ವರ್ಣಭೇದ ನೀತಿಯ ವಿರುದ್ಧ ಪ್ರಪಂಚದಾದ್ಯಂತ ನಡೆಯುತ್ತಿರುವ Black Lives Matter ಆಂದೋಲನದ ಪರ ಐಕ್ಯಮತ್ಯ ಸಾರಲು ಸೋಮವಾರ ಅಮೆರಿಕಾ ದೇಶಾದ್ಯಂತ ಸಾವಿರಾರು ಅಮೇರಿಕನ್ ಕಾರ್ಮಿಕರು ತಮ್ಮ ಉದ್ಯೋಗ ತ್ಯಜಿಸಿ ಮುಷ್ಕರ ನಡೆಸಿದ್ದಾರೆ.
“Strike For Black Lives” ಹೆಸರಿನಲ್ಲಿ ನಡೆಸಿದ ಮುಷ್ಕರದಲ್ಲಿ ಹಲವಾರು ಶ್ರೇಣಿಯ ಕೈಗಾರಿಕೆಗಳ ಉದ್ಯೋಗಿಗಳು “ವ್ಯವಸ್ಥಿತ ವರ್ಣಭೇದ ನೀತಿಯನ್ನು ಕೊನೆಗೊಳಿಸಬೇಕೆಂದು” ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಮುಷ್ಕರದಲ್ಲಿ ಅಮೆರಿಕದ 200 ಕ್ಕೂ ಹೆಚ್ಚು ನಗರಗಳಲ್ಲಿನ ಸಾವಿರಾರು ಜನರು ಭಾಗವಹಿಸಿದ್ದಾರೆ ಎಂದು ಅಮೇರಿಕನ್ ಮಾಧ್ಯಮಗಳು ವರದಿ ಮಾಡಿದೆ.
ಸುಮಾರು 1,500 ಭದ್ರತಾ ಸಿಬ್ಬಂದಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ನ್ಯೂಯಾರ್ಕ್, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್‌ನ 85 ವಿವಿಧ ನರ್ಸಿಂಗ್ ಹೋಂಗಳಿಂದ ಸುಮಾರು 6,000 ದಾದಿಯರು ಮುಷ್ಕರ ನಡೆಸಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ನ್ಯೂಯಾರ್ಕ್‌ನಲ್ಲಿ, ಸುಮಾರು 100 ಜನರು ಟ್ರಂಪ್ ಇಂಟರ್ ನ್ಯಾಷನಲ್ ಹೋಟೆಲ್ ಹೊರಗೆ ಮೆರವಣಿಗೆ ನಡೆಸಿದರು. ಹೀರೋಸ್ ಕಾಯ್ದೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು. ಇದು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಹೆಣಗಾಡುತ್ತಿರುವ ಮನೆಗಳಿಗೆ ಆರ್ಥಿಕ ನೆರವು ನೀಡುವ ಶಾಸನವಾಗಿದೆ.
ಈ ಮಸೂದೆಯನ್ನು ಮೇ ತಿಂಗಳಲ್ಲಿ ಡೆಮೋಕ್ರಾಟ್ ಬಹುಮತದ ಪ್ರತಿನಿಧಿ ಸಭೆ ಅಂಗೀಕರಿಸಿತು. ಆದರೆ ರಿಪಬ್ಲಿಕನ್ನರು ನಿಯಂತ್ರಣದಲ್ಲಿರುವ ಸಂಸತ್ತು ಇದನ್ನು ನಿರ್ಬಂಧಿಸಿತು.
ಕೊರೊನಾ ಸಾಂಕ್ರಾಮಿಕದ ಕಾರಣಕ್ಕಾಗಿ ನ್ಯೂಯಾರ್ಕ್ ನಗರದ 22,000 ಕ್ಕೂ ಹೆಚ್ಚು ಜನ ಆಫ್ರಿಕನ್ ಅಮೆರಿಕನ್ನರು ಮತ್ತು ಹಿಸ್ಪಾನಿಕ್ಸ್ ನಿವಾಸಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
“ನಾವು ಆರ್ಥಿಕತೆಯನ್ನು ಮುಂದುವರೆಸಿದ್ದೇವೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಿದ್ದೇವೆ. ಅದಕ್ಕಾಗಿ ನಾವು ಗೌರವಿಸಲ್ಪಡಬೇಕು ಮತ್ತು ನಮಗೆ ಪರಿಹಾರವನ್ನು ನೀಡಬೇಕು” ಎಂದು 42 ವರ್ಷದ ಭದ್ರತಾ ಸಿಬ್ಬಂದಿಯಾದ ಜೋರ್ಡಾನ್ ವೈಸ್ ಹೇಳಿದ್ದಾರೆ.
ಬೋಸ್ಟನ್, ಲಾಸ್ ಏಂಜಲೀಸ್ ಮತ್ತು ಚಿಕಾಗೊ ಸೇರಿದಂತೆ 24ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ಸೇವಾ ನೌಕರರ ಅಂತರರಾಷ್ಟ್ರೀಯ ಒಕ್ಕೂಟ ತಿಳಿಸಿದೆ.
ಇದನ್ನೂ ಓದಿ: ಟ್ರಂಪ್ ಟವರ್ ಮುಂದೆ ’ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಎಂದು ಬರೆದ ಚಳವಳಿಗಾರರು!


