ಕೊಣಾಜೆಯ ಮಂಗಳೂರು ವಿ.ವಿ.ಯ ಲೇಡೀಸ್ ಹಾಸ್ಟೆಲಿನ ಮುಂಭಾಗದ ಚುರುಮುರಿ ಕಾಕನ ಪುಟ್ಟ ತಳ್ಳುಗಾಡಿಯಲ್ಲಿ ಚುರುಮುರಿ ಸವಿಯದೇ ನಮ್ಮ ವಾರಾಂತ್ಯದ ತಿರುಗಾಟ ಪರಿಪೂರ್ಣವಾಗುವುದೇ ಇಲ್ಲ. ಕಾಕನ ಚುರುಮುರಿಗೆ ಅದೇನು ರುಚಿಯೋ! ಯಾರೊಂದಿಗೂ ಹೆಚ್ಚು ಮಾತನಾಡದೇ ತಮ್ಮ ಪಾಡಿಗೆ ತಿಂದು, ಕೂಡಲೇ ಜಾಗ ಖಾಲಿ ಮಾಡುವ ಟೆಕ್ಕಿಗಳು, ಯುನಿವರ್ಸಿಟಿ ಅಧ್ಯಾಪಕರು, ಪಟ್ಟಾಂಗ ಹೊಡೆಯುತ್ತಾ ತಿನ್ನುವ ಪಡ್ಡೆ ಹುಡುಗರು, ಬಯಲ ಕಲ್ಲು ಬೆಂಚಲ್ಲಿ ಕೂತು ತಿನ್ನಲು ಸಂಕೋಚಪಟ್ಟು ಕಾರೊಳಗೇ ಕೂತು ತಿನ್ನುವ ಮಹಿಳೆಯರು, ಒಂದೇ ಪ್ಲೇಟಿಗೆ ಕೈಹಾಕಿ ಹಂಚಿ ತಿನ್ನುವ ವಿದ್ಯಾರ್ಥಿನಿಯರು-ಮಕ್ಕಳು, ಅಲ್ಲಲ್ಲಿ ನಿಲ್ಲಿಸಿರುವ ಕಾರ್, ಬೈಕುಗಳು ಹೀಗೆ ಸಂಜೆಯಾಗುತ್ತಲೇ ಕಾಕನ ತಳ್ಳುಗಾಡಿಗೆ ಕಳೆ ಬಂದು ಬಿಡುತ್ತದೆ. ಸಂಜೆ ನಾಲ್ಕಕ್ಕೆ ಆರಂಭವಾಗುವ ವ್ಯಾಪಾರ ರಾತ್ರಿ ಹತ್ತಕ್ಕೆಲ್ಲಾ ಮುಗಿದು ಮನೆಯತ್ತ ಹೊರಡುವಾಗ ಒಂದೊಳ್ಳೆಯ ಮೊತ್ತ ಜೇಬಿಗಿಳಿಸುತ್ತಾರೆ. ಬ್ಯಾರಿಗಳದ್ದು ಅವರ ಹೆಸರಿನ ಅರ್ಥಕ್ಕೆ ತಕ್ಕಂತೆ ಯಾವುದೇ ವ್ಯಾಪಾರದಲ್ಲಾದರೂ ಎತ್ತಿದ ಕೈಯಾದರೂ ಆ ಕಾಕನಿಗೆ ಬದುಕು ಕಟ್ಟಿಕೊಳ್ಳಲು ಉಚಿತವಾಗಿ ತಳ್ಳುಗಾಡಿಯೊಂದನ್ನು ನೀಡಿದ್ದು ಮಂಗಳೂರಿನ ಬ್ಯಾರಿ ಮುಸ್ಲಿಮರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ’ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್’.
