ಮದ್ಯ ನಿಷೇಧ ಆಂದೋಲನ ಕರ್ನಾಟಕ ವತಿಯಿಂದ ‘ಮಹಿಳೆಯರ ಸ್ವಾಭಿಮಾನಕ್ಕಾಗಿ ಬೆಂಗಳೂರು ಚಲೋ’ ಸಮಾವೇಶ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ (ನವೆಂಬರ್ 25) ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾನೂನು ರೀತಿಯಲ್ಲಿ ಹಾಗೂ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಕಳೆದ 20 ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಹೆಚ್ಚಿಸುತ್ತಲೆ ಬರಲಾಗುತ್ತಿದೆ. ಸರ್ಕಾರ ಬರೀ ಮದ್ಯ ಮಾರಾಟದಿಂದ ಬರುವ (ಅಬಕಾರಿ) ಆದಾಯದ ಕಡಗೆ ಹೆಚ್ಚಿನ ಗಮನ ಹರಿಸುತ್ತಿದೆ. ಆದರೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳೂ ಕುಡಿಯುವ ಚಟಕ್ಕೆ ಬಲಿಯಾಗುತ್ತಿದ್ದಾರೆ. ಜೊತೆಗೆ ಮಹಿಳೆಯರು ಅವರ ಕುಟುಂಬಗಳನ್ನು ನಡೆಸುವುದಕ್ಕೆ ಹಲವಾರು ಕಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪಂಜಾಬ್ ರಾಜ್ಯದಂತೆ ನಮ್ಮ ರಾಜ್ಯವು ಮದ್ಯ ಸೇವನೆಯಿಂದ ಮಾದಕ ವ್ಯಸನದತ್ತ (ಡ್ರಗ್ಸ್) ಯುವಕರು ಹೋಗುವಂತೆ ಮಾಡಬಹುದು ಎಂದು ಸಮಾವೇಶದಲ್ಲಿ ಪಾಲ್ಗೊಂಡವರು ಕಳವಳ ವ್ಯಕ್ತಪಡಿಸಿದರು.

ಕಳೆದ 10 ವರ್ಷಗಳಿಂದ ಕರ್ನಾಟಕದ ಹಲವು ಗ್ರಾಮಗಳಿಂದ ಮಹಿಳೆಯರು ಅಕ್ರಮ ಮದ್ಯ ಮಾರಾಟದ ದೂರುಗಳನ್ನುಅಬಕಾರಿ ಇಲಾಖೆ, ಗ್ರಾಮ ಪಂಚಾಯತಿಗಳು, ಪೋಲಿಸ್ ಠಾಣೆಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಆದರೆ, ಯಾವ ದೂರುಗಳ ಮೇಲೂ ಕ್ರಮ ಜರುಗಿಸಿಲ್ಲ ಎಂದರು.
ಸಮಾವೇಶದಲ್ಲಿ ಸರ್ಕಾರಕ್ಕೆ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ, ಅವುಗಳು ಹೀಗಿವೆ..
1. ಮದ್ಯ ಮಾರಾಟಕ್ಕೆ ಪರವಾನಿಗೆ (ಲೈಸನ್ಸ್) ಹೊಂದಲು ಹರಿಯಾಣ, ಮಹಾರಾಷ್ಟ್ರ ರಾಜಸ್ಥಾನದಂತ ರಾಜ್ಯಗಳಲ್ಲಿ ಗ್ರಾಮ ಸಭೆಗಳಿಗೆ ಪರಮಾಧಿಕಾರ ನೀಡಲಾಗಿದೆ. ವಿವಿಧ ರಾಜ್ಯಗಳ ಪಂಚಾಯತ್ ರಾಜ್ ಕಾನೂನಿನಂತೆ ರಾಜ್ಯ ಸರ್ಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರವಾನಿಗೆ ನೀಡಲು ಗ್ರಾಮ ಸಭೆಯಲ್ಲಿ ಕನಿಷ್ಠ ಶೇಕಡ 20ರಷ್ಟು ಮಹಿಳೆಯರ ಒಪ್ಪಿಗೆ ಪಡೆಯಬೇಕು. ಅಂದರೆ ಗ್ರಾಮಸಭೆಯ ಈ ಠರಾವಿಗೆ ಮಾನ್ಯತೆ ನೀಡಲೇಬೇಕು. ಅದೇ ರೀತಿ ನಮ್ಮಲ್ಲೂ ಈ ಅಂಶವನ್ನು ಪಂಚಾಯತ್ ರಾಜ್ ಕಾನೂನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಬೇಕು. ಕರ್ನಾಟಕದ ಪಂಚಾಯತ್ ರಾಜ್ ಕಾನೂನಿನಲ್ಲಿ ಈ ತರದ ಒಂದು ಅಂಶ 2016ರ ತನಕ ಇತ್ತು. ಆದರೆ ಆ ಸಮಯದಲ್ಲಿ ಇದ್ದ ಸರ್ಕಾರ ಅದನ್ನು ತೆಗೆದು ಹಾಕಿತು.
2. ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ, ಅದಕ್ಕಿಂತ ಹೆಚ್ಚು ಮನೆ ಮನೆಗಳಲ್ಲಿ, ಪಾನ್‌ಶಾಪ್, ಕಿರಾಣ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಹಾಗಾಗಿ, ನಮ್ಮ ಬೇಡಿಕೆ ಇಷ್ಟೇ ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ ಕೊಡಬೇಕು. ಕರ್ನಾಟಕ ಪಂಚಾಯತ್ ರಾಜ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಈಗಾಗಲೆ ಹೆಚ್ಚುವರಿ ಸಮಿತಿಗಳು ಮಾಡುವ ಅವಕಾಶ ಇದೆ.


