ನನ್ನ ಅಕೆಡೆಮಿಕ್ ಜೀವನವನ್ನು ಮತ್ತು ಆದಿವಾಸಿಗಳೊಂದಿಗಿನ ಕೆಲಸದ ವರ್ಷಗಳನ್ನು ಗುಜರಾತ್‌ನಲ್ಲಿ ಕಳೆದದ್ದು. ಗುಜರಾತ್ ಹಿಂದುತ್ವ ಪ್ರಯೋಗಾಲಯವಾಗಿ ಹೊರಹೊಮ್ಮಿದಾಗ, ಆ ರಾಜ್ಯದಿಂದ ಹೊರಹೋಗುವ ಆಲೋಚನೆಗಳು ನನ್ನನ್ನು ಕಾಡಲು ಪ್ರಾರಂಭಿಸಿದವು. ಸುಮಾರು ಒಂದು ದಶಕದ ಹಿಂದೆ, ನಾನು ಆ ಹೆಜ್ಜೆ ಇಡಲು ಹೆಚ್ಚುಕಡಿಮೆ ನಿರ್ಧರಿಸಿದ್ದೆ. ನಾನು ಕರ್ನಾಟಕದಲ್ಲಿ ವಾಸಿಸುವ ಬಗ್ಗೆ ಯೋಚಿಸುವುದು ಸಹಜವಾಗಿತ್ತು.
ನನ್ನ ಹೆಂಡತಿ ಕರ್ನಾಟಕ ಮೂಲದವಳು ಮತ್ತು ಸಾಹಿತ್ಯದ ವಿಷಯಕ್ಕೆ ಬಂದರೆ ನನ್ನ ಶಿಕ್ಷಕ ಶಾಂತಿನಾಥ್ ದೇಸಾಯಿ ಕರ್ನಾಟಕದವರು. ಆದರೆ ಈ ವೈಯಕ್ತಿಕ ಕಾರಣಗಳನ್ನು ಹೊರತುಪಡಿಸಿ, ನಾನು ಹಾಗೆ ಯೋಚಿಸಲು ಹೆಚ್ಚು ಬಲವಾದ ಕಾರಣವಿತ್ತು. ಆ ಸಮಯದಲ್ಲಿ ಬದುಕಿದ್ದ ಕರ್ನಾಟಕದ ಕೆಲವು ಮಹಾನ್ ವ್ಯಕ್ತಿಗಳಿಂದ ಬೌದ್ಧಿಕ ಆಳ-ಅರಿವು ಮತ್ತು ಸೈದ್ಧಾಂತಿಕ ಶಕ್ತಿಯನ್ನು ಪಡೆಯುವುದು ನನ್ನ ಉದ್ದೇಶವಾಗಿತ್ತು. ನಾನು ಎಂದಾದರೂ ಕರ್ನಾಟಕಕ್ಕೆ ಹೋದರೆ ನಾನು ಭೇಟಿಯಾಗಲು ಬಯಸುವ ವ್ಯಕ್ತಿಗಳ ಪಟ್ಟಿಯಲ್ಲಿ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್, ಎಸ್. ಶೆಟ್ಟರ್, ಎಂ.ಎಂ. ಕಲಬುರ್ಗಿ, ರೊದ್ದಂ ನರಸಿಂಹ ಮತ್ತು ಎಚ್.ಎಸ್. ದೊರೆಸ್ವಾಮಿ ಇದ್ದರು.
ಹಣೆಬರಹದ ಅತಿ ದೊಡ್ಡ ವಿಪರ್ಯಾಸ, ಡಾ. ಕಲ್ಬುರ್ಗಿ (1938-2015) ಹತ್ಯೆಯಾಗುವ ಮೊದಲು ನಾನು ಕರ್ನಾಟಕಕ್ಕೆ ನನ್ನ ವಾಸಸ್ಥಾನ ಬದಲಾಯಿಸುವ ಹೆಜ್ಜೆಯನ್ನು ಇಡಲು ಸಾಧ್ಯವಾಗಲೇ ಇಲ್ಲ. ಅವರ ಹತ್ಯೆಗೂ ಮೊದಲು ನಾನು ಅವನನ್ನು ಎರಡು ಬಾರಿ ಭೇಟಿಯಾಗಿದ್ದೆ ಮತ್ತು ಅವರ ಪ್ರಭಾವಿಸುವ ವಿದ್ವತ್ತಿಗಾಗಿ ಸ್ವಾಭಾವಿಕವಾಗಿ ಆಕರ್ಷಿತನಾಗಿದ್ದೆ. ಆದರೆ, ನಾವು ಯಾವುದೇ ದೀರ್ಘ ಸಂಭಾಷಣೆಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಡಾ. ಕಲಬುರ್ಗಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಧಾರವಾಡಕ್ಕೆ ತೆರಳುವ ನನ್ನ ನಿರ್ಧಾರ, ಭಾಗಶಃ ನಮ್ಮ ನಡುವೆ ನಡೆಯದೆ ಉಳಿದುಹೋದ ಸಂಭಾಷಣೆಯಿಂದ ತಪ್ಪಿತಸ್ಥ ಭಾವನೆ ಮೂಡಿ, ಅದಕ್ಕೆ ಪ್ರಾಯಶ್ಚಿತ್ತವೂ ಆಗಿತ್ತು .
2016ರಲ್ಲಿ, ನಾನು ಧಾರವಾಡಕ್ಕೆ ಬಂದು ನೆಲೆಸಿದೆ. ನನ್ನ ಬರುವಿಕೆಗೆ ಸುಮಾರು ಹದಿನೆಂಟು ತಿಂಗಳ ಮೊದಲು ಕಟ್ಟಿಕೊಂಡಿದ್ದ ’ನನ್ನ ಕಲ್ಪನೆಯ ಕರ್ನಾಟಕ’ದ ಪ್ರಮುಖ ಭಾಗವು ಈಗಾಗಲೇ ಕಾಣೆಯಾಗಿದೆ ಎಂದು ನನಗೆ ತಿಳಿದಿತ್ತು, ಯು.ಆರ್. ಅನಂತ ಮೂರ್ತಿ (1932-2014) ಆಗಸ್ಟ್ 2014ರಲ್ಲಿ ನಿಧನರಾದರು. ತಾವು ಜರ್ಜರಿತರಾಗಿದ್ದ ತಮ್ಮ ಕೊನೆ ತಿಂಗಳುಗಳಲ್ಲಿ ಒಂದು ಪುಟ್ಟ ಪುಸ್ತಕವನ್ನು ಅವರು ಬರೆದರು. ಹಿಂದುತ್ವದ ಉದಯದ ಕುರಿತು ಜಗತ್ತಿಗೆ ಎಚ್ಚರಿಸಲು, ಪುರಾವೆಗಳನ್ನು ಪ್ರಮಾಣೀಕರಿಸಿ, ಆತುರದಿಂದ ಬರೆದ ಪುಸ್ತಕವಾಗಿತ್ತು ಅದು. ನಾನು ಅವರನ್ನು ಸುಮಾರು ನಾಲ್ಕು ದಶಕಗಳಿಂದ ಬಲ್ಲೆನಾಗಿದ್ದರೂ, ಅವರ ಜೊತೆಗೆ ಸಂಭಾಷಣೆ ನಡೆಸುವ ಅವಕಾಶ ಮುಗಿದುಹೋಗಿತ್ತು.
ಡಾ. ಕಲಬುರ್ಗಿ ಅವರ ನಂತರ, ಸನಾತನಿಗಳು ಗೌರಿ ಲಂಕೇಶ್ (1962-2017) ಅವರನ್ನು ಕೊಲೆ ಮಾಡಿದರು. 1990ರ ದಶಕದಲ್ಲಿ ನಾನು ಗೌರಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದು. ನಾನು ಅವರನ್ನು ಎರಡನೇ ಬಾರಿಗೆ ಭೇಟಿಯಾದದ್ದು ಸಿದ್ದರಾಮಯ್ಯ ಅವರ ಆಗಿನ ನಿವಾಸದ ಹೊರಗೆ – ಅಲ್ಲಿ ನಾವು ಪ್ರತ್ಯೇಕವಾದ ನಿಯೋಗಗಳಲ್ಲಿ ಕಲ್ಬುರ್ಗಿ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಲು ಮನವಿ ಮಾಡಲು ಹೋಗಿದ್ದೆವು. ದೀರ್ಘಕಾಲ ಮರೆತುಹೋದ ಒಬ್ಬ ಸ್ನೇಹಿತನನ್ನು ಕಂಡುಕೊಂಡ ಸಂತೋಷವು ನಮ್ಮಿಬ್ಬರಿಗೂ ಆಗಿತ್ತು. ಆ ಆಕಸ್ಮಿಕ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಗೌರಿ ಕೊಲ್ಲಲ್ಪಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಮತ್ತೊಬ್ಬ ಒಡನಾಡಿ ಕಳೆದುಹೋದರು.
