ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್ ಭಾಷಣವನ್ನು 2022-23ನೇ ಸಾಲಿನ ಹತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದ್ದು, ಹೆಡಗೇವಾರ್ ಅವರ ಮೂಲ ಪಠ್ಯವನ್ನೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ತಿರುಚಿರುವುದು ಪಠ್ಯದ ಹಾಳೆ ಹಾಗೂ ಮುದ್ರಿತ ಹಳೆಯ ಕೃತಿಗಳಿಂದ ತಿಳಿದುಬಂದಿದೆ.
‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಭಾಷಣವನ್ನು ಪಠ್ಯವಾಗಿ ಇಡಲಾಗಿದ್ದು, ಹೆಡಗೇವಾರ್ ಅವರು ಹೇಳಿರುವ ವಿಚಾರಗಳನ್ನು ತಿರುಚಿ ಪಠ್ಯದಲ್ಲಿ ಅಳವಡಿಸಲಾಗಿದೆ. “ತ್ರಿವರ್ಣ ಧ್ವಜವನ್ನು ಹೆಡಗೇವಾರ್ ಒಪ್ಪಿರಲಿಲ್ಲ. ಭಗವಾಧ್ವಜವೇ ಶ್ರೇಷ್ಠ” ಎಂದು ಹೆಡಗೇವಾರ್ ಪ್ರತಿಪಾದಿಸಿದ್ದನ್ನು ಆರ್‌ಎಸ್‌ಎಸ್ ಮೂಲದವರೇ ಬರೆದ ಜೀವನಚರಿತ್ರೆಗಳಿಂದ ಸಾಬೀತಾಗುತ್ತದೆ. ಜೊತೆಗೆ ಹೆಡಗೇವಾರ್ ತಮ್ಮ ಭಾಷಣದಲ್ಲೂ ‘ಭಗವಾಧ್ವಜ’ದ ಪ್ರಸ್ತಾಪವನ್ನೇ ಮಾಡುತ್ತಾರೆ. ಆದರೆ ಚಕ್ರತೀರ್ಥ ನೇತೃತ್ವದ ಸಮಿತಿಯು ಭಾಗವಾಧ್ವಜ ಎಂಬುದನ್ನು ಕೇವಲ ಧ್ವಜ ಎಂದಷ್ಟೇ ಪ್ರಕಟಿಸಿ, ವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರ್‌ಎಸ್‌ಎಸ್ ಮುಖ್ಯ ಕಚೇರಿಯಲ್ಲಿ ಸುಮಾರು 2002ರವರೆಗೂ ತ್ರಿವರ್ಣಧ್ವಜ ಹಾರಿಸಿರಲಿಲ್ಲ ಎಂಬುದು ಚರ್ಚೆಯಲ್ಲಿದೆ. ಆರ್‌ಎಸ್‌ಎಸ್ ತ್ರಿವರ್ಣ ಧ್ವಜವನ್ನು ಒಪ್ಪುವುದಿಲ್ಲ ಎಂಬುದು ಹೆಡಗೇವಾರ್ ಜೀವನಚರಿತ್ರೆಯಿಂದ ತಿಳಿದುಬರುತ್ತದೆ. ಆದರೆ ಪಠ್ಯಪುಸ್ತಕವನ್ನು ಪರಿಶೀಲಿಸಿ ಮರು ಪಠ್ಯ ಅಳವಡಿಸುವಾಗ ‘ಭಗವಾಧ್ವಜ’ ಎಂದಿರುವಲ್ಲಿ ‘ಭಗವಾ’ ಎಂಬ ಪದಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
‘ಪರಮ ಪೂಜನೀಯ ಡಾ.ಹೆಡ್ಗೇವಾರ್’ ಎಂಬ ಹಳೆಯ ಕೃತಿಯಲ್ಲಿ ಪ್ರಕಟವಾಗಿರುವ ಭಾಷಣದಲ್ಲಿ ‘ಭಗವಾಧ್ವಜ’ ಎಂದು ಸ್ಪಷ್ಟವಾಗಿ ಉಲ್ಲೇಖಿತವಾಗಿದೆ. ಪುಟ ಸಂಖ್ಯೆ 78ರಲ್ಲಿನ ಈ ಸಾಲುಗಳನ್ನೇ ಗಮನವಿಟ್ಟು ನೋಡಬಹುದು.
“….ಯಾವ ಧ್ವಜವನ್ನು ನೋಡಿದ ಮಾತ್ರದಿಂದ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆಯೋ, ಯಾವುದನ್ನು ಕಂಡಕೂಡಲೇ ಹೃದಯದ ಭಾವನೆಗಳು ಉಕ್ಕಿ ಬರುತ್ತವೆಯೋ, ಅಂತೆಯೇ ಹೃದಯದಲ್ಲಿ ಒಂದು ವಿಶಿಷ್ಟ ಸ್ಫೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಭಗವಾಧ್ವಜವನ್ನು, ನಮ್ಮ ತತ್ವಗಳ ಪ್ರತೀಕವಾದ ಕಾರಣ, ನಾವು ನಮ್ಮ ಗುರುವೆಂದು ಭಾವಿಸುತ್ತೇವೆ. ಇದೇ ಕಾರಣದಿಂದಲೇ ಯಾವ ಒಬ್ಬ ವ್ಯಕ್ತಿಯನ್ನೂ ತನ್ನ ಗುರುವೆಂದು ಭಾವಿಸಲು ಸಂಘಕ್ಕೆ ಸರ್ವಥಾ ಇಚ್ಛೆಯಿಲ್ಲ” ಎಂದಿದೆ.
