ರಾಜ್ಯದ ಏಕರೂಪ ನಾಗರಿಕ ಸಂಹಿತೆಯಿಂದ (ಯುಸಿಸಿ) ಸಮಸ್ಯೆಗೆ ಒಳಗಾದವರು ಅಥವಾ ಅಧಿಕಾರಿಗಳಿಂದ ಸಂಬಂಧಿತ ಕ್ರಮವನ್ನು ಎದುರಿಸುತ್ತಿರುವ ವ್ಯಕ್ತಿಗಳು ನಮ್ಮನ್ನು (ನ್ಯಾಯಾಲಯ) ಸಂಪರ್ಕಿಸಿದರೆ, ಅವರ ಸಮಸ್ಯೆಯನ್ನು ಆಲಿಸಲಾಗುವುದು ಎಂದು ಉತ್ತರಾಖಂಡ ಹೈಕೋರ್ಟ್ ಶುಕ್ರವಾರ (ಫೆ.14) ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಅಲೋಕ್ ಮಹ್ರಾ ಅವರ ಪೀಠವು 2024ರ ಏಕರೂಪ ನಾಗರಿಕ ಸಂಹಿತೆ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಜನವರಿ 27, 2025ರಂದು ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿಯಾದ ಬಳಿಕ ರಾಜ್ಯದ ಎಲ್ಲಾ ನಾಗರಿಕರ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರಕ್ಕೆ ಏಕರೂಪದ ನಿಯಮಗಳನ್ನು ಅನ್ವಯಿಸಲಾಗುತ್ತಿದೆ. ಇದಕ್ಕೂ ಮುನ್ನ, ವಿವಿಧ ಧಾರ್ಮಿಕ ಮತ್ತು ಬುಡಕಟ್ಟು ಗುಂಪುಗಳು ಅವುಗಳ ನಿರ್ದಿಷ್ಟ ನಿಯಮಗಳನ್ನು ಪಾಲಿಸುತ್ತಿತ್ತು. ಈ ನಿಯಮಗಳು ಹೆಚ್ಚಾಗಿ ಧಾರ್ಮಿಕ ಗ್ರಂಥಗಳನ್ನು ಅನುಸರಿಸಿವೆ.
ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯ ಪ್ರಕಾರ, ಎಲ್ಲಾ ಸ್ಥಳೀಯರು ತಮ್ಮ ಲಿವ್-ಇನ್ ಸಂಬಂಧಗಳನ್ನು ರಾಜ್ಯದ ಒಳಗೆ ಅಥವಾ ಹೊರಗೆ ನೋಂದಾಯಿಸಿಕೊಳ್ಳಬೇಕು. ಹಾಗೆ ಮಾಡಲು ವಿಫಲವಾದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ಗಳವರೆಗೆ ದಂಡ ವಿಧಿಸಬಹುದು.
ಲೀವ್-ಇನ್ ಸಂಬಂಧಗಳನ್ನು ನೋಂದಾಯಿಸುವುದರಿಂದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಕಾನೂನು ತಜ್ಞರು ಈ ಹಿಂದಿನ ಕಾನೂನಗಳೇ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸುರಕ್ಷತಾ ಕ್ರಮಗಳನ್ನು ಹೊಂದಿತ್ತು ಎಂದಿದ್ದಾರೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ, ಅರ್ಜಿದಾರರಾದ ಮುಹಮ್ಮದ್ ಮುಕೀಮ್ ಅವರನ್ನು ಪ್ರತಿನಿಧಿಸಿದ್ದ ವಕೀಲ ಕಪಿಲ್ ಸಿಬಲ್ ಅವರು, 2024ರ ಏಕರೂಪ ನಾಗರಿಕ ಸಂಹಿತೆ ಕಾಯ್ದೆಗೆ ತಡೆ ಕೋರಿ ವಾದ ಮಂಡಿಸಲು ದಿನಾಂಕ ನಿಗದಿಪಡಿಸುವಂತೆ ಪೀಠವನ್ನು ಕೋರಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಸಂವಿಧಾನದ 21 ಮತ್ತು 25ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಏಕರೂಪ ನಾಗರಿಕ ಸಂಹಿತೆ ಉಲ್ಲಂಘಿಸುತ್ತದೆ ಎಂದು ಕಪಿಲ್ ಸಿಬಲ್ ವಾದಿಸಿದ್ದಾರೆ. ಸಂವಿಧಾನದ 21ನೇ ವಿಧಿಯು ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಿದರೆ, 25ನೇ ವಿಧಿಯು ಒಬ್ಬರು ವ್ಯಕ್ತಿಗೆ ಅವರ ಧರ್ಮವನ್ನು ಆಚರಿಸುವ, ಪ್ರಚಾರ ಮಾಡುವ ಮತ್ತು ಪ್ರತಿಪಾದಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಅಗತ್ಯವಾದ ಅರ್ಹತೆಯ ಕೊರತೆಯಿದೆ ಎಂದೂ ಸಿಬಲ್ ಹೇಳಿದ್ದಾರೆ.