ಪ್ರೊ. ಶೆಟ್ಟರ್ (1935-2020)ರ ವಿಷಯದಲ್ಲಿ, ನಾನು ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸುತ್ತಿದ್ದೆ ಮತ್ತು ಕರ್ನಾಟಕದ ಹಾಗೂ ದಕ್ಷಿಣದ ಇತಿಹಾಸವನ್ನು ಮರು-ಶೋಧನೆಗೆ ಒಳಪಡಿಸುವ ಸರಣಿ ಸಮಾವೇಶಗಳನ್ನು ನಡೆಸುವ ಬಗ್ಗೆ ಚರ್ಚಿಸಿದ್ದೆ. ಅವರು ಈ ವಿಚಾರದಿಂದ ಬಹಳ ಉತ್ಸುಕರಾಗಿದ್ದರು. ಒಬ್ಬ ಪ್ರಬಲ ವಿದ್ವಾಂಸ ತನ್ನ ಹಿರಿಮೆಯನ್ನು ಈ ಆಲೋಚನೆಯ ಹಿಂದೆ ತೊಡಗಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿದು ನಾನು ರೋಮಾಂಚನಗೊಂಡೆ. ಆದರೆ, ಆಲೋಚನೆಯು ಯಾವುದೇ ಸ್ಪಷ್ಟ ರೂಪವನ್ನು ತೆಗೆದುಕೊಳ್ಳುವ ಮೊದಲು ಅವರು ನಮ್ಮನ್ನಗಲಿದರು. ರೊದ್ದಂ ನರಸಿಂಹ ಅವರ ವಿಷಯದಲ್ಲಿ ಕೂಡ ನಾನು ಅದೃಷ್ಟಶಾಲಿಯಾಗಿರಲಿಲ್ಲ. ಶಿವ ವಿಶ್ವನಾಥನ್ ಮತ್ತು ಅನಂತಮೂರ್ತಿಯಂತಹ ಸ್ನೇಹಿತರಿಂದ ನಾನು ಅವರ ಬಗ್ಗೆ ಕೇಳಿದ್ದೆ, ಆದರೆ ಅವರೊಂದಿಗೆ ನೇರ ಸಂಪರ್ಕವಿರಲಿಲ್ಲ. ನಾನು ಅವರನ್ನು ದೂರದಿಂದ ಮೆಚ್ಚಿಕೊಂಡಿದ್ದೆ. ’ಭಾರತೀಯ ಚಿಂತನೆಯ ಧಾರೆ’ಯ ಬಗ್ಗೆ ತುಂಬಾ ಉತ್ಸುಕನಾಗಿ ಮತ್ತು ಆಳವಾಗಿ ಕೆಲಸ ಮಾಡಿದ ದೇಶದ ಕೆಲವೇ ಕೆಲವು ಚಿಂತಕರಲ್ಲಿ ಅವರು ಕೂಡ ಒಬ್ಬರು. ಭಾರತದಲ್ಲಿನ ನಿಯೋ-ಫ್ಯಾಸಿಸಂ ಎದುರು ಹೋರಾಡಬೇಕಾದರೆ, ಅನೇಕ ಭಾರತೀಯ ಆಲೋಚನಾ ಕ್ರಮಗಳಲ್ಲಿ ಯಾವುದಾದರೊಂದನ್ನು ಬಳಸಿ ಹೋರಾಡಿದರೆ ಯಶಸ್ಸು ಸಾಧ್ಯ ಎಂದು ನಾನು ಸದಾ ನಂಬಿದ್ದೆ. ಆ ದೃಷ್ಟಿಕೋನದಿಂದ, ರೊದ್ದಂ ನರಸಿಂಹರ ಕೆಲಸವು ಬಹಳ ಮಹತ್ವದ್ದಾಗಿದೆ. ಆದರೆ ಕರ್ನಾಟಕ ಮತ್ತು ಭಾರತ ಇಂದು ಅವರನ್ನು ಕಳೆದುಕೊಂಡಿದೆ.
