ಇತ್ತೀಚಿನ ಮೂರು ಪ್ರಕರಣಗಳು ತೋರಿಸಿಕೊಟ್ಟಿರುವುದು ಏನೆಂದರೆ, ಕಾನೂನಿನ ಅನ್ವಯವು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದಾದರೂ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾಗುವಾಗ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು.
– ಸರೀಂ ನವೇದ್
ಸಾರಾನುವಾದ: ನಿಖಿಲ್ ಕೋಲ್ಪೆ
ಕಳೆದ ಮೇ 19ರಂದು ಸುಪ್ರೀಂಕೋರ್ಟ್ ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಒಂದು ತೀರ್ಪು ನೀಡಿತು ಮತ್ತು ಒಂದು ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವಂತಿಲ್ಲ ಎಂಬುದನ್ನು ಎತ್ತಿಹಿಡಿಯಿತು. ಹಾಗಾಗಿ ಸಾರ್ವಜನಿಕ ಕ್ಷೋಭೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಫ್‌ಐಆರ್‌ಗಳಲ್ಲಿ ಆರೋಪಿಸಲಾಗಿರುವಂತಹ ಒಂದು ಪ್ರಕರಣದಲ್ಲಿ ಮೊದಲ ಎಫ್‌ಐಆರ್ ದಾಖಲಾದ ಸಂಬಂಧ ವಿಚಾರಣೆಯನ್ನು ಹೊರತುಪಡಿಸಿ, ಉಳಿದ ನ್ಯಾಯಾಲಯಗಳಲ್ಲಿ ವಿಚಾರಣೆಯಿಂದ ಆತ ಪಾರಾಗುವಂತಾಯಿತು.

ಕೇವಲ ಹತ್ತು ದಿನಗಳ ನಂತರ, ಅಂದರೆ ಮೇ 29ರಂದು ಸುಪ್ರೀಂಕೋರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಪಂಕಜ್ ಪೂನಿಯಾ ದಾಖಲಿಸಿದಂತಹಾ ಇಂತದ್ದೇ ಅರ್ಜಿಯು ಮುಂದೆ ಬಂತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದ ಹೇಳಿಕೆಯ ಆರೋಪದಲ್ಲಿ ಅವರ ಮೇಲೆ ಹಲವಾರು ಕಡೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಈ ವಿಷಯದ ಕುರಿತು ವಿಚಾರಣೆ ನಡೆಸಲು ನಿರಾಕರಿಸಿ, ಪರಿಹಾರಕ್ಕಾಗಿ ಸಂಬಂಧಿತ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವಂತೆ ಪೂನಿಯಾ ಅವರಿಗೆ ಸೂಚಿಸಿತು.
ಇದು ಮೂವರು ಸದಸ್ಯರ ಪೀಠದ ತೀರ್ಮಾನವಾಗಿದ್ದು, ಅದಕ್ಕೆ ಇಬ್ಬರು ಸದಸ್ಯರ ಪೀಠದ ಅರ್ನಾಬ್ ಗೋಸ್ವಾಮಿ ಪ್ರಕರಣದ ತೀರ್ಮಾನವನ್ನು ಬದಿಗೆ ಸರಿಸುವ ಅಧಿಕಾರವಿತ್ತು ಎಂಬುದು ನಿಜ. ಆದರೆ, ಈ ಪೀಠವು ಸಾರಾಸಗಟಾಗಿ ಪೂನಿಯಾ ಅವರ ಅರ್ಜಿಯನ್ನು ಮೇಲ್ನೋಟಕ್ಕೇ ತಿರಸ್ಕರಿಸಿತು. ಅದು ಏನು ಹೇಳಿತು:

“ಸಂವಿಧಾನದ ವಿಧಿ 32ರ ಅನ್ವಯ ಸಲ್ಲಿಸಲಾದ ಈ ಅರ್ಜಿಯ ವಿಚಾರಣೆ ನಡೆಸಲು ನಮಗೆ ಮನಸ್ಸಿಲ್ಲ. ಅದಕ್ಕನುಗುಣವಾಗಿ ಈ ರಿಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಅರ್ಜಿದಾರರಿಗೆ ಸಂಬಂಧಿತ ಹೈಕೋರ್ಟ್‌ಗಳು/ ವೇದಿಕೆಗಳಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯವಿದೆ”.
