ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು.
ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹೋರಾಟಗಾರ್ತಿ ಪದ್ಮಾ ಕೆ ರಾಜ್ ಅಸುನೀಗಿದರು. ಆಂಧ್ರ ಪ್ರದೇಶ ಮೂಲದ ಪದ್ಮಾ ಕಮ್ಯುನಿಸ್ಟ್ ಹೋರಾಟದ ಮೂಲಕ ಚಳುವಳಿಗೆ ಧುಮುಕಿದ್ದರು. ದಲಿತ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಅಸ್ಪೃಶ್ಯತೆ ನೋವನ್ನು ಅನುಭವಿಸಿ ಸಮಾನತೆ ಕನಸು ಕಂಡು ಹೋರಾಟಕ್ಕೆ ಮುಂದಾದರು. ಕಳೆದ 20 ವರ್ಷಗಳಿಂದ ಕರ್ನಾಟಕದಲ್ಲಿ ಭೂಮಿ ವಸತಿ, ದಲಿತ, ಮಹಿಳಾ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.

ನಕ್ಸಲ್ ಚಳುವಳಿಯ ಕುರಿತು ಒಲವು ಹೊಂದಿದ್ದ ಪದ್ಮಾ ನಂತರದ ದಿನಗಳಲ್ಲಿ ಪ್ರಜಾತಾಂತ್ರಿಕ ಹೋರಾಟದ ಹಾದಿಯಲ್ಲಿ ನಡೆದರು. ವಿಪರೀತವಾಗಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಅದನ್ನು ಲೆಕ್ಕಿಸದೆ ನಿರಂತರವಾಗಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲ ರೀತಿಯ ಹೋರಾಟಗಳಲ್ಲಿ ತಮ್ಮದೇ ರೀತಿಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಶ್ರದ್ಧಾಂಜಲಿ ಸಭೆಯಲ್ಲಿ ಪದ್ಮಾ ಕುಟುಂಬದ ಸದಸ್ಯರಾದ ಅಣ್ಣ ದಿವಾಕರ್, ತಂಗಿ ಅರುಣಾ, ಮಗಳು ಜ್ಯೋತಿ, ಅಳಿಯರಾದ ಕೈದಾಳ್ ಕೃಷ್ಣಮೂರ್ತಿ, ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರಾದ ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ರೈತ ಸಂಘದ ವೀರಸಂಗಯ್ಯ, ಚಿಂತಕರಾದ ಶಿವಸುಂದರ್, ನಗರಿ ಬಾಬಯ್ಯ, ಅಮ್ಜದ್ ಪಾಷಾ, ಕೆ. ಎಲ್. ಅಶೋಕ್, ಡಾ. ಹುಲಿಕುಂಟೆ ಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


