ಜಾತಿಗಿಂತ ವ್ಯಕ್ತಿ ಪ್ರತಿಷ್ಠೆ ಹೆಚ್ಚು ಮತ ಸೆಳೆಯುವ, ಅಲ್ಲದೆ ಸ್ಥಳೀಯರು –ಹೊರಗಿನವರು ಎಂಬ ಬೇಧವೆಣಿಸದ ಕ್ಷೇತ್ರಗಳಲ್ಲಿ ತಿಪಟೂರು ಸಹ ಒಂದು. ಲಿಂಗಾಯಿತ ಮತಗಳು ಹೆಚ್ಚಿರುವ ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದವರೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತಿಪಟೂರಿನಲ್ಲಿ 1957, 1962ರ ಚುನಾವಣೆ ಬಿಟ್ಟರೆ ಉಳಿದ ಯಾವ ಚುನಾವಣೆಗಳಲ್ಲಿಯೂ ಒಬ್ಬರೇ ಸತತ ಎರಡನೇ ಬಾರಿ ಆಯ್ಕೆಯಾಗಲು ಸಾಧ್ಯವಾಗಿಲ್ಲ. ಈಗ 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಿ.ಸಿ ನಾಗೇಶ್‌ರವರು 2023ರಲ್ಲಿಯೂ ಗೆದ್ದು ಆ ಸಂಪ್ರದಾಯ ಮುರಿಯುವರೇ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಮೇ 13ರವರೆಗೂ ಕಾಯಬೇಕಿದೆ.
1951ರಲ್ಲಿ ಟಿ.ಜಿ.ತಿಮ್ಮೇಗೌಡ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. 1957, 1962ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ (ಪಿಎಸ್‍ಪಿ) ಕೆ.ಪಿ.ರೇವಣಸಿದ್ಧಪ್ಪ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು. 1967ರಲ್ಲಿ ಎಂ.ಎಸ್.ನೀಲಕಂಠಸ್ವಾಮಿ ಕಾಂಗ್ರೆಸ್‍ನಿಂದ ಜಯಗಳಿಸಿದ್ದರು. ಆದರೆ ಅವರ ಅಕಾಲಿಕ ಮರಣದ ಕಾರಣ 1967ರಲ್ಲಿ ಉಪಚುನಾವಣೆ ನಡೆದಾಗ ವಿ.ಎಲ್.ಶಿವಪ್ಪ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಆಯ್ಕೆಯಾದರು. 1972ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಎಂ ಮಂಜುನಾಥ್ ಜಯಗಳಿಸಿದರು.
1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಕಣಕ್ಕಿಳಿದ ವಿ.ಎಲ್.ಶಿವಪ್ಪ ಮತ್ತೆ ಗೆದ್ದರು. 1983ರಲ್ಲಿ ಕಾಂಗ್ರೆಸ್ ಎಸ್.ಪಿ ಗಂಗಾಧರಪ್ಪನವರಿಗೆ ಟಿಕೆಟ್ ನೀಡಿತು. ಸಿಡಿದೆದ್ದ ಶಿವಪ್ಪ ಪಕ್ಷೇತರ ಅಭ್ಯರ್ಥಿಯಾದರು. ಆದರೆ ಗಂಗಾಧರಪ್ಪ ಆಯ್ಕೆಯಾದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಬ್ರಾಹ್ಮಣ ಸಮುದಾಯದ ಬಿ.ಎಸ್.ಚಂದ್ರಶೇಖರಯ್ಯ ಗೆಲುವು ಸಾಧಿಸಿದರು. 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಎಂ ಮಂಜುನಾಥ್ ಜಯಗಳಿಸಿದರು. ಅವರು ಸಕ್ಕರೆ ಮತ್ತು ಲಾಟರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.
1994ರಲ್ಲಿ ಬಿ.ನಂಜಾಮರಿ ಎಂಬುವವರು ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿ ಕಾಂಗ್ರೆಸ್‌ನ ಅನ್ನಪೂರ್ಣಮ್ಮ ಮಂಜುನಾಥ್‌ರನ್ನು ಮಣಿಸಿದರು. 1999ರಲ್ಲಿ ಕಾಂಗ್ರೆಸ್‍ನ ಕೆ.ಷಡಕ್ಷರಿಯವರು ಬಿಜೆಪಿಯ ನಂಜಾಮರಿಯವರನ್ನುಸೋಲಿಸಿ ಮೊದಲ ಬಾರಿಗೆ ಶಾಸಕರಾದರು. 2004ರ ವೇಳೆಗೆ ನಂಜಾಮರಿಯವರು ಜೆಡಿಎಸ್ ಪಕ್ಷ ಸೇರಿ ಕಾಂಗ್ರೆಸ್‌ನ ಷಡಕ್ಷರಿಯವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾದರು.
