Homeಕರ್ನಾಟಕಪೌರಕಾರ್ಮಿಕರ ಕಾಯಮಾತಿಗೆ ತೊಡಕಾಗಿರುವ ಬೆಂಗಳೂರಿನ ಕಸದ ಮಾಫಿಯಾ ಮತ್ತು ಕಾಂಟ್ರಾಕ್ಟರ್‌ಗಳು

ಪೌರಕಾರ್ಮಿಕರ ಕಾಯಮಾತಿಗೆ ತೊಡಕಾಗಿರುವ ಬೆಂಗಳೂರಿನ ಕಸದ ಮಾಫಿಯಾ ಮತ್ತು ಕಾಂಟ್ರಾಕ್ಟರ್‌ಗಳು

- Advertisement -
- Advertisement -

’ಕಸದಿಂದ ರಸ’ ಎಂಬ ಗಾದೆಮಾತನ್ನು ಹೇಳಲಷ್ಟೆ ಚೆಂದ. ಆದರೆ ಅದನ್ನು ನೀವು ಮಹಾನಗರಗಳಿಗೆ ಅನ್ವಯಿಸಲು ಸಾಧ್ಯವಿಲ್ಲದಂತಾಗಿದೆ. ಬೆಂಗಳೂರಿನ ಕಸ ವಿಲೇವಾರಿ ಎಂಬುದು ಬಗೆಹರಿಯದ ಸಮಸ್ಯೆಯಾಗಿದೆ. ಅಲ್ಲದೆ ಅದೊಂದು ದೊಡ್ಡ ಮಾಫಿಯಾವಾಗಿ ಬೆಳೆದಿದೆ ಕೂಡ. ಕಸ ಸಂಗ್ರಹಿಸಿ ನಗರವನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರಿಗೂ ಅವರ ನ್ಯಾಯಯುತ ಹಕ್ಕುಗಳು ಸಿಕ್ಕಿಲ್ಲ. ಹಾಗಾಗಿಯೇ ಬೆಂಗಳೂರು ಪೌರಕಾರ್ಮಿಕರ ಸಂಘವು AICCTU ಸಂಘಟನೆಯ ನೇತೃತ್ವದಲ್ಲಿ ನಾಲ್ಕು ದಿನಗಳ ಕಾಲ ಧರಣಿ ನಡೆಸಿತ್ತು. ದಿಟ್ಟ ಹೋರಾಟಕ್ಕೆ ಬಗ್ಗಿದ ಸರ್ಕಾರ ಕಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಭರವಸೆ ನೀಡಿದೆ. ಆ ಭರವಸೆ ಜಾರಿಯಾಗಬೇಕಾದರೆ ಪೌರಕಾರ್ಮಿಕರ ಪಾಲಿಗೆ ಶಾಪವಾಗಿರುವ, ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಗುತ್ತಿಗೆ ಪದ್ಧತಿ ನಾಶವಾಗಬೇಕಿದೆ. ಒಂದರ್ಥದಲ್ಲಿ ಇಡೀ ಸಮಸ್ಯೆಗೆ ಕಾರಣವಾಗಿರುವ ಕಂಟ್ರಾಕ್ಟರ್ ಲಾಬಿ ಎಂದು ಕರೆಯಲ್ಪಡುವ ಈ ಗುತ್ತಿಗೆ ಪದ್ಧತಿಯ ಆಳ ಅಗಲವನ್ನು ಅರಿತಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಬಹುದಾಗಿದೆ.

ನಗರ ಪಟ್ಟಣಗಳಲ್ಲಿನ ಸ್ವಚ್ಛತೆ ಮತ್ತು ಕಸ ವಿಲೇವಾರಿಯು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. 20 ವರ್ಷಗಳಿಗೂ ಮೊದಲು ಎಲ್ಲೆಡೆ ಕಸ ಗುಡಿಸುವುದು ಮಾತ್ರ ಇತ್ತು. ಅವರನ್ನು ಪೌರಕಾರ್ಮಿಕರು ಎನ್ನುತ್ತಿದ್ದೆವು. ಅಲ್ಲದೆ ಪ್ರತಿ ಬೀದಿಯ ಬದಿಯಲ್ಲಿ ಕಸದ ಟ್ಯಾಂಕ್ ಒಂದು ಇದ್ದು ಅಲ್ಲಿಗೆ ಜನರು ತಮ್ಮ ಮನೆಯ ಕಸವನ್ನು ಸುರಿಯುತ್ತಿದ್ದರು. ಅದನ್ನು ಅಲ್ಲಿಂದ ಬೇರೆಡೆಗೆ ಸಾಗಿಸುವವರನ್ನು ಗ್ಯಾಂಗ್‌ಮನ್‌ಗಳು ಎಂದು ಕರೆಯಲಾಗುತ್ತಿತ್ತು. 2000ನೇ ಇಸವಿಯ ನಂತರ ಬೆಂಗಳೂರಿನಲ್ಲಿ ಮನೆಮನೆಯಿಂದ ಕಸ ಸಂಗ್ರಹವನ್ನು ಗುತ್ತಿಗೆಗೆ ನೀಡಲಾಯಿತು. ಕಾಂಟ್ರಾಕ್ಟರ್ ಒಬ್ಬನಿಗೆ ಇಂತಿಷ್ಟು ವಾರ್ಡ್‌ಗಳನ್ನು ಗುತ್ತಿಗೆಗೆ ನೀಡಲಾಯಿತು. ಆತ ಒಂದಷ್ಟು ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದನು. ಆಗ ಕಾಂಟ್ರಾಕ್ಟರ್‌ಗೂ ಬಿಬಿಎಂಪಿಗೂ ಸಂಬಂಧವಿತ್ತೇ ಹೊರತು ಕಾರ್ಮಿಕರಿಗೂ ಬಿಬಿಎಂಪಿಗೆ ನೇರ ಕೊಂಡಿಯಿರಲಿಲ್ಲ. ಹೀಗೆ ಒಂದು ಕಡೆ ಬಿಬಿಎಂಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾ ಹೋದರೆ ಮತ್ತೊಂದೆಡೆ ಮೆನ್ ಮೆಟಿರಿಯಲ್ ಸರ್ವೀಸ್ ನೀಡುವ ಗುತ್ತಿಗೆ ಪಡೆದ ಕಾಂಟ್ರಾಕ್ಟರ್‌ಗಳು ನಿಧಾನಕ್ಕೆ ಬಲಗೊಳ್ಳುತ್ತಾ ಹೋದರು.

