ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆ, ಕಾನೂನು ವಿದ್ಯಾರ್ಥಿನಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಮರ್ಹಟಿ ಶಾಸಕ ಮದನ್ ಮಿತ್ರಾ ಅವರಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಭಾನುವಾರ (ಜೂನ್.29) ಶೋಕಾಸ್ ನೋಟಿಸ್ ನೀಡಿದೆ.
ಸಂಸದ ಕಲ್ಯಾಣ್ ಬ್ಯಾನರ್ಜಿ ಕೂಡ ಸಂತ್ರಸ್ತೆ ಕುರಿತು ಅಸೂಕ್ಷ್ಮ ಹೇಳಿಕೆ ಕೊಟ್ಟಿದ್ದರು. ಸ್ವಪಕ್ಷದ ಸಂಸದನ ಹೇಳಿಕೆಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಬಹಿರಂಗವಾಗಿ ಖಂಡಿಸಿದ್ದರು. ಈ ನಡುವೆ ಮದನ್ ಮಿತ್ರಾ ಹೇಳಿಕೆ ನೀಡಿದ್ದಾರೆ. ಇದು ಟಿಎಂಸಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕಲ್ಯಾಣ್ ಬ್ಯಾನರ್ಜಿ ಹೇಳಿಕೆಯನ್ನು ಖಂಡಿಸಿದ್ದ ಮಹುವಾ ಮೊಯಿತ್ರಾ “ಭಾರತದಲ್ಲಿ ಸ್ತ್ರೀದ್ವೇಷವು ಪಕ್ಷಗಳ ಗಡಿಗಳನ್ನು ಮೀರಿದೆ. ಟಿಎಂಸಿ ಇತರ ಪಕ್ಷಗಳಿಗಿಂತ ಭಿನ್ನ ಹೇಗೆಂದರೆ, ಇಂತಹ ಅಸಹ್ಯಕರ ಹೇಳಿಕೆಗಳನ್ನು ಯಾರು ನೀಡಿದರೂ ನಾವು ಅದನ್ನು ಖಂಡಿಸುತ್ತೇವೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.
ಈ ನಡುವೆ ಮದನ್ ಮಿತ್ರಾ, “ಸಂತ್ರಸ್ತೆ ಅತ್ಯಾಚಾರ ನಡೆದ ಆ ಜಾಗಕ್ಕೆ ಹೋಗಿದ್ದು ಏಕೆ? ಆಕೆ ಅಲ್ಲಿಗೆ ಹೋಗಿರದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಶಾಸಕನ ಈ ಹೇಳಿಕೆ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಟಿಎಂಸಿ ಸರ್ಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳು, ಟಿಎಂಸಿ ನಾಯಕರ ಅಸೂಕ್ಷ್ಮ ಹೇಳಿಕೆಗಳ ಬಳಿಕ ಸರ್ಕಾರದ ಮೇಲೆ ಮುಗಿಬಿದ್ದಿವೆ.
ಜೂನ್ 25ರಂದು ದಕ್ಷಿಣ ಕೋಲ್ಕತ್ತಾದ ಕಸ್ಬಾ ಪ್ರದೇಶದ ಕಾನೂನು ಕಾಲೇಜಿನಲ್ಲಿ 24 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ವಿದ್ಯಾರ್ಥಿನಿ ಮುಂಬರುವ ಪರೀಕ್ಷೆಯ ಫಾರ್ಮ್ ತುಂಬಲು ತೆರಳಿದ್ದ ವೇಳೆ ಕಾಲೇಜಿನ ಭದ್ರತಾ ಕೊಠಡಿ ಎಳೆದೊಯ್ದು ದೌರ್ಜನ್ಯ ನಡೆಸಲಾಗಿದೆ.
ಪ್ರಕರಣ ಸಂಬಂಧ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಗುತ್ತಿಗೆ ಸಿಬ್ಬಂದಿ 31 ವರ್ಷದ ಮೊನೊಜಿತ್ ಮಿಶ್ರಾ, ಪ್ರಸ್ತುತ ವಿದ್ಯಾರ್ಥಿಯಾಗಿರುವ 19 ವರ್ಷದ ಝೈಬ್ ಅಹ್ಮದ್, ಮತ್ತೋರ್ವ ವಿದ್ಯಾರ್ಥಿ 20 ವರ್ಷದ ಪ್ರಮಿತ್ ಮುಖೋಪಾಧ್ಯಾಯ ಹಾಗೂ 55 ವರ್ಷದ ಭದ್ರತಾ ಸಿಬ್ಬಂದಿ ಪಿನಾಕಿ ಬ್ಯಾನರ್ಜಿ ಎಂಬವರನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಪ್ರಮುಖ ಆರೋಪಿಗಳು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ ವಿದ್ಯಾರ್ಥಿ ವಿಭಾಗವಾದ ತೃಣಮೂಲ ಛಾತ್ರ ಪರಿಷತ್ (ಟಿಎಂಸಿಪಿ) ಸದಸ್ಯರು ಎಂದು ವರದಿಯಾಗಿದೆ.
ಬಾಂಗ್ಲಾದೇಶಿಯರೆಂದು ಪಶ್ಚಿಮ ಬಂಗಾಳದ 100 ವಲಸೆ ಕಾರ್ಮಿಕರನ್ನು ಬಂಧಿಸಿದ ಒಡಿಶಾ ಸರ್ಕಾರ: ಆರೋಪ