ಗಿರೀಶ್ ಕಾರ್ನಾಡ್ (1938-2019) ಅವರೊಂದಿಗೆ ನಾನು ಈ ಹಿಂದೆ ಕರ್ನಾಟಕದ ಹೊರಗಡೆ ಮತ್ತು ಭಾರತದ ಹೊರಗಿನ ನಮ್ಮ ಭೇಟಿಗಳಲ್ಲಿ ಸ್ನೇಹ ಬೆಳೆಸಿಕೊಂಡಿದ್ದೆ. ಧಾರವಾಡಕ್ಕೆ ಬಂದನಂತರ ನಾನು ಅವರನ್ನು ಎರಡು ಬಾರಿ ಭೇಟಿಯಾಗಿದ್ದೆ. ಸಾಹಿತ್ಯ ಸಂಭ್ರಮಕ್ಕಾಗಿ ಅವರು ಧಾರವಾಡಕ್ಕೆ ಬಂದಿದ್ದಾಗ ಅವರು ಮನೆಗೆ ಊಟಕ್ಕೆ ಬಂದರು. ರಾಮಚಂದ್ರ ಗುಹಾ ಅವರೂ ಇದ್ದರು. ಅನೇಕ ವಿಷಯಗಳ ಕುರಿತು ನಮ್ಮ ಸಂಭಾಷಣೆ ಸಂತೋಷದಾಯಕವಾಗಿತ್ತು. ಮುಂದಿನ ಬಾರಿ ನಾನು ಅವರನ್ನು ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭೇಟಿಯಾದಾಗ ಅಲ್ಲಿ ಅವರು ’ನಾನು ನಗರ ನಕ್ಸಲೈಟ್’ ಎಂದು ಬರೆದ ಫಲಕವನ್ನು ಧರಿಸಿ ಬಂದರು. ಆದರೆ, ದುಃಖಕರವೆಂದರೆ, ಶೀಘ್ರದಲ್ಲೇ ಅವರೂ ನಮ್ಮನ್ನು ಅಗಲಿದರು.
ಎಚ್.ಎಸ್. ದೊರೆಸ್ವಾಮಿ (1918-2021) ಅವರನ್ನು ನನ್ನ ಹಾರೈಕೆ-ಪಟ್ಟಿಯಲ್ಲಿದ್ದ ಇತರರಿಗಿಂತ ಹೆಚ್ಚು ಬಾರಿ ಭೇಟಿಯಾದೆ. ನನ್ನ ಹಿರಿಯ ಸ್ನೇಹಿತರಾದ ಗುಜರಾತ್‌ನ ಮಹಾದೇವ್ ದೇಸಾಯಿ ಅವರ ಮಗ ನಾರಾಯಣಭಾಯ್ ದೇಸಾಯಿ ಅವರಿಂದ ನಾನು ದೊರೆಸ್ವಾಮಿ ಅವರ ಬಗ್ಗೆ ಮೊದಲು ಕೇಳಿದ್ದು. ಆದ್ದರಿಂದ, ನಾನು ಮೊದಲ ಬಾರಿಗೆ ದೊರೆಸ್ವಾಮಿಯವರನ್ನು ಭೇಟಿಯಾದಾಗ, ನನ್ನ ಸಂಬಂಧಿಯೊಬ್ಬರನ್ನು ಅಥವಾ ಹಲವು ದಶಕಗಳಿಂದ ಪರಿಚಿತರಾದ ಸ್ನೇಹಿತನನ್ನು ಭೇಟಿಯಾಗುತ್ತಿದ್ದೇನೆ ಎಂದೆನಿಸಿತು. ಗೌರಿ ಮೆಮೋರಿಯಲ್ ಟ್ರಸ್ಟ್ ಸಭೆಗಳು, ಭೇಟಿಯಾಗಲು ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತಷ್ಟು ಸಂದರ್ಭಗಳನ್ನು