ಮೇ 1ರಂದು ಸುಪ್ರೀಂಕೋರ್ಟ್ ಅದೇ ರೀತಿಯ ಭಾಷಣಗಳನ್ನು ಮಾಡಿದ್ದಕ್ಕಾಗಿ ಬೇರೆಬೇರೆ ಕಡೆ ಹೂಡಲಾದ ದಾವೆಗಳನ್ನು ಒಂದೆಡೆ ಸೇರಿಸಲು ಶಾರ್ಜೀಲ್ ಇಮಾಮ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತ್ತು. ಇಮಾಮ್ ಪ್ರಕರಣದಲ್ಲಿ ಇರುವ ವ್ಯತ್ಯಾಸವೆಂದರೆ, ತಕ್ಷಣದ ಪರಿಹಾರ ಇರಲಿಲ್ಲ. ಅದೆಂದರೆ, ಗೋಸ್ವಾಮಿಗೆ ಮಾಡಿದಂತೆ ಮೊದಲ ಎಫ್‌ಐಆರ್ ಪ್ರಕರಣ ಹೊರತುಪಡಿಸಿ ಬೇರೆ ಎಫ್‌ಐಆರ್‌ಗಳಲ್ಲಿ ತನಿಖೆಗೆ ತಡೆ ಇರಲಿಲ್ಲ.

ಈ ಮೂರೂ ಪ್ರಕರಣಗಳನ್ನು ಮೂರು ಬೇರೆಬೇರೆ ಪೀಠಗಳು ವಿಚಾರಣೆ ನಡೆಸಿದ್ದವು. ಪ್ರಕರಣದಿಂದ ಪ್ರಕರಣಕ್ಕೆ ಕಾನೂನಿನ ಅನ್ವಯವು ಬದಲಾಗುತ್ತದೆ ಎಂಬುದು ಕಾನೂನು ರೂಢಿಯಲ್ಲಿ ಅರ್ಥವಾಗುವ ವಿಷಯ. ಆದರೆ, ಪ್ರತಿಯೊಂದು ಪ್ರಕರಣದ ವಿಶಿಷ್ಟತೆಗಳನ್ನು ಪರಿಗಣಿಸದೆಯೇ ಯಾಂತ್ರಿಕವಾಗಿ ಕಾನೂನನ್ನು ಅನ್ವಯಿಸುವ ಪರಿಸ್ಥಿತಿಯು ಅಪೇಕ್ಷಿತವಲ್ಲ ಮತ್ತು ಇದು ಸಾಕಷ್ಟು ಅನ್ಯಾಯದಲ್ಲಿ ಕೊನೆಗೊಳ್ಳುತ್ತದೆ.
ನ್ಯಾಯಾಧೀಶರು ಮತ್ತು ಕಾನೂನಿನ ಅನ್ವಯ
ಆದರೆ, ನ್ಯಾಯಾಧೀಶರಿಂದ ನ್ಯಾಯಾಧೀಶರಿಗೆ ತೀರ್ಪುಗಳು ಬದಲಾದಾಗ ಕಾನೂನಿನ ಅನ್ವಯದ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕು. ಬೇರೆಬೇರೆ ನ್ಯಾಯಾಧೀಶರು ಕಾನೂನಿನ ಬಗ್ಗೆ ಬೇರೆಬೇರೆ ದೃಷ್ಟಿಕೋನ ಹೊಂದಿರುತ್ತಾರೆ ಎಂಬುದು ನಿಜ. ಅವರು ಬೇರೆ ವ್ಯಾಖ್ಯಾನಗಳನ್ನೂ ಹೊಂದಿರುತ್ತಾರೆ.
ಮೇಲಿನ ಮೂರೂ ಪ್ರಕರಣಗಳು ಸಂವಿಧಾನದ ವಿಧಿ 32ರ ಪ್ರಕಾರ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಅದು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ನೇರವಾಗಿ ಸುಪ್ರೀಂಕೋರ್ಟಿನ ಬಾಗಿಲು ತಟ್ಟುವ ಅವಕಾಶ ನೀಡುತ್ತದೆ. ಇದರ ವಿಚಾರಣೆ ನಡೆಸಬೇಕೋ ಬೇಡವೋ ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟ ವಿಷಯ ಎಂಬುದು ಸರ್ವವಿಧಿತ. ಆದರೆ, ಈ ಕುರಿತು ಏಕರೂಪದ ನಿಲುಮೆ ಇರಬೇಕೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ.
ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹಲವು ಎಫ್‌ಐಆರ್‌ಗಳಲ್ಲಿ ಮೊದಲ ಎಫ್‌ಐಆರ್ ಹೊರತುಪಡಿಸಿ ಉಳಿದವುಗಳಲ್ಲಿ ತಡೆ ನೀಡುವುದಾದಲ್ಲಿ (ಗೋಸ್ವಾಮಿ ಪ್ರಕರಣ), ಇಂತದ್ದೇ ಪ್ರಕರಣಗಳಲ್ಲಿ ಇತರ ವ್ಯಕ್ತಿಗಳಿಗೆ ಅಂತದ್ದೇ ಪರಿಹಾರ ನೀಡಬೇಕು- ಒಂದು ವೇಳೆ ಪರಿಸ್ಥಿತಿಯು ಬೇರೆಯಾಗಿದೆ ಎಂದು ನ್ಯಾಯಾಲಯವು ಭಾವಿಸಿದ ಸಂದರ್ಭವನ್ನು ಹೊರತುಪಡಿಸಿ. ಈ ನಿರ್ಧಾರವನ್ನು ತೀರ್ಪಿನಲ್ಲೇ ದಾಖಲಿಸಬೇಕು. ಇಲ್ಲವಾದಲ್ಲಿ ಕಾನೂನಿನ ಅನ್ವಯವು ಮನಸೋಇಚ್ಛೆ ನಡೆಯುತ್ತಿದೆ ಎಂಬಂತೆ ಕಾಣುತ್ತದೆ.
ಸಂವಿಧಾನದ ವಿಧಿ 141 ಹಿಂದಿನ ತೀರ್ಪುಗಳಿಂದ ಬೇರೆಯಾದ ತೀರ್ಪುಗಳನ್ನು ನೀಡಲು ಸುಪ್ರೀಂಕೋರ್ಟಿಗೆ ಅವಕಾಶ ನೀಡುತ್ತದೆ ಎಂಬುದು ನಿಜ. ಆದರೆ, ಚಿಕ್ಕ ಅವಧಿಯಲ್ಲಿ ಬೇರೆ ಬೇರೆ ನ್ಯಾಯಾಧೀಶರುಗಳು ಪೀಠದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ಬೇರೆಬೇರೆ ತೀರ್ಪುಗಳು ಬರುವುದು ಅಪೇಕ್ಷಣೀಯವಲ್ಲ.
ಇದು ಅರ್ನಾಬ್, ಪೂನಿಯಾ ಮತ್ತು ಇಮಾಮ್ ಪ್ರಕರಣದಲ್ಲಿ ಇದ್ದ ಮೂರು ಬೇರೆಬೇರೆ ನ್ಯಾಯಪೀಠಗಳ ಸಮಸ್ಯೆಯಲ್ಲ. ಇದು ಇಡೀ ಸುಪ್ರೀಂಕೋರ್ಟ್ ಎದುರಿಸುತ್ತಿರುವ ರಾಚನಿಕ ಸಮಸ್ಯೆ. ಸುಪ್ರೀಂಕೋರ್ಟ್‌ನಲ್ಲಿ ಎಲ್ಲಾ ನ್ಯಾಯಾಧೀಶರು ಸಮನರು; ಆದುದರಿಂದ ಒಂದು ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಮೇಲ್ಮನವಿ ಸಲ್ಲಿಸುವುದು ಆ ನಿಟ್ಟಿನಲ್ಲಿ ಸಾಧ್ಯವಿಲ್ಲ. ಯಾವ ಪೀಠದ ಮುಂದೆ ಪ್ರಕರಣ ಇದೆಯೋ, ಅದರ ತೀರ್ಪಿನಂತೆ ಪ್ರಕರಣದ ಕತೆ ಮುಗಿಯುತ್ತದೆ.
ಉದಾಹರಣೆಗೆ ಕೆಲವು ನ್ಯಾಯಾಧೀಶರು ಉಳಿದ ನ್ಯಾಯಾಧೀಶರುಗಳಿಗಿಂತ ಹೆಚ್ಚಾಗಿ ಜಾಮೀನು ನೀಡುತ್ತಾರೆ. ಕೆಲವರು ಕೆಲವು ಕಾನೂನುಗಳಲ್ಲಿ- ಉದಾಹರಣೆಗೆ ತೆರಿಗೆ ಕಾನೂನುಗಳಲ್ಲಿ ನಿಷ್ಣಾತರಾಗಿರುತ್ತಾರೆ. ಇದರ ಅರ್ಥವೆಂದರೆ, ಸುಪ್ರೀಂಕೋರ್ಟ್ ಒಂದೇ ನ್ಯಾಯಾಲಯವಲ್ಲ. ಅದು 16 ಬೇರೆಬೇರೆ ನ್ಯಾಯಾಲಯಗಳು. ಪೀಠದಲ್ಲಿರುವ ನ್ಯಾಯಾಧೀಶರುಗಳ ಸಂಖ್ಯೆಗೆ ಅನುಗುಣವಾಗಿ ಅವರವರು ಕಾನೂನನ್ನು ಮತ್ತು ಹಿಂದಿನ ತೀರ್ಪುಗಳನ್ನು ಹೇಗೆಹೇಗೆ ವ್ಯಾಖ್ಯಾನ ಮಾಡುತ್ತಾರೋ, ಅವುಗಳಿಗೆ ಅನುಗುಣವಾಗಿಯೇ ತೀರ್ಪುಗಳು ಇರುತ್ತವೆ! ಇದಕ್ಕೆ ಪರಿಹಾರವನ್ನೂ ಸುಪ್ರೀಂಕೋರ್ಟೇ ಕಂಡುಕೊಳ್ಳಬೇಕು.
(ಲೇಖಕ ಸರೀಂ ನವೇದ್ ಅವರು ದಿಲ್ಲಿಯಲ್ಲಿ ವಕೀಲರು)
ಕೃಪೆ: ದಿ ವೈರ್
ಇದನ್ನೂ ಓದಿ: ಎರಡು ವಾರಗಳಲ್ಲಿ ಪಿಎಂ ಕೇರ್ಸ್ ವಿವರ ನೀಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ತಾಕೀತು


