ರಾಜ್ಯ ಪೊಲೀಸ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ನಂತರ ತಮಗೆ ವರ್ಗಾವಣೆ ಬೆದರಿಕೆಗಳು ಬಂದಿವೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಲಿಖಿತ ಆದೇಶದಲ್ಲೂ ಉಲ್ಲೇಖಿಸಿದ್ದಾರೆ.
ಜುಲೈ 4ರಂದು ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಎಸಿಬಿ ವಿರುದ್ಧ ಹೇಳಿಕೆ ನೀಡಿದ ನಂತರ ನನಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂದು ಮೌಖಿಕವಾಗಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಸಿಬಿಯ ಕಾರ್ಯನಿರ್ವಹಣಾ ಮುಖ್ಯಸ್ಥ ಹೆಚ್ಚುವರಿ ಡಿಜಿಪಿ (ಎಡಿಜಿಪಿ) ಕಳಂಕಿತ ಅಧಿಕಾರಿ ಎಂದೂ ಅವರು ತಿಳಿಸಿದ್ದರು.
“ನಿಮ್ಮ ಎಸಿಬಿ ಎಡಿಜಿಪಿ ಶಕ್ತಿಶಾಲಿ ವ್ಯಕ್ತಿ ಎಂದು ತೋರುತ್ತಿದೆ. ಇದನ್ನು ಯಾರೋ ನನ್ನ ಸಹೋದ್ಯೋಗಿಗೆ ಹೇಳಿದ್ದಾರೆ. ಆ ನ್ಯಾಯಾಧೀಶರು ಬಂದು ನನಗೆ ತಿಳಿಸಿದ್ದಾರೆ. ವರ್ಗಾವಣೆ ಬೆದರಿಕೆಯನ್ನು ಆದೇಶದಲ್ಲಿ ದಾಖಲಿಸಲಾಗುವುದು” ಎಂದು ನ್ಯಾಯಮೂರ್ತಿ ಸಂದೇಶ್ ತಿಳಿಸಿದ್ದರು.
Karnataka High Court Judge H.P. Sandesh is taking left and right to the @BSBommai @BJP4Karnataka led Corrupt Govt. #BJPFailsIndia pic.twitter.com/KUVUxDpSkq
— Gaddapa✍️ (@Gaddapa) July 5, 2022
ಸಿಜೆ ಆಗಿದ್ದ ರಿತುರಾಜ್ ಅವಸ್ಥಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಮೂರ್ತಿಯೊಬ್ಬರು ಹೇಳಿದ ವಿಷಯವನ್ನು ಜಸ್ಟೀಸ್ ಸಂದೇಶ್ ಪ್ರಸ್ತಾಪಿಸಿದ್ದರು. ಜುಲೈ 4ರಂದು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ತನಗೆ ಬಂದಿದ್ದ ಬೆದರಿಕೆಯನ್ನು ಉಲ್ಲೇಖಿಸಿದ್ದರು.
“ವ್ಯಕ್ತಿಯೊಬ್ಬರು ನನ್ನ ಬಗ್ಗೆ ವಿಚಾರಿಸಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ” ಎಂದು ನ್ಯಾಯಮೂರ್ತಿ ಸಂದೇಶ್ ಸ್ಪಷ್ಟಪಡಿಸಿದ್ದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಲಂಚ ಪ್ರಕರಣದ ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಈ ಹೇಳಿಕೆ ನೀಡಿದ್ದರು.
ಜಮೀನು ವಿವಾದದಲ್ಲಿ ಅನುಕೂಲಕರ ಆದೇಶಕ್ಕೆ ಬದಲಾಗಿ 5 ಲಕ್ಷ ರೂಪಾಯಿ ಲಂಚ ಪಡೆದಿದ್ದಕ್ಕಾಗಿ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿ: ಯುಪಿ ಸಿಎಂ ಅಲಹಾಬಾದ್ ಹೈಕೋರ್ಟ್ ಸಿಜೆ ರೀತಿ ವರ್ತಿಸುತ್ತಿದ್ದಾರೆ: ಓವೈಸಿ
ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳನ್ನು ರಕ್ಷಿಸಲಾಗುತ್ತಿದೆ, ಕಿರಿಯ ಸಿಬ್ಬಂದಿಯನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಆಕ್ಷೇಪಣೆ ಎತ್ತಿದೆ.
ಎಸಿಬಿ ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಮತ್ತು ಸಂಸ್ಥೆಯು ಲಂಚದ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ನ್ಯಾಯಮೂರ್ತಿ ಸಂದೇಶ್ ಅಭಿಪ್ರಾಯಪಟ್ಟಿದ್ದಾರೆ.
“ಎಸಿಬಿಗೆ ಕಳಂಕಿತ ಅಧಿಕಾರಿಗಳನ್ನು ನಿಯೋಜನೆ ಮಾಡಬೇಡಿ. ಎಸಿಬಿಗೆ ಅಧಿಕಾರಿಗಳನ್ನು ನಿಯೋಜಿಸುವ ಮೊದಲು ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸಬೇಕು. ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲೆಂದೇ ಎಸಿಬಿ ರಚಿಸಲಾಗಿದೆ. ಎಸಿಬಿಗೆ ಅಧಿಕಾರಿಯಾಗುವವರಿಗೆ ವಿಶ್ವಾಸಾರ್ಹತೆ ಬಹುಮುಖ್ಯವಾಗಿರುತ್ತದೆ. ಎಸಿಬಿ ಘನತೆಯನ್ನು ಕಾಪಾಡುವ, ಉನ್ನತ ಸ್ಥಾನಕ್ಕೆ ಒಯ್ಯುವ ಕ್ಷಮತೆ ಇರಬೇಕು. ಸರ್ವೀಸ್ ರೆಕಾರ್ಡ್, ಅಧಿಕಾರಿಯ ಸಮಗ್ರತೆಯನ್ನು ಪರಿಗಣಿಸಬೇಕು” ಎಂದು ನ್ಯಾಯಪೀಠವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
“ಎಸಿಬಿಗೆ ಅಧಿಕಾರಿಗಳನ್ನು ನೇಮಿಸುವಾಗ ಆಂತರಿಕ, ಬಾಹ್ಯ ಪ್ರಭಾವಕ್ಕೆ ಒಳಗಾಗದೆ ನೇಮಕ ಮಾಡಬೇಕು. ಇಂತಹ ಅಧಿಕಾರಿಗಳ ಹಾಗೂ ಅವರ ಕುಟುಂಬದವರ ವಿರುದ್ಧವೂ ಎಸಿಬಿ, ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು” ಎಂದು ತಿಳಿಸಿದೆ.
ನ್ಯಾಯಮೂರ್ತಿ ಸಂದೇಶ್ ನೀಡಿದ ಲಿಖಿತ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಎಸಿಬಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 12 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.


