ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿರುವ ರೈತರು, ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ತೀರ್ಮಾನಿಸಿದ್ದಾರೆ. ರೈತರ ಈ ನಿರ್ಧಾರಕ್ಕೆ ಬೆದರಿದ ಕೇಂದ್ರ ಸರ್ಕಾರ, ಈ ರ್‍ಯಾಲಿಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.
ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಇವುಗಳನ್ನು ರದ್ದುಪಡಿಸಬೇಕೆಂಬ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸುವುದಾಗಿ ಘೋಷಿಸಿದ್ದರು. ಇದರ ಟ್ರೈಲರ್ ಅನ್ನು ಈ ಹಿಂದೆಯೇ ತೋರಿಸಿದ್ದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳನ್ನು ತಡೆಹಿಡಿಯಿರಿ, ಇಲ್ಲದಿದ್ದರೆ ನಾವು ತಡೆಯುತ್ತೇವೆ: ಕೇಂದ್ರಕ್ಕೆ ಸುಪ್ರೀಂ ತರಾಟೆ
ಹರಿಯಾಣದ ರೈತರು ಕೂಡಾ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದು, ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್ ಈ ರ್‍ಯಾಲಿಯಲ್ಲಿ ಭಾಗವಹಿಸಲಿದೆ. ಸುಮಾರು 20 ಸಾವಿರ ಟ್ರ್ಯಾಕ್ಟರ್‌ಗಳು ರ್‍ಯಾಲಿಯಲ್ಲಿ ಭಾಗವಹಿಸಲಿವೆ ಎಂದು ರೈತರು ಆಂದಾಜಿಸಿದ್ದಾರೆ.
ಸರ್ಕಾರದ ಪರ ವಕೀಲ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, “ಗಣರಾಜ್ಯೋತ್ಸವ ದಿನದ ಸಾಂವಿಧಾನಿಕ ಮತ್ತು ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲಿ ಈ ರ್‍ಯಾಲಿಗೆ ತಡೆಯೊಡ್ಡುವ ಈ ಕ್ರಮ ಕೈಗೊಳ್ಳಬೇಕು” ಎಂದು ಕೋರಿದ್ದಾರೆ.
ಇದನ್ನೂ ಓದಿ: ಗಾಂಧಿ ಹಂತಕ ಗೋಡ್ಸೆ ಹೆಸರಿನಲ್ಲಿ ಗ್ರಂಥಾಲಯ ನಿರ್ಮಿಸಿದ ಹಿಂದೂ ಮಹಾಸಭಾ!
ಜನವರಿ 23 ರಂದು ನಡೆಯುವ ತಾಲೀಮು, ಜನವರಿ 28 ರಂದು ನಡೆಯುವ ಎನ್‌ಸಿಸಿ ರ್‍ಯಾಲಿ, 29 ರಂದು ನಡೆಯುವ ಬೀಟಿಂಗ್ ದ ರಿಟ್ರೀಟ್ ಹಾಗೂ ಜನವರಿ 30ರಂದು ನಡೆಯುವ ಹುತಾತ್ಮರ ದಿನದ ಸಮಾರಂಭಗಳನ್ನು ಸರ್ಕಾರ ಅಫಿಡವಿಟ್ಟಿನಲ್ಲಿ ಉಲ್ಲೇಖಿಸಿದ್ದು, “ಇವುಗಳಿಗೆ ಯಾವುದೇ ತಡೆ ಉಂಟಾದಲ್ಲಿ ಅದು ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದು ಮಾತ್ರವಲ್ಲದೇ, ಇದು ದೇಶಕ್ಕೆ ದೊಡ್ಡ ಮುಜುಗರವಾಗಲಿದೆ” ಎಂದು ಹೇಳಿದೆ.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ, ಪ್ರತಿಭಟನೆ ಮೂಲಭೂತ ಹಕ್ಕು, ಕೋರ್ಟ್ ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು. ಜೊತೆಗೆ, ಸಧ್ಯಕ್ಕೆ ಈ ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಪಿಎಂ ಕಿಸಾನ್ ಸನ್ಮಾನ್ ಯೋಜನೆ: 20.48 ಲಕ್ಷ ಅನರ್ಹ ಫಲನುಭವಿಗಳಿಗೆ 1,364 ಕೋಟಿ ಪಾವತಿ