ಆದರೆ ಚಕ್ರತೀರ್ಥ ಸಮಿತಿಯ ಪರಿಶೀಲನೆಯಲ್ಲಿ ಮೂಲಪಠ್ಯವನ್ನು ಬದಲಿಸಲಾಗಿದೆ. ಕೆಲವು ಸಾಲುಗಳನ್ನು ಕೈಬಿಡಲಾಗಿದೆ. ಮೂಲ ಪಠ್ಯದಲ್ಲಿರುವ ಕೆಲವು ಸಾಲುಗಳನ್ನು ಕೈಬಿಡಲಾಗಿದ್ದು, ಅಲ್ಲಿ ‘ಸಂಘ’ (ಆರ್‌ಎಸ್‌ಎಸ್) ಎಂದಿರುವುದನ್ನು ಗಮನಿಸಬಹುದು.
ಇದನ್ನೂ ಓದಿರಿ: ಭಾಷಾಪಠ್ಯದಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆ ತುರುಕಬಾರದು: ರೋಹಿತ್ ಚಕ್ರತೀರ್ಥ ಸಮಿತಿ
ಹತ್ತನೇ ತರಗತಿ ಪಠ್ಯದಲ್ಲೇನಿದೆ?
“ನಾವು ಧ್ವಜವನ್ನೇ ಗುರುವೆಂದು ಭಾವಿಸಿ, ಗುರುಪೂರ್ಣಿಮಾ ದಿನದಂದು ಅದನ್ನು ಪೂಜಿಸುತ್ತೇವೆ. ನಾವು ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ. ಯಾಕೆಂದರೆ ಯಾರೇ ಆಗಲೀ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇದ್ದಾರು ಎಂಬ ಭರವಸೆಯಾದರೂ ಏನು? ಕೇವಲ ತತ್ವವೊಂದೇ ಆ ಅಚಲ ಪದವಿಯಲ್ಲಿ ಇರಬಲ್ಲದು. ಅದನ್ನು ಧ್ವಜವೂ ಸಂಕೇತಿಸುವುದು. ಯಾವ ಧ್ವಜವನ್ನು ನೋಡಿದೊಡನೆ ನಮ್ಮ ರಾಷ್ಟ್ರದ ಸಮಸ್ತ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಗಳು ನಮ್ಮ ಕಣ್ಣಿಗೆ ಕಟ್ಟುತ್ತವೆಯೋ ಯಾವುದನ್ನು ಕಂಡಕೂಡಲೇ ಹೃದಯ ಭಾವೆನೆಗಳು ಉಕ್ಕಿ ಬರುತ್ತವೆಯೋ, ಹೃದಯದಲ್ಲಿ ಅಪೂರ್ವ ಸ್ಪೂರ್ತಿಯ ಸಂಚಾರವಾಗುತ್ತದೆಯೋ ಅಂತಹ ಧ್ವಜವನ್ನೇ ನಾವು ನಮ್ಮ ಗುರುವೆಂದು ಭಾವಿಸುತ್ತೇವೆ”.
ತ್ರಿವರ್ಣ ಧ್ವಜ v/s ಭಗವಾಧ್ವಜ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಭಗವಾಧ್ವಜ ಕುರಿತ ಒಲವನ್ನು ಮಕ್ಕಳ ಮೇಲೆ ಹೇರುವ ಹಿಡನ್ ಅಜೆಂಡಾವನ್ನು ಸರ್ಕಾರ ಮಾಡುತ್ತಿದೆಯೇ ಎಂಬ ಅನುಮಾನಗಳಿಗೆ ತಿರುಚಿದ ಪಠ್ಯ ಉಂಟು ಮಾಡಿದೆ.



ಮುಂದಿನ ದಿನಗಳಲ್ಲಿ ಕೇಸರಿ ಧ್ವಜ ರಾಷ್ಟ್ರ ಧ್ವಜ ಆಗೋದು ಖಚಿತ ,ಭಾರತ ಹಿಂದೂರಾಷ್ಟ್ರ ಆಗೋದು ಖಚಿತ ,ಯಾವ ದೊಣ್ಣೆ ನಾಯಕನ ಅಪ್ಪಣೆ ಈ ವಿಚಾರದಲ್ಲಿ ಪಡೆಯುವ ,ಕೇಳುವ ಪ್ರಶ್ನೆಯೇ ಇಲ್ಲಾ ,ನಗರ ನಕ್ಸಲರಾಗಲಿ,ಗುಲಾಮರಾಗಲಿ,ಶಾಂತಿ ದೂತರಾಗಲಿ
ಮನುವಾದಿಗಳ ಕುತಂತ್ರವನ್ನು ಬಯಲುಗೊಳಿಸಿದ ನಿಮಗೆ ಧನ್ಯವಾದಗಳು. ಮನುವಾದಿಗಳು ತಿರುಚುವುದರಲ್ಲಿ ನಿಸ್ಸೀಮರು.