“ಹಿಂದೂ ರಾಷ್ಟ್ರೀಯತೆ” ಕುರಿತು ಹಮ್ಮಿಕೊಳ್ಳಲಾಗಿರುವ ಅಮೆರಿಕದ ವಿಚಾರಸಂಕಿರಣದಲ್ಲಿ ಭಾಗವಹಿಸಿದವರನ್ನು ಕೊಲ್ಲುವುದಾಗಿ ಉಗ್ರ ಹಿಂದುತ್ವವಾದಿ ಗುಂಪುಗಳು ಬೆದರಿಕೆಯೊಡ್ಡಿರುವ ಕುರಿತು ದಿ ಗಾರ್ಡಿಯನ್ ವರದಿ ಮಾಡಿದೆ.
ಸೆ.9 ರಂದು ಗಾರ್ಡಿಯನ್ ವರದಿ ಪ್ರಕಟಿಸಿದ್ದು, ಹಲವು ವಿದ್ವಾಂಸರನ್ನು ಹಿಂದೂ ವಿರೋಧಿಗಳೆಂದು ದೂಷಿಸಿ, ಅವರು ವಿಚಾರ ವಿಚಾರಸಂಕಿರಣದಿಂದ ಹಿಂದೆ ಸರಿಯುವಂತೆ ಹಿಂದುತ್ವವಾದಿ ಉಗ್ರರು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
ಸಮ್ಮೇಳನವು “ಜಾಗತಿಕ ಹಿಂದುತ್ವದ ನಿರ್ನಾಮ” ಎಂಬ ಹೆಸರಿನಲ್ಲಿದೆ. ಹಾರ್ವಾಡ್, ಸ್ಟಾಂಡ್‌ಫಾರ್ಡ್, ಪ್ರಿನ್ಸ್‌ಟನ್, ಕೊಲಂಬಿಯ, ಬರ್ಕ್ಲಿ, ಚಿಕಾಗೋ, ಪೆನ್ಸಿಲ್‌ವೇನಿಯ, ರುಟ್‌ಗರ್ಸ್ ಸೇರಿದಂತೆ 53ಕ್ಕೂ ಹೆಚ್ಚು ವಿವಿಗಳು ಈ ಸಮ್ಮೇಳನದ ಸಹ ಪ್ರಯೋಜಕತ್ವ ಹೊಂದಿವೆ.
ಸಮ್ಮೇಳನ ಉದ್ದೇಶವನ್ನು ಚರ್ಚಿಯಲು ಸೆ.10ರಂದು ಆಯೋಜಿಸಲಾಗಿತ್ತು. ಹಿಂದುತ್ವ ಗುಂಪುಗಳು, ಜಾತ್ಯತೀತ ರಾಷ್ಟ್ರವನ್ನು ನಿರ್ನಾಮ ಮಾಡಿ, ಹಿಂದೂರಾಷ್ಟ್ರ ಕಟ್ಟುವ ಸಂಬಂಧ ಮಾಡುತ್ತಿರುವ ಪ್ರಯತ್ನಗಳ ಕುರಿತು ವಿದ್ವಾಂಸರು ಚರ್ಚಿಸಲಿದ್ದರು ಎಂದು ವರದಿ ಉಲ್ಲೇಖಿಸಿದೆ.
ನರೇಂದ್ರ ಮೋದಿ ನೇತೃತ್ವದ ಆಡಳಿತ ಪಕ್ಷ ಬಿಜೆಪಿಯು ಹಿಂದೂ ರಾಷ್ಟ್ರೀಯ ಅಜೆಂಡಾವನ್ನು ಮುನ್ನಲೆಗೆ ತಂದಿದೆ. ಸುಮಾರು 20 ಕೋಟಿ ಮುಸ್ಲಿಮರು ತಾರತಮ್ಯವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಗಾರ್ಡಿಯನ್ ಉಲ್ಲೇಖಿಸಿದೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳುವವರ ಮೇಲೆ ದಾಳಿ ಮಾಡಲು ಹಿಂದುತ್ವವಾದಿ ಗುಂಪುಗಳು ಸಜ್ಜಾಗಿವೆ. ವಿವಿಗಳು ಹಿಂದೆ ಸರಿಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಸಮ್ಮೇಳನದ ಆಯೋಜಕರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ತಮ್ಮ ಕುಟುಂಬಕ್ಕೆ ಮರಳುವುದನ್ನು ನಿಷೇಧಿಸುವ ಭಯದಿಂದ ಅಥವಾ ಭಾರತಕ್ಕೆ ಮರಳಿದಾಗ ಬಂಧಿಸುವ ಭಯದಿಂದ ಅನೇಕರು ಸಮ್ಮೇಳನದಿಂದ ಹಿಂದೆ ಸರಿದಿದ್ದಾರೆ. ಹತ್ತಾರು ಭಾಷಣಕಾರರು ಹಾಗೂ ಸಂಘಟನಾಕಾರರ ಕುಟುಂಬದವರಿಗೆ ಬೆದರಿಕೆ ಒಡ್ಡಲಾಗಿದೆ. ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ‘ಹಿಂದುತ್ವದಿಂದ ಬಂಧುತ್ವದ ಕಡೆಗೆ’ – ಸಂಘಪರಿವಾರದಿಂದ ಹೊರಬಂದ ನಾಯಕರೊಂದಿಗೆ ಮಾತುಕತೆ
ಸಮ್ಮೇಳನದ ಅಧ್ಯಕ್ಷರಿಗೆ, ವಿಶ್ವವಿದ್ಯಾನಿಲಯಗಳಿಗೆ 10 ಲಕ್ಷಕ್ಕೂ ಹೆಚ್ಚು ಇಮೇಲ್ ಮಾಡಲಾಗಿದ್ದು, ಸಮ್ಮೇಳನದಿಂದ ಹಿಂದೆ ಸರಿಯುವಂತೆ ಎಚ್ಚರಿಸಲಾಗಿದೆ. ನ್ಯೂಜೆರ್ಸಿಯ ಡ್ರೂ ವಿವಿಯು ಕೆಲವೇ ನಿಮಿಷಗಳಲ್ಲಿ 30,000 ಇಮೇಲ್‌ಗಳನ್ನು ಸ್ವೀಕರಿಸಿದೆ ಮತ್ತು ವಿವಿಯ ಸರ್ವರ್ ಹಾನಿಯಾಗಿದೆ ಎನ್ನಲಾಗಿದೆ.