ಅದೇ ಸಂದರ್ಭದಲ್ಲಿ ಕಸ ಗುಡಿಸುವ ಪೌರಕಾರ್ಮಿಕರನ್ನು ಹೊಸದಾಗಿ ನೇಮಕ ಮಾಡಲಿಲ್ಲ. ಕೆಲವರು ನಿವೃತ್ತಿಯಾದಂತೆಲ್ಲ ಹೊಸಬರನ್ನು ನೇಮಿಸುವ ಬದಲಿಗೆ ಅದನ್ನು ಸಹ ಗುತ್ತಿಗೆಗೆ ನೀಡಲಾಯಿತು. ಹೀಗಾಗಿ ಎಲ್ಲಾ ಕಡೆ ಗುತ್ತಿಗೆದಾರರೇ ಪ್ರಾಬಲ್ಯ ಮೆರೆದರು. ಪೌರ ಕಾರ್ಮಿಕರಿಗೆ ಅರೆಬರೆ ಸಂಬಳ ನೀಡುತ್ತಾ, ಹೆಚ್ಚು ಜನರ ಲೆಕ್ಕ ತೋರಿಸಿ ಕಡಿಮೆ ಜನರನ್ನು ದಿನವಿಡೀ ದುಡಿಸಿ ಕಾಂಟ್ರಾಕ್ಟರ್‌ಗಳು ಕೊಬ್ಬುತ್ತಾ ಹೋದರು. ಬಿಬಿಎಂಪಿ ಅಧಿಕಾರಿಗಳಿಗೆ ಕಮಿಷನ್ ನೀಡಿ ಪ್ರತಿಸಲವೂ ಗುತ್ತಿಗೆ ಟೆಂಡರ್ ತಮಗೆ ಸಿಗುವಂತೆ ಮಾಡಿಕೊಳ್ಳುವ ಮೂಲಕ ಹಿಡಿತ ಸಾಧಿಸಿದರು. ಅವರ ಕಪಿಮುಷ್ಟಿಯಲ್ಲಿ ಬಿಬಿಎಂಪಿ ಸಿಕ್ಕಿಹಾಕಿಕೊಂಡಿತು. ಇವರಿಬ್ಬರ ನಡುವೆ ಸಿಕ್ಕಿಕೊಂಡ ಪೌರಕಾರ್ಮಿಕರು ನಲುಗಿಹೋದರು. ಅಕ್ಷರಶಃ ಜೀತಪದ್ಧತಿಗೆ ಒಳಪಟ್ಟರು.

ಜೀತ ತಪ್ಪಿಸಿಕೊಳ್ಳಲು ವಲಸೆ ಬಂದು ಮತ್ತೆ ಜೀತಕ್ಕೆ ಸಿಲುಕಿದ ಪೌರ ಕಾರ್ಮಿಕರು ತಮಿಳುನಾಡು ಮೂಲದ ತಮಿಳುಮಿಶ್ರಿತ ತೆಲಗು ಮಾತನಾಡುವ ಅರುಂಧತಿಯಾರ್ ಸಮುದಾಯದ ಮತ್ತು ಕರ್ನಾಟಕದ ಮಾದಿಗ ಸಮುದಾಯದ ಪೌರಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಆಂಧ್ರದ ಚಿತ್ತೂರು, ಕಡಪ, ನೆಲ್ಲೂರು ಜಿಲ್ಲೆಗಳ ಮಾದಿಗ ಸಮುದಾಯಕ್ಕೆ ಸೇರಿದ ಪೌರಕಾರ್ಮಿಕರು ಬೆಂಗಳೂರಿನಲ್ಲಿ ಹೆಚ್ಚಿದ್ದಾರೆ. ಈ ಪೌರಕಾರ್ಮಿಕರು ಅಲ್ಲಿನ ಜಮೀನ್ದಾರಿ ರೆಡ್ಡಿಗಳ ಜೀತಪದ್ಧತಿಯಿಂದ ನಲುಗಿ ಅದರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗೆ ವಲಸೆ ಬಂದರು. ಆದರೆ ಇಲ್ಲಿಯೂ ಸಹ ಅದೇ ಜಿಲ್ಲೆಯ ಬಹುತೇಕ ರೆಡ್ಡಿಗಳೇ ಕಾಂಟ್ರಾಕ್ಟರ್‌ಗಳಾಗಿದ್ದು (2011-12ರಲ್ಲಿ ಬೆಂಗಳೂರಿನಲ್ಲಿ 35 ಜನ ಕಾಂಟ್ರಾಕ್ಟರ್‌ಗಳಿದ್ದು, ಅವರಲ್ಲಿ 31 ಜನರು ರೆಡ್ಡಿಗಳಾಗಿದ್ದರು. ಅಷ್ಟು ಮಾತ್ರವಲ್ಲದೆ ಅವರೆಲ್ಲರೂ ನಾಲ್ಕೇ ಕುಟುಂಬಗಳಿಗೆ ಸೇರಿದವರಾಗಿದ್ದರು) ಅವರ ಕೈಕೆಳಗೆ ಗುತ್ತಿಗೆ ಪೌರಕಾರ್ಮಿಕರಾಗಿ ಮತ್ತೆ ಜೀತ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದರು.

