ಸಂವಿಧಾನದ 143ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾಡಿರುವ ಉಲ್ಲೇಖಕ್ಕೆ ಉತ್ತರಿಸಿರುವ ಸುಪ್ರೀಂ ಕೋರ್ಟ್, “ಸಂವಿಧಾನದ 200/201ನೇ ವಿಧಿಗಳ ಅಡಿಯಲ್ಲಿ ಮಸೂದೆಗಳಿಗೆ ಒಪ್ಪಿಗೆ ನೀಡುವ ಕುರಿತು ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಿರ್ಧಾರಗಳಿಗೆ ನ್ಯಾಯಾಲಯವು ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಮಂಗಳವಾರ (ನವೆಂಬರ್ 20) ಸ್ಪಷ್ಟಪಡಿಸಿದೆ.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಕಾಲಮಿತಿಯನ್ನು ಉಲ್ಲಂಘಿಸಿದರೆ, ನ್ಯಾಯಾಲಯಗಳು ಮಸೂದೆಗಳಿಗೆ ‘ಪರಿಗಣಿತ ಒಪ್ಪಿಗೆ’ (ತಾನಾಗಿಯೇ ಒಪ್ಪಿಗೆ) ಎಂದು ಘೋಷಿಸುವ ಪರಿಕಲ್ಪನೆಯು ಸಂವಿಧಾನದ ಆಶಯ ಮತ್ತು ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಇದು ವಾಸ್ತವಿಕವಾಗಿ ರಾಜ್ಯಪಾಲರಿಗೆ ಮೀಸಲಾಗಿರುವ ಕಾರ್ಯಗಳನ್ನು ಆಕ್ರಮಿಸಿಕೊಳ್ಳುವುದಾಗಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಧಾನಸಭೆಯಲ್ಲಿ ಅಂಗೀಕೃತಗೊಂಡ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನ್ಯಾಯಾಂಗ ಗಡುವೊಂದನ್ನು ವಿಧಿಸುವುದು, ಆ ಗಡುವು ಮೀರಿದ ನಂತರ 'ಅನುಮೋದನೆ ತಾನಾಗಿಯೇ ಸಿಕ್ಕಿತು' (deemed consent) ಎಂದು ಪರಿಗಣಿಸುವಂತೆ ಆದೇಶಿಸುವುದು ಸಂವಿಧಾನಾತ್ಮಕವಾಗಿ ತಪ್ಪು ಮತ್ತು ಅಸಾಧ್ಯ. ಏಕೆಂದರೆ, ಇಂತಹ ಆದೇಶದಿಂದ ನ್ಯಾಯಾಂಗವು ಕಾರ್ಯಾಂಗದ ಮೂಲಭೂತ ಕರ್ತವ್ಯವನ್ನೇ ಆಕ್ರಮಿಸಿಕೊಂಡಂತಾಗುತ್ತದೆ ಮತ್ತು ರಾಜ್ಯಪಾಲರು ಅಥವಾ ರಾಷ್ಟ್ರಪತಿಯ ಸ್ಥಾನವನ್ನು ಬದಲಾಯಿಸಿದಂತಾಗುತ್ತದೆ".
ಸಂವಿಧಾನದ 200 ಮತ್ತು 201ನೇ ವಿಧಿಗಳು ಈ ಅಧಿಕಾರವನ್ನು (ಮಸೂದೆಗೆ ಅನುಮೋದನೆ ನೀಡುವ) ಕೇವಲ ಕಾರ್ಯಾಂಗಕ್ಕೆ ಮಾತ್ರ ನೀಡಿವೆ, ನ್ಯಾಯಾಲಯಕ್ಕೆ ಅಲ್ಲ. ಆದ್ದರಿಂದ ಇಂತಹ 'ತಾನಾಗಿ ಅನುಮೋದನೆ' ಎಂಬ ಪರಿಕಲ್ಪನೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಸಂಪೂರ್ಣ ಅನುಚಿತ ಮತ್ತು ಅನುಮತಿಸಲಾಗದ ಕ್ರಮ ಎಂದು ಸುಪ್ರೀಂ ಕೋರ್ಟ್ ದೃಢವಾಗಿ ತೀರ್ಮಾನಿಸಿದೆ.