ಒಂದು ಕಾಲದಲ್ಲಿ ಅಡಿಕೆ ಮಂಡಿಯೊಂದರಲ್ಲಿ ಕೂಲಿಯಾಗಿ ದುಡಿಯುತ್ತಿದ್ದ ಕಾಕನನ್ನು ತಳ್ಳುಗಾಡಿ ಸ್ವಾವಲಂಬಿಯಾಗಿಸಿತು. ತಳ್ಳುಗಾಡಿಯ ದುಡಿಮೆಯಿಂದಲೇ ಹೆಣ್ಣುಮಕ್ಕಳಿಗೆಲ್ಲಾ ಒಳ್ಳೆಯ ಶಿಕ್ಷಣ ನೀಡಿದರು, ಮದುವೆ ಮಾಡಿ ಕೊಟ್ಟರು. ಈ ಕಾಕ ಒಂದು ಉದಾಹರಣೆಯಷ್ಟೇ. ಟಿ.ಆರ್.ಎಫ್‌ನ ಮರುಪಾವತಿ ಬಯಸದ ಮೈಕ್ರೋ ಫೈನಾನ್ಸ್‌ನಿಂದಾಗಿ ಇಂದು ನಮ್ಮ ದ.ಕ ಜಿಲ್ಲೆಯಲ್ಲಿ ಇಂತಹ ತಳ್ಳು ಗಾಡಿಗಳಿಂದಲೇ ಬದುಕು ಕಟ್ಟಿಕೊಂಡ ಹತ್ತಾರು ಬ್ಯಾರಿ ಕಾಕಗಳಿದ್ದಾರೆ.

ಆಯೋಗವು ದೇಶದ ಮುಸಲ್ಮಾನರ ಸ್ಥಿತಿಗತಿಯು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿಂತಲೂ ಶೋಚನೀಯವಾಗಿದೆ ಎಂದು ವರದಿ ಸಲ್ಲಿಸಿತು. ಯು.ಪಿ.ಎ ಸರಕಾರವು ವರದಿ ಸಿದ್ಧಪಡಿಸಿತೇ ಹೊರತು ಪರಿಸ್ಥಿತಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಯಾವುದೇ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಿಲ್ಲ. ಈ ವರದಿಯೇ 2005ರಲ್ಲಿ ಮಂಗಳೂರಿನಲ್ಲಿ ಬ್ಯಾರಿ ಉದ್ಯಮಿ ಅಬ್ದುರ್ ರವೂಫ್ ಪುತ್ತಿಗೆಯವರ ನೇತೃತ್ವದಲ್ಲಿ ಟಿ.ಆರ್.ಎಫ್ ಎಂಬ ಸರಕಾರೇತರ ಸಾಮಾಜಿಕ ಸಂಸ್ಥೆಯ ಹುಟ್ಟಿಗೆ ಕಾರಣವಾಯಿತು.
ಹೆಸರೇ ಸೂಚಿಸುವಂತೆ ಟಿ.ಆರ್.ಎಫ್. ಎಲೆಮರೆಯಲ್ಲಿದ್ದ ಪ್ರತಿಭೆಗಳನ್ನು ಗುರುತಿಸಿ, ಮಾರ್ಗದರ್ಶನ ನೀಡಿ ಗುರಿ ತಲುಪಿಸುವ ಧ್ಯೇಯವಿಟ್ಟುಕೊಂಡಿದ್ದರೂ ತನ್ನ ಸೇವೆಯನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದತ್ತವೂ ಮುಂದಡಿಯಿಟ್ಟಿತು. ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ ಜಾಗೃತಿ, ಕೌನ್ಸೆಲಿಂಗ್, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಇತ್ಯಾದಿ ಕ್ಷೇತ್ರಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿತು.
ಸ್ವಂತ ಕೈಗಳಲ್ಲಿ ದುಡಿಯುವ ಆಹಾರಕ್ಕಿಂತ ಶ್ರೇಷ್ಠ ಆಹಾರವಿಲ್ಲ ಎನ್ನುತ್ತದೆ ಇಸ್ಲಾಂ. ಒಂದಿಷ್ಟು ಹಣವಿತ್ತೋ, ಒಂದೆರಡು ಹೊತ್ತಿನ ಅನ್ನ ಕೊಟ್ಟೋ ಬಡತನ ನೀಗಿಸಲಾಗದು. ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಅದಕ್ಕಿರುವ ಏಕೈಕ ಮಾರ್ಗವೆಂದರೆ ದುಡಿಮೆ. ದುಡಿಯುವ ಕೈಗಳಿಗೆ ದುಡಿಮೆಯ ಹತ್ತಾರು ದಾರಿ ತೋರಿ ಸಣ್ಣ ಮಟ್ಟದ ಬಂಡವಾಳವನ್ನು ಶ್ರಮಜೀವಿಗಳಿಗೆ ಟಿ.ಆರ್.ಎಫ್ ಒದಗಿಸಿತು.