ಈ ಕಾಂಟ್ರಾಕ್ಟರ್‌ಗಳು ಒಂದು ವಾರ್ಡಿಗೆ ಕೆಲವರಂತೆ ಮೇಸ್ತ್ರಿಗಳನ್ನು ನೇಮಿಸಿಕೊಳ್ಳುತ್ತಾರೆ. ಅವರ ಕೈಕೆಳಗೆ ಕಸ ಗುಡಿಸುವವರು, ಕಸವನ್ನು ಮನೆಗಳಿಂದ ಸಂಗ್ರಹಿಸುವವರು, ಟ್ರ್ಯಾಕ್ಟರ್ ಲಾರಿ ಅಥವಾ ಆಟೋಗಳಿಗೆ ತುಂಬುವ ಲೋಡರ್ಸ್, ಕಸ ಸಾಗಿಸುವ ಚಾಲಕರು, ಒಳಚರಂಡಿಗಳಲ್ಲಿ ಕಟ್ಟಿಕೊಂಡ ಮಲಮೂತ್ರಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡುವವ ಯುಜಿಡಿ ವರ್ಕರ್ಸ್ ಹೀಗೆ ಹಲವು ವಿಧದ ಪೌರಕಾರ್ಮಿಕರಿದ್ದಾರೆ. ಇವರೆಲ್ಲರೂ ಹಲವು ಹಂತಗಳಲ್ಲಿ ಶೋಷಣೆಗೆ ಒಳಗಾದವರೆ ಆಗಿದ್ದರು. ಇವರೆಲ್ಲರಿಗೂ ಗುತ್ತಿಗೆದಾರ ಸಂಬಳ ನೀಡುತ್ತಿದ್ದ. ಆತ ಕೊಟ್ಟಷ್ಟೆ ಸಂಬಳ. ಅಲ್ಲಿ ಯಾವುದೇ ಕಾರ್ಮಿಕ ಕಾಯ್ದೆಗಳು, ಹಕ್ಕುಗಳು ಅನ್ವಯಿಸುವುದಿಲ್ಲ. ಯಾರಾದರೂ ಯಾಕಿಷ್ಟು ಸಂಬಳ ಎಂದು ಪ್ರಶ್ನಿಸಿದರೆ ಅವರನ್ನು ಮನೆಗೆ ಕಳಿಸಲಾಗುತ್ತಿತ್ತು. ಈ ರೀತಿಯಾಗಿ ಕಾಂಟ್ರಾಕ್ಟರ್‌ಗಳು ತಿಂದು ತೇಗುತ್ತಿದ್ದರೆ ಪೌರಕಾರ್ಮಿಕರ ಜೀವನ ನರಕವಾಗಿತ್ತು.

ಒಂದು ದಶಕದ ಹಿಂದೆಯೇ ಕಾಂಟ್ರಾಕ್ಟರ್‌ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ 32-33 ಸಾವಿರ ಜನ ಪೌರಕಾರ್ಮಿಕ ಕೆಲಸ ಮಾಡುತ್ತಿದ್ದಾರೆಂದು ಲೆಕ್ಕ ತೋರಿಸಿ ಬಿಲ್ ಪಡೆಯುತ್ತಿದ್ದರು. ಆದರೆ ಅಸಲಿಗೆ 10 ಸಾವಿರದಷ್ಟು ಪೌರಕಾರ್ಮಿಕರು ಇರಲಿಲ್ಲ. ಸುಳ್ಳು ಲೆಕ್ಕ ತೋರಿಸಿ ಹಣ ದೋಚುತ್ತಿದ್ದರು ಎಂದು ಕಾರ್ಮಿಕ ಮುಖಂಡರೊಬ್ಬರು ದೂರುತ್ತಾರೆ.

ಕಸ ವಿಲೇವಾರಿ ಸಮಸ್ಯೆ

ಮೇಲೆ ವಿವರಿಸಿದ್ದು ಪೌರಕಾರ್ಮಿಕರ ಸಮಸ್ಯೆಯಾದರೆ ಬೆಂಗಳೂರಿನ ಕಸ ವಿಲೇವಾರಿಯದ್ದು ಮತ್ತೊಂದು ಬೃಹತ್ ಸಮಸ್ಯೆ. ಬೆಂಗಳೂರು ನಗರದಾದ್ಯಂತ ದಿನವೊಂದಕ್ಕೆ 5-6 ಸಾವಿರ ಟನ್ ಕಸ ಸಂಗ್ರಹವಾಗುತ್ತದೆ. ಅದನ್ನು ಸಂಗ್ರಹಿಸಿ ದೊಡ್ಡದೊಡ್ಡ ವಾಹನಗಳಲ್ಲಿ ನಗರದ ಹೊರವಲಯದಲ್ಲಿರುವ ಲ್ಯಾಂಡ್‌ಫಿಲ್‌ಗಳಿಗೆ ಸುರಿಯಲಾಗುತ್ತದೆ. ಆದರೆ ಅಲ್ಲಿಯ ಸ್ಥಳೀಯರು ಅದನ್ನು ವಿರೋಧಿಸುತ್ತಾರೆ. ಬೆಂಗಳೂರಿನ ಕಸವನ್ನು ನಮ್ಮೂರಿನಲ್ಲೇಕೆ ಸುರಿಯುತ್ತೀರಿ ಎಂಬುದು ಅವರ ನ್ಯಾಯಯುತ ಪ್ರಶ್ನೆ. ಇದೇ ವಿಚಾರಕ್ಕೆ 2013ರಲ್ಲಿ ಮಂಡೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಪ್ರತಿಭಟನೆ ನಡೆಯಿತು. ಆಗಿನ ಸಿಎಂ ಸಿದ್ದರಾಮಯ್ಯನವರು ಅದಕ್ಕೆ ಪರಿಹಾರವೆಂಬಂತೆ ಬೆಂಗಳೂರು ನಗರದಲ್ಲಿಯೇ ಕಸ ಸಂಸ್ಕರಣಾ ಘಟಕಗಳನ್ನು ಆರಂಭಿಸಿದರು. ಸುಬ್ರಾಯ್ಯನ ಪಾಳ್ಯ, ಕೂಡ್ಲು, ಚಿಕ್ಕನಾಗಮಂಗಲ, ದೊಡ್ಡ ಬಿದರಕಲ್ಲು, ಕನ್ನಹಳ್ಳಿ, ಸೀಗೆಹಳ್ಳಿಗಳಲ್ಲಿ ಕೆಸಿಡಿಸಿ (ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ಘಟಕಗಳಿದ್ದು ಹಸಿ ಕಸಗಳನ್ನು ತೆಗೆದುಕೊಂಡು ಹೋಗಿ ಕಾಂಪೋಸ್ಟ್ ಮಾಡಲಾಗುತ್ತದೆ.

