Homeಮುಖಪುಟಜಿ.ಎನ್ ಸಾಯಿಬಾಬಾ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಐಎಸ್ಎಸ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಜಿ.ಎನ್ ಸಾಯಿಬಾಬಾ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಐಎಸ್ಎಸ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್ ಸಾಯಿಬಾಬಾ ಅವರ ಪುಣ್ಯತಿಥಿಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರೋಪದ ಮೇಲೆ ಮುಂಬೈನ ಟಾಟಾ ಇನ್ಸಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ (ಟಿಐಎಸ್‌ಎಸ್‌) ಕನಿಷ್ಠ 10 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಸೋಮವಾರ (ಅ.13) ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಇತರ ಕೆಲವರ ವಿಳಾಸಗಳನ್ನು ಹುಡುಕುತ್ತಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ. ಬಂಧಿತರ ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

ಶೇಕಡ 90ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದ್ದ ಮತ್ತು ಗಾಲಿಕುರ್ಚಿ ಬಳಸುತ್ತಿದ್ದ ಸಾಯಿಬಾಬಾ ಅವರು, ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಮಾರ್ಚ್ 2024ರಲ್ಲಿ ಬಾಂಬೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿ ಬಿಡುಗಡೆ ಮಾಡಿತ್ತು. ಏಳು ತಿಂಗಳ ನಂತರ, ಅಕ್ಟೋಬರ್ 12ರಂದು ಹೈದರಾಬಾದ್‌ನಲ್ಲಿ ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳಿಂದ ಅವರು ನಿಧನರಾದರು.

ಭಾನುವಾರ (ಅ.12) ಕೆಲವು ಟಿಐಎಸ್ಎಸ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಒಟ್ಟುಗೂಡಿ ಸಾಯಿಬಾಬಾ ಅವರ ಪುಣ್ಯತಿಥಿಯನ್ನು ಸ್ಮರಿಸಲು ಮೇಣದಬತ್ತಿಗಳನ್ನು ಬೆಳಗಿಸಿ, ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ, ಡೆಮಾಕ್ರಟಿಕ್ ಸೆಕ್ಯುಲರ್ ಸ್ಟೂಡೆಂಟ್ಸ್ ಫೋರಮ್ ಎಂಬ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಕೆಲವು ವಿದ್ಯಾರ್ಥಿಗಳು ಕೆಲವು ಪೋಸ್ಟರ್‌ಗಳನ್ನು ಹರಿದು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಅಲ್ಲದೆ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಫೋಟೊಗಳನ್ನು ಕೂಡ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಟಿಐಎಸ್ಎಸ್ ಆಡಳಿತ ಮಂಡಳಿಯ ದೂರಿನ ಆಧಾರದ ಮೇಲೆ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಎಫ್‌ಐಆರ್‌ನಲ್ಲಿ “ರಾಷ್ಟ್ರದ ವಿರುದ್ಧ ಪಿತೂರಿ”, “ಗುಂಪುಗಳ ನಡುವೆ ದ್ವೇಷ ಹರಡುವುದು” ಹಾಗೂ “ಕಾನೂನುಬಾಹಿರವಾಗಿ ಸಭೆ ನಡೆಸುವುದು” ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿ ಹೇಳಿದೆ.

2020ರ ದೆಹಲಿ ಗಲಭೆಯ ಹಿಂದಿನ ಪಿತೂರಿಯ ಆರೋಪದ ಮೇಲೆ ಕಳೆದ ಐದು ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರನ್ನು ಬೆಂಬಲಿಸಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದ್ದಾರೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ, ಭಾನುವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ‘ದಿ ವೈರ್’ ಜೊತೆ ಮಾತನಾಡಿ, ಕಾರ್ಯಕ್ರಮದಲ್ಲಿ ಯಾವುದೇ ಘೋಷಣೆಗಳನ್ನು ಕೂಗಲಾಗಿಲ್ಲ ಎಂದು ಹೇಳಿದ್ದಾರೆ.

‘ನೆಲದ ಕಾನೂನಿಗೆ ಬದ್ಧರಾಗಿರಬೇಕು ಅಥವಾ ಪರಿಣಾಮ ಎದುರಿಸಲು ಸಿದ್ಧರಾಗಿರಬೇಕು..’; ಬಿಜೆಪಿಗೆ ಪ್ರಿಯಾಂಕ್‌ ತಿರುಗೇಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -