ಕೊರೋನಾದಿಂದ ಮೃತಪಟ್ಟ ಸಾರಿಗೆ ಸೌಕರರ ಕುಟುಂಬಗಳಿಗೆ ಕನಿಷ್ಟ 30 ಲಕ್ಷ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಸರ್ಕಾರದ ವಿರುದ್ಧ ನವೆಂಬರ್ 05 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕೊರೋನಾ ಬಿಕ್ಕಟ್ಟಿನ ಕಾಲದಲ್ಲಿ ಕೊರೋನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಸಾರಿಗೆ ಸಂಸ್ಥೆಯ ನೌಕರರ ಪಾತ್ರವೂ ದೊಡ್ಡದಿದೆ. ಇದೇ ಕಾರಣಕ್ಕೆ ಸಾರಿಗೆ ನೌಕರರು ಅನೇಕರು ಸಾವಿಗೆ ತುತ್ತಾಗಿದ್ದರು. ಈ ಸಂದರ್ಭದಲ್ಲಿ ನೌಕರರಿಗೆ ಭರವಸೆ ನೀಡಿದ್ದ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ, “ಕೊರೋನಾದಿಂದ ಮೃತಪಟ್ಟ ನೌಕರರ ಕುಟುಂಬಗಳಿಗೆ 30 ಲಕ್ಷ ಪರಿಹಾರ ನೀಡಲಾಗುವುದು” ಎಂದು ಘೋಷಿಸಿದ್ದರು. ಆದರೆ, ಈವರೆಗೆ ಪರಿಹಾರ ನೀಡಲಾಗಿಲ್ಲ ಎಂದು ನೌಕರರು ದೂರಿದ್ದಾರೆ.
ಇದಲ್ಲದೆ ಕೊರೋನಾ ಬಿಕ್ಕಟ್ಟು ಆರಂಭವಾದ ನಂತರ ರಸ್ತೆಗಿಳಿಯುವ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಖ್ಯೆಯೂ ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಎಲ್ಲಾ ನೌಕಕರಿಗೂ ಉದ್ಯೋಗವಿಲ್ಲದಂತಾಗಿದೆ. ಹೀಗಾಗಿ ಸಂಬಳ ಸಹಿತ ರಜೆ ನೀಡಿ ಎಂಬುದು ನೌಕರರ ಒತ್ತಾಯವಾಗಿದೆ. ಆದರೆ, ಸರ್ಕಾರ ಈವರೆಗೆ ಈ ಬೇಡಿಕೆಯ ಕುರತು ಗಮನಹರಿಸಿಲ್ಲ. ಹೀಗಾಗಿ ಸಾರಿಗೆ ನೌಕರರ ಬದುಕು ಬೀದಿಗೆ ಬೀಳುವಂತಾಗಿದೆ.
ಹೀಗಾಗಿ ತಮ್ಮ ಎಲ್ಲಾ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ (ಸಿಐಟಿಯು) ನೇತೃತ್ವದಲ್ಲಿ ಸ್ವಾತಂತ್ರ ಉದ್ಯಾನದಲ್ಲಿ ನ.05 ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಸಾರಿಗೆ ನೌಕರರ ಈ ಪ್ರತಿಭಟನೆಗೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ನವೆಂಬರ್ 05 ರಂದು ನಗರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಹೀಗಾಗಿ ಬಸ್‌ಗಳು ರಸ್ತೆಗೆ ಇಳಿಯುವುದು ಬಹುತೇಕ ಅನಿಶ್ಚಿತತೆಯಿಂದ ಕೂಡಿದ್ದು, ಪ್ರಯಾಣಿಕರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಸ್ತೆ ಸಾರಿಗೆ ಕ್ಷೇತ್ರವನ್ನು ಉಳಿಸಲು ದೇಶಾದ್ಯಂತ ಸಾರಿಗೆ ಕಾರ್ಮಿಕರ ಪ್ರತಿಭಟನೆ