ಈ ನಡುವೆ ಹೈಕೋರ್ಟ್ ಕೂಡ ಪ್ರತಿ ಮನೆಗಳಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಕೊಡಬೇಕು ಎಂದು ಸೂಚಿಸಿತು. ಆದರೆ ಇದನ್ನು ಜಾರಿಗೊಳಿಸಲು ಕಾಂಟ್ರಾಕ್ಟರ್‌ಗಳು ಒಪ್ಪಲಿಲ್ಲ. ಏಕೆಂದರೆ ಅವರು ಲ್ಯಾಂಡ್‌ಫಿಲ್‌ನಲ್ಲಿ ಕಸ ಎಷ್ಟು ಸುರಿಯುತ್ತಾರೊ ಅದರ ಆಧಾರದಲ್ಲಿ ಹಣ ಕೊಡಲಾಗುತ್ತದೆ. ಬರಿ ಒಣಕಸ ಸುರಿದರೆ ಅವರಿಗೆ ಹೆಚ್ಚಿನ ದುಡ್ಡು ಸಿಗುವುದಿಲ್ಲ. ಹಾಗಾಗಿ ಅವರು ಹಸಿ ಕಸ ವಿಂಗಡನೆಯನ್ನು ಒಪ್ಪಲಿಲ್ಲ. ಜನ ಕಸ ವಿಂಗಡಿಸಿ ಕೊಟ್ಟರೂ ಸಹ ಅವರು ಅದನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದರು. ಹಾಗಾಗಿ ಕಸ ಸಂಸ್ಕರಣಾ ಘಟಕಗಳು ಯಶಸ್ವಿಯಾಗಲಿಲ್ಲ. ಈಗಲೂ ಬೆಂಗಳೂರಿನಲ್ಲಿ ಸಂಗ್ರಹವಾಗುವ ಕಸ 50 ಕಿ.ಮೀ ದಾಟಿ ಹಳ್ಳಿಗಳಲ್ಲಿ ಬೆಟ್ಟದ ರಾಶಿಯಾಗುತ್ತಿದೆ.

ಪೌರಕಾರ್ಮಿಕರ ದಿಟ್ಟ ಪ್ರತಿಭಟನೆ

ಒಂದೆಡೆ ಕಾಂಟ್ರಾಕ್ಟರ್‌ಗಳು ತಮ್ಮ ಕಣ್ಣೆದುರಿಗೆ ಲೂಟಿ ಹೊಡೆಯುತ್ತಿದ್ದಾರೆ, ಇನ್ನೊಂದೆಡೆ ತಮಗೆ ನ್ಯಾಯಯುತವಾಗಿ ಸಿಗಬೇಕಿದ್ದ ಸಂಬಳ ಹಕ್ಕುಗಳು ಸಿಗುತ್ತಿಲ್ಲ; ದಿನವಿಡೀ ದುಡಿದರೂ ಮೂರು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ; ವಾರಕ್ಕೊಂದು ರಜೆ ಇಲ್ಲ, ದುಡಿಯುವ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯವಿಲ್ಲ; ಆರೋಗ್ಯ ಹದಗೆಟ್ಟರೆ ಸಮರ್ಪಕ ಚಿಕಿತ್ಸೆಯ ವ್ಯವಸ್ಥೆಯಿಲ್ಲ; ತಮ್ಮ ಮಕ್ಕಳು ತಮ್ಮಂತೆ ಆಗಬಾರದು ಚೆನ್ನಾಗಿ ಓದಿಸಬೇಕೆಂದರೆ ಫೀ ಕಟ್ಟಲು ಹಣವಿಲ್ಲ; ಇದು ಪೌರಕಾರ್ಮಿಕರನ್ನು ಹತಾಶೆಗೆ ದೂಡಿತ್ತು. ಹೋರಾಟವೊಂದೆ ಅವರ ಎದುರಿನ ಆಯ್ಕೆಯಾಗಿತ್ತು. ಸಂಘ ಕಟ್ಟಿದರೆ, ಪ್ರತಿಭಟನೆ ನಡೆಸಿದರೆ ಮೇಸ್ತ್ರಿಗಳು ಅವರನ್ನು ಕೆಲಸದಿಂದ ತೆಗೆಯುವ ಅಪಾಯವಿತ್ತು. ಆದರೆ ಸಹಿಸಿಕೊಂಡು ಕೆಲಸ ಮಾಡುವುದು ಅದಕ್ಕಿಂತಲೂ ಘೋರವಾಗಿತ್ತು. ಮೇಸ್ತ್ರಿಗಳು ಸಹ ಒಂದಲ್ಲಒಂದು ರೀತಿಯಲ್ಲಿ ಕಂಟ್ರಾಕ್ಟರ್‌ಗಳಿಂದ ಅನ್ಯಾಯಕ್ಕೆ ಒಳಗಾಗಿದ್ದವರೆ ಆಗಿದ್ದರು. ಇದೆಲ್ಲವೂ ಅವರು ಸಂಘಟಿತರಾಗುವಂತೆ ಮತ್ತು ಹೋರಾಡುವುದಕ್ಕೆ ಕಾರಣವಾಗಿದ್ದವು.

2016ರಲ್ಲಿ ಪೌರಕಾರ್ಮಿಕರು ಮತ್ತೊಮ್ಮೆ ದೊಡ್ಡ ಹೋರಾಟ ನಡೆಸಿದರು. ಕಾಯಂ ಮಾಡಬೇಕು ಮತ್ತು ಕಾರ್ಮಿಕ ಹಕ್ಕುಗಳು ತಮಗೂ ದೊರಕಬೇಕು ಎಂಬುದು ಅವರ ಹಕ್ಕೊತ್ತಾಯವಾಗಿತ್ತು. ಆಗ ಸಿದ್ಧರಾಮಯ್ಯನವರು ಗುತ್ತಿಗೆ ಆಧಾರದಲ್ಲಿ ಕಸ ಗುಡಿಸುತ್ತಿದ್ದ ಸುಮಾರು 17,000 ಪೌರಕಾರ್ಮಿಕರನ್ನು ಸರ್ಕಾರಿ ಕಾರ್ಮಿಕರು ಎಂದು ಗುರುತಿಸಿ ಬಿಬಿಎಂಪಿಯಿಂದಲೇ ನೇರಪಾವತಿ ಯೋಜನೆ ರೂಪಿಸಿದರು ಮತ್ತು ಅವರ ಕನಿಷ್ಟ ವೇತನವನ್ನು 19,000 ರೂಗಳಿಗೆ ಏರಿಸಿದ್ದರು. ಅಲ್ಲದೇ ಹಲವು ಹುದ್ದೆಗಳಿಗೆ ನೇರ ನೇಮಕಾತಿ ಘೋಷಿಸಿದ್ದರು. ಇವು ಕಸ ಗುಡಿಸುವ ಪೌರಕಾರ್ಮಿಕರಿಗೆ ಉಪಯೋಗಕರವಾಗಿದ್ದರೂ ಸಹ ಕಸ ಸಂಗ್ರಹಿಸುವ ಮತ್ತು ಸಾಗಿಸುವ ಇತರ ಪೌರಕಾರ್ಮಿಕರು ಇಂದಿಗೂ ಗುತ್ತಿಗೆ ಆಧಾರದಲ್ಲಿಯೇ ಮುಂದುವರೆಯುತ್ತಿದ್ದಾರೆ ಮತ್ತು ಶೋಷಣೆ ಅನುಭವಿಸುತ್ತಿದ್ದಾರೆ. ಆದರೆ ಅವರೆಲ್ಲರ ಮುಖ್ಯ ಹಕ್ಕೊತ್ತಾಯ ಕಾಯಮಾತಿ ಮಾತ್ರ ಆಗಿರಲಿಲ್ಲ.