2008ರಲ್ಲಿ ಮಾಜಿ ಶಾಸಕ ಬಿ.ಎಸ್ ಚಂದ್ರಶೇಖರಯ್ಯನವರ ಪುತ್ರ ಬಿ.ಸಿ ನಾಗೇಶ್ (46,034) ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿ ಕಾಂಗ್ರೆಸ್‌ನ ಷಡಕ್ಷರಿ (39,168), ಜೆಡಿಎಸ್‌ನ ನಂಜಾಮರಿಯವರ (18,943) ಎದುರು ಗೆಲುವು ಸಾಧಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಷಡಕ್ಷರಿಯವರು (56,817) ಗೆದ್ದು ಎರಡನೇ ಬಾರಿಗೆ ಶಾಸಕರಾದರು. ಆ ಚುನಾವಣೆಯಲ್ಲಿ ಬಿ.ಸಿ ನಾಗೇಶ್ 45,215 ಮತಗಳನ್ನು ಪಡೆದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಲೋಕೇಶ್ವರರವರು 28,667 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು. ಜೆಡಿಎಸ್‌ನ ಎಂ.ಲಿಂಗರಾಜು 6,104 ಮತಗಳಿಗಷ್ಟೇ ಸೀಮತರಾದರು.
2018ರಲ್ಲಿ ಹಾಲಿ ಶಾಸಕ ಷಡಕ್ಷರಿಯವರ ಬದಲಿಗೆ ಕಾಂಗ್ರೆಸ್ ನಂಜಾಮರಿಯವರಿಗೆ ಟಿಕೆಟ್ ನೀಡಿತು. ಇದರಿಂದ ಷಡಕ್ಷರಿ ಬಂಡಾಯವೆದ್ದರು. ಕೊನೆಗೆ ಅವರಿಗೆ ಟಿಕೆಟ್ ನೀಡಿದಲಾಯಿತಾದರೂ ಬಿಜೆಪಿಯ ಬಿ.ಸಿ ನಾಗೇಶ್ ಗೆದ್ದು ಬಂದರು. ಬಿ.ಸಿ ನಾಗೇಶ್ 61,383 ಮತಗಳನ್ನು ಪಡೆದರೆ, ಷಡಕ್ಷರಿಯವರು ಕೇವಲ 35,820 ಮತಗಳನ್ನು ಗಳಿಸಿದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಲೋಕೇಶ್ವರ 17,027 ಮತಗಳನ್ನು ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಟಿ ಶಾಂತಕುಮಾರ್ 13,506 ಮತಗಳನ್ನು ಪಡೆದಿದ್ದರು.
ತಿಪಟೂರಿನಲ್ಲಿ ನಡೆದ 16 ಚುನಾವಣೆಗಳಲ್ಲಿ ಶಾಸಕರಾದ ಟಿ.ಜಿ.ತಿಮ್ಮೇಗೌಡ, ರೇವಣಸಿದ್ಧಪ್ಪ, ನೀಲಕಂಠಸ್ವಾಮಿ, ಬಿ.ನಂಜಾಮರಿ, ಕೆ.ಷಡಕ್ಷರಿ ತಿಪಟೂರಿನವರು. ಉಳಿದವರು ಹೊರಗಿನಿಂದ ಬಂದು ಇಲ್ಲಿ ನೆಲೆ ಕಂಡುಕೊಂಡವರಾಗಿದ್ದಾರೆ.
ಅಂದಾಜು ಜಾತಿವಾರು ಮತಗಳು
ಒಟ್ಟು 1,90,000 ಮತದಾರರಿರುವ ತಿಪಟೂರಿನಲ್ಲಿ ಲಿಂಗಾಯಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಲಿಂಗಾಯತರು: 61,000
ಪರಿಶಿಷ್ಟ ಜಾತಿ 27,000
ಕುರುಬರು 23,000
ಒಕ್ಕಲಿಗರು 20,000
ಮುಸ್ಲಿಂ: 17,000
ಪರಿಶಿಷ್ಟ ಪಂಗಡ 12000
ಕಾಡುಗೊಲ್ಲರು 10,000
ಇತರೆ: 20,000
ಹಾಲಿ ಪರಿಸ್ಥಿತಿ
ಎರಡು ಬಾರಿಗೆ ಶಾಸಕರಾಗಿರುವ ಬಿ.ಸಿ ನಾಗೇಶ್‌ರವರು ಚುನಾವಣಾ ಸಮಯದಲ್ಲಿ ಒಂದಷ್ಟು ರಸ್ತೆ, ಪಾರ್ಕ್, ಪ್ರತಿಮೆಗಳಂತಹ ಕೆಲಸ ಮಾಡಿರುವುದು ಬಿಟ್ಟರೆ ಅವರಿಂದ ಯಾವುದೇ ಜನೋಪಯೋಗಿ ಕೆಲಸಗಳಾಗಿಲ್ಲ ಎಂದು ಜನ ಮಾತಾಡುತ್ತಾರೆ. ತಾಲ್ಲೂಕಿನ ಪ್ರಮುಖ ಬೆಳೆ ಕೊಬ್ಬರಿ ಬೆಲೆ ಕುಸಿದಾಗ ರೈತರು ತಿಂಗಳುಗಟ್ಟಲೇ ಹೋರಾಟ ಮಾಡಿದರೂ ಅತ್ತ ನಾಗೇಶ್ ತಲೆ ಹಾಕಿಲ್ಲ. ಹಾಗಾಗಿ ಅವರಿಗೆ ಆಡಳಿತ ವಿರೋಧಿ ಅಲೆ ಜೋರಾಗಿಯೇ ಕಾಡುತ್ತಿದೆ.
