ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಅಕ್ಷರಶಃ ನಡುಕ ಹುಟ್ಟಿಸಿರುವ ಘಟನೆ ನಡೆದಿದೆ. ದಕ್ಷಿಣ 24 ಪರಗಣ ಜಿಲ್ಲೆಯ ಚಾಲ್ತಬೇರಿಯಾ ಪ್ರದೇಶದಲ್ಲಿ ಟಿಎಂಸಿ ನಾಯಕ ರೆಜ್ಜಾಕ್ ಖಾನ್‌ರನ್ನು ಗುರುವಾರ ರಾತ್ರಿ ನಿರ್ದಯವಾಗಿ ಹತ್ಯೆ ಮಾಡಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಖಾನ್‌ರ ಮೇಲೆ ಸತತ ಗುಂಡಿನ ದಾಳಿ ನಡೆಸಿ, ಆನಂತರ ಹರಿತವಾದ ಆಯುಧಗಳಿಂದ ಕೊಚ್ಚಿ, ಕ್ರೂರವಾಗಿ ಕೊಲೆಗೈದಿದ್ದಾರೆ.
ಈ ಕ್ರೂರ ದಾಳಿ ರಾತ್ರಿ ಸುಮಾರು 9:45ಕ್ಕೆ ನಡೆದಿದೆ. ಪಕ್ಷದ ಸಭೆಯಿಂದ ಮನೆಗೆ ಹಿಂದಿರುಗುತ್ತಿದ್ದ ಖಾನ್ ಮೇಲೆ, ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಸತತ ಗುಂಡುಗಳನ್ನು ಹಾರಿಸಿದ್ದಾರೆ. ನಂತರ, ಹರಿತವಾದ ಆಯುಧಗಳಿಂದ ಅವರನ್ನು ಮನಸೋಇಚ್ಛೆ ಕಡಿದುಹಾಕಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಖಾನ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
38 ವರ್ಷದ ರೆಜ್ಜಾಕ್ ಖಾನ್ ಅವರು ಚಕ್ ಮಾರಿಚಾ ಗ್ರಾಮದವರಾಗಿದ್ದರು ಮತ್ತು ಭಂಗಾರ್‌ನ ಚಾಲ್ತಬೇರಿಯಾ ಪ್ರದೇಶದಲ್ಲಿ ಟಿಎಂಸಿ ಪಕ್ಷದ ಅಧ್ಯಕ್ಷರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರು ಟಿಎಂಸಿ ನಾಯಕರೂ ಆದ ಕ್ಯಾನಿಂಗ್ ಪೂರ್ವ ಕ್ಷೇತ್ರದ ಶಾಸಕ ಸೌಕತ್ ಮೊಲ್ಲಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ. ಈ ಘಟನೆಯು ಅವರ ನಿವಾಸದಿಂದ ಕೇವಲ 500 ಮೀಟರ್ ದೂರದಲ್ಲಿ, ಉತ್ತರ್ ಕಾಶಿಪೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಸ್ತಾಳದಲ್ಲಿರುವ ಒಂದು ಕಾಲುವೆ ಬಳಿ ನಡೆದಿದೆ.
ಕೋಲ್ಕತ್ತಾ ಪೊಲೀಸ್ ಕಮಿಷನರ್ ಮನೋಜ್ ವರ್ಮಾ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಕೂಡಲೇ ತನಿಖೆಗೆ ಆದೇಶಿಸಿದರು. ಶುಕ್ರವಾರ, ಖಾನ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು. ಈ ದಾಳಿಯಲ್ಲಿ ಅನೇಕ ಜನ ಭಾಗಿಯಾಗಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
“ನಿನ್ನೆ ರಾತ್ರಿ 9:45ರ ಸುಮಾರಿಗೆ, ಚಕ್ ಮಾರಿಚಾ ಗ್ರಾಮದ ರೆಜ್ಜಾಕ್ ಖಾನ್ ಅವರು ಮನೆಗೆ ಹಿಂದಿರುಗುತ್ತಿದ್ದಾಗ, ಉತ್ತರ್ ಕಾಶಿಪೋರ್ ಪೊಲೀಸ್ ಠಾಣೆಯ ಸಿರಿಸ್ತಾಳದ ಬಳಿ ಕೆಲವರು ಅವರ ಮೇಲೆ ದಾಳಿ ಮಾಡಿದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ” ಎಂದು ಪೊಲೀಸ್ ವರದಿ ತಿಳಿಸಿದೆ.
ಏರ್ ಇಂಡಿಯಾ ವಿಮಾನ ದುರಂತ: ಇಂಧನ ಪೂರೈಸುವ ಸ್ವಿಚ್ ಕಡಿತದಿಂದಲೇ ಅಪಘಾತ; ಪ್ರಾಥಮಿಕ ವರದಿ ಹೇಳಿದ್ದೇನು?