“ರಾಜ್ಯ ಸರ್ಕಾರವು ಅಧಿಕಾರದ ವ್ಯಾಪ್ತಿಯನ್ನು ಮೀರಿ ಏಕರೂಪ ನಾಗರಿಕ ಸಂಹಿತೆಯಲ್ಲಿ ಲಿವ್-ಇನ್ ಸಂಬಂಧವನ್ನು ಸೇರಿಸಿದೆ. ಇದನ್ನು ಮಾಡುವ ಯಾವುದೇ ಅರ್ಹತೆ ರಾಜ್ಯ ಸರ್ಕಾರಕ್ಕೆ ಇಲ್ಲ. ಏಕೆಂದರೆ ಸಂವಿಧಾನದ ಸಮಕಾಲೀನ ಪಟ್ಟಿಯ ನಮೂದು 5ರಲ್ಲಿ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮಾತ್ರ ರಾಜ್ಯ ಸರ್ಕಾರ ಶಾಸನವನ್ನು ಅಂಗೀಕರಿಸಲು ಅವಕಾಶವಿದೆ” ಎಂದು ಸಿಬಲ್ ವಾದಿಸಿದ್ದಾರೆ.
ಲಿವ್-ಇನ್ ಸಂಬಂಧಗಳ ಕುರಿತು ನಿರ್ಣಯ ತೆಗೆದುಕೊಳ್ಳುವುದು ರಾಜ್ಯದ ವ್ಯಾಪ್ತಿಗೆ ಬರುವುದಿಲ್ಲ. ಪಟ್ಟಿ 1ರ ನಮೂದು 97ರ ಅಡಿಯಲ್ಲಿ ಈ ವಿಚಾರ ಸಂಸತ್ತಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸಿಬಲ್ ಹೇಳಿದ್ದಾರೆ.
ಸಿಬಲ್ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಏಕರೂಪ ನಾಗರಿಕ ಸಂಹಿತೆಯ ವಿರುದ್ಧದ ಇತರ ಎರಡು ಅರ್ಜಿಗಳ ಕುರಿತು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಏಪ್ರಿಲ್ 1ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.
ಈ ವೇಳೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್, ಅರ್ಜಿದಾರರು ಸೇರಿದಂತೆ ಸಂಹಿತೆಯಿಂದ ಸಮಸ್ಯೆಗೆ ಒಳಗಾದ ವ್ಯಕ್ತಿಗಳು ಈ ನಡುವೆ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರು, ಹೊಸ ಕಾನೂನಿಂದ ಸಮಸ್ಯೆಗೆ ಒಳಗಾದ ಯಾವುದೇ ವ್ಯಕ್ತಿ ನಮ್ಮನ್ನು ಸಂಪರ್ಕಿಸಬಹುದು. ಅವರ ಸಮಸ್ಯೆ ಆಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬುಧವಾರ ಇತರ ಅರ್ಜಿಗಳ ವಿಚಾರಣೆ ವೇಳೆ, ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ವಿಚಾರದಲ್ಲಿ ‘ಏನು ತಪ್ಪಾಗಿದೆ’ ಎಂದು ನ್ಯಾಯಾಲಯ ಕೇಳಿತ್ತು.
ಏಕರೂಪ ನಾಗರಿಕ ಸಂಹಿತೆ ಮುಸ್ಲಿಮರು ಮತ್ತು ಇತರ ನಾಗರಿಕರ ಮೂಲಭೂತ ಹಕ್ಕುಗಳನ್ನು ಹಾಗೂ ಮುಸ್ಲಿಂ ಸಮುದಾಯದ ಅಗತ್ಯ ಧಾರ್ಮಿಕ ಆಚರಣೆಗಳ ಹಕ್ಕುಗಳನ್ನು ತಡೆಯುತ್ತದೆ ಎಂದು ಆರೋಪಿಸಿ ಅಲ್ಮಾಸುದ್ದೀನ್ ಸಿದ್ದಿಕಿ ಮತ್ತು ಇಕ್ರಮ್ ಎಂಬ ಇಬ್ಬರು ವ್ಯಕ್ತಿಗಳು ಸಲ್ಲಿಸಿರುವ ಇತರ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ವರದಕ್ಷಿಣೆ ಕಿರುಕುಳ ದೂರೊಂದನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಕೊಟ್ಟ ಕಾರಣವೇನು?