ಇನ್ನು ಶಿಕ್ಷಣ ಸಚಿವರಾಗಿಯೂ ಅದನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುವುದಕ್ಕಿಂತ, ಶಿಕ್ಷಣ ಕ್ಷೇತ್ರವನ್ನು ಹಿಂತೆಗೆದುಕೊಂಡು ಹೋಗಿದ್ದಕ್ಕೆ ಕುಖ್ಯಾತಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಮಕ್ಕಳಿಗೆ ಪಠ್ಯಪುಸ್ತಕ ಸಿಗಲಿಲ್ಲ, ಶೂ-ಬ್ಯಾಗ್ ಸಿಗಲಿಲ್ಲ. ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸ ತಿರುಚುವ, ದಲಿತ ಶೂದ್ರರನ್ನು ಅವಹೇಳನ ಮಾಡುವ ಪಠ್ಯಗಳನ್ನು ತುರುಕಿದ ಪರಿಷ್ಕರಣಾ ಸಮಿತಿಯನ್ನು ಸಮರ್ಥಿಸಿಕೊಂಡು ವಿವಾದಕ್ಕೀಡಾದರು. ಆ ಸಮಯದಲ್ಲಿ ವ್ಯಾಪಕ ವಿರೋಧ ಬಂದಾಗ ನಾಗೇಶ್‌ರವರು ರೋಹಿತ್ ಚಕ್ರತೀರ್ಥನನ್ನು ಐಐಟಿ, ಸಿಇಟಿ ಪ್ರೊಫೆಸರ್ ಆಗಿದ್ದರು ಎಂದು ಮತ್ತು ಚಕ್ರವರ್ತಿ ಸೂಲಿಬೆಲೆ ಮೇಧಾವಿ ಎಂದು ಸುಳ್ಳು ಹೇಳಿ ಸಮರ್ಥಿಸಿಕೊಳ್ಳುವ ತೀರಾ ಕೆಳಮಟ್ಟಕ್ಕೆ ಇಳಿದಿದ್ದರು!.
ಇನ್ನು ಸಂಘ ಪರಿವಾರದವರು ಕ್ಷುಲ್ಲಕ ಹಿಜಾಬ್ ವಿವಾದ ಸೃಷ್ಟಿಸಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಾರಕವಾಗಿ ಪರಿಣಮಿಸಿದಾಗ ನಾಗೇಶ್ ಸಮಸ್ಯೆಯನ್ನು ಬಗೆಹರಿಸದೆ ಇನ್ನಷ್ಟು ಬಿಕ್ಕಟ್ಟಿಗೆ ಕಾರಣರಾದರು. ಬಹುಸಂಖ್ಯಾತ ಧಾರ್ಮಿಕ ಪಠ್ಯ ಭಗವದ್ಗೀತೆ ಬೋಧನೆಗೆ ಅತ್ಯುತ್ಸಾಹ ತೋರಿಸಿದರು. ಅದು ಧಾರ್ಮಿಕ ವಿಷಯವಲ್ಲ ಎಂದು ಭಂಡತನದ ಸಮರ್ಥನೆ ಮಾಡಿಕೊಂಡರು. ವೇದಗಣಿತದ ಹೆಸರಿನಲ್ಲಿ ಸರ್ಕಾರದ ಹಣವನ್ನು ಎವಿಎಂ ಎನ್ನುವ ಎನ್‌ಜಿಓಗೆ ಧಾರೆ ಎರೆದರು. ಶಿಕ್ಷಕರ ವರ್ಗಾವಣೆ ನಡೆಯಲಿಲ್ಲ, 15,000 ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಿ ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಮುಗಿಸಲಿಲ್ಲ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರ ಹಳಿ ತಪ್ಪಲು ಕಾರಣರಾದರು. ಅಂತಹ ಬಿ.ಸಿ ನಾಗೇಶ್‌ರವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ.