ಹಿಂದೆ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೀನು ವ್ಯಾಪಾರಿಗಳು ಸುಡು ಬಿಸಿಲಿಗೂ, ಜಡಿಮಳೆಗೂ ಮೀನಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಹತ್ತಾರು ಮೈಲು ನಡೆದು ವ್ಯಾಪಾರ ಮಾಡುತ್ತಿದ್ದರು. ಆರ್ಥಿಕವಾಗಿ ತಕ್ಕ ಮಟ್ಟಿಗೆ ಸದೃಢರಾದವರು ಕ್ರಮೇಣ, ಮೋಟಾರು ಬೈಕ್, ಟೆಂಪೋಗಳಲ್ಲಿ ಮೀನು ವ್ಯಾಪಾರಕ್ಕಿಳಿದರು. ಅಂತವರ ಪ್ರಾಬಲ್ಯದ ಮುಂದೆ ತಲೆಹೊರೆ ವ್ಯಾಪಾರಿಗಳು ಸೊರಗಿದರು. ಅವರಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ತಲೆ ಹೊರೆ ವ್ಯಾಪಾರಿಗಳು ಸದೃಢವಾಗಬೇಕೆಂದರೆ ಆಯಾಸವಿಲ್ಲದೇ ಹೆಚ್ಚೆಚ್ಚು ಗ್ರಾಹಕರನ್ನು ತಲುಪಬೇಕು. ಅದಕ್ಕಾಗಿ ತಲೆಹೊರೆ ವ್ಯಾಪಾರಿಗಳಿಗೆ ಟಿ.ಆರ್.ಎಫ್. ಉಚಿತವಾಗಿ ಸೈಕಲ್‌ಗಳನ್ನು ನೀಡಿ ಪ್ರೋತ್ಸಾಹಿಸಿತು.
ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡದ ಅತಿದೊಡ್ಡ ಸಮುದಾಯವಾದ ಬ್ಯಾರಿಗಳಲ್ಲಿನ ಶ್ರೀಮಂತಿಕೆಯಷ್ಟೇ ಹೊರಜಗತ್ತಿಗೆ ಕಾಣುತ್ತದೆ. ಇಲ್ಲೂ ಹಸಿವಿದೆ, ಬಡತನವಿದೆ, ಮೂಲಸೌಕರ್ಯಗಳನ್ನು ಹೊಂದಿರದ ಅದೆಷ್ಟೋ ಕುಟುಂಬಗಳಿವೆ. ತಳ್ಳುಗಾಡಿಯಿಟ್ಟುಕೊಂಡೋ, ಬೀದಿ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡೋ, ತಲೆ ಹೊರೆ ವ್ಯಾಪಾರ ಮಾಡಿಕೊಂಡೋ ದಿನದೂಡುವ ವರ್ಗದ್ದು ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲದ ಪರಿಸ್ಥಿತಿ. ಬೀದಿ ವ್ಯಾಪಾರಿಗಳಿಗೇನು ಕಷ್ಟ? ಬಾಡಿಗೆಯಿಲ್ಲ, ಕರೆಂಟ್ ಬಿಲ್ ಇಲ್ಲ, ತೆರಿಗೆಯಿಲ್ಲ ಎಂದು ಹಗುರವಾಗಿ ಮಾತನಾಡುವವರಿದ್ದಾರೆ. ಬೀದಿ ವ್ಯಾಪಾರಿಗಳ ಅಭದ್ರತೆ, ಅತಂತ್ರ ಬದುಕು ಇವುಗಳನ್ನೆಲ್ಲಾ ಅರ್ಥೈಸುವವರು ಬಹಳ ಕಡಿಮೆ. ಈ ವ್ಯಾಪಾರ ಎಷ್ಟು ದಿನ ಎಂದು ಬಲ್ಲವರಿಲ್ಲ, ಇಂತಹ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬ್ಯಾಂಕ್‌ಗಳೂ ಸಾಲ ನೀಡುವುದಿಲ್ಲ. ಈ ಎಲ್ಲಾ ಸೂಕ್ಷ್ಮಗಳನ್ನು ಮನಗಂಡು ಟಿ.ಆರ್.ಎಫ್. ಇಂತಹ ಭದ್ರತೆಯಿಲ್ಲದ ವ್ಯಾಪಾರಿಗಳ ಕೈ ಹಿಡಿದು ಅವರಿಗೆ ಸ್ವಾವಲಂಬನೆಯ ಹಾದಿಯನ್ನು ತೆರೆದುಕೊಟ್ಟಿತು.
