ಕಳೆದ ವರ್ಷ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಮಣಿಪುರದ ಮೈತೇಯಿ, ಕುಕಿ ಮತ್ತು ನಾಗಾ ಸಮುದಾಯದ ಶಾಸಕರು ತಮ್ಮ ಮೊದಲ ಜಂಟಿ ಸಭೆಗಾಗಿ ಮಂಗಳವಾರ ದೆಹಲಿಯಲ್ಲಿ ಕುಳಿತುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಆಯೋಜಿಸಿರುವ ಸಭೆ ಇಂದು ನಡೆಯಲಿದೆ.
ಸರ್ಕಾರದ ಈ ಉಪಕ್ರಮವನ್ನು ಸ್ವಾಗತಿಸುತ್ತೇನೆ, ಸಭೆಗೆ ಹಾಜರಾಗಲು ಎದುರು ನೋಡುತ್ತಿದ್ದೇನೆ ಎಂದು ಮೈತೇಯಿ ಶಾಸಕರೊಬ್ಬರು ಹೇಳಿದರು. “ಶಾಂತಿ ಉಪಕ್ರಮದ ಭಾಗವಾಗಿ ಒಟ್ಟಿಗೆ ಕುಳಿತುಕೊಳ್ಳಲು ನಮ್ಮನ್ನು ಕೇಳಲಾಯಿತು. ಮೈತೇಯಿ, ಕುಕಿ ಮತ್ತು ನಾಗಾ ಸಮುದಾಯಗಳ ಶಾಸಕರು ಇರುತ್ತಾರೆ ಮತ್ತು ರಾಜ್ಯದ ವಿವಿಧ ಪ್ರದೇಶಗಳು ಉತ್ತಮವಾಗಿ ಪ್ರತಿನಿಧಿಸಲ್ಪಡುತ್ತವೆ” ಎಂದು ಅವರು ಹೇಳಿದರು.
ಕೆಲವು ಮೈತೇಯಿ ಮತ್ತು ನಾಗಾ ಸಚಿವರು, ಶಾಸಕರು ಸೋಮವಾರ ಇಂಫಾಲ್‌ನಿಂದ ದೆಹಲಿಗೆ ಹಾರಿದರು. ಮಣಿಪುರದ ಎಲ್ಲ 10 ಜನ ಕುಕಿ-ಜೋ ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಕುಕಿ-ಝೋ ಸಚಿವ ಲೆಟ್ಪಾವೊ ಹಾಕಿಪ್ ಹೇಳಿದ್ದಾರೆ. “ಕೆಲವರು ಖಂಡಿತವಾಗಿಯೂ ಹಾಜರಾಗುತ್ತಾರೆ. ಆದರೆ, ಎಷ್ಟು ಮಂದಿ ಎಂದು ಖಚಿತವಾಗಿಲ್ಲ” ಎಂದು ಅವರು ಹೇಳಿದರು. ದೆಹಲಿಯಲ್ಲಿ ಬೀಡುಬಿಟ್ಟಿರುವ ಶಾಸಕರೊಬ್ಬರು 18 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಎಂಟು ಜನ ಮೈತೇಯಿ ಶಾಸಕರು, ಕುಕಿ ಮತ್ತು ನಾಗಾ ಸಮುದಾಯದಿಂದ ತಲಾ ಐವರು ಭಾಗವಹಿಸಲಿದ್ದಾರೆ ಎಂದರು.
ಈ ಮಾತುಕತೆಯು ಕಾದಾಡುತ್ತಿರುವ ಸಮುದಾಯಗಳ ನಡುವೆ ಸಂವಾದವನ್ನು ಸುಲಭಗೊಳಿಸುವ ಕೇಂದ್ರದ ಪ್ರಯತ್ನಗಳ ಭಾಗವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದ ಕನಿಷ್ಠ 250 ಜನರು ಸಾವನ್ನಪ್ಪಿದ್ದಾರೆ. 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಸಭೆಯಲ್ಲಿ ಭಾಗವಹಿಸುತ್ತಿರುವ ನಾಗಾ ಸಚಿವ ಅವಾಂಗ್‌ಬೋ ನ್ಯೂಮೈ ಮಾತನಾಡಿ, “ಈಗಿನಂತೆ ಸಭೆಯ ನಿಖರವಾದ ಕಾರ್ಯಸೂಚಿ ನನಗೆ ತಿಳಿದಿಲ್ಲ” ಎಂದು ಹೇಳಿದರು. ನಾಗಾ ಶಾಸಕ ಎಲ್ ಡಿಖೋ, “ನಾನು ಅಭೆಯಲ್ಲಿ ಭಾಗವಹಿಸುತ್ತೇನೆ,ನಾವು ಹೇಗೆ ಉಪಕ್ರಮವನ್ನು ತೆಗೆದುಕೊಳ್ಳಬಹುದು ಎಂಬುದನ್ನು ನೋಡುತ್ತೇನೆ” ಎಂದು ಹೇಳಿದರು.
ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.
ಇದನ್ನೂ ಓದಿ; ವಕ್ಫ್ ಮಸೂದೆ | ಸದನ ಸಮಿತಿ ಸಭೆಯಿಂದ ಹೊರ ನಡೆದ ಪ್ರತಿಪಕ್ಷ ಸಂಸದರು