ಒದಗಿಸಿದವು. ನಾನು ಅವರನ್ನು ಕೊನೆಯ ಬಾರಿಗೆ ಭೇಟಿಯಾದದ್ದು ಸುಮಾರು ಮೂರು ತಿಂಗಳ ಹಿಂದೆ ಅವರ ನಿವಾಸದಲ್ಲಿ. ಕರ್ನಾಟಕದ ಕೆಲವು ರಾಷ್ಟ್ರ ವಿರೋಧಿಗಳು ಅವರನ್ನು ’ದೇಶದ್ರೋಹಿ’ ಎಂದು ಬಿಂಬಿಸಲು ಪ್ರಯತ್ನಿಸಿದ್ದನ್ನು ನೋಡಿ ನನಗೆ ತೀವ್ರ ನೋವಾಗಿತ್ತು. ಆದರೆ, ಅವರು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆ ಭೇಟಿಯಲ್ಲಿ ಅವರು ಕರ್ನಾಟಕದ ಬಡವರ್ಗಗಳ ಸುಧಾರಣೆಗೆ ಭೂ ಹಂಚಿಕೆ ಏಕೆ ಅಗತ್ಯ ಎಂಬುದರ ಕುರಿತು ಬಹಳ ದೀರ್ಘವಾಗಿ ಮಾತನಾಡಿದರು. ಸಾಮಾಜಿಕ ನ್ಯಾಯದ ಬಗ್ಗೆ ಅವರ ಬದ್ಧತೆ ಮತ್ತು ಅವರ ರಾಜಕೀಯ ಕುಶಾಗ್ರಮತಿ ಬಗ್ಗೆ ಹೇಳಲು ನನ್ನ ಬಳಿ ಪದಗಳಿಲ್ಲ. ಇತ್ತೀಚೆಗೆ ಅವರು ಕೋವಿಡ್ ಪಾಸಿಟಿವ್ ಆಗಿದ್ದರು, ಆದರೆ ವೈರಸ್ ವಿರುದ್ಧ ಹೋರಾಡಲು ಯಶಸ್ವಿಯಾದರು ಮತ್ತು ಬದುಕುಳಿದರು. ಅದು ಅದ್ಭುತ ಸುದ್ದಿ. ’104 ವರ್ಷದ ವ್ಯಕ್ತಿ ಕೋವಿಡ್ ಜಯಿಸಿದರು’ ಎಂಬುದು ಹೆಡ್‌ಲೈನ್ ಸುದ್ದಿ.
ದಂತಕತೆಯಂತಿದ್ದ ಎಚ್‌ಎಸ್‌ಡಿ ಇನ್ನಿಲ್ಲ ಎಂದು ತಿಳಿದಾಗ ನನ್ನ ಹೃದಯ ಕುಸಿದುಹೋಯಿತು. ’ನನ್ನ ಕಲ್ಪನೆಯ ಕರ್ನಾಟಕದ’ ಕೊನೆಯ ಉಳಿದ ಭಾಗ ಕೈಬಿಟ್ಟು ಹೋಗಿದೆ. ಶೂನ್ಯ ನನ್ನನ್ನು ಮರಗಟ್ಟಿಸಿದೆ. ಈ ಸಮಯದಲ್ಲಿ ದೂರವಾದ ಇಂತಹ ಮಹಾನ್ ಭೂಮಿಪುತ್ರರನ್ನು, ಚಿಂತನೆ ಮತ್ತು ಅಭಿರುಚಿಯ
ಬದುಕಿನ ಪ್ರಬಲ ನಾಯಕರನ್ನು ಕರ್ನಾಟಕ ಅದೇ ದೇಶ-ಕಾಲಗಳಲ್ಲಿ ಹೇಗೆ ಮತ್ತು ಎಲ್ಲಿ ಕಂಡುಕೊಳ್ಳಲಿದೆ?

ಪ್ರೊ. ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.
(ಕನ್ನಡಕ್ಕೆ): ಪಿ ಮಲ್ಲನಗೌಡರ್


