ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನ್ಯಾಯೋಚಿತ ಜಾಗತೀಕರಣಕ್ಕಾಗಿ ವಿಶ್ವ ಸಾಮಾಜಿಕ ನ್ಯಾಯ ದಿನದ ಘೋಷಣೆಗೆ ಸಹಿ ಹಾಕಿತು.
ವಿಶ್ವ ಸಾಮಾಜಿಕ ನ್ಯಾಯ ದಿನದ ಮೂಲಕ ಬಡತನ, ಜಾತಿ ಮತ್ತು ದೈಹಿಕ ತಾರತಮ್ಯ, ಅನಕ್ಷರತೆ, ಸಾಮಾಜಿಕ ಮತ್ತು ಧಾರ್ಮಿಕ ತಾರತಮ್ಯವನ್ನು ಹೋಗಲಾಡಿಸುವುದು ಹಾಗೂ ಸಮಸ್ಯೆ ಪರಿಹರಿಸುವುದು ಪ್ರಮುಖ ಉದ್ದೇಶಗಳಾಗಿವೆ.
ಪ್ರತಿ ವರ್ಷ ಒಂದೊಂದು ಸದುದ್ದೇಶದೊಂದಿಗೆ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ. 2022 ರ ವಿಶ್ವ ನ್ಯಾಯ ದಿನದ ಥೀಮ್ ‘ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವುದಾಗಿದೆ. ಕಳೆದ ವರ್ಷದ ಥೀಮ್ ‘ಡಿಜಿಟಲ್ ಆರ್ಥಿಕತೆಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒಂದು ಕರೆ’ ಎಂಬುದಾಗಿತ್ತು.
ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಆರ್ಥಿಕ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಮಾನವನ ಸಾರ್ವತ್ರಿಕ ಸಮಾನತೆ ಸಾಧಿಸುವ ಗುರಿಯೊಂದಿಗೆ ವಿಶ್ವ ಸಾಮಾಜಿಕ ನ್ಯಾಯ ದಿನ ಘೋಷಣೆಯ ಹಿಂದಿನ ಆಲೋಚನೆಯಾಗಿದೆ.
ಬಡತನ, ನಿರುದ್ಯೋಗ, ಸಾಮಾಜಿಕ ಉನ್ನತಿ, ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಯಂಥ ಸಾಮಾಜಿಕ ನ್ಯಾಯದ ಸಮಸ್ಯೆಗಳನ್ನು ಗುರುತಿಸುವ ಅಗತ್ಯವನ್ನು ಅಂಗೀಕರಿಸುವುದು. ಸಾಮಾಜಿಕ ಏಕೀಕರಣ ಮತ್ತು ಉದ್ಯೋಗದ ಗುರಿಯನ್ನು ಸಾಧಿಸುವತ್ತ ಗಮನಹರಿಸುವುದು. ಸಾಮಾಜಿಕ ಜವಾಬ್ದಾರಿಗಳು, ನ್ಯಾಯ ಮತ್ತು ಬಡತನ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಲು ಜನರನ್ನು ಪ್ರೋತ್ಸಾಹಿಸುವುದಾಗಿದೆ.
ಇಂದು ವಿಶ್ವದ ರಾಷ್ಟ್ರ ರಾಷ್ಟ್ರಗಳ ನಡುವೆ ಅಸಮಾನತೆ ಹೆಚ್ಚುತ್ತಿದೆ. ಕೆಲ ಮುಂದುವರಿದ ರಾಷ್ಟ್ರಗಳು ಇತರ ರಾಷ್ಟ್ರಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಶೋಷಿಸುತ್ತಿವೆ. ಜಾಗತೀಕರಣದಿಂದಾಗಿ ತೃತೀಯ ಜಗತ್ತಿನ ರಾಷ್ಟ್ರಗಳನ್ನು ತಮ್ಮ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಮಸ್ಯೆಗಳನ್ನು ಚರ್ಚಿಸಲು ಸಾಮಾಜಿಕ ನ್ಯಾಯ ದಿನಗಳು ಉಪಯೋಗವಾಗಬೇಕಿವೆ.
ಸಾಮಾಜಿಕ ನ್ಯಾಯದ ವಿಶ್ವ ದಿನದ ಇತಿಹಾಸ:
ಜನರಲ್ ಅಸೆಂಬ್ಲಿ ತನ್ನ 63 ನೇ ಅಧಿವೇಶನದಲ್ಲಿ ನವೆಂಬರ್ 26, 2007 ರಂದು, ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿತು. ಅಂದಿನಿಂದ, ಪ್ರತಿ ವರ್ಷ ಫೆಬ್ರವರಿ 20 ನ್ನು ವಿಶ್ವದಾದ್ಯಂತ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ 10ನೇ ಜೂನ್ 2008 ರಂದು ನ್ಯಾಯಯುತ ಜಾಗತೀಕರಣಕ್ಕಾಗಿ ಸಾಮಾಜಿಕ ನ್ಯಾಯ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಇದನ್ನೂ ಓದಿ; ಜಾಮೀನು ನಿರಾಕರಿಸುವಾಗ ಹಿಂದಿ ರಾಷ್ಟ್ರೀಯ ಭಾಷೆಯೆಂದು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್: ಸುಪ್ರೀಂ ಮೆಟ್ಟಿಲೇರಿದ ಆರೋಪಿ