ಕಾನೂನಿನ ತೊಡಕು

ಹಿಂದೆ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಪೌರಕಾರ್ಮಿಕರನ್ನು ಕಾಯಂ ಮಾಡಿಕೊಳ್ಳದಿರಲು ಕಾನೂನು ತೊಡಕನ್ನು ಮುಂದೆ ಮಾಡಿದ್ದರು. ಅದೆಂದರೆ ಯಾವುದೇ ನೇಮಕಾತಿ ಮಾಡಿಕೊಳ್ಳುವಾಗ, ನೇಮಕಾತಿ ನಿಯಮಾವಳಿ, ಮೀಸಲಾತಿ, ರೋಸ್ಟರ್‌ಗಳನ್ನು ಅಳವಡಿಸಬೇಕು. ಆದರೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವಾಗ ಇವುಗಳನ್ನು ಪಾಲಿಸಿರುವುದಿಲ್ಲ. ಇದು ಸಮಾನ ಅವಕಾಶಗಳನ್ನು ಸೃಷ್ಟಿಸಿಲ್ಲದ ಕಾರಣ ಸಂವಿಧಾನ ಕಲಂ 16ಕ್ಕೆ ವಿರುದ್ಧ ಎಂದು ಸುಪ್ರೀಂ ಕೋರ್ಟ್ ಉಮಾದೇವಿ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಹೇಳಿದೆ. ಹಾಗಾಗಿ ಕಾಯಂ ಮಾಡಿಕೊಳ್ಳಲು ಸಾಧ್ಯವಿಲ್ಲ, ಕಾನೂನು ತೊಡಕಿದೆ ಎಂದಿದ್ದರು. ಬದಲಿಗೆ ನೇರ ನೇಮಕಾತಿ ಮತ್ತು ನೇರ ಪಾವತಿಗೆ ಅವರು ಒತ್ತುಕೊಟ್ಟಿದ್ದರು.

ಸುಪ್ರೀಂಕೋರ್ಟ್ ಆದೇಶದಲ್ಲಿ ವಾಸ್ತವಾಂಶಗಳಿದ್ದರೂ ಸಹ ಗುತ್ತಿಗೆ ಪದ್ಧತಿಯೇ ಸಂವಿಧಾನ ವಿರೋಧಿಯಾದುದು ಹಾಗೂ ಕಾನೂನಿಗೆ ವಿರುದ್ಧವಾಗಿ ಗುತ್ತಿಗೆ ಪದ್ದತಿಯನ್ನು ಅಳವಡಿಸಲಾಗುತ್ತಿದೆ ಎಂಬುದರ ಕುರಿತು ಆ ತೀರ್ಪು ಏನನ್ನೂ ಹೇಳದಿರುವುದು ಪೌರಕಾರ್ಮಿಕರಿಗೆ ದೊಡ್ಡ ತಡೆಯಾಗಿ ಪರಿಣಮಿಸಿದೆ.
ಮತ್ತೆ ಭುಗಿಲೆದ್ದ ಪೌರ ಕಾರ್ಮಿಕರ ಹೋರಾಟ ಪೌರಕಾರ್ಮಿಕರ ಬೇಡಿಕೆಯಿರುವುದು ಎಲ್ಲರನ್ನು ಕಾಯಂ ಮಾಡಿಕೊಳ್ಳಿ ಎಂಬುದಾಗಿದೆ. ಆದರೆ ಹಿಂದಿನ ಸರ್ಕಾರ ಕಸ ಗುಡಿಸುವವರಿಗೆ ಮಾತ್ರ ನೇರ ಪಾವತಿ ವ್ಯವಸ್ಥೆ ಮಾಡಿತ್ತು. ಉಳಿದವರು ಇನ್ನೂ ಗುತ್ತಿಗೆ ಪದ್ಧತಿಯಲ್ಲಿಯೇ ಮುಂದುವರೆಯುತ್ತಿದ್ದಾರೆ. ಈ ತಾರತಮ್ಯವನ್ನು ಎಲ್ಲಾ ಪೌರಕಾರ್ಮಿಕರು ಒಗ್ಗಟ್ಟಾಗಿ ವಿರೋಧಿಸುತ್ತಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಎಲ್ಲರನ್ನೂ ಕಾಯಂ ಮಾಡಿಕೊಳ್ಳಬೇಕೆಂಬುದು ಅವರ ಹಕ್ಕೊತ್ತಾಯ. ಹಾಗಾಗಿ ಜುಲೈ 1 ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಮತ್ತೆ ಆರಂಭಿಸಿದರು.

5 ಸಾವಿರಕ್ಕೂ ಹೆಚ್ಚು ಜನರು ಮಳೆ ಚಳಿಯೆನ್ನದೆ 4 ದಿನಗಳ ಕಾಲ ಮುಷ್ಕರ ನಡೆಸಿದರು. ಹಲವೆಡೆ ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕಿಳಿದರು. ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿಯೂ ಹೋರಾಟ ನಡೆಸಲಾಯಿತು. ನ್ಯಾಯಯುತ ಪ್ರತಿಭಟನೆಯೆದುರು ಮಣಿದ ಸರ್ಕಾರ ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲು ಪ್ರಕ್ರಿಯೆ ಆರಂಭಿಸಲು ಸಮಿತಿ ರಚನೆ ಮಾಡಿದೆ. 3 ತಿಂಗಳ ಕಾಲಮಿತಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದಾಗಿ ಲಿಖಿತ ಭರವಸೆ ನೀಡಿದೆ. ಹಾಗಾಗಿ ಪೌರಕಾರ್ಮಿಕರು ಹೋರಾಟ ಅಂತ್ಯಗೊಳಿಸಿದ್ದಾರೆ.

ಕಾಯಂಮಾತಿಗೆ ಕಾಂಟ್ರಾಕ್ಟರ್‌ಗಳೆ ಕಂಟಕ

ಶ್ರಮಿಕರ ದಿಟ್ಟ ಹೋರಾಟದ ಎದುರು ಸರ್ಕಾರವೇನೋ ತಲೆ ಬಾಗಿದೆ. ಆದರೆ ಅವರನ್ನು ಕಾಯಂ ಮಾಡಿಕೊಳ್ಳಲು ಕಾನೂನು ಮತ್ತ ಕಂಟ್ರಾಕ್ಟರ್‌ಗಳು ಇಬ್ಬರೂ ಅಡ್ಡಿಯಾಗಿದ್ದಾರೆ. ಕಾನೂನು ತೊಡಕು ನಿವಾರಿಸಿಕೊಳ್ಳಲು ನೇಮಕಾತಿ ನಿಯಮಗಳ ಬದಲಾವಣೆಗೆ ಸಂಪುಟ ಮತ್ತು ಎರಡೂ ಸದನಗಳ ಅನುಮೋದನೆ ಪಡೆಯುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬೇರೆ ಯಾವ ರಾಜ್ಯದಲ್ಲಿಯೂ ಕಾಯಂ ಮಾಡಿಕೊಂಡಿಲ್ಲ, ನಾವೇ ಮೊದಲಿಗರು ಎಂದಿದ್ದಾರೆ.

ಒಂದು ಕಡೆ ಕಾಯಂ ಮಾಡುತ್ತೇವೆ, ನೇರ ನೇಮಕಾತಿ ಅಡಿ ತರುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಅಂದರೆ ಇಷ್ಟು ದಿನ ಕಸ ಸಂಗ್ರಹಣೆ ಮತ್ತು ಸಾಗಾಣೆಗೆ ನೀಡಿದ್ದ ಗುತ್ತಿಗೆಯನ್ನು ತೆಗೆದುಹಾಕಿ ಬಿಬಿಎಂಪಿಯವರೆ ವಹಿಸಿಕೊಳ್ಳಬೇಕು; ಹಾಗಾದಾಗ ಮಾತ್ರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲು ಸಾಧ್ಯ. ಆದರೆ ಸದ್ಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಗುತ್ತಿಗೆಯನ್ನು ರದ್ದುಗೊಳಿಸುತ್ತೇವೆ ಎಂದು ಬಿಬಿಎಂಪಿ ಹೇಳುತ್ತಿಲ್ಲ. ಬದಲಿಗೆ ಮತ್ತೆ ಮುಂದಿನ 5 ವರ್ಷಕ್ಕೆ ಕಾಂಟ್ರಾಕ್ಟರ್‌ಗೆ ಟೆಂಡರ್ ಕರೆಯಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಇದು ಮತ್ತೆ ಕಾಂಟ್ರಾಕ್ಟರ್ ಲಾಬಿಗೆ ಮಣಿದು ಪೌರಕಾರ್ಮಿಕರಿಗೆ ಅನ್ಯಾಯವೆಸಗುವ ಕುತಂತ್ರವಾಗಿದೆ. ಯಾವುದೇ ಕಾರಣಕ್ಕೂ ಗುತ್ತಿಗೆ ನೀಡಲು ಟೆಂಡರ್ ಕರೆಯಬಾರದು ಮತ್ತು ಬಿಬಿಎಂಪಿಯೇ ಅದನ್ನು ಜಾರಿಗೊಳಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಬೇಕಾಗಿದೆ.

ಕಬಂದಬಾಹು ಚಾಚಿರುವ ಕಾಂಟ್ರಾಕ್ಟರ್‌ಗಳ ಮಾಫಿಯಾ

ಕಾಂಟ್ರಾಕ್ಟರ್‌ಗಳು ಪೌರಕಾರ್ಮಿಕರಿಗೆ ನ್ಯಾಯಯುತ ಸಂಬಳ ಕೊಡದೆ ವಂಚಿಸುತ್ತಿದ್ದಾರೆ. ಆರಂಭದಲ್ಲಿ ಕೇವಲ 4-5 ಸಾವಿರ ಕೊಟ್ಟು, 15 ಸಾವಿರ ಕೊಡುತ್ತಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿ ವಂಚಿಸುತ್ತಿದ್ದರು. ಜೊತೆಗೆ ಕಡಿಮೆ ಕೆಲಸಗಾರರನ್ನು ಇಟ್ಟುಕೊಂಡು ಹೆಚ್ಚು ಜನರ ಹೆಸರು ತೋರಿಸಿ ಲೂಟಿ ಹೊಡೆಯುತ್ತಿದ್ದರು. ಇನ್ನು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬೋಗಸ್ ಬಿಲ್‌ಗಳನ್ನು ತೋರಿಸಿ, ಸುಳ್ಳು ಲೋಡ್‌ಗಳ ಲೆಕ್ಕ ನೀಡಿ, ಕೋಟ್ಯಾಂತರ ಹಣ ಲೂಟಿ ಹೊಡೆಯುತ್ತಿದ್ದಾರೆ. ಬಿಬಿಎಂಪಿ ಪ್ರತಿ ವರ್ಷ ಕಸ ವಿಲೇವಾರಿ ಮೇಲೆಯೇ 1200 ಕೋಟಿ ರೂಗೂ ಅಧಿಕ ಹಣವನ್ನು ಸುರಿಯುತ್ತದೆ. ಅದರ ಸಿಂಹಪಾಲು ಕಾಂಟ್ರಾಕ್ಟರ್‌ಗಳು – ಬಿಬಿಎಂಪಿ ಅಧಿಕಾರಿಗಳು, ಕಾರ್ಪೊರೇಟರ್‌ಗಳು, ಅವರ ಹಿಂದೆ ಇರುವ ಸಚಿವರು ಮತ್ತು ಶಾಸಕರ ಕಿಸೆ ಸೇರುತ್ತಿದೆ. ಅಂದರೆ ಶೇ.40-50% ಹಣ ಇವರಿಗೆ ಹೋಗುತ್ತಿದೆ.

ಮೊನ್ನೆ ಪೌರಕಾರ್ಮಿಕರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಸಿದ್ದರಾಮಯ್ಯನವರು ಭೇಟಿ ಆಗಿ ಬೆಂಬಲ ಸೂಚಿಸಿದರು. ಆ ನಂತರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿಯವರು ಸಹ ಭೇಟಿ ನೀಡಿದ್ದು ಆಶ್ಚರ್ಯಗೊಳಿಸುವಂತಿತ್ತು. ಏಕೆಂದರೆ ಈ ಹಿಂದೆ ಗೋಪಿನಾಥ್ ರೆಡ್ಡಿ ಎಂಬ ದೊಡ್ಡ ಕಂಟ್ರಾಕ್ಟರ್ ಇದ್ದರು. ಕಸದ ಮಾಫಿಯಾದ ಕಿಂಗ್ ಪಿನ್ ಎಂದು ಅವರನ್ನು ಕರೆಯಲಾಗುತ್ತಿತ್ತು. ಆತ ಇದೇ ರಾಮಲಿಂಗಾರೆಡ್ಡಿಯವರ ಸಂಬಂಧಿ! ಕೊರೊನಾ ಕಾರಣಕ್ಕೆ ಅವರು ತೀರಿಕೊಂಡ ನಂತರ ಸದ್ಯ ಬಾಲಸುಬ್ರಮಣ್ಯಂ ಎನ್ನುವವರು ಕಸ ಮಾಫಿಯಾದ ಉಸ್ತುವಾರಿ ಹೊತ್ತಿದ್ದಾರೆ. ಈತನೂ ರಾಮಲಿಂಗಾರೆಡ್ಡಿಯವರ ಆಪ್ತ ಎನ್ನಲಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿರುವ ರಾಮಲಿಂಗಾರೆಡ್ಡಿಯವರು ಪೌರ ಕಾರ್ಮಿಕರನ್ನು ಮನುಷ್ಯರಂತೆ ಕಾಣಿ ಎಂದು ತಮ್ಮ ಆಪ್ತ ಕಾಂಟ್ರಾಕ್ಟರ್‌ಗಳಿಗೆ ಕಿವಿ ಹಿಂಡಿದ್ದರೆ ಸಾಕಿತ್ತು, ಪೌರ ಕಾರ್ಮಿಕರು ಎಷ್ಟೋ ನಿಟ್ಟುಸಿರುಬಿಡುತ್ತಿದ್ದರು. ಅಷ್ಟು ದಿನ ಪೌರಕಾರ್ಮಿಕರು ಸರ್ಕಾರದಿಂದ, ಕಾಂಟ್ರಾಕ್ಟರ್‌ಗಳಿಂದ ಶೋಷಣೆ ಅನುಭವಿಸುತ್ತಿದ್ದಾಗಲೂ ಸುಮ್ಮನಿದ್ದ ರಾಮಲಿಂಗಾರೆಡ್ಡಿಯವರು ಈಗ ಮಾತ್ರ ಪ್ರತಿಭಟನೆಯಲ್ಲಿ ಭಾಗವಹಿಸುವುದು ಶೋಭೆ ತರುವಂತೆ ಕಾಣಲಿಲ್ಲ.

ಬಿಬಿಎಂಪಿ ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟಲ್ಲಿ ಬೋಗಸ್ ಬಿಲ್‌ಗಳು, ಸುಳ್ಳು ಲೆಕ್ಕಗಳು ತಪ್ಪುತ್ತದೆ. ಅದರಿಂದ ಉಳಿಯುವ ಹಣದಲ್ಲಿಯೇ ಕಾಯಂ ಪೌರಕಾರ್ಮಿಕರಿಗೆ ಸಂಬಳ, ಹಕ್ಕು, ಸವಲತ್ತುಗಳನ್ನು ನೀಡಬಹುದಾಗಿದೆ. 2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದಾಗ ಕಾಂಟ್ರಾಕ್ಟರ್‌ಗಳು 33 ಸಾವಿರ ಕಸ ಗುಡಿಸುವ ಪೌರಕಾರ್ಮಿಕರಿದ್ದಾರೆ ಎಂದು ಸುಳ್ಳು ಲೆಕ್ಕ ಹೇಳುತ್ತಿದ್ದುದ್ದು ಬಯಲಾಗಿತ್ತು. ಕೇವಲ 17 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಿಬಿಎಂಪಿ ಅವರಿಗೆ ನೇರಪಾವತಿ ಮಾಡುತ್ತಿದೆ

ಪೌರ ಕಾರ್ಮಿಕರ ಹೋರಾಟಕ್ಕೆ ಸಿಕ್ಕ ಜಯ – ಕ್ಲಿಫ್ಟನ್ ರೊಸಾರಿಯೊ

“ಬಡವರು, ದಲಿತರ ಪರವಾಗಿ ಯಾವ ಸರ್ಕಾರಗಳು ಕೆಲಸ ಮಾಡುವುದಿಲ್ಲ, ನಿಕೃಷ್ಟ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಪೌರ ಕಾರ್ಮಿಕರ ಘನತೆಗಾಗಿ ನಮ್ಮ ಸಂಘಟನೆ ಹಲವು ವರ್ಷಗಳಿಂದ ಹೋರಾಡುತ್ತಾ ಬಂದಿದೆ. ಪೌರಕಾರ್ಮಿಕರು ಸಹ ಜಾಗೃತರಾಗಿ ತಮ್ಮ ಮೇಲಿನ ಶೋಷಣೆಯ ವಿರುದ್ಧ ಹೋರಾಟಕ್ಕಿಳಿದರು. ನಾಲ್ಕು ದಿನಗಳ ಕಾಲ ಬೀದಿಯಲ್ಲಿ ನಡೆದ ಈ ಐತಿಹಾಸಿಕ ಐಕ್ಯ ಹೋರಾಟಕ್ಕೆ ಕಡೆಗೂ ಗೆಲುವು ಸಿಕ್ಕಿದೆ” ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿದ್ದ ಎಐಸಿಸಿಟಿಯುನ ರಾಜ್ಯ ಅಧ್ಯಕ್ಷರಾದ ಕ್ಲಿಫ್ಟನ್ ಡಿ ರೊಜಾರಿಯೋ.

ನ್ಯಾಯಪಥದೊಂದಿಗೆ ಮಾತನಾಡಿದ ಅವರು, “ನಮ್ಮ ಪ್ರಮುಖ ಹಕ್ಕೊತ್ತಾಯಗಳನ್ನು ಈಡೇರಿಸಲು ಸರ್ಕಾರ ಲಿಖಿತ ಒಪ್ಪಿಗೆ ನೀಡಿದೆ. ಈ ಹಕ್ಕೊತ್ತಾಯಗಳು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಪೌರ ಕಾರ್ಮಿಕರೂ ಕಾಯಮಾತಿ ಆಗುವವರೆಗೂ ಸರ್ಕಾರ ಮೇಲೆ ಒತ್ತಡ ತರುತ್ತೇವೆ” ಎಂದರು.

ಕಸ ವಿಲೇವಾರಿ ಸಮಸ್ಯೆಗೆ ಪರಿಹಾರವೇನು?

ದಶಕಗಳಿಂದ ಕಡೆಗಣಿಸಿದ್ದ ಪೌರಕಾರ್ಮಿಕರ ಸಮಸ್ಯೆಗಳು ಕಡೆಗೂ ಒಂದುಮಟ್ಟಕ್ಕೆ ಬಗೆಹರಿಯುವ ನಿಟ್ಟಿನಲ್ಲಿವೆ. ಒಂದು ವೇಳೆ ಸರ್ಕಾರ ಕೊಟ್ಟ ಭರವಸೆ ಮರೆತು ಹಿಂದೆಸರಿದರೂ ಸಹ ಪೌರಕಾರ್ಮಿಕರು ಪಟ್ಟು ಬಿಡುವುದಿಲ್ಲ ಎನ್ನುವುದನ್ನು ಇಲ್ಲಿಯವರೆಗಿನ ಹೋರಾಟಗಳು ಮೂಲಕ ತೋರಿಸಿದ್ದಾರೆ. ಮುಂದೆಯೂ ತಮ್ಮ ದಿಟ್ಟ ಹೋರಾಟ ನಡೆಸುತ್ತಾರೆ ಮತ್ತು ಗೆಲುವು ಸಾಧಿಸುತ್ತಾರೆ. ಆದರೆ ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಮಾತ್ರ ಹಾಗೆಯೆ ಉಳಿದುಕೊಳ್ಳಲಿದೆ.

ಈಗ ಪ್ರತಿನಿತ್ಯ ಬೆಂಗಳೂರಿನಲ್ಲಿ ಸಂಗ್ರಹವಾಗುತ್ತಿರುವ ಕಸದಲ್ಲಿ ಹಸಿ ಕಸದ ಪಾಲೇ ದೊಡ್ಡದು. ಅದನ್ನು ಬೆಂಗಳೂರಿನ ಹೊರವಲಯದ ಯಾವುದೇ ಊರಿಗೆ ತೆಗೆದುಕೊಂಡು ಹೋಗಿ ಹಾಕುವುದು ಸರಿಯಲ್ಲ. ಏಕೆಂದರೆ ಬೆಂಗಳೂರಿನ ಕಸವನ್ನು ಬೇರೆ ಊರಿಗೆ ಹಾಕಲು ಆ ಯಾವ ಊರಿನವರು ಒಪ್ಪಲಾರರು. ಇದಕ್ಕಿರುವ ಪರಿಹಾರಗಳೆಂದರೆ ಈಗ ಇರುವ ದೊಡ್ಡದೊಡ್ಡ ಕಸ ಸಂಸ್ಕರಣೆ ಘಟಕಗಳನ್ನು ಚಿಕ್ಕಚಿಕ್ಕ ಘಟಕಗಳಾಗ ಮಾರ್ಪಡಿಸಬೇಕು. ಇದರಿಂದ ಕಸದಿಂದ ಬರುವ ದುರ್ವಾಸನೆ ತಪ್ಪುತ್ತದೆ. ವಾರ್ಡ್ ಒಂದು ಎರಡರಂತೆ ಸಣ್ಣ ಸಂಸ್ಕರಣಾ ಘಟಕಗಳನ್ನು ಮಾಡಿ ಆ ವಾರ್ಡ್‌ನಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಅಲ್ಲಿಯೇ ಕಾಂಪೋಸ್ಟ್ ಮಾಡಬೇಕು. ಅಲ್ಲಿಂದ ತ್ವರಿತವಾಗಿ ಅದನ್ನು ಮಾರಾಟ ಮಾಡಬೇಕು. ಅಲ್ಲದೇ ಜನರೇ ಆದಷ್ಟು ಹಸಿ ಕಸವನ್ನು ಕಾಂಪೋಸ್ಟ್ ಮಾಡಿಕೊಳ್ಳಲು ಉತ್ತೇಜನ ನೀಡಬೇಕು. ಅದನ್ನು ಸರ್ಕಾರವೇ ಕೊಂಡು ಮಾರುವ ವ್ಯವಸ್ಥೆ ಮಾಡಬೇಕಿದೆ. ಆಗ ಕಸದ ಮಾಫಿಯವೂ ತೊಲಗುತ್ತದೆ, ಅದರಿಂದ ಸರ್ಕಾರಕ್ಕೂ ಆದಾಯ
ಬರುವಂತೆ ಮಾಡಬಹುದು ಎನ್ನುತ್ತಾರೆ ಬೆಂಗಳೂರಿನ ನಾಗರಿಕರು.


ಇದನ್ನೂ ಓದಿ: ಮನೆ ಮನಸ್ಸು ಬೀದಿಗಳು ತ್ಯಾಜ್ಯಮುಕ್ತವಾಗಲಿ; ಗುಡಿಸಿ ತೊಳೆಯುವವರ ಸಂಕಷ್ಟ-ಶೋಷಣೆ ಕೊನೆಯಾಗಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...