ವಿಕಲಚೇತನರ ಮನದಲ್ಲಿ ಮನೆ ಮಾಡಿರುವ ’ನಾವು ಕುಟುಂಬಕ್ಕೆ ಭಾರ’ ಎಂಬ ಭಾವವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಟಿ.ಆರ್.ಎಫ್ ಕೆಲಸ ಮಾಡುತ್ತಾ ಬಂದಿದೆ. ಅವರಿಗೆ ಮೋಟಿವೇಶನ್ ಕ್ಲಾಸ್ ಗಳನು ನೀಡುವ ಮೂಲಕ ಅವರಲ್ಲಿ ಭರವಸೆಯನ್ನು ಮೂಡಿಸಿ ದುಡಿಮೆಯ ಹಾದಿ ತೋರಿಸಿಕೊಟ್ಟಿತು. ವ್ಯಾಪಾರದಲ್ಲಿ ಆಸಕ್ತಿ ಹೊಂದಿದವರಿಗೆ ಗೂಡಂಗಡಿ ಹಾಕಿ ಅದಕ್ಕೆ ಬಂಡವಾಳವನ್ನೂ ಕೊಟ್ಟಿತು. ಮೊಬೈಲ್ ಟೆಕ್ನಿಶಿಯನ್‌ನಂತಹ ವೃತ್ತಿ ತರಬೇತಿಗಳನ್ನು ಉಚಿತವಾಗಿ ನೀಡಿ ಬದುಕು ಕಟ್ಟಿಕೊಳ್ಳುವ ಕಲೆಯನ್ನು ತೋರಿಸಿತು.
ಹಿಂದೊಂದು ಕಾಲವಿತ್ತು. ಆಗ ಮೌಲ್ವಿಗಳನ್ನು ಮಸೀದಿಗಳಿಗಷ್ಟೇ ಸೀಮಿತಗೊಳಿಸಲಾಗುತ್ತಿತ್ತು. ಜಮಾಅತ್ ವ್ಯವಸ್ಥೆ ಹಾಕಿದ ಚೌಕಟ್ಟು ದಾಟಿದರೆ ಜಮಾಅತಿಗರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಇದಕ್ಕೆ ಭಯಪಟ್ಟು ಅವರು ತಮಗಾಗಿಯೇ ಸಿದ್ಧಪಡಿಸಲಾದ ಅಚ್ಚಿನೊಳಗೆ ಕೂತುಬಿಡುತ್ತಿದ್ದರು. ಅವರ ಬಿಡುವಿನ ಸಮಯ ಹಾಗೂ ಅವರೊಳಗೆ ಅಡಗಿದ ಪ್ರತಿಭೆ ಇವೆರಡನ್ನೂ ಬಳಸಿಕೊಂಡ ಟಿ.ಆರ್.ಎಫ್ ಈ ಕಾಲದಲ್ಲಿ ಅತಿಹೆಚ್ಚು ಬೇಡಿಕೆಯಿರುವ ಮೊಬೈಲ್ ಟೆಕ್ನಿಶಿಯನ್ ತರಬೇತಿ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್, ಕಂಪ್ಯೂಟರ್, ಫೋಟೋಗ್ರಾಫಿ, ಟ್ರೈವಿಂಗ್ ಮುಂತಾದ ಹೃಸ್ವ ಅವಧಿಯ ವೃತ್ತಿಪರ ತರಬೇತಿಗಳನ್ನು ನೀಡಿ ಮಸೀದಿಯಾಚೆಗೂ ಅವರು ಬದುಕು ಕಟ್ಟಿಕೊಳ್ಳಲು ದಾರಿ ಮಾಡಿಕೊಟ್ಟಿತು. ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಕೂಲಿ ಕೆಲಸ, ಗಜರಿ ಹೆಕ್ಕುವ ಕೆಲಸವನ್ನು ಜೀವನೋಪಾಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದ ಯುವಕರನ್ನು ’ಮರಳಿ ಬಾ ಶಾಲೆಗೆ’ ಯೋಜನೆಯಡಿಯಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಸಿ ಇಂತಹದ್ದೇ ವೃತ್ತಿಪರ ತರಬೇತಿಗಳನ್ನು ನೀಡಿ ದುಡಿಮೆಗೆ ಹೊಸತೊಂದು ಹಾದಿಯನ್ನು ತೋರಿಸಿಕೊಟ್ಟಿತು. ಈ ಯೋಜನೆಯ ಸದುಪಯೋಗ ಪಡೆದುಕೊಂಡ ಹಲವಾರು ಯುವಕರು ನಗರದಲ್ಲಿ ಸ್ವಂತ ಮೊಬೈಲ್ ಅಂಗಡಿಗಳನ್ನು ತೆರೆದು ಸ್ವಾವಲಂಬಿಗಳಾಗಿದ್ದಾರೆ. ವಿದೇಶಗಳಲ್ಲೂ ದುಡಿಯುತ್ತಿದ್ದಾರೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮೊದಲಿಗೆ ತೆರವುಗೊಳಿಸಿದ್ದು ಬೀದಿ ವ್ಯಾಪಾರಿಗಳನ್ನು. ಇದು ಅವರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡುಮಾಡಿತು. ಇದೇ ಕಾರಣಕ್ಕಿರಬೇಕು ಮಂಗಳೂರಿನ ಬೀದಿ ಬೀದಿಗಳಲ್ಲಿ ಗಿಜಿಗುಡುತ್ತಿದ್ದ ವ್ಯಾಪಾರಿಗಳು ಹಿಂದಿನಂತೆ ಈಗ ಕಾಣಸಿಗುವುದಿಲ್ಲ. ಟಿ.ಆರ್.ಎಫ್ ಲಾಕ್‌ಡೌನ್ ಬಳಿಕ ಬೀದಿ ವ್ಯಾಪಾರಿಗಳಿಗೆ ತಲಾ 5000 ರೂಪಾಯಿಗಳನ್ನು ನೀಡಿ ವ್ಯಾಪಾರವನ್ನು ಪುನಶ್ಚೇತನಗೊಳಿಸಿತು. ಇಂತಹ ಸೇವೆಯು ದೇಶಕ್ಕೆ ಒಂದು ಅನನ್ಯ ಮಾದರಿ. ಟಿ.ಆರ್.ಎಫ್‌ನ ಈ ಕೆಲಸಗಳು ಬಾಂಗ್ಲಾದೇಶದಲ್ಲಿ ಮೈಕ್ರೋ ಫೈನಾನ್ಸ್‌ಗಾಗಿ ನೊಬೆಲ್ ಪ್ರಶಸ್ತಿ ಪಡೆದ ಡಾ.ಮುಹಮ್ಮದ್ ಯೂನುಸ್‌ರ ಹೆಜ್ಜೆ ಗುರುತುಗಳನ್ನು ನೆನಪಿಸುವಂತಿದೆ. ಅದು ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಹಾರೈಸೋಣ..


