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿಗಳಾದ ಕೆ.ಎಲ್ ಅಶೋಕ್‌ರವರು ಶುಭ ಹಾರೈಸಿದ್ದಾರೆ.

ರಾಜ್ಯದ ಅಭಿವೃದ್ಧಿಯಲ್ಲಿ ಈ ರೀತಿ ಅಂಚಿಗೆ ತಳ್ಳಲ್ಪಟ್ಟ ನೂರಾರು ಸಮುದಾಯಗಳ ಪಾಲಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಈ ಅಲೆಮಾರಿ ಸಮುದಾಯಕ್ಕೆ, ಮನೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳು ಸಿಗಲಿ. ಅಲ್ಲಿನ ಮಕ್ಕಳು ವಿದ್ಯಾವಂತರಾಗಿ ಸಮುದಾಯದ ಹಿತಕ್ಕೆ ದುಡಿಯಲಿ ಎಂಬುದು ಪತ್ರಿಕೆಯ ಆಶಯ. ಅದೇ ರೀತಿಯಲ್ಲಿ ರಾಜ್ಯದೆಲ್ಲೆಡೆ ಇರುವ ಈ ರೀತಿಯ ಸಮುದಾಯಗಳ ಬೆನ್ನಿಗೆ ಜನಪರ ಸಂಘಟನೆಗಳು ನಿಂತರೆ ಮಹತ್ವದ ಬದಲಾವಣೆ ತರಬಹುದು ಎಂಬುದನ್ನು ಶಿವಮೊಗ್ಗದ ನಿರಂತರ ಸಂಘಟನೆ ಸಾಬೀತುಪಡಿಸಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಹಲವು ಸಂಘಟನೆಗಳು ಇಂತಹ ಪ್ರಯೋಗ ನಡೆಸಿವೆ. ಇವು ಮಾದರಿಯಾಗಲಿ.
- ಮುತ್ತುರಾಜು
ಇದನ್ನೂ ಓದಿ: ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!


