ಭಾರತದಲ್ಲಿ ಮತ್ತೆ 3 ಜನರು ಕರೋನ ವೈರಸ್ ಭಾದಿತರಾಗಿರುವುದು ಪತ್ತೆಯಾಗಿದೆ. ಭಾರತದಲ್ಲಿ ಈಗ ಕರೋನ ಸೋಂಕಿತ ಪ್ರಕರಣಗಳ ಸಂಖ್ಯೆ 34 ಕ್ಕೆ ಏರಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ ಕುಮಾರ್ “ಭಾರತದಲ್ಲಿ ಇನ್ನೂ 3 ಪ್ರಕರಣಗಳು ಸೋಂಕು ಭಾದಿತರಾಗಿರುವುದು ಕಂಡುಬಂದಿವೆ, ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 34 ಕ್ಕೆ ತಲುಪಿದೆ” ಎಂದಿದ್ದಾರೆ. ಲಡಾಖ್‌ನಿಂದ 2 ಪ್ರಕರಣಗಳು ಪತ್ತೆಯಾಗಿದೆ ಇವರು ಇರಾನ್ ನಿಂದ ಆಗಮಿಸಿದ್ದರು. ಮತ್ತೊಂದು ಪ್ರಕರಣ ತಮಿಳುನಾಡಿನಿಂದ ವರದಿಯಾಗಿದೆ, ಇವರು ಒಮಾನ್ ನಿಂದ ಪ್ರಯಾಣಿಸಿದ್ದರು.
ಸಾಂಕ್ರಾಮಿಕ ಕೊರೊನ ವೈರಸ್‌ನಿಂದ ಇಬ್ಬರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಿ ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿನ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹೊಸ ಕೇಂದ್ರಾಡಳಿತ ಪ್ರದೇಶದ ಯೋಜನಾ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ “ಜಮ್ಮುವಿನಿಂದ ಇಬ್ಬರು ಶಂಕಿತ ರೋಗಿಗಳ ಪರೀಕ್ಷಾ ವರದಿಗಳು ಬಂದಿವೆ. ಎರಡೂ ಹೆಚ್ಚಿನ ವೈರಲ್ ಲೋಡ್ ಪ್ರಕರಣಗಳು. ಸೋಂಕು ಇರುವ ಸಾಧ್ಯತೆ ಹೆಚ್ಚಿವೆ” ಎಂದು ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ 30,000 ಕ್ಕಿಂತ ಹೆಚ್ಚಿನ ಜನರನ್ನು ಅಧಿಕಾರಿಗಳು ವೀಕ್ಷಣೆಯಲ್ಲಿಟ್ಟಿದ್ದಾರೆ. ರಾಷ್ಟ್ರದ ರಾಜಧಾನಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ತಿಂಗಳ ಮಟ್ಟಿಗೆ ಮುಚ್ಚುವ ಆದೇಶವನ್ನು ಹೊರಡಿಸಲಾಗಿದೆ.
ವಿಶ್ವಾದ್ಯಂತ ವೇಗವಾಗಿ ಹರಡುವ ವೈರಸ್‌ನಿಂದ ಬಳಲುತ್ತಿರುವ ಜನರ ಸಂಖ್ಯೆ ಗುರುವಾರ ಸಂಜೆ 97,000 ಕ್ಕೆ ಹೆಚ್ಚಾಗಿದೆ. ಈ ಪೈಕಿ 3,300 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
ಕರೊನಾ ವೈರಸ್ ಕಾಯಿಲೆ ಹರಡುವುದನ್ನು ತಪ್ಪಿಸಲು ಸಾಮೂಹಿಕ ಕೂಟಗಳನ್ನು ಕಡಿಮೆ ಮಾಡಲು ವಿಶ್ವದಾದ್ಯಂತ ತಜ್ಞರು ಸಲಹೆ ನೀಡಿದ್ದಾರೆ.
ಭಾರತದ ಸೋಂಕಿತರಲ್ಲಿ 16 ಜನ ಇಟಾಲಿಯ ಪ್ರವಾಸಿಗರಾಗಿದ್ದಾರೆ. ಮೊದಲ ಮೂರು ಪ್ರಕರಣಗಳು ಕೇರಳದಿಂದ ವರದಿಯಾಗಿದ್ದು, ಮೂವರೂ ಚೇತರಿಸಿಕೊಂಡಿದ್ದಾರೆ.


