ಮಂಗಳವಾರ ಗಣರಾಜ್ಯೋತ್ಸವದಂದು ನಡೆದ ದೆಹಲಿಯ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೆ ಕನಿಷ್ಠ 22 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗುತ್ತಿದ್ದು, ಶಂಕಿತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ.
ದೆಹಲಿ ಪೊಲೀಸ್ ವಕ್ತಾರ ಅನಿಲ್ ಮಿತ್ತಲ್, “ರಾಜಧಾನಿಯಾದ್ಯಂತದ ಪೊಲೀಸ್ ಠಾಣೆಗಳಲ್ಲಿ ಭಾರತೀಯ ದಂಡ ಸಂಹಿತೆ ವಿಭಾಗಗಳ ಅಡಿಯಲ್ಲಿ ಗಲಭೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಎಫ್‌ಐಆರ್‌ಗಳನ್ನು ನೋಂದಾಯಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, “ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಭಾಗಿಯಾಗಿರುವವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ
ಮೂರು ಕರಾಳ ಕೃಷಿ ಕಾನೂನುಗಳ ವಿರೋಧಿಸಿ ಪ್ರತಿಭಟಿಸಿ ದೇಶದಾದ್ಯಂತ ಟ್ರಾಕ್ಟರ್ ರ್‍ಯಾಲಿಗಳು ನಡೆದಿದ್ದವು. ಆದರೆ ದೆಹಲಿಯ ರ್‍ಯಾಲಿಯಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರೈತರ ಗುಂಪೊಂದು ದೆಹಲಿಯ ಕೆಂಪು ಕೋಟೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಟ್ರಾಕ್ಟರುಗಳನ್ನು ಓಡಿಸಿದ್ದು ಗೊಂದಲಕ್ಕೆ ಕಾರಣವಾಗಿದೆ.
ಪ್ರತಿಭಟನಾ ನಿರತ ರೈತರು ಕಾನೂನುಗಳನ್ನು ವಿರೋಧಿಸಿ 62 ನೇ ದಿನದಂದು ದೆಹಲಿಯ ಮೂರು ಗೊತ್ತುಪಡಿಸಿದ ಮಾರ್ಗಗಳ ಮೂಲಕ ರ್‍ಯಾಲಿಯಲ್ಲಿ ತೆರಳಬೇಕಾಗಿತ್ತು. ಗಾಜಿಪುರದ ಪ್ರತಿಭಟನಾ ಸ್ಥಳದಿಂದ ಒಂದು ಗುಂಪು ಬೇರೆಯೆ ಮಾರ್ಗ ಹಿಡಿದು ಗೊಂದಲವನ್ನು ಸೃಷ್ಟಿಸಿತು. ಸಿಂಗು ಗಡಿಯ ಮತ್ತೊಂದು ಗುಂಪು ಕೆಂಪು ಕೋಟೆಗೆ ನುಗ್ಗಿ ಸಿಖ್ಖರ ನಿಶಾನ್ ಸಾಹಿಬ್ ಮತ್ತು ರೈತರ ಧ್ವಜವನ್ನು ಹಾರಿಸಿದ್ದರು. ಈ ಹೊತ್ತು ರಾಷ್ಟ್ರಧ್ವಜವು ಸಾಮಾನ್ಯವಾಗಿ ಹಾರಾಡುತ್ತಿರುವ ಅದೇ ಸ್ಥಳದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು ಮತ್ತು ಅದಕ್ಕೆ ಯಾವುದೆ ಅಗೌರವ ಮತ್ತು ಹಾನಿಯನ್ನು ರೈತರು ಉಂಟು ಮಾಡಿಲ್ಲ.
ಪ್ರತಿಭಟನಾ ನಿರತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದರು ಮತ್ತು ಹಲವಾರು ಕಡೆಗಳಲ್ಲಿ ಲಾಠಿ ಚಾರ್ಜ್ ಕೂಡಾ ನಡೆಸಲಾಗಿತ್ತು.
ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು


