ಬೆಂಗಳೂರಿನ ಕೆ.ಆರ್ ಪುರದ ಗಾಯತ್ರಿ ಲೇಔಟ್‌ನಲ್ಲಿ ಸುಮಾರು 40 ವರ್ಷ ವಯಸ್ಸಿನ ಟ್ರಾನ್ಸ್‌ಜೆಂಡರ್ ಒಬ್ಬರು ಭಾನುವಾರ (ಏ.20) ಶವವಾಗಿ ಪತ್ತೆಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ತನುಶ್ರೀ ಸಾವಿಗೀಡಾದ ಟ್ರಾನ್ಸ್‌ಜೆಂಡರ್. ಮನೆಯಲ್ಲೇ ತನುಶ್ರೀ ಅವರ ಶವ ಕಂಡು ಬಂದಿದೆ. ಅಲ್ಲಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ಮೂರು ದಿನಗಳ ಹಿಂದೆಯೇ ತನುಶ್ರೀ ಹತ್ಯೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೋಟ್ಯಾಧಿಪತಿಯಾಗಿದ್ದ ತನುಶ್ರೀ ಅವರು ‘ಸಂಗಮ’ ಎಂಬ ಸಮಾಜಸೇವಾ ಸಂಘಟನೆ ನಡೆಸುತ್ತಿದ್ದರು. ಕನ್ನಡ ಪರ ಸಂಘಟನೆಗಳ ಜೊತೆಗೂ ಗುರುತಿಸಿಕೊಂಡಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಜಗನ್ನಾಥ್ ಎಂಬವರ ಜೊತೆ ಇವರ ಮದುವೆ ನಡೆದಿತ್ತು.
ಮದುವೆ ಬಳಿಕ ತನುಶ್ರೀ ಮನೆಯಲ್ಲೇ ಜಗನ್ನಾಥ್ ವಾಸವಿದ್ದರು. ತನುಶ್ರೀ ಸಾವಿಗೀಡಾದ ಬಳಿಕ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ, ತನುಶ್ರೀ ಬಳಿಯಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸಲೆಂದೇ ಮದುವೆಯಾಗಿದ್ದ ಜಗನ್ನಾಥ್, ತನ್ನ ಸಂಚಿನಂತೆ ಅವರನ್ನು ಕೊಲೆ ಮಾಡಿ ಹಣ, ಚಿನ್ನಾಭರಣದ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ತನುಶ್ರೀ ಸಾವಿಗೀಡಾದ ಬಳಿಕ, ಅವರ ಮನೆಯ ಕೆಲಸದಾಕೆಯೂ ಕಾಣುತ್ತಿಲ್ಲ ಎನ್ನಲಾಗಿದೆ. ಹಾಗಾಗಿ, ಜಗನ್ನಾಥ್ ಮತ್ತು ಮನೆ ಕೆಲಸದಾಕೆ ಒಟ್ಟಿಗೆ ಹೋಗಿರುವ ಶಂಕೆ ಉಂಟಾಗಿದೆ.
ಘಟನಾ ಸ್ಥಳಕ್ಕೆ ಕೆ.ಆರ್ ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


