ಮಂಡ್ಯದಲ್ಲಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ ಪರಿಣಾಮ ಅಪಘಾತ ಸಂಭವಿಸಿ, ಮೂರು ವರ್ಷದ ಮಗು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಎಎಸ್‌ಐಗಳಾದ ನಾಗರಾಜು, ಜಯರಾಮು ಮತ್ತು ಗುರುದೇವ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ ನಗರದ ಸ್ವರ್ಣಸಂದ್ರದ ಸಮೀಪ ಹೆದ್ದಾರಿಯಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಮಗು ಸಾವಿಗೀಡಾಗಿದೆ. ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಂಟರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಮೂವರು ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಮೂರು ವರ್ಷ ಮಗುವಿನ ತಲೆಗೆ ಪೆಟ್ಟುಬಿದ್ದು ರಕ್ತಸ್ರಾವದಿಂದ ನರಳುತ್ತಿತ್ತು. ಸ್ಥಳದಲ್ಲಿದ್ದ ಸಾರ್ವಜನಿಕರು ಆಟೋದಲ್ಲಿ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟೊತ್ತಿಗೆ ಮಗು ಮೃತಪಟ್ಟಿದೆ.
ಮದ್ದೂರು ತಾಲೂಕು ಗೊರವನಹಳ್ಳಿಯ ಅಶೋಕ–ವಾಣಿಶ್ರೀ ದಂಪತಿ ಪುತ್ರಿ ರಿತೀಕ್ಷಾ (3) ಮೃತ ಬಾಲಕಿ. ರಿತೀಕ್ಷಾಳಿಗೆ ಮನೆ ಬಳಿ ನಾಯಿ ಕಚ್ಚಿತ್ತು. ತಕ್ಷಣ ಮಗುವನ್ನು ಬೈಕ್‌ನಲ್ಲಿ ಪತಿಯ ಸಹೋದರ ಭಾಸ್ಕರ್‌ಗೌಡ ಅವರೊಂದಿಗೆ ವಾಣಿಶ್ರೀ ಅವರು ಮದ್ದೂರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಅವಘಡ ಸಂಭವಿಸಿದೆ.
ಶವವಿಟ್ಟು ಸಾರ್ವಜನಿಕರ ಪ್ರತಿಭಟನೆ
ಮಗುವಿನ ಸಾವಿಗೆ ಸಂಚಾರ ಪೊಲೀಸರೇ ಕಾರಣ ಎಂದು ಆರೋಪಿಸಿ, ಪೋಷಕರು ಮತ್ತು ಸಾರ್ವಜನಿಕರು ಮಿಮ್ಸ್ ಆಸ್ಪತ್ರೆ ಎದುರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮಗುವಿನ ಮೃತದೇಹ ಒಪ್ಪಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಗಳು ಹೇಳಿವೆ.
ಮಂಡ್ಯ| ಪೊಲೀಸರು ಅಡ್ಡಗಟ್ಟಿದಾಗ ನಿಯಂತ್ರಣ ತಪ್ಪಿದ ಬೈಕ್; 3 ವರ್ಷದ ಮಗು ಸಾವು