ರಾಜ್ಯಪಾಲರು ಮಸೂದೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರಣವಿಲ್ಲದೆ ಅತ್ಯಂತ ದೀರ್ಘಕಾಲ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ತಡೆಹಿಡಿದು, ವಿಧಾನಮಂಡಲದ ಕಾನೂನು ರಚನಾ ಪ್ರಕ್ರಿಯೆಯನ್ನೇ ವಿಫಲಗೊಳಿಸುತ್ತಿದ್ದರೆ, ನ್ಯಾಯಾಲಯವು ತನ್ನ ಸೀಮಿತ ನ್ಯಾಯಾಂಗ ಪರಿಶೀಲನಾ ಅಧಿಕಾರವನ್ನು (limited judicial review) ಬಳಸಿಕೊಂಡು ರಾಜ್ಯಪಾಲರಿಗೆ ‘ನಿರ್ದಿಷ್ಟ ಸಮಯದೊಳಗೆ ತೀರ್ಮಾನ ತೆಗೆದುಕೊಳ್ಳಿ’ ಎಂದು ಆದೇಶ ನೀಡಬಹುದು.
ಆದರೆ, ಈ ಆದೇಶದಲ್ಲಿ ಮಸೂದೆಯ ಒಳಿತು-ಕೆಡುಕುಗಳ ಬಗ್ಗೆ (merits of the Bill) ಏನನ್ನೂ ಹೇಳುವಂತಿಲ್ಲ ಅಥವಾ ಮಸೂದೆಗೆ ಅನುಮೋದನೆ ಕೊಡಿ/ತಡೆಯಿರಿ ಎಂದು ಆದೇಶಿಸುವಂತಿಲ್ಲ. ಕೇವಲ ‘ತೀರ್ಮಾನ ತೆಗೆದುಕೊಳ್ಳುವ ಕೆಲಸವನ್ನು ತಡೆಯಬೇಡಿ, ಸಮಯಕ್ಕೆ ಸರಿಯಾಗಿ ಮಾಡಿ’ ಎಂದು ಮಾತ್ರ ಹೇಳಬಹುದು. ಈ ರೀತಿ ನ್ಯಾಯಾಲಯವು ಕಾರ್ಯಾಂಗದ ಅಧಿಕಾರವನ್ನು ಆಕ್ರಮಿಸಿಕೊಳ್ಳದೆ, ಕೇವಲ ಕಾನೂನು ರಚನಾ ಪ್ರಕ್ರಿಯೆಯನ್ನು ರಕ್ಷಿಸುವ ಸೀಮಿತ ಹಸ್ತಕ್ಷೇಪ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಹತ್ತು ದಿನಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಸಿ ಸೆಪ್ಟೆಂಬರ್ 11ರಂದು ತನ್ನ ಅಭಿಪ್ರಾಯವನ್ನು ಕಾಯ್ದಿರಿಸಿತ್ತು.
ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ಪೀಠವು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಸೂದೆಗಳ ಮೇಲೆ ನಿರ್ಧಾರ ತೆಗೆದುಕೊಳ್ಳಲು ಸಮಯ ಮಿತಿಯನ್ನು ನಿಗದಿಪಡಿಸಿ ತೀರ್ಪು ನೀಡಿದ ನಂತರ, ಮೇ ತಿಂಗಳಲ್ಲಿ ರಾಷ್ಟ್ರಪತಿ ಅಪರೂಪಕ್ಕೆ ಬಳಸಲಾಗುವ ಸಂವಿಧಾನದ ವಿಧಿ 143 (1) ರ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಾ, ಸುಪ್ರೀಂ ಕೋರ್ಟ್‌ಗೆ 14 ನಿರ್ಣಾಯಕ ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದೆ.
Courtesy: livelaw.in


