Homeಮುಖಪುಟತ್ರಿಪುರ ಕೋಮು ಗಲಭೆ: 68 ಜನರ ಟ್ವಿಟರ್‌ ಖಾತೆ ಅಮಾನತುಗೊಳಿಸುವಂತೆ ಟ್ವಿಟರ್‌ಗೆ ಪತ್ರ ಬರೆದ ಪೊಲೀಸರು

ತ್ರಿಪುರ ಕೋಮು ಗಲಭೆ: 68 ಜನರ ಟ್ವಿಟರ್‌ ಖಾತೆ ಅಮಾನತುಗೊಳಿಸುವಂತೆ ಟ್ವಿಟರ್‌ಗೆ ಪತ್ರ ಬರೆದ ಪೊಲೀಸರು

- Advertisement -
- Advertisement -

ತ್ರಿಪುರ ರಾಜ್ಯದಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತು ‘ಆಕ್ಷೇಪಾರ್ಹ’ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ 68 ಜನರ ಟ್ವಿಟರ್‌ ಖಾತೆಗಳನ್ನು ಅಮಾನತುಗೊಳಿಸುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್‌ ಅನ್ನು ತ್ರಿಪುರ ಪೊಲೀಸರು ಕೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ‘ವಿಕೃತ ಮತ್ತು ಆಕ್ಷೇಪಾರ್ಹ’ ವಿಷಯಗಳನ್ನು ಪೋಸ್ಟ್‌ ಮಾಡಲು ಟ್ವಿಟರ್‌ ಖಾತೆಗಳನ್ನು ಬಳಸಲಾಗಿದೆ. ಅಂತಹ 68 ಟ್ವಿಟರ್‌ ಖಾತೆಗಳ ಮೇಲೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪಶ್ಚಿಮ ತ್ರಿಪುರಾದ ಪೊಲೀಸರು ಟ್ವಿಟರ್‌ನ ಕುಂದುಕೊರತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅದರಲ್ಲಿ ಅಮಾನತುಮಾಡಬೇಕಾದ 68 ಜನರ ಟ್ವಿಟರ್‌ ಖಾತೆಗಳ ಲಿಂಕ್‌ಗಳನ್ನು ನಮೂದಿಸಿದ್ದಾರೆ.

’ರಾಜ್ಯದಲ್ಲಿನ ಮುಸ್ಲಿಂ ಸಮುದಾಯಗಳ ಮಸೀದಿಗಳ ಮೇಲೆ ನಡೆದ ಇತ್ತೀಚಿನ ಘರ್ಷಣೆ ಮತ್ತು ಆಪಾದಿತ ದಾಳಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು / ಸಂಘಟನೆಗಳು ಟ್ವಿಟರ್‌ನಲ್ಲಿ ತಿರುಚಿದ ಮತ್ತು ಆಕ್ಷೇಪಾರ್ಹ ಸುದ್ದಿಗಳು / ಹೇಳಿಕೆಗಳನ್ನು ಪ್ರಕಟಿಸುತ್ತಿದ್ದಾರೆ / ಪೋಸ್ಟ್ ಮಾಡುತ್ತಿದ್ದಾರೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಈ ಟ್ವಿಟರ್‌ ಖಾತೆಗಳಲ್ಲಿನ ಕೆಲವು ಸುದ್ದಿಗಳು ಅಥವಾ ಪೋಸ್ಟ್‌ಗಳು ಇತರ ಕೆಲವು ಘಟನೆಗಳ ಛಾಯಾಚಿತ್ರಗಳು ಅಥವಾ ವೀಡಿಯೊಗಳು, ಧಾರ್ಮಿಕ ಗುಂಪುಗಳು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕಲ್ಪಿತ ಹೇಳಿಕೆಗಳು ಅಥವಾ ವ್ಯಾಖ್ಯಾನಗಳನ್ನು ಒಳಗೊಂಡಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ

’ಈ ಪೋಸ್ಟ್‌ಗಳು ತ್ರಿಪುರಾ ರಾಜ್ಯದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ, ಇದು ಕೋಮು ಗಲಭೆಗೆ ಕಾರಣವಾಗಬಹುದು’ ಎಂದು ಪತ್ರದಲ್ಲಿ ವಿವಿರಿಸಲಾಗಿದೆ.

ಬಳಕೆದಾರರು ಟ್ವಿಟರ್‌ ಖಾತೆಗಳಿಗೆ ಲಾಗ್ ಇನ್ ಆಗಿರುವ ಐಪಿ ವಿಳಾಸ ಮತ್ತು ಟ್ವಿಟರ್ ಖಾತೆಗಳಿಗೆ ಸೇರಿಸಲಾದ ಮೊಬೈಲ್ ಸಂಖ್ಯೆಗಳ ವಿವರಗಳನ್ನು ಪೊಲೀಸರು ಕೇಳಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ತ್ರಿಪುರಾದ ಪಾಣಿಸಾಗರ್‌ನಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ರ್‍ಯಾಲಿ ನಡೆಸಿದ್ದವು. ಈ ವೇಳೆ ಚಮ್ಟಿಲ್ಲಾ ಪ್ರದೇಶದ ಮಸೀದಿ ಮತ್ತು ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದ್ದು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು.

“ಪಾಣಿಸಾಗರದಲ್ಲಿ ವಿಎಚ್‌ಪಿ ಸುಮಾರು 3,500 ಜನರ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ರ್‍ಯಾಲಿಯಲ್ಲಿ ವಿಎಚ್‌ಪಿ ಕಾರ್ಯಕರ್ತರ ಒಂದು ವಿಭಾಗವು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದೆ. ನಂತರ, ಅಲ್ಲಿಂದ ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಪಾಣಿಸಾಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸೌಭಿಕ್ ಡೇ ಹೇಳಿದ್ದರು.

ಇದೇ ಸಂದರ್ಭದಲ್ಲಿ ತ್ರಿಪುರಾದಲ್ಲಿ ನಡೆದ ಕೋಮುಗಲಭೆ ಕುರಿತು ಸತ್ಯಶೋಧನೆ ನಡೆಸಿದ ತಂಡದ ಭಾಗವಾಗಿದ್ದ ಇಬ್ಬರು ವಕೀಲರ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.


ಇದನ್ನೂ ಓದಿ: ತ್ರಿಪುರಾ ಹಿಂಸಾಚಾರದ ಸತ್ಯಶೋಧನೆ ನಡೆಸಿದ ವಕೀಲರ ಮೇಲೆ ಯುಎಪಿಎ ಪ್ರಕರಣ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...