ಷಡಕ್ಷರಿಗೆ ಕಾಂಗ್ರೆಸ್ ಟಿಕೆಟ್
ಲಿಂಗಾಯಿತ ಸಮುದಾಯದ ಮಾಜಿ ಶಾಸಕ ಷಡಕ್ಷರಿಯವರಿಗೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ಟೂಡಾ ಮಾಜಿ ಅಧ್ಯಕ್ಷ ಸಿ.ಬಿ ಶಶಿಧರ್ ಕೂಡ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ ಷಡಕ್ಷರಿಯವರು ತಮ್ಮ ಕೊನೆಯ ಚುನಾವಣೆ ನೆಪದಲ್ಲಿ ಮತ್ತೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

2018ರ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಕೆ.ಟಿ.ಶಾಂತಕುಮಾರ್ ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಡ್ಡಾಡಿ ಕೊನೆಗೆ ಜೆಡಿಎಸ್ ಬಳಿ ಬಂದು ಟಿಕೆಟ್ ಪಡೆದಿದ್ದಾರೆ.

2023ರ ಸಾಧ್ಯತೆಗಳು
ಮೇಲ್ನೋಟಕ್ಕೆ ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡುಬರುತ್ತಿದೆ. ಆದರೆ ಬಿ.ಸಿ ನಾಗೇಶ್‌ರವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅಲ್ಲದೇ ಈ ಕ್ಷೇತ್ರದಲ್ಲಿ ಕಳೆದ 56 ವರ್ಷಗಳಿಂದ ಯಾರೂ ಸತತ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇತಿಹಾಸವಿಲ್ಲ. ಹಾಗಾಗಿ ಜನ ಪ್ರತಿ ಸಲವೂ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಿರುವುದು ನಾಗೇಶ್‌ರವರಿಗೆ ಮುಳುವಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿಯವರಿಗೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಲೋಕೇಶ್ವರ್ ಬೆಂಬಲ ನೀಡುತ್ತಿದ್ದಾರೆ. ಅದೇ ರೀತಿ ಕಳೆದ ಐದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿರುವ, ಜನಪರ ಹೋರಾಟಗಳನ್ನು ನಡೆಸಿರುವ, ಮಹಿಳಾ ಆರೋಗ್ಯ ಶಿಬಿರಗಳನ್ನು ನಡೆಸಿರುವ ಟೂಡಾ ಮಾಜಿ ಅಧ್ಯಕ್ಷ ಸಿ.ಬಿ ಶಶಿಧರ್ ಕೂಡ ಷಡಕ್ಷರಿಯವರ ಪರ ಪ್ರಚಾರಕ್ಕಿಳಿದಲ್ಲಿ ಅವರ ಗೆಲುವು ಸುಲಭವಾಗುತ್ತದೆ. ಕಾಂಗ್ರೆಸ್ ಇಲ್ಲಿ ಉಪ ಚುನಾವಣೆ ಸೇರಿ 9 ಬಾರಿ ಗೆಲುವು ಸಾಧಿಸಿರುವುದರಿಂದ ಒಂದಷ್ಟು ಸಾಂಪ್ರಾದಾಯಿಕ ಮತಗಳು ಇದ್ದೇ ಇವೆ. ಅದರೊಟ್ಟಿಗೆ ಉಳಿದವರ ಸಾಮರ್ಥ್ಯವೂ ಸೇರಿಕೊಂಡಲ್ಲಿ ಕಾಂಗ್ರೆಸ್ ಗೆಲುವಿನ ದಡ ಮುಟ್ಟಬಹುದು.

2004ರಲ್ಲಿ ಜಯ ಸಾಧಿಸಿದ್ದ ಜೆಡಿಎಸ್ ಆನಂತರ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಿಗೆ ಟಿಕೆಟ್ ನೀಡುತ್ತಾ, ಅಭ್ಯರ್ಥಿಗಳನ್ನು ಬದಲಿಸುತ್ತಾ ಬಂದಿದೆ. ಅಲ್ಲದೆ ಈ ಬಾರಿ ತಿಪಟೂರಿನಲ್ಲಿ ಲಿಂಗಾಯಿತ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂಬ ಕೂಗು ಎದ್ದಿತ್ತು. ಆದರೆ ಈ ಬಾರಿಯೂ ಒಕ್ಕಲಿಗ ಸಮುದಾಯದವರೇ ಅಭ್ಯರ್ಥಿಯಾಗುತ್ತಿದ್ದಾರೆ. ಹಾಗಾಗಿ ಜೆಡಿಎಸ್ ಫೈಟ್ ಕೊಡಬಹುದೇ ಹೊರತು ಗೆಲುವು ದೂರದ್ದಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗುಬ್ಬಿ: ಸೋಲಿಲ್ಲದ ಸರದಾರ ವಾಸಣ್ಣನವರ ಐದನೇ ಗೆಲುವು ಸುಲಭವೆ?


